Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಭೂಮಿಕೆ
  5. ಪಂಪಭಾರತ ಮತ್ತು ಮೇಷ್ಟ್ರ ಮನೆಯ ಹಳೆಯ...

ಪಂಪಭಾರತ ಮತ್ತು ಮೇಷ್ಟ್ರ ಮನೆಯ ಹಳೆಯ ಪುಸ್ತಕ

ನರೇಂದ್ರ ರೈ ದೇರ್ಲನರೇಂದ್ರ ರೈ ದೇರ್ಲ17 Aug 2025 11:29 AM IST
share
ಪಂಪಭಾರತ ಮತ್ತು ಮೇಷ್ಟ್ರ ಮನೆಯ ಹಳೆಯ ಪುಸ್ತಕ

ನಮ್ಮ ರಾಜ್ಯ, ದೇಶದ ಸಾಹಿತ್ಯ ಅಕಾಡಮಿ, ಪ್ರಾಧಿಕಾರ, ಪರಿಷತ್ತು, ಸಂಸ್ಕೃತಿ-ಭಾಷೆಪರ ಪೀಠಗಳು ತಮ್ಮ ತಮ್ಮ ಅಧಿಕಾರಾವಧಿಯಲ್ಲಿ ಮತ್ತೆ ಮತ್ತೆ ಹೊಸ ಪುಸ್ತಕಗಳನ್ನು ಪ್ರಕಟಿಸುವುದರ ಮೂಲಕ ಅನುದಾನಗಳನ್ನು ವ್ಯಯಿಸುವ ಜೊತೆಗೆ ಅಜ್ಞಾತ ನೆಲೆಗಳಲ್ಲಿ ಓದುಗರಿಲ್ಲದೆ ಗೆದ್ದಲು ಹಿಡಿಯುವ ಅನುಪಯುಕ್ತ ಪುಸ್ತಕಗಳನ್ನು ರಕ್ಷಿಸುವ, ಹೊಸ ಓದುಗರ ಜೊತೆಗೆ ಅವುಗಳನ್ನು ಹೊಂದಿಸುವ ಅಪರೂಪದ ಜ್ಞಾನ ನಿಧಿಗಳನ್ನು ಡಿಜಿಟಲ್ ರೂಪಕ್ಕೆ ಅಳವಡಿಸುವ ಕೆಲಸವನ್ನು ಮಾಡಬೇಕು.

ಓದದೆ ಧೂಳು ತಿನ್ನುತ್ತಾ ಬಿದ್ದಿರುವ ಇಂಥ ಪುಸ್ತಕಗಳನ್ನು ಮತ್ತೆ ಓದುಮನೆಗೆ ಸಾಗಿಸುವ, ಜೋಡಿಸುವ ಅಗತ್ಯಗಳ ಬಗ್ಗೆ ಒಂದು ಹೊಸ ಯೋಜನೆಗಳನ್ನು ರೂಪಿಸುವುದಕ್ಕೆ ಇಂಥ ಸಂಸ್ಥೆಗಳಿಗೆ ಅವಕಾಶಗಳಿವೆ.

