Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಭೂಮಿಕೆ
  5. ಗೊಂದಲಗಳ ಮಹಾಮಳೆ-ಪ್ರವಾಹದಲ್ಲಿ ಸತ್ಯದ...

ಗೊಂದಲಗಳ ಮಹಾಮಳೆ-ಪ್ರವಾಹದಲ್ಲಿ ಸತ್ಯದ ಹುಡುಕಾಟ

ನರೇಂದ್ರ ರೈ ದೇರ್ಲನರೇಂದ್ರ ರೈ ದೇರ್ಲ24 Aug 2025 10:54 AM IST
share
ಗೊಂದಲಗಳ ಮಹಾಮಳೆ-ಪ್ರವಾಹದಲ್ಲಿ ಸತ್ಯದ ಹುಡುಕಾಟ


Heading

Content Area


ಮತ್ತದೇ ಹಳೆಯ ನೆನಪಿನಿಂದಲೇ ಈ ವಾರದ ಅಂಕಣ ಆರಂಭಿಸುತ್ತಿದ್ದೇನೆ. ಸುಮಾರು 45 ವರ್ಷಗಳ ಹಿಂದೆ ನಮ್ಮನೆಗೆ ಟಿ.ವಿ. ಬಂದಾಗ ಅದಿನ್ನೂ ಅರೆಬರೆ ಕಪ್ಪು ಬಿಳುಪು ಚಿತ್ರಗಳನ್ನಷ್ಟೇ ತೋರಿಸುತ್ತಿತ್ತು. ಟಿ.ವಿ.ಯ ಸಮಸ್ಯೆ ಆಗಿರಲಿಲ್ಲ. ಮನೆಯ ಸುತ್ತಲಿನ ಮರಗಳ ಮೇಲೆ ಟಿ.ವಿ.ಗಿಂತ ಹೆಚ್ಚು ಖರ್ಚು ಮಾಡಿ ಆಂಟೆನಾ ಏರಿಸಿದರೂ ರೇಂಜ್ ಸಿಗದೇ ರವಿವಾರದ ಸಂಜೆಯ ಸಿನೆಮಾದಲ್ಲಿ ಡಾ. ರಾಜಕುಮಾರ್ ಯಾರು? ವಿಷ್ಣುವರ್ಧನ್ ಯಾರು? ಎಂಬುದೆಲ್ಲ ಸ್ಪಷ್ಟವಾಗಿ ಗೊತ್ತಾಗದಿದ್ದರೂ ಕೂಡ ಆ ಕಾಲಕ್ಕೆ ಕಲ್ಪನೆಗೂ ಸಿಗದ ದೂರದರ್ಶನವನ್ನು ನಮ್ಮನೆ ಜಗಲಿಯಲ್ಲಿ ಅಚ್ಚುಕಟ್ಟಾಗಿ ಕೂತು ನೋಡುವ ಒಂದಷ್ಟು ಹಿರಿಯರು ಸೇರುತ್ತಿದ್ದರು.

ಮೊದಮೊದಲು ಅದು ಕಲ್ಪನಾ, ಇದು ಅಂಬರೀಷ್ ಎಂದೆಲ್ಲಾ ಅಸ್ಪಷ್ಟವಾಗಿ ಮಿಂಚಿ ಸರಿದು ಜಾರಿ ಮಾಯವಾಗುವ ಚಿತ್ರಗಳನ್ನು ಜಗಲಿ ಜನರೇ ಗುರುತಿಸಿ ಮಾತು ಮತ್ತು ಕಥೆಗಳನ್ನು ಅವರೇ ಜೋಡಿಸುತ್ತಿದ್ದರು. ಮಯಮಯವಾಗಿ ಬಣ್ಣ ಬರದಿದ್ದರೂ ವ್ಯಕ್ತಿಗಳನ್ನು ಗುರುತಿಸುವಷ್ಟು ಸ್ಪಷ್ಟತೆ ಕಾಣಲಾರಂಭಿಸಿದ ಮೇಲೆ ರವಿವಾರದ ಸಂಜೆಯ ಚಲನಚಿತ್ರ ಶುರುವಾಗುವ ಸಮಯಕ್ಕೆ ಸರಿಯಾಗಿ ಚಾವಡಿಯ ಸುತ್ತ ನನ್ನಮ್ಮನ ವಾರಗೆಯರು ಸೇರುವುದು ಮಾಮೂಲಾಗಿತ್ತು. ಕೈಯಲ್ಲಿ ಸೂಪ್ ಹಿಡಿದು ಬೀಡಿ ಕಟ್ಟುವವರು,ಎಲೆಅಡಿಕೆ ಹಾಕಿಕೊಂಡು ಅಂಗಳದ ಮೂಲೆಗೆ ಹೋಗಿ ತುಪ್ಪಿ ಬರುವವರು, ಊರಿನ ಸುದ್ದಿ ಶ್ಲೋಕ ಹೇಳುವವರೆಲ್ಲ ಜಗಲಿಯಲ್ಲಿ ಸೇರಿ ಡಾ. ರಾಜಕುಮಾರ್ ಅವರ ಚಲನಚಿತ್ರವನ್ನು ಆಸ್ವಾದಿಸುತ್ತಿರುವಾಗ ಮೂಲೆಯಲ್ಲಿ ಕೂತಿದ್ದ ನಾನು ಅವರನ್ನೆಲ್ಲ ಸುಮ್ಮನೆ ಅಲ್ಲಿಂದಲೇ ಗಮನಿಸುತ್ತಿದ್ದೆ.

