ಅಟ್ಟ ಮುಟ್ಟ ತನ್ನದೇವಿ...

ಎಷ್ಟೇ ಬಡತನವಿರಲಿ ಅಟ್ಟ, ಅಲ್ಲಿಟ್ಟ ವಸ್ತು ನಮ್ಮನ್ನು ಬದುಕಿಸುತ್ತದೆ ಅನ್ನುವ ಭ್ರಮೆಯ ಕಾರಣ ಅಂಬೆಗಾಲಿಕ್ಕುವ ಶೈಶವದ ಕಾಲದಲ್ಲೇ ಒಮ್ಮೆ ಅಮ್ಮನ ದಾರಿಯಲ್ಲಿ ಅಟ್ಟಕ್ಕೆ ಏರಬೇಕು ಅನ್ನುವ ಕುತೂಹಲ ನಮ್ಮದಾಗಿರುತ್ತದೆ. ಆಕೆ ಹೊರಗಡೆ ದುಡಿಯಲು ಹೋಗುವ ಖಾಲಿ ಕಾಲದಲ್ಲಿ ಹೆದರಿ ಹೆದರಿಯೇ ಒಂದೊಂದೇ ಹೆಜ್ಜೆ ಏರಿಸಿ ಕೊನೆಗೊಂದು ದಿವಸ ಆ ಮೇಲಿನ ಸ್ವರ್ಗವನ್ನು ಏರಿಯೇ ಬಿಡುತ್ತೇವೆ. ಭೂಮಿ ಬಿಟ್ಟು ಮೊತ್ತ ಮೊದಲ ಬಾರಿಗೆ ಚಂದ್ರಲೋಕಕ್ಕೆ ಏರಿದಷ್ಟು ಖುಷಿ.
ನನ್ನ ತಲೆಮಾರಿನ ಹೆಚ್ಚಿನವರು ಸೋಗೆ, ಮುಳಿ, ನಾಡಹಂಚು ಹೊದಿಸಿದ ಮನೆಗಳಲ್ಲೇ ಬದುಕಿ ಬಂದವರು. ಇಂಥವರಿಗೆಲ್ಲ ನಾನು ಮನೆಯ ಅಟ್ಟವೆಂದರೇನು ಎಂದು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಇವತ್ತಿಗೂ ಇಂಥ ಮನೆಗಳಿಗೆ ಭೇಟಿ ಕೊಟ್ಟಾಗಲೆಲ್ಲ ಅಟ್ಟದ ದಾರಿಯನ್ನು ಹುಡುಕುವುದಿದೆ. ಮನೆಜಗಲಿ ಬಾಲ್ಯದ ರಂಗಸ್ಥಳವಾದರೆ, ಅಟ್ಟ ಅನ್ನುವುದು ಅಕ್ಷಯಪಾತ್ರೆ, ಬಿದಿರ ಕೇರ್ಪಿನಲ್ಲಿ ಒಂದೊಂದೇ ಹೆಜ್ಜೆ ಇಟ್ಟು ಆ ಮೇಲ್ಲೋಕಕ್ಕೆ ಪ್ರವೇಶ ಮಾಡಿದ ದಿನ ನಾನು ಬದುಕಿನಲ್ಲಿ ಅಸಾಧಾರಣವನ್ನು ಸಾಧಿಸಿದ್ದೇನೆ ಎನ್ನುವ ಭಾವನೆ ಹುಟ್ಟಿತ್ತು. ಅಟ್ಟ ಏರುವ ಏಣಿ ಬೇರೆ, ಕೇರ್ಪು ಬೇರೆ. ಏಣಿಗೆ ಇಕ್ಕಡೆಗಳಲ್ಲಿ ಆಧಾರಗಳಿದ್ದರೆ ಕೇರ್ಪು ಏಕಧಾರದ ನೆರ್ಪು. ಒಂದರ ಮೇಲೆ ಒಂದರಂತೆ ಹಬ್ಬಿದ ಅಡ್ಡ ಹಿಡಿಗಳಿಗೆ ಕಾಲಿಟ್ಟುಕೊಂಡು ಏರಬೇಕು.
ಕಾಳು ಅಕ್ಕಿ ಬೀಜ ಮೆಣಸು ಭತ್ತ ಅಡಿಕೆ ಬೆಲ್ಲ ಅವಲಕ್ಕಿ ಹಣ್ಣು ಒಣ ಮೀನು ಇವೆಲ್ಲವನ್ನೂ ಅಮ್ಮ ಮೇಲಿಂದ ಕೆಳಗಡೆಯ ಲೋಕಕ್ಕೆ ತರುವ ಮತ್ತು ನಮಗೆ ಅವೆಲ್ಲ ದಕ್ಕುವ ಒಂದು ಸುರಕ್ಷಿತ ಅಕ್ಷಯ ಪಾತ್ರೆ ಎಂದರೆ ಅದೆಲ್ಲ ನಮ್ಮ ಮನೆಯ ಅಟ್ಟ. ಅಮ್ಮ ಅಟ್ಟಕ್ಕೇರಿಸಿ ಅವೆಲ್ಲವನ್ನು ಅಲ್ಲಿಡುವ ಕಾಲ ನಮ್ಮ ಗಣನೆಯಲ್ಲಿರುವುದಿಲ್ಲ. ಇಳಿಸುವ ಕಾಲ ಅದು ನಮ್ಮ ಒತ್ತಾಯವೋ ಅಪೇಕ್ಷೆಯೋ ಎಲ್ಲವೂ ಆಗಿ ಒಂದು ಸಂಭ್ರಮವನ್ನು ಸೃಷ್ಟಿಸುತ್ತದೆ.
ಎಷ್ಟೇ ಬಡತನವಿರಲಿ ಅಟ್ಟ, ಅಲ್ಲಿಟ್ಟ ವಸ್ತು ನಮ್ಮನ್ನು ಬದುಕಿಸುತ್ತದೆ ಅನ್ನುವ ಭ್ರಮೆಯ ಕಾರಣ ಅಂಬೆಗಾಲಿಕ್ಕುವ ಶೈಶವದ ಕಾಲದಲ್ಲೇ ಒಮ್ಮೆ ಅಮ್ಮನ ದಾರಿಯಲ್ಲಿ ಅಟ್ಟಕ್ಕೆ ಏರಬೇಕು ಅನ್ನುವ ಕುತೂಹಲ ನಮ್ಮದಾಗಿರುತ್ತದೆ. ಆಕೆ ಹೊರಗಡೆ ದುಡಿಯಲು ಹೋಗುವ ಖಾಲಿ ಕಾಲದಲ್ಲಿ ಹೆದರಿ ಹೆದರಿಯೇ ಒಂದೊಂದೇ ಹೆಜ್ಜೆ ಏರಿಸಿ ಕೊನೆಗೊಂದು ದಿವಸ ಆ ಮೇಲಿನ ಸ್ವರ್ಗವನ್ನು ಏರಿಯೇ ಬಿಡುತ್ತೇವೆ. ಭೂಮಿ ಬಿಟ್ಟು ಮೊತ್ತ ಮೊದಲ ಬಾರಿಗೆ ಚಂದ್ರಲೋಕಕ್ಕೆ ಏರಿದಷ್ಟು ಖುಷಿ. ಹಾಗೆ ಏರಿದವರು ಎಷ್ಟೋ ಬಾರಿ ಇಳಿಯಲಾರದೆ ಅಟ್ಟದಲ್ಲೇ ಬಾಕಿಯಾದದ್ದು ಇದೆ. ಇಳಿಸಲು ನೆರವಾದ ಅಮ್ಮ ಭೂಮಿಗೆ ಕಾಲಿಟ್ಟ ಮೇಲೆ ‘‘ನಿನಗೆ ಇದೆಲ್ಲ ಬೇಕಿತ್ತಾ ಮಗನೆ’’ ಎಂದು ಬೆನ್ನಿಗೆ ರಪ ರಪ ಅಂತ ಎರಡು ಬಾರಿಸಿದ್ದೂ ಇದೆ.