ಸುಮಾರು 35 ವರ್ಷಗಳ ಕಾಲ ಪದವಿ ಮತ್ತು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪಾಠ ಮಾಡಿದ ಹಿರಿಯ ಉಪನ್ಯಾಸಕರವರು. ನಿವೃತ್ತಿಯ ಮೊದಲ ದಿನವೇ ಮಾಡಿದ ಕೆಲಸ ತನ್ನಲ್ಲಿದ್ದ ಸುಮಾರು ಎರಡು-ಮೂರು ಸಾವಿರ ಪುಸ್ತಕಗಳನ್ನು ತಾನು ಪ್ರೀತಿಸುತ್ತಿದ್ದ, ತನ್ನ ಮಗ ಓದಿದ್ದ ಇನ್ನೊಂದು ಕಾಲೇಜಿಗೆ ಉದಾರವಾಗಿ ನೀಡಿದ್ದು. ಸ್ವೀಕರಿಸುವ ಕಾಲೇಜಿನಲ್ಲಿದ್ದ ಅವರ ಶಿಷ್ಯ ಆ ಜ್ಞಾನ ಹಸ್ತಾಂತರ ಕಾರ್ಯಕ್ರಮಕ್ಕೊಂದು ಘನತೆ ತಂದಿದ್ದ. ಒಂದು ಕೈಯಲ್ಲಿ ಅನೇಕ ವರ್ಷಗಳಿಂದ ತಾನು ಪಾಠ ಮಾಡುತ್ತಿದ್ದ ಪಂಪ ಭಾರತ, ಮತ್ತೊಂದು ಕೈಯಲ್ಲಿ ಗುಲಾಬಿ ಹೂವನ್ನು ಹಿಡಿದುಕೊಂಡು ಆ ನಿವೃತ್ತ ಮಹನೀಯರು ಹೇಳಿದ ಪ್ರತಿಯೊಂದು ಮಾತುಗಳು ನನಗೆ ನೆನಪಿದೆ. ‘‘ಅಕಾಲದಲ್ಲಿ ತೀರಿ ಹೋದ ಮಡದಿ, ವಿದೇಶದಲ್ಲಿ ಉದ್ಯೋಗಸ್ಥನಾಗಿದ್ದ ಏಕೈಕ ಮಗ. ಊರಲ್ಲಿದ್ದಾಗ ನನ್ನ ಏಕಾಂಗಿತನವನ್ನು ಕಳೆದಿರುವ ಈ ಎಲ್ಲಾ ಪುಸ್ತಕಗಳನ್ನು ನಾನಿಂದು ಸಂತೋಷದಿಂದಲೇ ಈ ಸಂಸ್ಥೆಗೆ ದಾನ ಮಾಡುತ್ತಿದ್ದೇನೆ ಎಂದು ನೀವು ಭಾವಿಸಬೇಡಿ. ಮಗ ಮೊಮ್ಮಕ್ಕಳ ಜೊತೆಗೇ ನಾನು ಹೊರರಾಜ್ಯದಲ್ಲಿ ಮುಂದೆ ಬದುಕಬೇಕಾಗಿದೆ. ಮನೆ ಖಾಲಿ ಮಾಡಬೇಕಾಗಿದೆ. ನಾನು ಊರು ಬಿಡುತ್ತೇನೆ ಎನ್ನುವುದಕ್ಕಿಂತಲೂ ಹೆಚ್ಚು ಈ ಪುಸ್ತಕಗಳ ಸಂಬಂಧವನ್ನು ಕಳೆದುಕೊಳ್ಳುತ್ತೇನೆ ಎನ್ನುವ ನೋವು ದೊಡ್ಡದು. ಕೈಯಲ್ಲಿರುವ ಈ ಪಂಪಭಾರತ ಈ ರಾಶಿ ರಾಶಿ ಪುಸ್ತಕಗಳ ಪೈಕಿ ನನಗೆ ತುಂಬಾ ಇಷ್ಟದ್ದು. ಇದನ್ನು ಸೇರಿಸಿ ಈ ಎಲ್ಲಾ ಪುಸ್ತಕಗಳನ್ನು ಈ ಸಂಸ್ಥೆಗೆ ಉದಾರವಾಗಿ ನೀಡುತ್ತಿದ್ದೇನೆ. ಪ್ರತಿಯೊಂದು ಪುಸ್ತಕದ ಮೇಲೂ ಷರಾ ಬರೆದು ನನ್ನ ಸಹಿ ಹಾಕಿದ್ದೇನೆ. ಈ ಊರಿನ ಮಕ್ಕಳಿಗೆ, ಇಲ್ಲಿ ಓದುವ, ಪಾಠ ಮಾಡುವ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ, ಸಂಶೋಧಕರಿಗೆ ಲೇಖಕರಿಗೆ, ಪತ್ರಕರ್ತರಿಗೆ ಈ ಪುಸ್ತಕಗಳು ಮುಂದೆ ಪ್ರಯೋಜನಕ್ಕೆ ಬರಬೇಕು. ಅತಿಥಿ ಉಪನ್ಯಾಸಕನಾಗಿ ತಿಂಗಳಿಗೆ ರೂ.250 ಪಗಾರ ಪಡೆಯುವ ಕಾಲದಲ್ಲೇ ನಾನು ಹೆಚ್ಚು ಕನ್ನಡ ಪುಸ್ತಕಗಳನ್ನು ಖರೀದಿಸುತ್ತಿದ್ದೆ. ನಾನು ಬದುಕಿನಲ್ಲಿ ಮಾಡಿರುವ ಮೂರೇ ಮೂರು ಸಾಧನೆಗಳೆಂದರೆ ಒಂದು ಪುಟ್ಟ ಮನೆ ಕಟ್ಟಿದ್ದು, ಎರಡನೆಯದು ಮನೆ ತುಂಬಾ ಪುಸ್ತಕ ಖರೀದಿಸಿದ್ದು, ಮೂರನೆಯದ್ದು ಮಗನನ್ನು ಓದಿಸಿದ್ದು. ಇವೆಲ್ಲವನ್ನೂ ಹೊತ್ತು ದೂರದ ಮಗನ ಮನೆಯಲ್ಲಿ ಇಡಬೇಕೆಂಬ ಆಸೆ ಇತ್ತು. ಆದರೆ ನೀವು ಮಾತ್ರ ಬನ್ನಿ ಪುಸ್ತಕಗಳೆಲ್ಲ ರಗಳೆ ಎಂದು ಅವನು ಪದೇ ಪದೇ ಜಪಿಸುತ್ತಿದ್ದ. ಈ ಕಾರಣಕ್ಕೆ ಬೇಡವೇ ಬೇಡ ಎಂದು ಇವೆಲ್ಲವನ್ನು ಇಲ್ಲಿಗೆ ಕೊಡುವ ತೀರ್ಮಾನ ಮಾಡಿದೆ’’ ಎಂದು ಆ ನಿವೃತ್ತ ಪ್ರಾಧ್ಯಾಪಕರು ವಿಷಾದದಿಂದಲೇ ಮಾತು ನಿಲ್ಲಿಸಿದ್ದರು.