ಅರ್ಧ ಚಲನಚಿತ್ರ ಮುಗಿಯುವ ಹೊತ್ತಿಗೆ ಧೀರೇಂದ್ರ ಗೋಪಾಲ್ ಅಥವಾ ವಜ್ರಮುನಿ ಬಂದು ರಾಜಕುಮಾರ್ ಅವರಿಗೆ ನಾಲ್ಕು ತದಕಿದರೆ ನಮ್ಮ ಜಗಲಿಯಲ್ಲಿ ಕೂತಿದ್ದ ಹೊನ್ನಮ್ಮಕ್ಕ ಸಿಟ್ಟಲ್ಲಿ ಕುದಿಯುತ್ತಿದ್ದರು. ಅಮೂಣಿ ಅಕ್ಕನ ಕಣ್ಣಿನಲ್ಲಿ ನಾಲ್ಕು ಹನಿ ನೀರು ಜಿನುಗುತ್ತಿತ್ತು. ಹಾಗಂತ ರಾಜಕುಮಾರ್ ಇವರ್ಯಾರಿಗೂ ಮಾವನ ಮಗನಲ್ಲ, ಮಗಳ ಮಗನೂ ಅಲ್ಲ! ರಕ್ತ ಸಂಬಂಧಿಯಲ್ಲ. ಊರಿನ ಯಾವುದೋ ಮದುವೆ ಮನೆ, ಬೊಜ್ಜ, ಸೀಮಂತದ ಅಂಗಳದಲ್ಲಿ ಅಪ್ಪಿ ತಪ್ಪಿ ಒಟ್ಟಿಗೆ ಕೂತು ಉಂಡವರೂ ಅಲ್ಲ, ಡಾ. ರಾಜ್ ನಮ್ಮೂರ ಪಂಚಾಯತ್ ಪ್ರೆಸಿಡೆಂಟರ ಸುಪುತ್ರನೂ ಅಲ್ಲ.

ಡಾ. ರಾಜಕುಮಾರ್ ಎಲ್ಲಿಯವರು, ಏನು, ಅವರ ಊರು ಅಪ್ಪ ಅಮ್ಮ ಒಂದೂ ಗೊತ್ತಿಲ್ಲದ ನನ್ನೂರಹಳ್ಳಿ ಜನರು ಕೇವಲ ರಾಜ್ ವಹಿಸಿದ್ದ, ಧರಿಸಿದ್ದ ಪಾತ್ರ ಒಂದಕ್ಕೆ ಇನ್ನೊಬ್ಬ ನಟ ಬಂದು ಹೀನಮಾನ ಬೈದಾಗ, ಹಂಗಿಸಿದಾಗ, ಬಡಿದಾಗ ಕೂತಲ್ಲಿ ಕಂಪಿಸುವ ಕಣ್ಣೀರಿಡುವ ವಿಚಲಿತವಾಗುವ ಅಗತ್ಯವಾದರೂ ಏನು?

