ರೈತರು ರಜೆಯಲ್ಲಿದ್ದಾರೆ! ತಿರುಗಿ ಬರುತ್ತಾರೆಯೇ?

ಸಾಂದರ್ಭಿಕ ಚಿತ್ರ
ಕೃಷಿಯಲ್ಲೀಗ ದುಡಿಸುವ ಯುವಕರು ಮತ್ತು ದುಡಿಯುವ ಯುವಕರು ಇಬ್ಬರೂ ರಜೆಯಲ್ಲಿದ್ದಾರೆ. ಅವರು ತಿರುಗಿ ಮತ್ತೆ ಮಣ್ಣಿಗೆ ಬರುತ್ತಾರೆ ಅನ್ನುವ ಗ್ಯಾರಂಟಿ ನನಗಿಲ್ಲ. ನಗರ ಕೇಂದ್ರಿತ ಬೃಹತ್ ಆರ್ಥಿಕ ವಲಯ, ಕೈಗಾರಿಕಾ ವಲಯ, ಅಲ್ಲಿಯ ನಿರ್ಮಾಣ ಕ್ಷೇತ್ರಗಳನ್ನು ಬಿಟ್ಟುಬಿಡಿ, ಈ ರಾಜ್ಯದ ಹಳ್ಳಿಗಳನ್ನೊಮ್ಮೆ ನೋಡಿ. ನಾಲ್ಕೈದು ಎಕರೆಯಲ್ಲಿ ಕೃಷಿ ಮಾಡುವ ಹಿಡುವಳಿದಾರರು, ಜೊತೆಗೆ ಹೈನುಗಾರಿಕೆ, ಕೋಳಿ ಸಾಕಣೆ, ಹೂವಿನ ಕೃಷಿ, ರೇಷ್ಮೆ ಕೃಷಿ, ಜೇನು ಕೃಷಿ, ತೋಟಗಾರಿಕೆ ಇಲ್ಲೆಲ್ಲಾ ಇವತ್ತು ಸ್ಥಳೀಯ ಕೂಲಿಕಾರರೇ ಇಲ್ಲ. ಬರೀ ಉತ್ತರ ಭಾರತದ ವಲಸೆ ಕಾರ್ಮಿಕರು ದುಡಿಯುವುದನ್ನು ನಾನು ಗಮನಿಸಿದ್ದೇನೆ. ಇತ್ತೀಚೆಗೆ ಬೆಂಗಳೂರು ಸಮೀಪ ದೊಡ್ಡಬಳ್ಳಾಪುರದಲ್ಲಿ ಸುಮಾರು 300 ಜನ ದುಡಿಯುವ ಪೌಲ್ಟ್ರಿ ಒಂದಕ್ಕೆ ಭೇಟಿ ಕೊಟ್ಟಿದ್ದೆ. ಒಬ್ಬನೇ ಒಬ್ಬ ಕನ್ನಡಿಗ ಆ ಕೋಳಿ ಸಾಕಣೆ ಕೇಂದ್ರದಲ್ಲಿ ಕೆಲಸ ಮಾಡುತ್ತಿಲ್ಲ. ಜಾರ್ಖಂಡ್, ಪಶ್ಚಿಮ ಬಂಗಾಳ, ಅಸ್ಸಾಂ ಮುಂತಾದ ಉತ್ತರ ಭಾರತ ಕೇಂದ್ರಿತ ರಾಜ್ಯಗಳ ವಲಸಿಗ ಯುವಕರು ದುಡಿಯುವುದನ್ನು ಗಮನಿಸಿದೆ. ಅಷ್ಟು ದೂರ ಯಾಕೆ? ನಮ್ಮ ಕರಾವಳಿಯ ಎಷ್ಟೋ ರೈತರ ಮನೆಯಲ್ಲೀಗ ಕೃಷಿ ಚಟುವಟಿಕೆಗಳು, ಹಸುಸಾಕಣೆ ನಡೆಯುತ್ತಿರುವುದು ಇಂಥ ಉತ್ತರ ಭಾರತದ ವಲಸಿಗರಿಂದಲೇ.