ಮಲೆನಾಡಿನ ಅಟ್ಟಗಳೆಂದರೆ ಅದು ಭೂಮಿಯಿಂದ ಎತ್ತರದ ಅಂತರಿಕ್ಷ. ಆ ಕತ್ತಲೆಯ ಒಳಗಡೆ ಒಂದು ಅರ್ಧ ಗಂಟೆ ಕಳೆದರೆ ನಿಧಾನವಾಗಿ ಬೆಳಕು ನಮ್ಮನ್ನು ಅಲ್ಲಿದ್ದವುಗಳನ್ನೆಲ್ಲ ತೋರಿಸುತ್ತ ಹೋಗುತ್ತದೆ. ಹಂಚು ಮುರಿದ ಜಾಗದಲ್ಲಿ ಬಿಸಿಲಿನ ರೇಖೆಯೊಂದು ಅಕ್ಕಿಮುಡಿಯೋ, ತೆಂಗಿನ ರಾಶಿಗೋ ಹಣ್ಣಾದ ಬಾಳೆಗೊನೆಗೂ ಗುರಿಯಿಟ್ಟು ಹೊಡೆಯುತ್ತದೆ. ಅಲ್ಲೇ ಅಡ್ಡವಾಗಿ ಕಟ್ಟಿದ ಜೇಡನ ಬಲೆಯನ್ನೊಮ್ಮೆ ನೋಡುತ್ತಾ ಕೂರಬೇಕು. ಅದೊಂದು ಸುಖವೇ ಬೇರೆ. ರೇಖಾಗಣಿತದ ಯಾವ ಪ್ರಮೇಯವನ್ನು ಅಧ್ಯಯನ ಮಾಡದ ಲೆಕ್ಕ ವಿಜ್ಞಾನದ ಪರಿಕರಗಳ ಸಹಯೋಗವಿಲ್ಲದ ಜೇಡ ಬೆಳಕಿನ ರೇಖೆಗೆ ಅಡ್ಡಡ್ಡ ಬಲೆನೈದು ಎಲ್ಲೋ ಅಜ್ಞಾತ ಜಾಗದಲ್ಲಿ ಕೂತಿರುತ್ತದೆ. ನೊಣವೋ, ಸೊಳ್ಳೆಯೋ ಆ ಬಲೆಗಡ್ಡ ಅಂಟಿಕೊಂಡರೆ ಸಾಕು, ಕ್ಷಣಕ್ಕೆ ಎಂಜಲು ನೂಲಿನ ಮೇಲೆಯೇ ಜಾರಿ ಬಂದು ಮಿಕದ ಮೇಲೆ ಎರಗಿ ಬೇಟೆಯನ್ನು ಎಂಜಲಲ್ಲಿ ಸುತ್ತಿ ಎತ್ತಿ ಸಂಜೆಯ ತಿಂಡಿಗೆ ನೊಣೆಯಲು ಕಾಪಿಡುತ್ತದೆ.
ನಾವು ಕೂಡ ಹಾಗೆಯೇ ಅಲ್ಲವೇ? ಅಟ್ಟದೊಳಗಡೆ ರಾತ್ರಿಯ ನಾಳೆಯ ಎಷ್ಟೋ ದಿನಗಳಿಗಾಗಿ ಬಹುರೂಪಿ ಅನ್ನವನ್ನು ಕಾಪಾಡಿಟ್ಟುಕೊಂಡಿರುತ್ತೇವೆ. ಪ್ರತೀ ಸಲ ಬಿತ್ತುವ ಬೆಳೆಗೆ ಬೀಜ ಬೇಕು ಎಂದು ಅಪ್ಪಯ್ಯ ಕೇಳುವ ಮುಂಚೆಯೇ ಅಟ್ಟದಿಂದ ಜತನದಿಂದ ಕಾಯ್ದ ಬೀಜಗಳೆಲ್ಲ ಕೆಳಗಡೆ ಇಳಿಸಿ ಸೆಗಣಿ ನೀರು ಕೊಟ್ಟು ಮೊಳಕೆಯೊಡೆಸಿ ಗದ್ದೆಯ ಮಣ್ಣಿಗೆ ಸೇರಿಸಿಕೊಳ್ಳಲು ಅಪ್ಪಯ್ಯನಿಗೆ ನಮ್ಮಮ್ಮನ ಕೈಯೇ ಬೇಕು. ಅಟ್ಟದ ಮೇಲಿನ ಬಿದಿರು, ಮರದ ರೀಪು, ಪಕ್ಕಾಸುಗಳಲ್ಲಿ ಉಂಡೆ ಉಂಡೆಯಾಗಿ ನೇತಾಡುವ ಮಡಿಕೆ-ಕುಡಿಕೆ, ಬಟ್ಟೆ, ಪೇಪರುಗಳಲ್ಲಿ ಸುತ್ತಿಟ್ಟ ಬೀಜಗಳೆಲ್ಲ ಅಕ್ಷರದ ಅರಿವಿಲ್ಲದ ಅಮ್ಮನಿಗೆ ಅನ್ನದ ಕಾರಣಕ್ಕಾಗಿ ನೆನಪಿನ ಗುಳಿಗೆಗಳಾಗಿ ಆಗ ಸದಾ ತಲೆಯಲ್ಲಿ ಇರುತ್ತಿದ್ದವು.
ಮೀನಿನ ವಾಸನೆಗೆ ಅಟ್ಟದ ದಾರಿ ಹಿಡಿಯುವ ಸರಸರ ಹತ್ತಿಕೊಂಡು ಮೇಲ್ಲೋಕ ಪ್ರವೇಶಿಸುವ ಬೆಕ್ಕು ಮತ್ತು ಅದನ್ನು ಓಡಿಸಿಕೊಂಡು ಬಂದು ಹತ್ತಲಾರದೆ ಏಣಿಯ ಬುಡದಲ್ಲಿ ನಿಲ್ಲುವ ಕಾಳು ನಾಯಿ ನಮ್ಮೊಳಗಡೆ ಹತ್ತುವ ಮತ್ತು ಹತ್ತಲಾರದ ಹತಾಶೆಯ ರೂಪಕಗಳಾಗಿ ಕಾಣಿಸುತ್ತದೆ. ಬೆಕ್ಕು ಕೂಡ ಹಾಗೆ ಅಟ್ಟದ ಕತ್ತಲೆಯಲ್ಲಿ ಮರೆಯಾಗಬಹುದಿತ್ತು. ಆದರೆ ಅದು ಅಟ್ಟದ ಬಾಗಿಲಲ್ಲಿ ನಿಂತು ಕೆಳಗಡೆ ನೋಡಿ ಅಲ್ಲೇ ಕಾದುಕೂತ ನಾಯಿಯನ್ನು ಅಣಕಿಸುತ್ತದೆ, ಆಟ ಆಡಿಸುತ್ತದೆ. ಕೇರ್ಪಿನ ಬುಡದಲ್ಲಿ ಹತ್ತಲಾರದೆ ರೋಷಾವೇಷದಿಂದ ಕುದಿಯುವ ನಾಯಿಯೂ ಕೂಡ ಹತ್ತಲಾರದೆ ಪರಿತಪಿಸುವ ನಮ್ಮಂತಹ ಮಕ್ಕಳ ಬಾಗಿಧಾರಿಯಾಗಿ ಪಾಲು ಪಡೆಯುತ್ತದೆ. ಅಟ್ಟ ಏರಿ ಹೋಗುವವರೆಲ್ಲ ಅಲ್ಲಿ ನಾವು ಕೆಳಗಡೆ ನೋಡದ್ದನ್ನು ನೋಡುತ್ತಾರೆ, ಬೇಕುಬೇಕಾದನ್ನು ತಿನ್ನುತ್ತಾರೆ ನಮಗೇನು ಇಲ್ಲ ಅನ್ನುವ ವೇದನೆ ಹತ್ತಲಾರದೆ ಕೆಳಗಡೆಯೇ ನಿಂತವರೊಳಗಡೆ ಸೃಷ್ಟಿಸುತ್ತದೆ.
ಇದೆಲ್ಲವೂ ಅನ್ನದ ಅಟ್ಟದ ಕಥೆಯಾದರೆ ಬುದ್ಧಿಯ ಅಟ್ಟವು ನಮ್ಮ ಸಾಹಿತ್ಯ ಲೋಕದಲ್ಲಿದೆ ಎಂಬುದು ಅನೇಕ ಸಹೃದಯರಿಗೆ ಗೊತ್ತೇ ಇದೆ. ನಮ್ಮ ಪುತ್ತೂರಿನಲ್ಲಿ ಒಂದು ಸಾಹಿತ್ಯದ ಅಟ್ಟವಿದೆ. ಹಿರಿಯರಾದ ಪುರಂದರ ಭಟ್ಟರ ‘ಅನುರಾಗ ವಠಾರ’ವೇ ಆ ಸಾಹಿತ್ಯದ ಅಟ್ಟ. ಸ್ವಲ್ಪ ಕತ್ತಲೆ ಇರುವ ಆ ಅಟ್ಟದ ಮೇಲೆ ನಡೆದ ಅಧ್ಯಾತ್ಮ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಲೆಕ್ಕವೇ ಇಲ್ಲ. ರಾಮಾಯಣ, ಮಹಾಭಾರತ, ಅಲ್ಲಮ, ಶಂಕರಾಚಾರ್ಯ, ಪರಮಹಂಸ, ಭಗವದ್ಗೀತೆ, ಇವುಗಳ ಮೇಲೆ ನೂರಾರು ಉಪನ್ಯಾಸಗಳು ಈ ಅಟ್ಟದ ಮೇಲೆ ಮೇಲೆ ನಿರಂತರ ದೀಪ ಉರಿಸಿವೆ.
ಧಾರವಾಡದ ಮನೋಹರ ಗ್ರಂಥಮಾಲೆಯ ‘ಅಟ್ಟ’ ಅಂದರೆ ಸಾಹಿತ್ಯದ ಸಂಗ್ರಹದ ಪೆಟ್ಟಿಗೆ. ಓದಿಗೆ ಬೇಕಾದ ಬುದ್ಧಿಯ ಸಾಮಗ್ರಿ ಆ ಅಟ್ಟದಲ್ಲಿ ಇರುತ್ತಿತ್ತು. ಅಲ್ಲಿ ಸಾಹಿತ್ಯ ಚರ್ಚೆಗಳು, ಪ್ರಬಂಧಗಳ ಓದು, ಹೊಸ ಕತೆಗಳ ಪತ್ತೆ - ಎಲ್ಲವೂ ಆಗುತ್ತಿತ್ತು. ಹೀಗಾಗಿ ಬುದ್ಧಿಗೂ ಅಟ್ಟ, ಅನ್ನಕ್ಕೂ ಅಟ್ಟ ಅನ್ನೋ ಎರಡು ಲೋಕಗಳ ಸಮಾನತೆ ಚೆನ್ನಾಗಿ ಮೂಡುತ್ತದೆ. ಒಂದು ತಲೆಗೆ ಸಂಬಂಧಿಸಿದ್ದು, ಇನ್ನೊಂದು ಹೊಟ್ಟೆಗೆ ಸಂಬಂಧಿಸಿದ್ದು. ಎರಡೂ ಬುದ್ಧಿಗೆ ಮತ್ತು ದೇಹಕ್ಕೆ ಸಂಬಂಧಿಸಿದ್ದು.
ಸಾಂಪ್ರದಾಯಿಕ ಮನೆಗಳಲ್ಲಿ ಅಟ್ಟ ಅನ್ನೋದೇ ಒಂದು ಮನೆಗೆ ಸೇರಿದ ಆಕಾಶಭಂಡಾರ. ಅಲ್ಲಿ ಅಟ್ಟ ಕೇವಲ ಆಹಾರ ಸಾಮಗ್ರಿಗಳ ಗುಡ್ಡೆಯಲ್ಲ, ಅದು ಕೌಟುಂಬಿಕ ಭದ್ರತೆ, ಜಾಣ್ಮೆ, ವ್ಯವಸ್ಥೆ, ಮಿತ ವ್ಯಯ - ಇವೆಲ್ಲವನ್ನೂ ಕಲಿಸುತ್ತಿತ್ತು. ಅಟ್ಟದಲ್ಲಿ ಏನಾದರೂ ಇದೆ ಅಂದರೆ ಅದೇ ಅರ್ಥ ತಾನೇ? ಅಕ್ಕಿ, ಹಿಟ್ಟು, ಬೇಳೆ ತೊಂದರೆಯಾಗದು, ಹಸಿವಿಗೆ ಮಣ್ಣು ತಿನ್ನಬೇಕಾಗುವುದಿಲ್ಲ ಎಂಬರ್ಥವದು.
ಇವತ್ತು ಕಾಂಕ್ರಿಟ್ ಮಾದರಿಯ ಕಟ್ಟಡಗಳಲ್ಲಿ ಅಟ್ಟ ಕಣ್ಮರೆಯಾಗಿದೆ. ನಮ್ಮ ಹೊಸ ತಲೆಮಾರು ಅಟ್ಟವನ್ನು ನೋಡಲೇ ಇಲ್ಲ, ಅವರೆಲ್ಲ ಜಗಲಿ ಅಟ್ಟದ ಜಾಡಿಲ್ಲದೆ ಬಯಲುದಾರಿಯಲ್ಲಿ ಬೆಳೆದಿದ್ದಾರೆ. ಹೀಗಾಗಿ ಅವರೆಲ್ಲ ಸಾಂಪ್ರದಾಯಿಕ ಸಂಗ್ರಹದ ಮೌಲ್ಯ, ಬಡತನ ಹಸಿವು, ತಾಳ್ಮೆಯಿಂದ ಕಾಪಾಡುವ ಪದ್ಧತಿ, ಹಬ್ಬದ ಮುಂಚೆ ಸಿಹಿ ತಯಾರಿ ಮಾಡುವ ಸಂಭ್ರಮ - ಇವುಗಳನ್ನು ಅನುಭವಿಸದ ತಲೆಮಾರಾಗಿ ಹೋಗುತ್ತಿದ್ದಾರೆ. ಅಟ್ಟ ಸೇರಿಕೊಂಡ ಮನೆಯ ಒಳಗಡೆಯ ಬದುಕನ್ನು ಹೀಗೂ ನೋಡಬಹುದು. ಸಂಪತ್ತು ಎಂದರೆ ಕೇವಲ ಹಣವಲ್ಲ; ಅಗತ್ಯದ ಸಮಯಕ್ಕೆ ಕೈಹಿಡಿಯುವ ಸಂಗ್ರಹ. ಅಟ್ಟ ಕುಟುಂಬಕ್ಕೆ ಭದ್ರತೆಯ ನೆನಪು, ಪುಟ್ಟ ಪುಟ್ಟ ಮಕ್ಕಳ ಹೃದಯಕ್ಕೆ ಕುತೂಹಲ ಮತ್ತು ಖುಷಿಯ ಹೊತ್ತಿಗೆ ಎಂಬ ಅರಿವಿನ ಭಾಗವೇ ಈಗ ಮರೆಯಾಗಿದೆ. ಅಟ್ಟ ಕೇವಲ ಮನೆಯ ಒಂದು ಭಾಗವಲ್ಲ; ಅದು ಜೀವನದ ಒಂದು ತತ್ವಶಾಸ್ತ್ರ.
ಕನ್ನಡದ ಬಹಳಷ್ಟು ಕಥೆಗಳಲ್ಲಿ ಅಟ್ಟವನ್ನು ತೆರೆಯುವ ಕೀಲಿಯೇ ಮನೆಯ ಅಧಿಕಾರದ ಸಂಕೇತ ಎಂದಿದೆ. ಅಮ್ಮ ತನ್ನ ಹೊಟ್ಟೆಯ ಬಳಿ ಕಟ್ಟಿಕೊಂಡಿರುವ ಕೀಲಿಕಟ್ಟು - ಅದೇ ಮನೆಯ ಗುರಿ. ಎಷ್ಟೋ ಸಾರಿ ಮನೆಯ ಹಿರಿಯಮ್ಮ ಹೇಳುವುದಿದೆ ‘‘ಕೀಲಿಯಿಲ್ಲದ ಮಗಳು, ನೀನು ಮನೆಯನ್ನು ಸಾಗಿಸಲಾರೆ’’ ಎಂದು.
