ಶಾಸಕ ರಿಝ್ವಾನ್ ಅರ್ಷದ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ವಿಚಾರಣೆ ಮುಂದೂಡಿಕೆ

ಬೆಂಗಳೂರು, ಸೆ.13: ಮತದಾರರ ನಕಲಿ ಗುರುತಿನ ಚೀಟಿ ತಯಾರಿಸುತ್ತಿದ್ದಾರೆಂದು ತಮ್ಮ ವಿರುದ್ಧ ಆರೋಪಿಸಿದ್ದ ರಾಜ್ಯ ಬಿಜೆಪಿ ವಿರುದ್ಧ ಶಿವಾಜಿನಗರದ ಕಾಂಗ್ರೆಸ್ ಶಾಸಕ ರಿಝ್ವಾನ್ ಅರ್ಷದ್ ದಾಖಲಿಸಿರುವ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದ ಪಾಟೀ ಸವಾಲು ಪ್ರಕ್ರಿಯೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೆ.19ಕ್ಕೆ ನಿಗದಿಪಡಿಸಿದೆ.
ರಿಝ್ವಾನ್ ಅರ್ಷದ್ ಸಲ್ಲಿಸಿದ್ದ ಖಾಸಗಿ ದೂರಿನ ಕುರಿತು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ಅವರು ಶುಕ್ರವಾರ ವಿಚಾರಣೆ ನಡೆಸಿದರು. ರಿಝ್ವಾನ್ ಪರ ವಕೀಲರಾದ ಸೂರ್ಯ ಮುಕುಂದರಾಜ್ ಮತ್ತು ಸಂಜಯ್ ಯಾದವ್, ಅರ್ಜಿದಾರರು ಪಾಟೀ ಸವಾಲಿಗೆ ಒಳಪಡಲು ಸಿದ್ಧರಿದ್ದು ಪ್ರಕ್ರಿಯೆ ಕೈಗೆತ್ತಿಕೊಳ್ಳುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು.
ಪ್ರತಿವಾದಿಯಾದ ಬಿಜೆಪಿ ರಾಜ್ಯ ಘಟಕ ಮತ್ತು ಬಿಜೆಪಿ ಐಟಿ ಘಟಕದ ಅಧ್ಯಕ್ಷರ ಪರ ಹಾಜರಿದ್ದ ಹಿರಿಯ ವಕೀಲ ಚಲಪತಿ ಶ್ರೀನಿವಾಸ್ ಮತ್ತು ಎನ್. ಗೋಪಿ ಕಾಲಾವಕಾಶ ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ಪ್ರಕರಣವನ್ನು ಅರ್ಜಿದಾರರ ಪಾಟೀ ಸವಾಲಿನ ಪ್ರಕ್ರಿಯೆಗೆ ನಿಗದಿಪಡಿಸಿ, ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿದರು.