Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಭೂಮಿಕೆ
  5. ಬರೀ ಪುತ್ತೂರಿನ ನೋವಲ್ಲ, ಹತ್ತೂರಿನ...

ಬರೀ ಪುತ್ತೂರಿನ ನೋವಲ್ಲ, ಹತ್ತೂರಿನ ಸಂಕಟ!

ನರೇಂದ್ರ ರೈ ದೇರ್ಲನರೇಂದ್ರ ರೈ ದೇರ್ಲ13 July 2025 12:28 PM IST
share
ಬರೀ ಪುತ್ತೂರಿನ ನೋವಲ್ಲ, ಹತ್ತೂರಿನ ಸಂಕಟ!
ನೈತಿಕ ಶಿಕ್ಷಣವು ಯಾವತ್ತೂ ಶಾಲಾ ಪಠ್ಯದಲ್ಲೊಂದು ಪುಟವಲ್ಲ; ಮನೆ, ವಾತಾವರಣ, ಮಾಧ್ಯಮ, ಶಾಲಾ ಸಂಸ್ಕೃತಿ ಎಲ್ಲದರ ಒಟ್ಟು ಪ್ರಭಾವ ಒತ್ತಡದಿಂದ ಅದು ರೂಪುಗೊಳ್ಳುತ್ತದೆ. ಆದರೆ ಇವತ್ತು ನವ ಮಾಧ್ಯಮಗಳ ಮೂಲಕ ಮನುಷ್ಯನ ಮನಸ್ಸು ದುರ್ಬಲವಾಗಿದೆ. ಶಿಕ್ಷಕರು ಕಣ್ಣೆಳೆದಾಗ, ಪಾಲಕರು ಸಮಯ ಕೊಡದಾಗ, ಕಾರ್ಯಕರ್ತರು ತಮ್ಮ ಕೀಳ್ಮಟ್ಟದ ಬವಣೆಗಳನ್ನು ಯುವ ಮನಸ್ಸಿನಲ್ಲಿ ಕಿತ್ತುಹಾಕದಾಗ ಸಮಾಜವೇ ಕುಸಿಯುತ್ತದೆ.

‘‘...ನಾನು ಎರಡನೇ ವರ್ಷದಲ್ಲಿ ಕಲಿಯುವಾಗ ನನ್ನ ಕ್ಲಾಸ್ಮೇಟ್ ವಿದ್ಯಾರ್ಥಿನಿಯು ಒಂದು ತಿಂಗಳ ಗರ್ಭಿಣಿ ಆಗಿದ್ದಳು. ನಂತರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯುವ ಅವಳ ಸ್ನೇಹಿತ ಯಾವುದೋ ಒಂದು ಮಾತ್ರೆ ಕೊಟ್ಟು ಅದು ಗರ್ಭಪಾತ ಆಗಿತ್ತು. ಅವಳು ಅದರಿಂದ ಎರಡು ತಿಂಗಳು ಭಯದಿಂದ ಇದ್ದಳು. ಆದರೆ ಅವಳಿಗೆ ಅವನು ನೀನು ಯಾರಿಗೂ ಹೇಳಬೇಡ, ಭಯಪಡಬೇಡ ಎಲ್ಲಾ ನಾನು ಸರಿ ಮಾಡ್ತೇನೆ ಎಂದು ಹೇಳಿದ್ದ.

ನಮ್ಮ ಕಾಲೇಜಿನ ಹಲವು ವಿದ್ಯಾರ್ಥಿನಿಯರಿಗೆ ಅದೇ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಸಂಬಂಧವಿದೆ. ಹೆಚ್ಚಿನವು ಕಾಲೇಜು ಹಂತದಲ್ಲೇ ಕೊನೆಯಾಗುತ್ತದೆ. ಒಂದೊಂದು ಮಾತ್ರ ಬಹಿರಂಗವಾಗುತ್ತದೆ. ನಮ್ಮ ಗ್ರೌಂಡ್ ಬದಿಯಲ್ಲಿ, ಕಾರಿಡಾರ್ ಮೂಲೆಯಲ್ಲಿ, ಮೆಟ್ಟಿಲುಗಳಲ್ಲಿ ಯಾರೂ ನೋಡದಾಗ ಹಲವು ಕಾಮದಾಟಗಳು ನಡೆಯುತ್ತವೆ. ನಾವು ಒಮ್ಮೊಮ್ಮೆ ಅಚಾನಕ್ಕಾಗಿ ಹೋದಾಗ ಇವೆಲ್ಲವೂ ಕಾಣ ಸಿಗುತ್ತವೆ.

ನಾನು ಈವಾಗ ಯಾಕೆ ಬರೆಯುತ್ತೇನೆಂದರೆ ನನಗೆ ಸಂಸ್ಥೆಯ ಹೆಸರು ಹಾಳು ಮಾಡಬೇಕೆಂದೋ ಇನ್ಯಾವುದೋ ಉದ್ದೇಶವಿಲ್ಲ. ನಾನು ಸಹ ಅದೇ ಕಾಲೇಜಿನಲ್ಲಿ ಕಲಿತವಳು. ಆದರೆ ಇಂತಹ ಕರ್ಮಕಾಂಡಗಳು ಎಗ್ಗಿಲ್ಲದೆ.....ನಡೆಯುತ್ತವೆ.’’ (ಮುಜುಗರದ ಕಾರಣಕ್ಕೆ ಆರಂಭದ ಕೆಲವೊಂದು ಪ್ಯಾರ, ಶಬ್ದಗಳನ್ನು ನಾನು ತೆಗೆದಿದ್ದೇನೆ, ಭಾಗಶಃ ಬದಲಾಯಿಸಿದ್ದೇನೆ)

ಪ್ರಕರಣ 2: ನಗರಕೇಂದ್ರಿತ ವಿದ್ಯಾರ್ಥಿನಿಯರ ಒಂದು ಹಾಸ್ಟೆಲ್. ಅಲ್ಲಿರುವವರು ಪ್ರೌಢಶಾಲೆಯವರೆಗಿನ ಮಕ್ಕಳು. ಮಹಿಳಾ ವಾರ್ಡನ್ ಸಂಜೆ ಹೊತ್ತು ರೀಡಿಂಗ್ ಸಮಯದಲ್ಲಿ ಮಕ್ಕಳು ಓದುವ ಪುಸ್ತಕದ ನಡುವೆ ಬರೆಯುವ ಕಾಗದಗಳನ್ನಿಟ್ಟುಕೊಂಡು ಅದೇನು ಬರೆಯುತ್ತಿದ್ದಾರೆ ಎಂಬ ಕುತೂಹಲದಿಂದ ಕದ್ದು ಗಮನಿಸುತ್ತಾರೆ. ಮೊಬೈಲ್ ನಿಷೇಧದ ಆ ಆವರಣದಲ್ಲಿ ಅರೇಳು ವಿದ್ಯಾರ್ಥಿಗಳು ಬರೆಯುತ್ತಿದ್ದುದು ಪ್ರೇಮಪತ್ರಗಳನ್ನು. ಏಳು ಎಂಟನೆಯ ತರಗತಿಯ ಹೆಣ್ಮಕ್ಕಳು ತಮ್ಮ ಸಹಪಾಠಿ ಹುಡುಗರಿಗೆ ಸ್ಪರ್ಧೆಗೆ ಬಿದ್ದು ಇಲ್ಲಿ ಉಲ್ಲೇಖಿಸಲಾಗದ ಭಾಷೆಯಲ್ಲಿ ಪತ್ರ ಬರೆಯುವುದನ್ನು ಕಂಡು ಅವರು ಬೆಚ್ಚಿ ಬೀಳುತ್ತಾರೆ.

ಪ್ರಕರಣ 3: ಪ್ರಸಿದ್ಧ ಶಾಲೆಯೊಂದರಲ್ಲಿ ಕಳೆದ ವಾರ ನಡೆದ ಪ್ರಕರಣ. ಮಕ್ಕಳ ಚೀಲಗಳನ್ನು ಅನಿರೀಕ್ಷಿತವಾಗಿ ತಪಾಸಣೆ ಮಾಡುವ ಹೊತ್ತು ಪ್ರತಿಭಾವಂತ ವಿದ್ಯಾರ್ಥಿಯೆಂದು ಭಾವಿಸಿದ್ದ ಒಬ್ಬನ ಪಾಟಿ ಚೀಲದ ಒಳಗಡೆ ವಿಸ್ಕಿಯ ಬಾಟ್ಲಿ!. ಬೆಚ್ಚಿ ಬೀಳುವ ಸರದಿ ಈಗ ಅಲ್ಲಿಯ ಶಿಕ್ಷಕಿಯರದ್ದು!.

ಪ್ರಕರಣ 4: ಶಿಕ್ಷಕಿಯಾಗಿ ವೃತ್ತಿಯಲ್ಲಿ ನಿರಂತರ ಶಿಸ್ತು, ಘನತೆಯನ್ನು ಕಾಪಾಡಿಕೊಂಡು ಬಂದವರವರು. ಇಡೀ ಸಂಸ್ಥೆಯಲ್ಲಿ ಈ ಕಾರಣಕ್ಕಾಗಿಯೇ ಅವರ ಬಗ್ಗೆ ತುಂಬಾ ಗೌರವವಿತ್ತು. ಒಂದು ದಿನ ಶಿಕ್ಷಕರ ಕೊಠಡಿಯಲ್ಲಿ ಅವರ ಕೈಯಿಂದ ಸಹೋದ್ಯೋಗಿಯೊಬ್ಬರು ಯಾವುದೋ ಅವಶ್ಯಕತೆಗೆ ಮೊಬೈಲ್ ತಗೊಂಡು ಮೇಡಂ ಕೊಟ್ಟ ಪಾಸ್ವರ್ಡ್ ಹಾಕಿ ಓಪನ್ ಮಾಡಿದ್ದೇ ತಡ ಸಾಲು ಸಾಲು ನೀಲಿ ಚಿತ್ರಗಳು ಬಿಚ್ಚಿಕೊಂಡವು. ಈಗ ಬೆಚ್ಚಿ ಬೀಳುವ ಸರದಿ ಸಹೋದ್ಯೋಗಿ ಶಿಕ್ಷಕರದ್ದು. ಮೇಡಂ ತರಗತಿ ಬಿಟ್ಟು ಬರುವಾಗ ಇಡೀ ಸಹೋದ್ಯೋಗಿ ಬಳಗಕ್ಕೆ ಆ ಸುದ್ದಿ ಹಬ್ಬಿತ್ತು.ಅವರನ್ನು ನೋಡುವ ನೋಟವೇ ಬದಲಾಯಿತು. ತುಂಬಾ ಇರಿಸು ಮುರಿಸಿಗೆ ಒಳಗಾದ ಮೇಡಂ ಶೋಧಿಸಿದಾಗ ಗೊತ್ತಾದ ಸತ್ಯ ಇನ್ನೊಂದು ಶಾಲೆಗೆ ಹೋಗುವ ಅವರ ಏಳನೆಯ ತರಗತಿಯ ಮಗ ಹಿಂದಿನ ದಿವಸ ತಡರಾತ್ರಿಯವರೆಗೆ ಅಮ್ಮನ ಮೊಬೈಲ್ ಕಸಿದು ನೋಡಬಾರದ್ದನ್ನೆಲ್ಲ ನೋಡಿದ್ದ. ಬದ್ಧತೆ, ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದ್ದ ಮೇಡಂ ಅಂದಿನಿಂದ ಮಾನಸಿಕವಾಗಿ ಕುಗ್ಗಿ ಶಾಲೆಯಲ್ಲಿ ಮಂಕಾಗಿ ಹೋಗುವ ಪರಿಸ್ಥಿತಿ.

ಪ್ರಕರಣ 5: ಅಪ್ರಾಪ್ತ ವಯಸ್ಸಿನ ಗಂಡು ಹೆಣ್ಣಿನ ಮಿಲನದ ಪರಿಣಾಮ ಹೆರಿಗೆಯಾಗಿ ಆ ಅವಿವಾಹಿತ ತಾಯಿಗೆ ಅದೇ ಹುಡುಗನೊಂದಿಗೆ ಮದುವೆ ಮಾಡಿಸಬೇಕೆನ್ನುವ ಹೋರಾಟ ಸಾಮಾಜಿಕ ಮಾಧ್ಯಮದ ದಾರಿಯಲ್ಲಿ ರಾಜ್ಯಮಟ್ಟಕ್ಕೆ ವಿಸ್ತರಿಸುತ್ತದೆ. ಬಾಣಂತಿ ಹೆಣ್ಣುಮಗಳು ಮಾಧ್ಯಮಗೋಷ್ಠಿಯಲ್ಲಿ ಮುಚ್ಚುಮರೆ ಇಲ್ಲದೆ ಮಾತನಾಡುತ್ತಾಳೆ.

ಕಳೆದ ಒಂದು ತಿಂಗಳಲ್ಲಿ ಇವೆೆಲ್ಲಾ ನಡೆಯುವುದು ಒಂದೇ ಊರಲ್ಲಿ. ಅಥವಾ ಅಕ್ಕಪಕ್ಕದ ಊರೆಂದಿಟ್ಟುಕೊಳ್ಳಿ. ಅದು ನನ್ನದೇ ಊರಾಗಬೇಕಾಗಿಲ್ಲ. ನಿಮ್ಮ ಊರಲ್ಲೂ ಇಂತಹದ್ದೇ ನಡೆಯಬಹುದು. ಇದು ಮತ್ತೆ ಮತ್ತೆ ಮರುಕಳಿಸಬಹುದು. ಕೆಲವು ಕಾನೂನಿನ ಚೌಕಟ್ಟಿನಲ್ಲಿ, ಮತ್ತೂ ಕೆಲವು ಗೃಹಸ್ಥರ ಮಧ್ಯಸ್ಥಿಕೆಯಲ್ಲಿ, ಸಂಸ್ಥೆಯ ಮುಖ್ಯಸ್ಥರ ಸಮ್ಮುಖದಲ್ಲಿ ಯಾರಿಗೂ ಗೊತ್ತಾಗದಂತೆ ಸುದ್ದಿಯಾಗದೆ ಮುಗಿಯಬಹುದು. ಕೆಲವೊಂದನ್ನು ‘ದಿನಾ ಇದೇ ಆಯಿತು’ ಎಂದು ನೀವು ನಿರ್ಲಕ್ಷಿಸಿಬಿಡಬಹುದು. ಒಂದಷ್ಟು ಯೂಟ್ಯೂಬರ್ಗಳ ಕೈಗೆ ಸಿಕ್ಕಿ ರಾಜ್ಯ ಮಟ್ಟಕ್ಕೆ ಆ ಸುದ್ದಿ ವಿಸ್ತರಿಸಬಹುದು.

ಯಾವ ಸಂಸ್ಥೆ, ಶಾಲಾ-ಕಾಲೇಜು ಎಂಬುವುದು ಇಲ್ಲಿ ಮುಖ್ಯವಲ್ಲ. ಗಮನಿಸಬೇಕಾದದ್ದು ಬಹುತೇಕ ಇಲ್ಲಿಯ ಭಾಗಿದಾರರೆಲ್ಲ ವಯಸ್ಕರಲ್ಲ, ಮಧ್ಯ ವಯಸ್ಸು ಮೀರಿದವರಲ್ಲ, ಅಪ್ರಾಪ್ತ ವಯಸ್ಸಿನವರು. ಇಲ್ಲಿ ಸಿಕ್ಕಿಬಿದ್ದ ಮಕ್ಕಳು, ಮುಂದೆ ಬೀಳಲಿರುವ ಮಕ್ಕಳು ನಮ್ಮದೇ ಮನೆಯವರಾಗಿರಬಹುದು. ನಮಗೆ ಗೊತ್ತಿರುವ ಸ್ನೇಹಿತರ, ಬಂಧುಗಳ ಮನೆ ಸದಸ್ಯರಾಗಿರಬಹುದು.

ಪೋಷಕರಾಗಿ, ಉಪನ್ಯಾಸಕರಾಗಿ, ಸಮಾಜ ಚಿಂತಕರಾಗಿ, ಬರಹಗಾರರಾಗಿ ಮೊನ್ನೆ ಮೊನ್ನೆಯವರೆಗೆ ನಮ್ಮ ಆತಂಕ ಇದ್ದುದು ಯುವ ಜನಾಂಗ ಯಾವ ಕಡೆಗೆ ಸಾಗುತ್ತಿದೆ ಮತ್ತು ಅದರ ಭಯಾನಕ ಪರಿಣಾಮಗಳ ಬಗ್ಗೆ. ಇದು ಅದಕ್ಕಿಂತಲೂ ಭಯಾನಕ. ಚಿಕ್ಕಚಿಕ್ಕ ಮಕ್ಕಳ ಸ್ವೇಚ್ಛಾಚಾರದ ಅನೈತಿಕತೆಯ ಮುಕ್ತ ಪರಿಸ್ಥಿತಿ.

ಕಳೆದ ವಾರ ನಾನು ಶಿವರಾಮ ಕಾರಂತರ ಬಾಲವನದ ದುಸ್ಥಿತಿಯ ಬಗ್ಗೆ ಇದೇ ಜಾಗದಲ್ಲಿ ಅಂಕಣದಲ್ಲಿ ಬರೆದಿದ್ದೆ. ಬಹಳಷ್ಟು ಜನ ವ್ಯಕ್ತಪಡಿಸಿದ್ದ ಅಭಿಪ್ರಾಯ ಕರಾವಳಿಯ ಮನಸ್ಥಿತಿ ಬದಲಾಗಿದೆ. ಸಂಸ್ಕೃತಿ, ಸಾಹಿತ್ಯ, ಸಾಹಿತಿಗಳನ್ನು ಅನುಕರಿಸುವ, ಶೋಧಿಸುವ, ಪ್ರೀತಿಸುವ ಮನೋಭಾವನೆ ಇಲ್ಲದ ಜಾಗದಲ್ಲಿ ಕಾರಂತರು ಒಂದೇ ಪಂಪ, ಕುಮಾರವ್ಯಾಸನೂ ಒಂದೇ. ಬಾಲವನವನ್ನು ಉದ್ಧರಿಸದೆ ಹಾಗೆಯೇ ಬಿಟ್ಟರೆ, ಗೇಟ್ ಖಾಯಂ ಬಂದ್ ಮಾಡಿದರೆ ಪುತ್ತೂರಿನ ಒಳಗಡೆ ಒಂದು ತುಂಡು ಕಾಡಾದರೂ ಬೆಳೆಯಬಹುದು ಎಂದು. ಆ ಅಭಿಪ್ರಾಯಗಳಲ್ಲಿ ಸತ್ಯಾಂಶ ಇದೆಯೆಂದೂ ಮನುಷ್ಯರ ಮನಸ್ಸು ಪೂರ್ತಿ ಬದಲಾಗಿದೆ ಎಂದು ಅನಿಸುವುದು ನನಗೆ ಈ ಮೇಲಿನ ಪ್ರಕರಣಗಳನ್ನು ಗಮನಿಸಿದಾಗ.

ಕಳೆದ ಒಂದು ತಿಂಗಳಿಂದ ಪುತ್ತೂರು ರಾಜ್ಯದ ಗಮನ ಸೆಳೆಯುತ್ತಿದೆ. ಇನ್ನೂ ಪ್ರಾಪ್ತ ವಯಸ್ಸಿಗೆ ಬಾರದ ಮಕ್ಕಳಿಬ್ಬರು ಲೈಂಗಿಕತೆಗೆ ತೊಡಗಿ ಮಗು ಹುಟ್ಟಿಸಿದ ಪ್ರಕರಣ ಇಲ್ಲಿ ದೊಡ್ಡ ಸುದ್ದಿ ಆಯಿತು. ಇಂಥ ಅಸಂಗತ ಪ್ರಾಕೃತಿಕ ಜೈವಿಕ ಕ್ರಿಯೆಗಳು ಹಿಂದೆಯೂ ನಡೆದಿರಬಹುದು. ಆದರೆ ಆಗ ಕಾಣಿಸದ ಗಮನಿಸದ ಪರಿಧಿಗಳಿದ್ದವು. ಇವತ್ತು ಮನುಷ್ಯನ ತಲೆಯ ಮೇಲೆ ತೂಗುವ ಕ್ಯಾಮರಾ ಎಲ್ಲವನ್ನು ಬಗೆದು ಲೋಕಕ್ಕೆ ತೋರಿಸುವಾಗ, ಕಾಣಿಸದಿರುವ ರಹಸ್ಯ ಪ್ರಪಂಚವೊಂದನ್ನು ಕಲ್ಪಿಸುವುದಕ್ಕೂ ಸಾಧ್ಯವಿಲ್ಲ.

ಅಪರಾಧಿ ಯಾರೇ ಇರಲಿ, ಅವ ಜೈಲಿನಲ್ಲಿ ಅನುಭವಿಸುವುದಕ್ಕಿಂತ ಹೆಚ್ಚು ಅವಮಾನ-ಶಿಕ್ಷೆಯನ್ನು ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಅನುಭವಿಸುತ್ತಾನೆ. ಮುದ್ರಣ ಮಾಧ್ಯಮವನ್ನುಳಿದು ಉಳಿದವುಗಳ ಭಾಷೆ, ಅವಮಾನಿಸುವ ಕ್ರಮ ಚಪ್ಪಲಿ ಏಟಿಗಿಂತ ಬಿಗಿಯಾಗಿದೆ. ಜೀವಮಾನವಿಡೀ ಮಾಡಿರುವ ಒಳ್ಳೆಯ ಕೆಲಸಗಳು ಗೌಣವಾಗಿಯೇ ಉಳಿದು ಕೆಟ್ಟ ಕೆಲಸಗಳ ಕಾರಣಗಳಿಗೆ ಲೋಕಕ್ಕೆ ಗೊತ್ತಾಗುವ ಮುಖಗಳು ಮನುಷ್ಯರ ಮನಸ್ಸಿನಲ್ಲಿಯೂ ಶಾಶ್ವತವಾಗಿ ಉಳಿಯುತ್ತದೆ.

ಶಾಲಾ ಕಾಲೇಜುಗಳಲ್ಲಿ ಇನ್ನು ಮುಂದೆ ಸಾಹಿತ್ಯ, ಇತಿಹಾಸ, ಸಮಾಜಶಾಸ್ತ್ರ, ಲೆಕ್ಕ, ವಿಜ್ಞಾನ, ಭೂಗೋಳವನ್ನೇ ಇಟ್ಟುಕೊಂಡು ಮಕ್ಕಳಿಗೆ ಕಲಿಸುವುದು ಮುಖ್ಯವೋ ನೈತಿಕ ಶಿಕ್ಷಣದ ದಾರಿ ಅಗತ್ಯವೋ ಎನ್ನುವ ಪ್ರಶ್ನೆ ನನ್ನೊಳಗಡೆ ಮೂಡುತ್ತದೆ. ಮದುವೆಯಾಗದ ಬಾಣಂತಿಯ ಮಾಧ್ಯಮ ಭಾಷೆ, ಸೆಕ್ಸ್ ಪ್ರಕರಣಗಳನ್ನು ಕಂಡ ವಿದ್ಯಾರ್ಥಿನಿ ಬರೆದಿದ್ದಾಳೆ ಎನ್ನಲಾದ ಪತ್ರದ ಒಕ್ಕಣೆ, ಶಾಲೆಗೆ ವಿಸ್ಕಿ ತಂದ ಬಾಲಕನ ಉದ್ದೇಶ ಉತ್ತರ...ಇವರೆಲ್ಲ ಮಾತನಾಡುವ ಭಾಷೆಗಳನ್ನು ಗಮನಿಸಿ. ಇವರೆಲ್ಲರ ಮೇಲೆ ತನ್ನ ಮನೆಯ ಪರಂಪರೆ, ಸಂಸ್ಕಾರಗಳಿಗಿಂತ ಹೆಚ್ಚು ತಾನು ಕೈಯಲ್ಲಿ ಇಟ್ಟುಕೊಂಡ ಮಾಧ್ಯಮ ಗಂಭೀರವಾಗಿ ಪರಿಣಮಿಸಿದ್ದನ್ನು ಗಮನಿಸಬಹುದು. ಇವುಗಳಲ್ಲಿ ಒಂದು ಪ್ರಕರಣ ನಡೆದ ಸಂಸ್ಥೆಯ ಮುಖ್ಯಸ್ಥರ ವಿದ್ಯಾಪೀಠಕ್ಕೆ ಮೂರು ವರ್ಷದ ಹಿಂದೆ ಒಮ್ಮೆ ಪರಿಸರದ ಉಪನ್ಯಾಸಕ್ಕಾಗಿ ಹೋಗಿದ್ದೆ. ಸ್ವತಃ ಆ ನಿರ್ದೇಶಕರೇ ಕಾರ್ಯಕ್ರಮ ಆರಂಭವಾಗುವ ಮುಂಚೆ ಎಲ್ಲಾ ಅಭ್ಯಾಗತರನ್ನು ಕರೆದುಕೊಂಡು ತನ್ನ ಸಂಸ್ಥೆಯ ಮೂಲೆ ಮೂಲೆಗಳನ್ನು ತೋರಿಸಿದ್ದರು. ರಾಷ್ಟ್ರೀಯತೆ, ಸಂಸ್ಕೃತಿ, ಹಿರಿಯ ಪರಂಪರೆಯನ್ನು ಗೌರವಿಸುವ ಅನೇಕ ಸುಸಂಸ್ಕೃತ ಭಾರತೀಯತೆಯ ಸಾಕ್ಷಿಗಳನ್ನು, ಅವುಗಳನ್ನು ಅಳವಡಿಸಿಕೊಂಡ ಮಕ್ಕಳನ್ನು, ಆಚರಿಸಿ ಅನುಷ್ಠಾನಗೊಳಿಸುವ ಶಿಕ್ಷಕರನ್ನು ನಾನಲ್ಲಿ ಕಂಡಿದ್ದೆ. ಆದರೆ ಅದೇ ವ್ಯಾಪ್ತಿಯ ಕಟ್ಟುನಿಟ್ಟಿನ ಕಾಲೇಜು ಒಂದರಲ್ಲಿ ನೈತಿಕತೆಯನ್ನು ಮೀರಿದ ವಿಘಟನೆಗಳನ್ನು ಕಂಡಾಗ ಬೇರೆ ಸಂಸ್ಥೆಗಳ ಪಾಡೇನು ಎಂಬ ಭಯ ಸಹಜವಾಗಿ ಆವರಿಸುತ್ತದೆ. ಹಾಗಂತ ಇವು ಯಾವುವು ಏಕಾಏಕಿ ಸಂಭವಿಸಿದವುಗಳಲ್ಲ; ಮತ್ತು ಇದೇ ಮೊದಲಲ್ಲ. ಕೊನೆಯೂ ಅಲ್ಲ.

ಸಾಮಾಜಿಕ ಮಾಧ್ಯಮದಲ್ಲಿ ಪುತ್ತೂರಿನ ಈ ಪರಿಸ್ಥಿತಿಯನ್ನು ದೂರದ ಊರಿನಿಂದ ಸುಮ್ಮನೆ ಕೂತು ನೋಡುತ್ತಿರುವ ಸಮಯದಲ್ಲೇ ಅಗೋಚರ ರೀತಿಯಲ್ಲಿ ಇಂಥವು ನಿಮ್ಮ ಊರಿನಲ್ಲೂ ಘಟಿಸುತ್ತಿರುತ್ತವೆ. ಯಾರೋ ಹಾಕಿದ ಮೊಳಕೆ, ಹೀನ ಆಸಕ್ತಿಯ ಬೀಜಗಳು ಇಂದು ಸಿಡಿಲಂತೆ ಬಿರಿಯುತ್ತಿವೆ.

ಇಂತಹ ಘಟನೆಗಳು ಮಹಾನಗರಗಳಲ್ಲಿ ಬೇಗನೆ ಗೊತ್ತಾಗದಿರಬಹುದು. ಮರ್ಯಾದೆಯ ಪ್ರಶ್ನೆಯನ್ನು ನಿರಂತರ ಕಾಪಾಡಿಕೊಂಡು ಬಂದ ಗ್ರಾಮಾಂತರ ಪ್ರದೇಶಗಳಲ್ಲಿ ಇವು ಬೇಗ ಮತ್ತು ವೇಗವಾಗಿ ಸ್ಫೋಟಗೊಳ್ಳುತ್ತವೆ. ಬೇರೆ ಮನೆಯ ವಿಕೃತಿ ನಮ್ಮ ನಮ್ಮ ಮನೆಯ ಮರ್ಯಾದೆಯಾಗುತ್ತದೆ. ಪುತ್ತೂರಿನಲ್ಲಿ ಘಟಿಸಿರುವ ಇಂತಹ ದಾರುಣ ಪರಿಕಲ್ಪನೆ, ಸಂಸ್ಕೃತಿಯನ್ನು ಬಲವಾಗಿ ಹೊತ್ತ ಸಂಸ್ಥೆಗಳ ಆವರಣದಲ್ಲೇ ನಡೆಯುತ್ತವೆ ಎಂಬುದು ಮತ್ತೂ ಆತಂಕದ್ದು.

ಶಾಲಾ ಕಾಲೇಜುಗಳಲ್ಲಿ, ಚರ್ಚ್, ಭಜನಾ ಮಂದಿರ, ಗುರುಕುಲ, ಮದ್ರಸ, ಮಸೀದಿಯಲ್ಲಿ ನಮ್ಮ ಮಕ್ಕಳಿಗೆ ಎಷ್ಟೇ ನೈತಿಕ ಶಿಕ್ಷಣ ಕೊಡಿ, ಆದರೆ ನವ ಮಾಧ್ಯಮ ಅದರ ಮೇಲೆ ಕಾರ್ಯಾಚರಿಸುತ್ತದೆ. ಸತತ ಒಲವು ಅಂಟಿಕೊಂಡ ಬಾಲ ಮನಸ್ಸಿನಲ್ಲಿರುವವರಿಗೆ ಸುಸಂಸ್ಕೃತಿಯನ್ನು ಕಳಚಿ ವಿಕೃತಿಯನ್ನು ಬಿತ್ತುವ ವೇಗವೃದ್ಧಿಯನ್ನು ಹೊಂದಿದೆ. ಆಹಾರ ಮತ್ತು ಲೈಂಗಿಕತೆಯ ರುಚಿ ನಿಗೂಢತೆ ಮತ್ತು ಕುತೂಹಲತೆಯನ್ನು ನಿರಂತರ ಉಳಿಸಿಕೊಂಡಿದ್ದಾಗ ಮಾತ್ರ ಅರ್ಥಪೂರ್ಣ. ಇವತ್ತು ಇವೆರಡರ ರುಚಿಕೆಡಿಸುವ ಸಾಧ್ಯತೆಗಳು ಅಂಗೈಯಲ್ಲಿ ಮತ್ತು ಗಲ್ಲಿ ಗಲ್ಲಿಯಲ್ಲಿ ಕೂತಿವೆ.

ನೈತಿಕ ಶಿಕ್ಷಣವು ಯಾವತ್ತೂ ಶಾಲಾ ಪಠ್ಯದಲ್ಲೊಂದು ಪುಟವಲ್ಲ; ಮನೆ, ವಾತಾವರಣ, ಮಾಧ್ಯಮ, ಶಾಲಾ ಸಂಸ್ಕೃತಿ ಎಲ್ಲದರ ಒಟ್ಟು ಪ್ರಭಾವ ಒತ್ತಡದಿಂದ ಅದು ರೂಪಗೊಳ್ಳುತ್ತದೆ. ಆದರೆ ಇವತ್ತು ನವ ಮಾಧ್ಯಮಗಳ ಮೂಲಕ ಮನುಷ್ಯನ ಮನಸ್ಸು ದುರ್ಬಲವಾಗಿದೆ. ಶಿಕ್ಷಕರು ಕಣ್ಣೆಳೆದಾಗ, ಪಾಲಕರು ಸಮಯ ಕೊಡದಾಗ, ಕಾರ್ಯಕರ್ತರು ತಮ್ಮ ಕೀಳ್ಮಟ್ಟದ ಬವಣೆಗಳನ್ನು ಯುವ ಮನಸ್ಸಿನಲ್ಲಿ ಕಿತ್ತುಹಾಕದಾಗ ಸಮಾಜವೇ ಕುಸಿಯುತ್ತದೆ. ನನ್ನ ಮುಂದಿನ ಪ್ರಶ್ನೆ ಪುತ್ತೂರಿನಲ್ಲಿ ಶಿಕ್ಷಣ ನೀಡಿದವರ ಅನುಭವದ ಮೂಲ ಯಾವುದು? ಸಮಾಜದ ಪ್ರತಿಕ್ರಿಯೆ ಏನು? ಕೇವಲ ಶಿಸ್ತು ಕ್ರಮಗಳು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಆ ಹುಡುಗಿ ಅಥವಾ ಹುಡುಗರನ್ನು ಹೆಸರಿಲ್ಲದಂತೆ ಬೈದು ಮುಗಿಸುವುದೋ? ಇಲ್ಲ, ನಾವು ತಾವು ಏನು ಕಳೆದುಕೊಂಡಿದ್ದೇವೆ ಎಂಬ ಜ್ಞಾನದಿಂದಲೇ ಪುನಶ್ಚೇತನ ಪಡೆದುಕೊಳ್ಳುವುದೋ ಎಂಬುವುದು.

ನಾವು ಮಾಧ್ಯಮಗಳ ನವ್ಯತೆಯನ್ನು ಅಗತ್ಯಕ್ಕೆ, ಶಿಕ್ಷಣಕ್ಕೆ, ಒಳ್ಳೆಯ ಮಾಹಿತಿಗಾಗಿ ಮಾತ್ರ ಬಳಸುವ ಕಲಿಕೆ ಕಲಿಸಬೇಕಿದೆ. ಸ್ಮಾರ್ಟ್ಫೋನ್ ಬಳಸುವ ಮೊದಲು ‘ಸಂಸ್ಕೃತಿ’ ಎಂಬ ಪಾಸ್ವರ್ಡ್ ಬೆರಳಲ್ಲಿ ಬರಬೇಕಿದೆ. ಶಾಲೆಗಳ ಹತ್ತಿರ ಸಮಾಲೋಚನಾ ಕೇಂದ್ರಗಳು, ಮನೋವೈಜ್ಞಾನಿಕ ಮಾರ್ಗದರ್ಶನ ಶಿಬಿರಗಳು, ಕುಟುಂಬ-ಶಾಲೆ-ಸಮಾಜದ ಜಂಟಿ ಸಭೆಗಳು ಇದು ಎಲ್ಲವೂ ಇಂತಹ ಸಮಸ್ಯೆಗಿರುವ ಹಗುರ ಉಪಾಯಗಳಲ್ಲ. ಇವು ಅಗತ್ಯ ವ್ಯವಸ್ಥೆಗಳು.

ಮೊದಲು ನಾವು ಯಾವ ಜಗತ್ತನ್ನು ಕಟ್ಟಬೇಕೆಂದು ಬಯಸುತ್ತೇವೆ ಎಂಬ ಪ್ರಶ್ನೆಗೆ ಉತ್ತರ ನಮ್ಮಿಂದಲೇ ಬೇಕಾಗಿದೆ. ಶಿಕ್ಷಕರಿಗೆ, ಪಾಲಕರಿಗೆ, ಮಾಧ್ಯಮದವರಿಗೆ, ರಾಜಕೀಯ ನೀತಿವಂತರಿಗೆ, ಸಾಹಿತ್ಯ-ಸಂಸ್ಕೃತಿಯನ್ನು ಉಸಿರಂತೆ ಭಾವಿಸುವ ನಮಗೆಲ್ಲರಿಗೂ ಈ ನೈತಿಕ ಪತನದ ಹೊಣೆ ಇದ್ದೇ ಇದೆ. ಕೈಮೀರುವ ಮುನ್ನ ಪುತ್ತೂರು ಮಾತ್ರವಲ್ಲ, ಪ್ರತಿಯೊಂದು ಊರಲ್ಲೂ ಮಕ್ಕಳ ಮುಗುಳ್ನಗೆಗಳಲ್ಲಿ ಅಡಗಿದ ಭಯಗಳ ಅರಿವಿನೊಂದಿಗೆ, ನೈತಿಕತೆಯ ಹೊಸ ಪಾಠಗಳನ್ನು ಆರಂಭಿಸೋಣ.

share
ನರೇಂದ್ರ ರೈ ದೇರ್ಲ
ನರೇಂದ್ರ ರೈ ದೇರ್ಲ
Next Story
X