ನೈತಿಕತೆ ಅನ್ನುವುದು ಯಾವಾಗಲೂ ಹೀಗೆಯೇ. ಅದು ಸಂಭಾವನೆ ಪಡೆದು ಮಾಡುವ ಒಂದು ಪಾತ್ರವೇ ಆಗಿದ್ದರೂ, ಕೇವಲ ನಟನೆ ರೂಪದ ಅಭಿವ್ಯಕ್ತಿ ಆಗಿದ್ದರೂ, ಅದು ನಾಟಕ, ಯಕ್ಷಗಾನ ಪ್ರಹಸನ ಯಾವುದೇ ರೂಪದಲ್ಲಿರಲಿ ಅಲ್ಲಿರುವ ಒಂದು ಶುದ್ಧ ನೈತಿಕ ಪಾತ್ರದ ಜೊತೆಗೆ ತಕ್ಷಣ ಪ್ರೇಕ್ಷಕ ಮನಸ್ಸು ಹೊಂದಿಕೊಂಡು ಬಿಡುತ್ತದೆ. ನಟನಾಗಿ ಆಗ ಡಾ. ರಾಜಕುಮಾರ್ ನಿರ್ವಹಿಸುತ್ತಿದ್ದ ಪಾತ್ರದೊಳಗಡೆ ಇದ್ದ ನೈತಿಕತೆ ಅಂಥದ್ದು.

ಈ ಲೋಕದಲ್ಲಿ ನನಗೆ ಮಾಡಲಿಕ್ಕೆ ಆಗದ ಕೆಲಸವನ್ನು ಆ ಪಾತ್ರ ಮಾಡುತ್ತಿದೆ, ಅದೊಂದು ಉಪಕಾರಿ ಪಾತ್ರ, ತಪ್ಪು ಅನ್ಯಾಯ ಅಸತ್ಯ ಅಧರ್ಮವನ್ನು ಪ್ರಶ್ನಿಸುವ ಪಾತ್ರ, ಶಿಕ್ಷಿಸುವ ಪಾತ್ರ, ಸದಾ ಲೋಕ ಹಿತಕ್ಕಾಗಿ ಸ್ಪಂದಿಸುವ ಪಾತ್ರ ಎಂದು ಸಜ್ಜನ ಲೋಕ ಅದರೊಳಗಡೆ ತೂರಿಕೊಂಡು ಒಳಗೊಳ್ಳುವ ಪರಿಣಾಮಗಳು ಬಹಳ ಅದ್ಭುತ.

ಎಲ್ಲೋ ಇರುವ, ನಮ್ಮ ಜೊತೆಗೆ ಇಲ್ಲದಿರುವ ವಿನೋಭಾ ಬಾವೆ, ಟಿ.ಎನ್. ಶೇಷನ್, ಅಣ್ಣ ಹಝಾರೆ, ಸತ್ಯೇಂದ್ರ ದುಬೆ, ಈ. ಶ್ರೀಧರನ್, ವೆಂಕಟಾಚಲಯ್ಯ, .... ಇವರ್ಯಾರೂ ನಮ್ಮ ಮನೆಯ ಮಕ್ಕಳಲ್ಲ. ರಕ್ತ ಸಂಬಂಧಿಗಳಲ್ಲ, ಹಾಗಂತ ಇಂಥವರೆಲ್ಲ ಆಗಾಗ ನಮ್ಮೊಳಗೆ ನೆನಪಾಗಿ ಉಳಿಯುವುದು ಇದೇ ನೈತಿಕ ಬದ್ಧತೆಗೆ, ಪ್ರಾಮಾಣಿಕತೆಗೆ, ಅನುಷ್ಠಾನದಲ್ಲಿ ತೋರಿಸಿದ ನ್ಯಾಯ ಕ್ಷಮತೆಗೆ.