ಅಟ್ಟದ ಕೀಲಿಯು ಬರುವ ಹೆಣ್ಣುಮಕ್ಕಳಿಗೆ ಜವಾಬ್ದಾರಿ, ಅರ್ಥಮಟ್ಟ, ಮಿತ ವ್ಯಯ ಕಲಿಸುವ ಚಿಹ್ನೆಯೂ ಹೌದು. ಕನ್ನಡದ ಎಷ್ಟೋ ಕಥೆಗಳಲ್ಲಿ ಅಟ್ಟ ಅನ್ನುವುದು ಹಬ್ಬದ ಬಾಗಿಲು. ಪರ್ವಕಾಲಕ್ಕೆ ಮಕ್ಕಳೆಲ್ಲ ಆ ಬಾಗಿಲ ಎದುರುಗಡೆ ನಿಂತು ಒಮ್ಮೆ ಬಾಗಿಲು ತೆರೆ ಈರಮ್ಮ ಎಂದು ಕಾಯುತ್ತಿದ್ದರು. ಅಲ್ಲಿ ಕಾಳು ಬೆಲ್ಲ ತುಪ್ಪ ಗೋಧಿ ಹಿಟ್ಟು ಎಲ್ಲವೂ ಇದ್ದು ಸಿಹಿ ತಿಂಡಿಯ ಕಚ್ಚಾ ಮಾಲುಗಳೆಲ್ಲ ಅಲ್ಲಿಂದಲೇ ಇಳಿದು ಬರುತ್ತಿದ್ದವು.
ಕಾರ್ನಾಡ್ ಅವರ ಬಾಲ್ಯಸ್ಮತಿಗಳಲ್ಲಿ ಬರುವಂತೆ, ಅಟ್ಟದಲ್ಲಿ ಕೇವಲ ಆಹಾರವಲ್ಲ- ಹಳೆಯ ಚೀಲಗಳಲ್ಲಿ ಹೊದಿಸಿದ ಪುಸ್ತಕಗಳು, ಹಳೆಯ ಆಟಿಕೆಗಳು, ಪೆಟ್ಟಿಗೆಗಳಲ್ಲಿ ಇಟ್ಟ ಪತ್ರಿಕೆಗಳು, ಹಾಳಾದ ಹಗ್ಗ-ಇವೆಲ್ಲವೂ ಇರುತ್ತಿದ್ದವು. ಮಕ್ಕಳು ಅಟ್ಟಕ್ಕೆ ಹತ್ತಿದಾಗ ಅದೊಂದು ಖಜಾನೆ ಸಿಕ್ಕಂತೆ ಆಗುತ್ತಿತ್ತು. ಹಲವಾರು ಕಥೆಗಳಲ್ಲಿ ಮಕ್ಕಳು ಅಟ್ಟ ಹತ್ತಿ ಬೆಣ್ಣೆ, ಬಾಳೆಹಣ್ಣು, ಬೆಲ್ಲ, ಅವಲಕ್ಕಿ ಕದಿಯುವ ದೃಶ್ಯ ಬರುತ್ತದೆ. ಸಾಲ ಮಾಡಿಯೋ ಕೊಲೆ ಮಾಡಿಯೋ ಸಿಕ್ಕಿಹಾಕಿಕೊಳ್ಳಬೇಕಾದ ಸಂದರ್ಭದಲ್ಲಿ ಅಟ್ಟದಲ್ಲಿ ಅಡಗಿ ಕೂತು ಪಾರಾದವರೂ ಇದ್ದಾರೆ. ಕರಾವಳಿ ಭಾಗದ ಪ್ರಸಿದ್ಧ ಯಕ್ಷಗಾನ ಭಾಗವತರೊಬ್ಬರು ಬಾಲಕರಾಗಿದ್ದಾಗ ಹಟ್ಟಿಯ ಅಟ್ಟದಲ್ಲಿ ಅಡಗಿ ಕೂತು ಕದ್ದು ಬೀಡಿ ಸೇದುವಾಗ ಬೈಹುಲ್ಲಿಗೆ ಬೆಂಕಿತಾಗಿ ಇಡೀ ಹಟ್ಟಿಯೇ ಸುಟ್ಟು ಹೋಗಿ ವಾರವಿಡೀ ಆ ಬಾಲಕ ಗುಡ್ಡೆಯಲ್ಲಿ ಅಡಗಿ ಕೂತು ತಂದೆಯ ಪೆಟ್ಟಿನಿಂದ ಪಾರಾದ ಕಥೆ ರೋಚಕವಾಗಿದೆ.
