ಸೆ.24ರಂದು ಮಹಿಷ ದಸರಾ ಆಚರಣೆ : ಪುರುಷೋತ್ತಮ್

ಮೈಸೂರು, ಸೆ.12 : ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ಸೆ.24ರ ಬುಧವಾರ ಬಹುಜನರ ಸಾಂಸ್ಕೃತಿಕ ಹಬ್ಬವಾದ ಮಹಿಷ ದಸರಾ ಆಚರಣೆ ಮಾಡಲಾಗುವುದು ಎಂದು ಮಾಜಿ ಮೇಯರ್ ಹಾಗೂ ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಕೂಡ 14ನೇ ವರ್ಷದ ಮಹಿಷ ದಸರಾ ಆಚರಣೆಯನ್ನು ಮಾಡುತ್ತೇವೆ. ಸೆ.24 ಪೂನಾ ಒಪ್ಪಂದ ದಿನ, ಬಹುಜನರ ದಿನ ಹಾಗಾಗಿ ಅಂದೇ ನಗರದ ಟೌನ್ ಹಾಲ್ ಆವರಣದಲ್ಲಿ ಮಹಿಷ ದಸರಾ ಆಚರಣೆ ಮಾಡಲಾಗುವುದು ಎಂದರು.
ಅಂದು ಬೆಳಿಗ್ಗೆ ಟೌನ್ ಹಾಲ್ ನಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅಲ್ಲಿಂದ ಬೈಕ್ ರ್ಯಾಲಿ ಮೂಲಕ ಚಾಮುಂಡಿ ಬೆಟ್ಟಕ್ಕೆ ತೆರಳಿ 9.30 ಗಂಟೆಗೆ ಅಲ್ಲಿರುವ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಗುವುದು. ನಂತರ 10.30 ಗಂಟೆಗೆ ಟೌನ್ ಹಾಲ್ ನಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಮಹಿಷ ಧಮ್ಮೋತ್ಸವ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಅಂದಿನ ಕಾರ್ಯಕ್ರಮವನ್ನು ಗಾಂಧಿನಗರದ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಉದ್ಘಾಟನೆ ಮಾಡುವರು, ಭೋದಿ ದತ್ತ ಬಂತೇಜಿ ದಿವ್ಯ ಸಾನಿಧ್ಯವಹಿಸಲಿರುವ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು, ಮುಖ್ಯ ಭಾಷಣಕಾರರಾಗಿ ವಿಠಲ್ ವಗ್ಗನ್ ಮಾತನಾಡಲಿದ್ದಾರೆ. ಲೇಖಕ ಸಿದ್ಧಸ್ವಾಮಿ ಮಹಿಷನ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಮೇಯರ್ ಪುರುಷೋತ್ತಮ್ ವಹಿಸಲಿದ್ದಾರೆ ಎಂದು ತಿಳಿಸಿದರು.
ಮಹಿಷ ದಸರಾ ಅಚರಣೆಗೆ ಮೈಸೂರು-ಕೊಡಗು ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಆಹ್ವಾನಿಸುತ್ತೇವೆ. ಅವರು ಕಾರ್ಯಕ್ರಮಕ್ಕೆ ಬಂದು ಮಹಿಷನ ಪರವಾಗಿಯಾದರೂ ಮಾತನಾಡಲಿ ವಿರುದ್ಧವಾಗಿಯಾದರು ಮಾತನಾಡಲಿ. ಏಕೆಂದರೆ ಮಹಿಷನ ಇತಿಹಾಸ ಚರಿತ್ರೆ ಇರುವುದೇ ಮೈಸೂರು ಅರಮನೆಯಲ್ಲಿ ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮಕ್ಕೆ ಜಿಲ್ಲೆ ಸೇರಿದಂತೆ ರಾಜ್ಯದ ಇತರೆಡೆಗಳಿಂದ 10 ಸಾವಿರ ಜನರು ಆಗಮಿಸಲಿದ್ದಾರೆ. ಮಹಿಷನಿಗೆ ಪುಷ್ಪಾರ್ಚನೆ ಸಲ್ಲಿಸುವ ವೇಳೆ 2 ಸಾವಿರ ಜನರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಹಲವಾರು ವರ್ಷಗಳಿಂದ ಮಹಿಷ ದಸರಾ ಆಚರಣೆ ಸುಗಮವಾಗಿ ನಡೆಯುತ್ತಿತ್ತು. ಆದರೆ ಯಾರೋ ಒಬ್ಬ ಕಿಡಿಗೇಡಿಯಿಂದ ಕಳೆದ ಐದು ವರ್ಷಗಳಿಂದ ಅಡಚಣೆಯಾಗುತ್ತಿದೆ. ಜಿಲ್ಲಾಡಳಿತ ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡದೆ ಬಹುಜನರ ಆಚರಣೆಗೆ ಅವಕಾಶ ನೀಡಬೇಕು ಎಂದು ಮಾಜಿ ಮೇಯರ್ ಪುರುಷೋತ್ತಮ್ ಮನವಿ ಮಾಡಿದರು.