ಈ ಪಟ್ಟಿ ಯಾವತ್ತೂ ಇಲ್ಲಿಗೆ ಮುಗಿಯುವುದಿಲ್ಲ. ರಾಜಕಾರಣ, ಸಮಾಜಸೇವೆ, ವಿಜ್ಞಾನ, ಸಂಸ್ಕೃತಿ ಸಾಹಿತ್ಯ, ಮಾಧ್ಯಮ.. ಈ ಎಲ್ಲಾ ಕ್ಷೇತ್ರಗಳಲ್ಲೂ ಇವತ್ತಿಗೂ ಪ್ರಾಮಾಣಿಕರು, ಸತ್ಯವಂತರು ಇನ್ನೂ ಉಳಿದಿರುವುದರಿಂದಲೇ ಈ ಲೋಕ ಬದುಕಿದೆ. ಇಂಥವರ ನಡುವೆ ಹಳ್ಳಿ ಕೇಂದ್ರಿತ ನೆಲೆಯಲ್ಲೂ ಎಲೆಮರೆಯ ಕಾಯಿಗಳ ಹಾಗೆ ಪ್ರಾಮಾಣಿಕವಾಗಿ ಬದುಕು ಕಟ್ಟಿಕೊಂಡ, ಇತರರಿಗೆ ನೆರವಾಗುವ ನೂರಾರು ಮಾದರಿಗಳಿವೆ. ಒಂದು ಕಾಲದಲ್ಲಿ ಇಂತಹವರನ್ನೆಲ್ಲ ಇನ್ನೂ ಸತ್ಯ, ನ್ಯಾಯ, ಪ್ರಾಮಾಣಿಕತೆ ಬದುಕಿದೆ ಎನ್ನುವ ಪರಿಕಲ್ಪನೆಯಲ್ಲಿ ಸಮಾಜಮುಖಿಗೊಳಿಸುತ್ತಿದ್ದ ಎಷ್ಟೋ ಮಾಧ್ಯಮಗಳಿದ್ದವು. ಬೆಳಗ್ಗೆ ಎದ್ದ ಕೂಡಲೇ ಸಾವು, ಕೊಲೆ, ಆಕ್ರಂದನ, ಆರ್ತನಾದ, ರಕ್ತ, ಕಿರುಚಾಟ, ಬೊಬ್ಬೆ, ಬೈದಾಟ, ಹೀನಮಾನ ಬೈಗಳು ಇದೊಂದನ್ನೇ ತೋರಿಸದೆ ಒಳ್ಳೆಯ ಮಾತು, ಧ್ಯಾನದ ಮಾತು, ಸ್ಫೂರ್ತಿಯ ಮಾತು ಚೈತನ್ಯದ ಜೀವನಕ್ಕೆ ಪೂರಕವಾಗುವ ಎಷ್ಟೋ ಕಾರ್ಯಕ್ರಮಗಳು ಮಾಹಿತಿಗಳು ನಮಗೆ ಸಿಗುತ್ತಿದ್ದವು.

ಆದರೆ ಇವತ್ತು? ಸಾಮಾಜಿಕ ನವ ಮಾಧ್ಯಮಗಳು, ಮುಖ್ಯ ವಾಹಿನಿಗಳು, ಮುದ್ರಣ ಮಾಧ್ಯಮಗಳು ದಿನಾ ನಮ್ಮ ಮುಂದೆ ಸುರಿಯುವ ಸುದ್ದಿಗಳನ್ನೊಮ್ಮೆ ಗಮನಿಸಿ. ಅನೈತಿಕತೆ ರಕ್ತ ಮೆತ್ತಿಕೊಂಡೇ ಬರುವ ಆ ಸುದ್ದಿಗಳು ಯಾವುದೂ ಕೂಡ ಒಬ್ಬ ಮನುಷ್ಯನನ್ನು ಭಾವನಾತ್ಮಕವಾಗಿ ಶುದ್ಧಿಸಂಪನ್ನಗೊಳಿಸಲು ಸಾಧ್ಯವೇ ಇಲ್ಲ. ಅದನ್ನು ಓದುತ್ತಾ ನೋಡುತ್ತಾ ಕೇಳುತ್ತಾ ನಿಧಾನವಾಗಿ ನಿಜದ ಸುತ್ತ ನಮ್ಮ ಮನಸ್ಸು ಸತ್ಯ-ಅಸತ್ಯತೆಯ ಕಡೆಗೆ ಗಿರಕಿ ಹೊಡೆಯುತ್ತದೆ. ಚಲನಚಿತ್ರ ನೋಡುತ್ತಾ ನೋಡುತ್ತಾ ಪ್ರೇಕ್ಷಕನೊಬ್ಬ ಡಾ. ರಾಜಕುಮಾರ್ ಅವರ ಪರವಾಗಿ ನಿಲ್ಲುವ ಹಾಗೆಯೇ ನೋಡುಗ ಓದುಗನೊಳಗಡೆಯೂ ಒಂದು ಪರ ವಿರೋಧ ಭಾವನೆ ಕೆನೆ ಕಟ್ಟಲಾರಂಭಿಸುತ್ತದೆ.