ನಮ್ಮೂರ ಕೃಷಿ ಮನೆಯ ಎರಡನೆಯ, ಮೂರನೆಯ ತಲೆಮಾರಿನ ವಿದ್ಯಾವಂತ ಯುವಕರು ಹಳ್ಳಿ ಬಿಟ್ಟು ವಿದೇಶವೂ ಸೇರಿ ಬೆಂಗಳೂರು, ಮುಂಬೈ ಕಡೆಗೆ ವಲಸೆ ಹೋಗಿದ್ದಾರೆ. ಮನೆಯಲ್ಲಿರುವ ಹಿರಿಯರು ಈ ಹಿಂದಿವಾಲರಿಗೆ ಕನ್ನಡ ಕಲಿಸುವ ಮೊದಲು ತಾವೇ ಹಿಂದಿ ಕಲಿತು ಅರೆಬರೆ ತೋಟದ ಕೆಲಸಗಳನ್ನು ನಿರ್ವಹಿಸಿದ್ದನ್ನು ನಾವು ನಿತ್ಯ ಕಾಣುತ್ತಿದ್ದೇವೆ. ಹಾಲು ಕರೆಯುವುದರಿಂದ ಹಿಡಿದು ಕೊಳೆ ರೋಗಕ್ಕೆ ಬೋರ್ಡು ಸ್ಪ್ರೇ ಮಾಡುವವರೆಗೆ ಈ ಹಿಂದಿಜನ ಈಗ ಪಳಗಿದ್ದಾರೆ. ಕೆಲವು ಕಡೆ ಗಂಡ-ಹೆಂಡತಿ ಜೋಡಿ ಇದ್ದು, ಮಕ್ಕಳನ್ನು ಸ್ಥಳೀಯ ಕನ್ನಡ ಶಾಲೆಗೆ ಸೇರಿಸಿ ನಂಬಿದ ಯಜಮಾನರಿಗೆ ವರ್ಷದ ಮಟ್ಟಿಗೆ ಇಲ್ಲೇ ಉಳಿಯುತ್ತೇವೆ ಎಂಬ ಭರವಸೆಯನ್ನು ಸೃಷ್ಟಿಸಿದ್ದಾರೆ.
ದಕ್ಷಿಣದ ಕೃಷಿಗೆ ನೆರವಾಗುವ ಈ ಉತ್ತರದ ಜನ ಇನ್ನು ಕೆಲವೇ ವರ್ಷಗಳಲ್ಲಿ ಈ ಕಡೆ ಬರುವುದನ್ನು ನಿಲ್ಲಿಸಿದರೆ ನಮ್ಮ ಕೃಷಿರಂಗದ ಮೇಲೆ ಆಗಬಹುದಾದ ಪರಿಣಾಮವನ್ನು ಒಮ್ಮೆ ಊಹಿಸಿ. ಎಷ್ಟೇ ಯಾಂತ್ರೀಕರಣಗೊಂಡರೂ ಬಹುವಾರ್ಷಿಕ ಕೃಷಿಯಲ್ಲಿ ಮಾನವ ಒಳಗೊಳ್ಳುವ ಅನೇಕ ಸೂಕ್ಷ್ಮಾತಿಸೂಕ್ಷ್ಮ ಕೆಲಸಗಳು ಇದ್ದೇ ಇರುತ್ತವೆ. ಇಲ್ಲೆಲ್ಲ ಬರೀ ಮನುಷ್ಯರಹಿತ ಸಾಧ್ಯತೆಗಳನ್ನು ಕಲ್ಪಿಸಿಕೊಳ್ಳುವುದು ಕಷ್ಟವೇ.