ಗೊಂದಲ ಮಾಡುವವರನ್ನು ಬಂಧಿಸಿ:
ಮಹಿಷ ದಸರಾ ಆಚರಣೆ ವೇಳೆ ಗೊಂದಲ ಸೃಷ್ಟಿಸುವವರನ್ನು ಒದ್ದು ಒಳಗೆ ಹಾಕಿ ಎಂದು ಮಾಜಿ ಮೇಯರ್ ಪುರುಷೋತ್ತಮ್ ಒತ್ತಾಯಿಸಿದರು.
ಜಿಲ್ಲಾಡಳಿತ ಮತ್ತು ನಮ್ಮ ನಡುವೆ ಗೊಂದಲಗಳು ಉಂಟಾಗಬಾರದು ಎಂದು ನಾಡಹಬ್ಬ ದಸರಾ ಉದ್ಘಾಟನೆಯಾದ ನಂತರ ನಮ್ಮ ಆಚರಣೆ ಮಾಡುತ್ತಿದ್ದೇವೆ. ನಾಡಹಬ್ಬ ದಸರಾ ಸೆ.22ರ ಸೋಮವಾರ ಉದ್ಘಾಟನೆಯಾಗಲಿದೆ. ಮಹಿಷ ದಸರಾ ಆಚರಣೆಯನ್ನು ಸೆ.24ರ ಬುಧವಾರ ಮಾಡುತ್ತೇವೆ. ಈ ಬಾರಿಯಾದರೂ ಬಹುಜನರ ಸಾಂಸ್ಕೃತಿಕ ನಾಯಕ ಮಹಿಷ ಮಹಾರಾಜರಿಗೆ ಪುಷ್ಪಾರ್ಚನೆ ಮಾಡಲು ಜಿಲ್ಲಾಡಳಿತ ಮತ್ತು ಪೊಲೀಸರು ಅವಕಾಶ ನೀಡಬೇಕು ಎಂದು ಹೇಳಿದರು.
ನಮ್ಮ ಆಚರಣೆಗೆ 144 ನೇ ಸೆಕ್ಷನ್ ಜಾರಿಮಾಡುವುದಾದರೆ ನಾಡಹಬ್ಬ ದಸರಾ ಆಚರಣೆಗೂ 144 ನೇ ಸೆಕ್ಷನ್ ಜಾರಿ ಮಾಡಬೇಕಾಗುತ್ತದೆ. ಅದಕ್ಕಾಗಿ ಜಿಲ್ಲಾಡಳಿತ ಗೊಂದಲ ಮಾಡಿಕೊಳ್ಳದೆ, ನಮ್ಮ ಆಚರಣೆಗೆ ಅವಕಾಶ ಕಲ್ಪಿಸಬೇಕು ಎಂದು ಪ್ತಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಲೇಖಕ ಸಿದ್ಧಸ್ವಾಮಿ, ಮಲೆಯೂರು ಸೋಮಯ್ಯ, ವಿಷಕಂಠ ಮೂರ್ತಿ, ಶಿವಣ್ಣ, ಪುಟ್ಟರಾಜು, ವಿಶ್ವನಾಥ್ ಉಪಸ್ಥಿತರಿದ್ದರು.
ಮಹಿಷನ ನಾಡು ಎಂಬುದಕ್ಕೆ ದಾಖಲೆಯನ್ನು ನೀಡಲಾಗಿದೆ. ಮಹಿಷನ ಕುರಿತು ನಾಲ್ಕು ಪುಸ್ತಕಗಳನ್ನು ಬರೆದಿದ್ದೇನೆ. ಮಹಿಷ ಮಂಡಲ ಮೈಸೂರು ಆಗಿದೆ. ಮೈಸೂರು ಮಹರಾಜರ ಎಲ್ಲಾ ಆಡಳಿತದಲ್ಲೂ ಮಹಿಷನೂರು ಎಂದು ಉಲ್ಲೇಖಿಸಲಾಗುತ್ತದೆ.
-ಸಿದ್ಧಸ್ವಾಮಿ, ಲೇಖಕ.
"ಪ್ರತೀ ಸಲದಂತೆ ಮಹಿಷ ದಸರಾ ಆಚರಣೆ ಮಾಡುತ್ತೇವೆ. ಇದರ ಉದ್ದೇಶ ಯಾವುದೇ ಮತ ಧರ್ಮದ ವಿರುದ್ಧ ಅಲ್ಲ. ಅಶೋಕ 3ನೇ ಶತಮಾನದಲ್ಲಿ ಬೌದ್ಧ ಧರ್ಮವನ್ನು ರಾಷ್ಟ್ರೀಯ ಧರ್ಮ ಮಾಡಿದ್ದರು. ಬುದ್ಧ ಧರ್ಮವೇ ನಮ್ಮ ದೇಶದ ಧರ್ಮ ಆಗಬೇಕು. ಅದಕ್ಕೆ ಮಹಿಷ ದಸರಾ ಮಾಡುತ್ತಿದ್ದೇವೆ. ನಾವು ಬಾಬಾ ಸಾಹೇಬರು ಕೊಟ್ಟಿದ್ದನ್ನು ಮತ್ತು ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ"
-ಪ್ರೊ.ಕೆ.ಎಸ್.ಭಗವಾನ್, ಸಾಹಿತಿ.