ಈವರೆಗೆ ಮುಖವೇ ತೋರಿಸದ ಮುಖವು ಕೆಲವರಿಗೆ ಮುಖವೇ ಆಗುತ್ತದೆ. ಕಣ್ಣೇ ತೋರಿಸದ ಅವನ ಕಣ್ಣಿನಲ್ಲೇ ಜನ ಜಗತ್ತನ್ನು ನೋಡುವ ಪ್ರಯತ್ನ ಮಾಡುತ್ತಾರೆ. ಹಳ್ಳಿಯೋ ಪೇಟೆಯೋ ಒಂದು ಹತ್ತು ಮಾರು ನಡೆದು ನೋಡಿ. ದಾರಿಗುಂಟ ಅಡ್ಡವಾಗುವ ಪರಿಚಯದ ಯಾರೇ ಸಿಗಲಿ ಅವರೆಲ್ಲರೂ ಇಂತಹ ಪೂರ್ವ ನಿರ್ಧರಿತ ನೈತಿಕ ಪರೀಕ್ಷೆಯಲ್ಲಿ ನಮ್ಮೊಳಗಡೆ ತೇರ್ಗಡೆ ಹೊಂದಿಯೋ, ನಪಾಸಾಗಿಯೋ ತುಂಬಿಕೊಂಡಿರುತ್ತಾರೆ. ಅವರಲ್ಲಿ ನಾವು ಮಾತನಾಡುವ ಅಷ್ಟೂ ಮಾತುಗಳು ಬಹಳಷ್ಟು ಸಂದರ್ಭದಲ್ಲಿ ಕೇವಲ ಮುಖಸ್ತುತಿ ಆಗಿರುತ್ತದೆ. ಇಂತಹ ಪೂರ್ವ ನಿರ್ಧರಿತ ಭಾವಂಶದಿಂದಾಗಿಯೇ ಈ ಲೋಕದ ಬಹುಪಾಲು ಮಾತುಕತೆಯ ನಾಟಕ ಮುಂದುವರಿದೆ, ಮತ್ತು ಮುಂದುವರಿಯುತ್ತ ಇರುತ್ತದೆ. ನೀವು ಇಂತಹ ಅನ್ಯಾಯ ಮಾಡಿದ್ದೀರಿ, ಖಂಡಿತ ನಿಮ್ಮಿಂದ ಮೋಸವಾಗಿದೆ, ನಿಮ್ಮ ಅನ್ಯಾಯ ಜಾರಿಯಲ್ಲಿದೆ, ನಾನು ನಿಮ್ಮೊಂದಿಗೆ ಮಾತನಾಡಲಾರೆ ಎಂದು ಮುಖ ತಿರುಗಿಸಿ ಹೋಗುವ ಅಥವಾ ನಿಮ್ಮ ತಪ್ಪನ್ನು ತಿದ್ದಿಕೊಂಡು ಬನ್ನಿ, ಮತ್ತೆ ಮಾತನಾಡುವೆ ಎನ್ನುವ ಯಾವ ಕಠೋರತೆಯನ್ನು ನಾವು ತೋರಲಾರೆವು.

ಇಂದು ಇಂತಹ ನೈತಿಕತೆಯ ಪ್ರಾತಿನಿಧ್ಯವನ್ನು ನಾವು ಗಮನಿಸುವ ಮೊಬೈಲ್ ಅಥವಾ ಟಿ.ವಿ. ಪರದೆಗಳು ಭಾಗಶ: ನೀಡುವುದಿಲ್ಲ. ಅದರ ಬದಲು ನಮ್ಮ ಮುಂದೆ ನಿರಂತರವಾಗಿ ಹೊಸ ಪರದೆಗಳು ತೆರೆಯುತ್ತಿವೆ. ಟಿ.ವಿ. ವಾಹಿನಿಗಳು, ಮೊಬೈಲ್, ಇಂಟರ್‌ನೆಟ್, ಸಾಮಾಜಿಕ ಮಾಧ್ಯಮಗಳು ಬೆಳಗಿನ ಕಾಫಿ ಕುಡಿಯುವಷ್ಟರಲ್ಲಿ ನಮ್ಮ ಮೆದುಳಿನ ಮೇಲೆ ದಶಕಟ್ಟಲೆ ಸುದ್ದಿ, ವೀಡಿಯೊ, ಪೋಸ್ಟ್‌ಗಳ ಮಳೆ ಸುರಿಸುತ್ತವೆ. ಈ ಮಾಹಿತಿಗಳಲ್ಲಿ ಯಾವುದು ಪ್ರಯೋಜನಕಾರಿ? ಯಾವುದು ನಿಜ? ಯಾವುದು ಸುಳ್ಳು? ಯಾವುದು ಮೌಲ್ಯಪೂರ್ಣ? ಯಾವುದು ಕೇವಲ ಪ್ರಚೋದನೆ? ಎಂಬ ಪ್ರಶ್ನೆಗಳು ತಲೆತಿರುಗುವಷ್ಟು ಕಾಡುತ್ತವೆ.

ಇಂದಿನ ಈ ಮಾಹಿತಿ ಮಹಾಮಳೆಗಾಲದಲ್ಲಿ ಹರಿದು ಬರುವುದು ಬರೀ ಸುದ್ದಿಗಳು ಮಾತ್ರವಲ್ಲ; ಅವುಗಳ ಹಿಂದೆ ಅಡಗಿರುವ ತಂತ್ರಗಳು, ವ್ಯಕ್ತಿತ್ವ ನಾಶದ ಸಂಚುಗಳು ಮತ್ತೆಂದೂ ತಲೆಯೆತ್ತದ ಹಾಗೆ ಮಾಡುವ ಹುನ್ನಾರಗಳು, ಬಣ್ಣಗಳು, ಹಿತಾಸಕ್ತಿಗಳು. ಒಂದು ಸುದ್ದಿಯನ್ನು ಓದಿದರೆ ಇನ್ನೊಂದು ಸುದ್ದಿ ಅದನ್ನು ತಳ್ಳಿಬಿಡುತ್ತದೆ. ಒಂದು ಘಟನೆಯಲ್ಲಿ ಮಾಧ್ಯಮಗಳು ಒಬ್ಬನನ್ನು ಹೀರೋ ಮಾಡಿದರೆ ಇನ್ನೊಂದು ಮಾಧ್ಯಮ ಅದೇ ವ್ಯಕ್ತಿಯನ್ನು ವಿಲನ್ ಮಾಡಿಬಿಡುತ್ತದೆ.

ಈ ಹಿಂದಿನ ಲೋಕ ಸುದ್ದಿಯಲ್ಲಿ ನಮಗೊಂದು ಸತ್ಯದ ಭರವಸೆಯಿತ್ತು. ಪತ್ರಿಕೆಗಳು ಕೊಟ್ಟ ಮಾತನ್ನು ಜನರು ಸತ್ಯವೆಂದು ಒಪ್ಪಿಕೊಂಡು ಬದುಕುತ್ತಿದ್ದರು. ಆದರೆ ಇಂದಿನ ಪರಿಸ್ಥಿತಿ ಬೇರೆ. ಪ್ರತಿಯೊಬ್ಬರ ಮೊಬೈಲ್‌ನಲ್ಲಿ ಒಂದೊಂದು ಸತ್ಯ ಜೀವಿಸುತ್ತಿದೆ. ಒಬ್ಬರಿಗೆ ಹೀರೋ ಎನ್ನಿಸಿಕೊಂಡವನು ಇನ್ನೊಬ್ಬರಿಗೆ ಅಪರಾಧಿಯಾಗುತ್ತಾನೆ. ಅಂಗೈಯಲ್ಲಿ ಕೂತ ಒಂದೇ ಯಂತ್ರ ಒಂದೇ ಘಟನೆಯ ಎರಡು ಮುಖಗಳನ್ನು ನಮಗೆ ತೋರಿಸುತ್ತಲೇ ಇರುತ್ತದೆ. ಹೀಗಾಗಿ ಯಾವತ್ತೂ ಮನಸ್ಸು ಶಾಂತಿಯಲ್ಲಿರದು; ಯಾವುದು ನಂಬಬೇಕು? ಯಾರನ್ನು ಅನುಸರಿಸಬೇಕು? ಎಂಬ ದ್ವಂದ್ವದಿಂದ ಮನಸ್ಸು ಕುಂಠಿತವಾಗುತ್ತದೆ. ಲೋಕದಲ್ಲಿ ಇಬ್ಬರೂ ಒಂದೇ ಪರದೆ ಮೇಲೆ ಹೀರೋ-ವಿಲನ್ ಬಣ್ಣಗಳನ್ನು ತಂದು ಬಿಡುತ್ತಾರೆ. ಹೀಗಾಗಿ ಪ್ರೇಕ್ಷಕರ ಹೃದಯದಲ್ಲಿ ತಲೆಕೆಳಗಾದ ಗೊಂದಲ ಮೂಡುತ್ತದೆ. ನೈತಿಕತೆಯ ಬಣ್ಣ ಮಸುಕಾಗುತ್ತವೆ.

ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರು ಏನು ಮಾಡಬೇಕು? ಮೊದಲನೆಯದಾಗಿ ಮಾಹಿತಿಯ ಹಿಂಬದಿಯನ್ನು ಪ್ರಶ್ನಿಸುವ ಅಭ್ಯಾಸ ಬೆಳೆಸಬೇಕು. ಯಾರು ಈ ಸುದ್ದಿಯನ್ನು ಹೇಳುತ್ತಿದ್ದಾರೆ? ಅವರ ಉದ್ದೇಶವೇನು? ಎಂಬುದನ್ನು ಅರಿಯುವ ಪ್ರಯತ್ನ ಅಗತ್ಯ. ಎರಡನೆಯದಾಗಿ, ಮೌಲ್ಯ ಆಧಾರಿತ ತೀರ್ಮಾನ ನಮ್ಮೊಳಗೇ ಬೆಳೆಸಿಕೊಳ್ಳಬೇಕು. ಯಾವುದು ಹೆಚ್ಚು ಪ್ರಾಮಾಣಿಕ ಸತ್ಯ ಮತ್ತು ಮಾನವೀಯ? ಎಂಬ ಪ್ರಶ್ನೆಯ ಉತ್ತರವೇ ಇಂತಹ ನಿಜ-ಸುಳ್ಳಿನ ಗೊಂದಲವನ್ನು ಕಡಿಮೆ ಮಾಡಬಲ್ಲದು.

ಹೀಗಾಗಿಯೇ, ಇಂದಿನ ಮಾಧ್ಯಮ ಯುಗದಲ್ಲಿ ನಾವು ಬದುಕುತ್ತಿರುವುದು ಅಸ್ಪಷ್ಟತೆಯ ಸಮುದ್ರದಲ್ಲಿ ದೋಣಿ ತೂಗುತ್ತಿರುವಂತೆ. ಪ್ರತೀ ಕ್ಷಣವೂ ಅಲೆಗಳ ಹೊಡೆತ ಬರುತ್ತಲೇ ಇರುತ್ತದೆ. ಆದರೆ ಆ ದೋಣಿಯ ಹಾಯಿ -ಹಿಡುಕಟ್ಟನ್ನು ಬಿಗಿಯಾಗಿ ಹಿಡಿಯುವ ಶಕ್ತಿ ನಮ್ಮ ನೈತಿಕತೆ, ನಮ್ಮ ವಿವೇಕ. ಖಂಡಿತವಾಗಿಯೂ ಮಾಧ್ಯಮಗಳ ಸುದ್ದಿ ಮಳೆಗಾಲ ನಿಲ್ಲುವುದಿಲ್ಲ, ಆದರೆ ಮಳೆಯ ನಡುವೆಯೂ ಚೂರು ಒದ್ದೆಯಾಗದೆ ನೆಗಡಿ, ಕೆಮ್ಮು, ಜ್ವರ ತಾಗಿಸಿಕೊಳ್ಳದೆ ದಾರಿ ತಪ್ಪದೇ ಸಾಗುವುದು ಮಾತ್ರ ನಮ್ಮ ಕೈಯಲ್ಲಿದೆ.


share
ನರೇಂದ್ರ ರೈ ದೇರ್ಲ
ನರೇಂದ್ರ ರೈ ದೇರ್ಲ
Next Story
X