ನಿರ್ವಹಣೆಯ ಒಂದೇ ಕಷ್ಟಕ್ಕೆ ಈಗಾಗಲೇ ಈ ಭಾಗದ ಅನೇಕ ಅಡಿಕೆ ಕೃಷಿಕರು ತೋಟಗಳನ್ನು ದೂರದೂರುಗಳ ಕೇರಳಿಗರಿಗೆ ಲೀಸಿಗೆ ಕೊಡುವುದನ್ನು ನಾನು ಗಮನಿಸಿದ್ದೇನೆ. ಬೈಲುಸೀಮೆಯಲ್ಲಿರುವ ಚೇಣಿ ಪದ್ಧತಿ ಕರಾವಳಿಗೂ ಈಗ ಕಾಲಿಟ್ಟಿದೆ. ಕಳೆ ಕಟಾವು, ಔಷಧಿ ಸ್ಪ್ರೇ, ಕೊಯ್ಲು, ಗೊಬ್ಬರ ಇತ್ಯಾದಿ ಶ್ರಮದ ಕೆಲಸಗಳನ್ನು ಆಧರಿಸಿ ಲಭ್ಯ ಆದಾಯವನ್ನು ಅನುಪಾತದಲ್ಲಿ ಹಂಚಿಕೊಂಡು ಕೃಷಿಯನ್ನು ಸ್ವಲ್ಪ ಸುಲಭ ಮಾಡಿಕೊಂಡಿದ್ದಾರೆ ಎಂಬುದಕ್ಕಿಂತ ಶತಾಯ ಗತಾಯ ಉಳಿಸುವ ಯೋಚನೆ ಮಾಡಿದ್ದಾರೆ. ಈ ಹಂಚಿಕೆ ಅನುಪಾತದಲ್ಲಿ ನಷ್ಟ ಮಾಡಿಕೊಂಡವರು ಅನೇಕ ಮಂದಿ ಇದ್ದಾರೆ. ವಯಸ್ಸು, ಅನಾರೋಗ್ಯ, ಮನೆ ಜನರ ಅಲಭ್ಯತೆಯಿಂದಾಗಿ ಅನೇಕ ಜನರ ಕೃಷಿ ಏಗುವ, ಗತಿ-ಮತಿಯಿಲ್ಲದೆ ಅವಲಂಬಿಸುವ, ಪಳಿಯುಳಿಕೆಗಳಾಗುವ, ಪೂರ್ಣ ಕಳೆದುಕೊಳ್ಳುವ ನಿತ್ರಾಣದ ಸ್ಥಿತಿಯಲ್ಲಿದೆ. ಈ ಎಲ್ಲಾ ಪ್ರಯೋಗಗಳು ಕೃಷಿಗೆ ಅಂತಿಮ ಮೊಳೆ ಬಡಿವ ಮುಂಚಿನ ಶತ ಪ್ರಯತ್ನಗಳು ಮತ್ತು ಬದುಕುವ ಬೇರೆ ದಾರಿ ಮುಚ್ಚಿಕೊಂಡು ಕೃಷಿ ಹೊರತಾಗಿ ಅನ್ಯ ಮಾರ್ಗಗಳೇ ಇಲ್ಲ ಎನ್ನುವವರ ಮತ್ತು ಭಾವನಾತ್ಮಕವಾಗಿ ಕೃಷಿಯೊಂದಿಗೆ ಸಂಬಂಧವನ್ನು ಇಟ್ಟುಕೊಂಡ ನೆಲದವರ ಕಡೆಯ ಶತ ಪ್ರಯತ್ನಗಳಾಗಿವೆ.
ದಕ್ಷಿಣದ ಹಳ್ಳಿದುಡಿಮೆಗೆ ವಲಸಿಗ ಕಾರ್ಮಿಕರದ್ದು ಕೂಡ ಕೊನೆಯ ಆಯ್ಕೆಯೇ. ಉತ್ತರದ ಯುವ ಕಾರ್ಮಿಕರು ದುಡಿಯಲು ನಗರವನ್ನೇ ಮೊದಲು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಮೊಬೈಲ್ಗೆ ರೇಂಜ್ ಸಿಗುವ, ಗುಟ್ಕಾ, ಕುಡಿತ ಲಭ್ಯವಿರುವ, ಮೋಜು ಮನೋರಂಜನೆಗೆ ಅವಕಾಶ ಇರುವ ನಗರವೇ ಅವರ ಮೊದಲ ಪ್ರೀತಿ. ಕಾರ್ಖಾನೆಗಳು, ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿ ಮುಂತಾದ ದುಡಿಮೆ ಎಂದರೆ ಈ ವಲಸಿಗರಿಗೆ ತುಂಬಾ ಇಷ್ಟ. ಇಲ್ಲೆಲ್ಲಾ ರಾತ್ರಿ-ಹಗಲು ದುಡಿಯಲು ಅವಕಾಶಗಳಿವೆ. ಬಾಡಿಗೆ ರಹಿತ ಕೂಡು ವಸತಿ ವ್ಯವಸ್ಥೆ ಇದೆ. ಸುಖ-ದುಃಖ ಗಳನ್ನು ಹಂಚಿಕೊಳ್ಳಲು, ಮಾತನಾಡುತ್ತ ಶ್ರಮ ಮರೆಯಲು ತನ್ನೂರಿನದ್ದೇ ಗೆಳೆಯರ ಗುಂಪು ಇರುತ್ತದೆ. ಆದರೆ ಸಾವಿರಾರು ಮೈಲು ದೂರದ ನಾಗರಿಕ ಜಗತ್ತಿನಿಂದ ದೂರದ ಊರುಗಳಲ್ಲಿ ಇವರು ಏಕಾಂಗಿತನವನ್ನು ಅನುಭವಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಕೆಲಸ ಗೊತ್ತಿರದ, ಊರು ಗೊತ್ತಿರದ, ಕೃಷಿಕೇಂದ್ರಿತ ಹಳ್ಳಿಗಳಲ್ಲಿ ದುಡಿಯುವುದೆಂದರೆ ಉತ್ತರದ ವಲಸಿಗರಿಗೆ ನಿಜವಾಗಿಯೂ ಕೊನೆಯ ಆಯ್ಕೆಯೇ.