ಕನ್ನಡದ ಕಥೆಗಾರರೊಬ್ಬರು ತಮ್ಮ ಬರಹಗಳಲ್ಲಿ ಗ್ರಾಮೀಣ ಮನೆಯ ಅಟ್ಟವನ್ನು ಜೀವಂತವಾಗಿ ಬಣ್ಣಿಸಿದ್ದಾರೆ. ಅಲ್ಲಿ ಹುರುಳಿಯ ಸವಿ, ಒಣಮೆಣಸಿನ ಉರಿಗೇಡಿನ ವಾಸನೆ, ತುಪ್ಪದ ಬಾಣವೆಯ ಸಿಹಿಗಂಧ, ಅಡಿಕೆಯ ಹಾಳೆಗೆ ಅಂಟಿದ ಮಾವಿನ ಮಾಂಬಳದ ತಾಜಾ ಸುಗಂಧ -ಇವೆಲ್ಲ ಮಿಶ್ರಣವಾಗಿ ಅಟ್ಟಕ್ಕೆ ಒಂದು ವಿಶಿಷ್ಟ ಗಂಧ ಕೊಡುತ್ತಿತ್ತು. ಅನೇಕ ಕಥೆಗಳಲ್ಲಿ ಮಕ್ಕಳ ನೆನಪಿನಲ್ಲಿ ಈ ವಾಸನೆ ಶಾಶ್ವತವಾಗಿ ಇನ್ನೂ ಉಳಿದಿರುತ್ತದೆ.
ನಾನು ಆಗಲೇ ಹೇಳಿದ ಹಾಗೆ ಧಾರವಾಡದ ಮನೋಹರ ಗ್ರಂಥಮಾಲೆ - ಇದೊಂದು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಿಶೇಷ ಬೌದ್ಧಿಕ ಅಟ್ಟ. ಆ ಮಾಳಿಗೆಯಲ್ಲಿ ತಿನ್ನಲೇನು ಸಿಗಲಾರದು, ಆದರೆ ಪುಸ್ತಕಗಳ ಸಂಗ್ರಹವೇ ಅಟ್ಟದ ರೂಪದಲ್ಲಿ ಬುದ್ಧಿಯ ಆಹಾರವನ್ನು ಕೊಟ್ಟಂತಾಗಿದೆ. ಹಳೆಯ ಮಹತ್ವದ ಕಥೆ ಕಾದಂಬರಿ ವಿಮರ್ಶೆ ಪ್ರಬಂಧ ಕವನ ಸಂಶೋಧನೆ ಎಲ್ಲವೂ ಒಂದೇ ಸ್ಥಳದಲ್ಲಿ ಸೇರುವಂತಹ ಬುದ್ಧಿಯ ಅಟ್ಟ ಸಾಹಿತ್ಯದಲ್ಲಿ ಅನೇಕ ಚರ್ಚೆಗಳಿಗೂ ವೇದಿಕೆ ಆಗಿದೆ. ಹೀಗಾಗಿಯೇ ಹಳೆಯ ಕನ್ನಡ ಕಥೆಗಳಲ್ಲಿನ ಅಟ್ಟ ಎಂದರೆ ಕೇವಲ ಒಂದು ಗೋದಾಮು ಅಲ್ಲ; ಅದು ಮನೆಯ ಆರ್ಥಿಕ-ಸಾಂಸ್ಕೃತಿಕ-ಸಾಹಿತ್ಯಿಕ ನೆನಪಿನ ಮೂಲ ಗಿರಾಣಿ.