ಮಿತ್ತಬಾಗಿಲು ರಾಮಭಟ್ಟರ ಅಡಿಕೆ ತೋಟದಲ್ಲಿ ಕಾಳುಮೆಣಸಿನ ಗಿಡ ನೆಡುತ್ತಿದ್ದ ಮದನ್ ಕುಮಾರ್ ಬಿಹಾರದವ. ಆತನ ಪ್ರಕಾರ, ಮಂಗಳೂರು, ಮಣಿಪಾಲ, ಉಡುಪಿ ಈ ಭಾಗವೇ ತಮ್ಮವರ ಮೊದಲ ಆಯ್ಕೆ. ‘‘ಕೆಲಸ ಎಲ್ಲೂ ಸಿಗದೇ ಇದ್ದಾಗ ನಾವು ನಗರ ಬಿಟ್ಟು ಹಳ್ಳಿಗೆ ಸರಿಯುತ್ತೇವೆ. ಕಾಂಕ್ರಿಟ್ ಕಟ್ಟಡ, ರಸ್ತೆ ಇತ್ಯಾದಿ ನಿರ್ಮಾಣ ಕಾಮಗಾರಿಯಲ್ಲಿ ನಾವು ಹೆಚ್ಚು ಕಲಿಯಬೇಕಾಗಿಲ್ಲ. ಆದರೆ ತೋಟದ ಕೆಲಸ ತುಂಬಾ ಕಷ್ಟ. ಇಲ್ಲಿ ನಮಗೆ ದನಿಗಳು ಮನೆ ಕೊಟ್ಟಿದಾರೆ.ಮಕ್ಕಳನ್ನು ಸ್ಥಳೀಯ ಶಾಲೆಗೆ ಸೇರಿಸಿದ್ದೇವೆ. ಗಂಡ-ಹೆಂಡತಿ ಇನ್ನೊಂದೆರಡು ವರ್ಷ ಇಲ್ಲಿರುತ್ತೇವೆ. ಮುಂದೆ ಬಹಳ ವರ್ಷ ಖಂಡಿತ ನಮಗಿಲ್ಲಿ ಕಷ್ಟ’’ ಎನ್ನುತ್ತಾನೆ. ಈ ಭಾವನೆ ಅನೇಕ ವಲಸಿಗರಲ್ಲಿ ಇದೆ.
ಈ ಮನೋಭಾವನೆ ನಮ್ಮೂರ ಕೃಷಿ ಕೆಲಸಗಾರರ ಮತ್ತು ಕೆಲಸ ಮಾಡಿಸುವ ಭೂಮಿಭಾಗಿಗಳ ಮಕ್ಕಳಲ್ಲಿ ಬಂದು ಬಹಳ ವರ್ಷಗಳೇ ಆಗಿವೆ. ದುಡಿಯುವ, ದುಡಿಸುವ ಇಬ್ಬರ ಮಕ್ಕಳೂ ಊರು ಬಿಟ್ಟು ನಗರ ಸೇರಿದ್ದಾರೆ. ಈ ಮನೋಭಾವನೆಗೆ ಕಾರಣಗಳು ಬಹಳ ಸುಲಭ, ಆದರೆ ಪರಿಣಾಮ ಮಾತ್ರ ಅತ್ಯಂತ ಗಂಭೀರ.
ಒಂದು ಸಮೀಕ್ಷೆ ಪ್ರಕಾರ ಭಾರತ ಶೇ. 60ಕ್ಕಿಂತ ಹೆಚ್ಚು ಜನರನ್ನು ಅವಲಂಬಿಸಿದ ಕೃಷಿ ವ್ಯವಸ್ಥೆಯನ್ನು ಇನ್ನೂ ಉಳಿಸಿಕೊಂಡವರು ಹಿರಿಯರು. ಅಲ್ಲಿರುವ ಶೇ. 1.2ರಷ್ಟು ಯುವಕರಷ್ಟೇ ಆಸಕ್ತಿಯಿಂದ ಕೃಷಿಯನ್ನು ಮುಂದುವರಿಸುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಉಳಿದವರದ್ದೆಲ್ಲ ಹಣ ಮತ್ತು ನಗರ ಮೋಹಿ ಮನಸ್ಥಿತಿ. ವಿಶೇಷವೆಂದರೆ ನಗರ ವಲಸೆಯ ಈ ಪ್ರೀತಿ ಕೇವಲ ಭಾರತದಲ್ಲಿ ಮಾತ್ರವಲ್ಲ, ಏಶ್ಯ, ಆಫ್ರಿಕಾ ಮುಂತಾದ ಕನಿಷ್ಠ ತಲಾಆದಾಯ ಇರುವ ದೇಶಗಳಲ್ಲೂ ಹೆಚ್ಚಾಗಿದೆ. ಜನಸಂಖ್ಯೆ ಕಡಿಮೆ ಇರುವ ಅಮೆರಿಕದಂತಹ ದೇಶಗಳಲ್ಲಿ ಇನ್ನೂರು-ಐನೂರು ಹೆಕ್ಟೇರ್ಗಿಂತ ಕಡಿಮೆ ಭೂ ಹಿಡುವಳಿ ಹೊಂದಿರುವ ರೈತರೇ ಇಲ್ಲ. ನಮ್ಮಲ್ಲಿ ಅಷ್ಟು ಭೂ ಹಿಡುವಳಿ ಹೊಂದಿರುವ ರೈತರೇ ಇಲ್ಲ ಅನ್ನುವ ಸ್ಥಿತಿಯಲ್ಲಿ ಸಣ್ಣ ಸಣ್ಣ ಹಿಡುವಳಿಗಳಲ್ಲಿ ಲಾಭ ಇಲ್ಲದೆ ಸಾಲ ಮಾಡಿ ಕೃಷಿ ಪೊರೆಯುವಂಥ ಪರಿಸ್ಥಿತಿ ಹೆಚ್ಚು. ಅದರಲ್ಲೂ ಇತ್ತೀಚೆಗೆ ಹವಾಮಾನ ವೈಪರೀತ್ಯ ರೈತರಿಗೆ ಪ್ರಬಲ ತಡೆಯಾಗಿ ಪರಿಣಮಿಸಿದೆ.
ಸಬ್ಸಿಡಿ, ಸಾಲ ಮನ್ನಾ, ಕಡಿಮೆ ಬಡ್ಡಿಯ ಸಾಲ ಇತ್ಯಾದಿಗಳನ್ನು ಕೊಡುವುದರ ಮೂಲಕ ಬಹುಸಂಖ್ಯಾತ ಸಣ್ಣ ಹಿಡುವಳಿಯ ರೈತ ಸಮುದಾಯವನ್ನು ಮೇಲೆತ್ತಬಹುದು ಎಂಬ ಭ್ರಮೆಯಲ್ಲಿ ಭಾರತ ಸರಕಾರ ಇದ್ದಂತಿದೆ. ಬರೀ ಇಷ್ಟರಲ್ಲಿ ಭಾರತದ ಕೃಷಿರಂಗವನ್ನು ಉದ್ಧರಿಸಬಹುದು ಎನ್ನುವ ಯೋಚನೆ, ಯೋಜನೆ ಭ್ರಮೆಯಷ್ಟೇ. ಯಾವ ದೇಶದಲ್ಲಿ ಯುವಜನರನ್ನು ಕೃಷಿಯಲ್ಲಿ ಉಳಿಸಲು ಪ್ರಭುತ್ವಕ್ಕೆ ಸಾಧ್ಯವಾಗುವುದಿಲ್ಲವೋ ಮತ್ತು ಕೃಷಿಗೆ ಬರುವ, ಕೃಷಿಯಲ್ಲಿ ಉಳಿಯುವ ಯುವಕರು ಇದು ತಮಗೆ ಘನತೆ, ಗೌರವ, ಸ್ವಾಭಿಮಾನದ ಬದುಕೆಂದು ಭಾವಿಸುವುದಿಲ್ಲವೋ ಅಲ್ಲಿಯವರೆಗೆ ಕೃಷಿಗೆ, ಕೃಷಿಕರಿಗೆ ಇಲ್ಲಿ ಗೌರವ ಪ್ರಾಪ್ತವಾಗುವುದೇ ಇಲ್ಲ. ಅದು ಘನತೆಯ ಜೀವನೋಪಾಯವಾಗುವುದೇ ಇಲ್ಲ. ಆರ್ಥಿಕ ಸ್ವಾಬಲಂಬನೆಗಿಂತಲೂ ಹಳ್ಳಿಕೇಂದ್ರಿತ ಯುವಕರು ಸ್ವಾಭಿಮಾನದ ಬದುಕಿಗೆ ಹೆಚ್ಚು ಹೆಚ್ಚು ಹಾತೊರೆಯುತ್ತಾರೆ.
ಎಷ್ಟೋ ಬಾರಿ ಒಬ್ಬ ಶಿಕ್ಷಕ ಇನ್ನೊಬ್ಬ ಶಿಕ್ಷಕನಿಗೆ, ಒಬ್ಬ ಸೈನಿಕ ಮತ್ತೊಬ್ಬ ಸೈನಿಕನಿಗೆ ಕೊಡುವಂತಹ ಗೌರವ ಏನಿದೆಯೋ ಅಂತಹದ್ದೇ ಗೌರವ ಒಬ್ಬ ಕೃಷಿಕ ಮತ್ತೊಬ್ಬ ಕೃಷಿಕನಿಗೆ ಕೊಡದಿರುವ ಮನಸ್ಥಿತಿಯಲ್ಲಿ ಕೃಷಿ ಜಗತ್ತು ಬದುಕುತ್ತಿದೆ. ಈ ದಾರಿಯಲ್ಲಿ ಅಪ್ಪ-ಅಮ್ಮ ತಾವು ಕೃಷಿಕರಾದದ್ದು ಸಾಕು ತಮ್ಮ ಮಕ್ಕಳು ಕೃಷಿಕರಾಗುವುದು ಬೇಡ ಎಂದು ಬಯಸುವುದೇ ಜಾಸ್ತಿ. ಮನೆ ಬಿಡುವುದಕ್ಕೆ ಹೊಸ ದಾರಿಯನ್ನು ಮಗ ಹುಡುಕಬೇಕಾಗಿಲ್ಲ. ಆ ಮನೆಯ ಅಪ್ಪನೇ ಸಿದ್ಧಗೊಳಿಸಿ ಬ್ಯಾಗ್ ತುಂಬಿಸಿ, ಕಿಸೆಗೆ ಒಂದಷ್ಟು ದುಡ್ಡು ತುರುಕಿಸಿ ನಗರದ ಕಡೆಗೆ ಬಸ್ಸು ಹತ್ತಿಸುತ್ತಾನೆ. ಇಲ್ಲೆಲ್ಲ ಹಿರಿಯ ಕೃಷಿಕರಿಗೆ ಮರ್ಯಾದೆ ದೊಡ್ಡ ಪ್ರಶ್ನೆಯಾಗುತ್ತದೆ! ಹಿರಿಯರ ಈ ತೀರ್ಮಾನವನ್ನು ಧಿಕ್ಕರಿಸಿ ವಿದ್ಯಾವಂತ ಮಕ್ಕಳು ಪುಸ್ತಕ, ಪದವಿ ಪತ್ರವನ್ನು ಅಟ್ಟಕ್ಕೇರಿಸಿ ಕಾಲಿಗೆ ಕೆಸರು ಮಾಡಿಕೊಳ್ಳಲು ಆಸೆ ಪಡುವ, ಹಿರಿಯರ ಇಚ್ಛೆಗೆ ಸಡ್ಡು ಹೊಡೆಯುವ ಮನಸ್ಥಿತಿಯವರು ತುಂಬಾ ಕಡಿಮೆ.
‘‘ಕೊರೋನ ಅವಧಿಯಲ್ಲಿ ನಾನು ಹಳ್ಳಿಗೆ ಬಂದಿದ್ದೆ. ಅಪ್ಪನ ಮಾರ್ಗದರ್ಶನ ಪಡೆದು ಕೃಷಿಯಲ್ಲೇ ಬೆಳೆಯುವ ಪ್ರಯತ್ನದಲ್ಲಿ ತೊಡಗಿದೆ. ನಾನಿಟ್ಟ ಅಡಿಕೆ ಗಿಡಗಳು ಫಲ ಬರುವ ಹೊತ್ತಿಗೆ ಯಾಕೋ ಹಳ್ಳಿ ಸಾಕಾಗಿ ಬೆಂಗಳೂರಿಗೆ ಹೋಗುವ ಯೋಚನೆಯನ್ನು ಮಾಡುತ್ತಿದ್ದೇನೆ. ಅಪ್ಪ ಇದಕ್ಕೆ ಸ್ವಲ್ಪ ಬ್ರೇಕ್ ಹಾಕಿದ್ರೆ ನಾನು ಇಲ್ಲೇ ಉಳಿಯಬಹುದಿತ್ತೋ ಏನೋ? ನನಗೆ ಹೆಣ್ಣು ಸಿಗುವುದಿಲ್ಲ ಅನ್ನುವುದು ಅಮ್ಮನ ಚಿಂತೆ ಬೇರೆ. ಒಟ್ಟಿನಲ್ಲಿ ನಾನು ನಗರಕ್ಕೆ ಮತ್ತೆ ತಿರುಗ ಬೇಕಾಗಿರುವುದು ಅನಿವಾರ್ಯವೇ ಆಗಿದೆ’’ ಎನ್ನುವ ರಾಮಮೋಹನ್ ಅವರ ಅಭಿಪ್ರಾಯ ಬಹಳಷ್ಟು ಯುವಕರದ್ದೂ ಆಗಿದೆ.
ಎಷ್ಟೇ ಆದಾಯ ಬರಲಿ ಮದುವೆ ವಯಸ್ಸಿಗೆ ಹೆಣ್ಣು ಸಿಗದೇ ಇದ್ದರೆ ಏಕಾಂಗಿಯಾಗಿ ಉಳಿಸುವ ಈ ಹಳ್ಳಿ ನಮಗೇಕೆ ಬೇಕು ಎನ್ನುವ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ. ಕೃಷಿರಹಿತವಾಗಿಯೂ ಕೂಡ ರೈತರ ಮಕ್ಕಳನ್ನು ಗ್ರಾಮಗಳಲ್ಲಿ ಉಳಿಸುವ ಉದ್ಯೋಗದ ಬಹು ಆಯ್ಕೆಗಳು ಸ್ಥಳೀಯವಾಗಿ ತುಂಬಾ ಕಡಿಮೆ. ಯಾಂತ್ರೀಕರಣ, ಮೌಲ್ಯವರ್ಧನೆ, ಉದ್ಯೋಗ ಸೃಷ್ಟಿ ಮುಂತಾದ ಸೌಲಭ್ಯಗಳನ್ನು ಹಳ್ಳಿಗಳಲ್ಲಿ ವೃದ್ಧಿಸಿದರೆ ಈ ವಲಸೆಗಳನ್ನು ಭಾಗಶಃ ತಡೆಯಬಹುದು. ಎಲ್ಲದರಲ್ಲೂ ಕೃಷಿ ಮತ್ತು ಕೃಷಿಕರನ್ನು ಕಡೆಗಣಿಸುವ ಸರಕಾರದ ನೀತಿ ಬದಲಾಗಬೇಕು. ರೈತರು ಸರಕಾರದ ಭಿಕ್ಷೆಗೆ ಕಾಯುತ್ತಿದ್ದಾರೆ ಎನ್ನುವ ಭ್ರಮೆ ಸರಕಾರದಲ್ಲೂ ರೈತರಲ್ಲೂ ದೂರವಾಗಬೇಕು.
ನಮ್ಮ ದೇಶದಲ್ಲಿ ಇವತ್ತು ಜಾಸ್ತಿ ವೋಟು ಇರುವುದು ಗ್ರಾಹಕರದ್ದು, ಬೆಳೆ ಬೆಳೆಸುವ ರೈತರದ್ದಲ್ಲ ಎಂಬ ಭ್ರಮೆ ಎಲ್ಲಾ ಸರಕಾರದ್ದಾಗಿದೆ. ಹಾಲಿನ ಬೆಲೆ 50 ಪೈಸೆ ಜಾಸ್ತಿಯಾದಾಗ ನಗರ ಕೇಂದ್ರ ಕೃಷಿಯೇತರ ಬಳಕೆದಾರರು ಸಂಘಟಿತರಾಗಿ ಹೋರಾಡುತ್ತಾರೆ. ಭಾರತದ ಮಾಧ್ಯಮಗಳು ಕೂಡ ಅವರ ಪ್ರತಿಭಟನೆಗೆ ಧ್ವನಿಯಾಗುತ್ತವೆ. ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು ಇದೇ ಬಳಕೆದಾರರ ಪರವಾಗಿ ಬೀದಿಗಿಳಿಯುತ್ತವೆ. ಏರಿದ ಬೆಲೆಯಿಂದಾಗಿ ರೈತಾಪಿಗಳಿಗೆ ಮೂರು ಮುಕ್ಕಾಲು ಸಿಗಬಹುದೆನ್ನುವ ಯೋಚನೆ ಯಾರೊಬ್ಬರೂ ಮಾಡುವುದಿಲ್ಲ.
ನಮ್ಮ ದೇಶದಲ್ಲಿ ನಗರ ಕೇಂದ್ರ ಬಳಕೆದಾರರ ವೋಟು ಜಾಸ್ತಿ ಇರುವ ಕಾರಣಕ್ಕಾಗಿಯೇ ಸರಕಾರವು ಹಾಲು, ನೀರುಳ್ಳಿ, ತೊಗರಿಯಂಥ ಅಗತ್ಯ ವಸ್ತುಗಳ ಬೆಲೆಯನ್ನು ಹೋಲ್ಡ್ ಮಾಡುತ್ತದೆ. ಅದನ್ನು ಉತ್ಪಾದಿಸುವ ರೈತರ ಕಡೆಗೆ ಗಮನಕೊಟ್ಟು ಬೆಲೆ ಏರಿಸುವ ಪ್ರಕ್ರಿಯೆಯನ್ನು ಗಟ್ಟಿಗೊಳಿಸುವ ಇರಾದೆ ಯಾವತ್ತೂ ಸರಕಾರಕ್ಕೆ ಇಲ್ಲ. ಬರೀ ಹಾಲಲ್ಲ, ನೀರುಳ್ಳಿ, ಎಣ್ಣೆಕಾಳು, ತೊಗರಿ ಬೇಳೆ, ಸಂಬಾರ ಪದಾರ್ಥ ಎಲ್ಲದರಲ್ಲೂ ಹೀಗೆ. ನೀರುಳ್ಳಿಯೋ, ತೊಗರಿಯೋ ಉತ್ಪಾದನೆ ಕಡಿಮೆಯಾಗಿ ಇನ್ನೇನು ಬೆಲೆಯೇರಿ ರೈತರಿಗೆ ಎರಡು ಕಾಸು ಸಿಗುತ್ತದೆ ಅನ್ನುವಾಗ ಪ್ರಭುತ್ವವೇ ಪರದೇಶದಿಂದ ಅವುಗಳನ್ನು ಆಮದು ಮಾಡಿ ಬೆಲೆ ಇಳಿಸಿ ಗ್ರಾಹಕರನ್ನು ರಕ್ಷಿಸುತ್ತದೆ. ಅಪರೂಪಕ್ಕೊಮ್ಮೆ ಹೀಗೆ ಲಾಭ ಬಂದು ರೈತ ಸಾಲ ಮುಕ್ತನಾಗಬೇಕು ಎನ್ನುವ ಯೋಚನೆಯಲ್ಲಿ ಇರುವಾಗಲೇ ಸರಕಾರ ಬೆಲೆ ಸ್ಥಿರತೆಯನ್ನು ಕಾಪಾಡುತ್ತದೆ.
ಈ ಕಾರಣಕ್ಕಾಗಿ ಎಲ್ಲಿಯವರೆಗೆ ಸರಕಾರ ಉತ್ಪಾದಕರಾದ ರೈತರ ಪರವಾಗಿ ಇರುವುದಿಲ್ಲವೋ ಮತ್ತು ತನ್ನ ಉತ್ಪಾದನೆಗೆ ಬೆಲೆ ನಿಗದಿ ಮಾಡುವ ಅಧಿಕಾರ ರೈತಾಪಿಗಳಿಗೆ ಸಿಗುವುದಿಲ್ಲವೋ ಅಲ್ಲಿಯವರೆಗೆ ಭಾರತದ ರೈತ ಉದ್ಧಾರವಾಗುವುದು ಕನಸಿನಲ್ಲಿ ಮಾತ್ರ.