ಕಳೆದ ಒಂದೆರಡು ದಶಕಗಳಲ್ಲಿ ಈ ಕರ್ನಾಟಕದಲ್ಲಿ ಅಥವಾ ದೇಶದಲ್ಲಿ ಹೀಗೆ ನಿವೃತ್ತಗೊಂಡ ಸಾವಿರಾರು ಉಪನ್ಯಾಸಕರಿರಬಹುದು. ಭಾಷಾ ಪ್ರಾಧ್ಯಾಪಕರಿರಬಹುದು. ಹಾಗಂತ ಹೀಗೆ ಪುಸ್ತಕ ಇಟ್ಟುಕೊಂಡವರು ಸಾಹಿತ್ಯದ ಮೇಷ್ಟ್ರುಗಳೇ ಆಗಬೇಕಾಗಿಲ್ಲ. ಖಾಸಗಿ, ಸರಕಾರಿ ಉದ್ಯೋಗದಲ್ಲಿಲ್ಲದೆ ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿದ ಪತ್ರಕರ್ತರು, ವಿಜ್ಞಾನಿಗಳು, ಮುತ್ಸದ್ದಿ ರಾಜಕಾರಣಿಗಳು, ಉದ್ಯಮಿಗಳು, ರೈತರು ದೊಡ್ಡ ಪ್ರಮಾಣದಲ್ಲಿ ತಮ್ಮ ಮನೆಗಳಲ್ಲಿ ಪುಸ್ತಕ ಇಟ್ಟುಕೊಂಡವರಿದ್ದಾರೆ. ಹುಡುಕಿದರೆ ಇಂಥವರ ಮನೆಯಲ್ಲಿ ಅವರು ಓದಿ ಅಟ್ಟಿಕಟ್ಟಿಟ್ಟ, ಈಗ ಓದುವವರಿಲ್ಲದೆ ಧೂಳು ತಿನ್ನುತ್ತಿರುವ ಸಾವಿರಾರು ಪುಸ್ತಕಗಳಿರುವ ಸಾಧ್ಯತೆಗಳಿವೆ.

ಆ ಮನೆಯ ಮಕ್ಕಳಾಗಲೀ, ಮೊಮ್ಮಕ್ಕಳಾಗಲೀ ಭಾಗಶಃ ಆ ಮಹಾಮನೆಯಲ್ಲಿ ಇಂದು ಮುಟ್ಟದೆ ನಿರಾಕರಿಸುವ, ಅವರೆಲ್ಲ ಅನುಪಯುಕ್ತ ವಸ್ತುವೆಂದೇ ಭಾವಿಸಿದ್ದವುಗಳು ಈಗ ಆ ಪುಸ್ತಕಗಳೇ ಆಗಿವೆ. ಅವೆಲ್ಲವನ್ನೂ ಆ ಮನೆಯ ಹಿರಿಯರು ಪ್ರತೀ ಪುಟ ಓದಿದ್ದಾರೆ, ಅಲ್ಲಿರುವ ತೊರವೆ ರಾಮಾಯಣ, ಕುಮಾರವ್ಯಾಸ ಭಾರತ, ವಾಲ್ಮೀಕಿ ರಾಮಾಯಣ ಇವೆಲ್ಲವನ್ನೂ ಅಪ್ಪ, ಅಮ್ಮ, ಅವರಮ್ಮ, ಅವರಮ್ಮ ಎಲ್ಲ ಮುಟ್ಟಿದ್ದಾರೆ, ಓದಿದ್ದಾರೆ, ಪಠಿಸಿದ್ದಾರೆ, ವ್ಯಾಖ್ಯಾನಿಸಿದ್ದಾರೆ ಎಂದರೆ ಕಿರಿಗರಿಗದು ನಂಬಲಾರದ ವಿಸ್ಮಯಗಳೇ.

ಈಗ ಏನಾದರೂ ಆ ರಾಶಿಯಿಂದಲೇ ಮತ್ತದೇ ಮಹಾಭಾರತ, ರಾಮಾಯಣವನ್ನೋ ಹುಡುಕಿ ಹುಡುಕಿ ತೆಗೆದು ಓದುವ ಪ್ರಯತ್ನವನ್ನೇನಾದರೂ ಆ ಹಿರಿಯರು ಮಾಡಿದರೆ ಅವರನ್ನೆಲ್ಲ ಅತಿಮಾನುಷರು ಎಂದು ಭಾವಿಸುವ ಹೊಸ ಮನಸ್ಥಿತಿ ಆ ಮನೆಯಲ್ಲಿರುವುದು ಸತ್ಯ.

ಒಂದು ಕಾಲದಲ್ಲಿ ಸಾಹಿತ್ಯವನ್ನು ಓದುವುದಕ್ಕೆ ಅಥವಾ ಇನ್ನಿತರ ಯಾವುದೇ ಪುಸ್ತಕಗಳ ಓದುಸುಖದಲ್ಲಿ ತೊಡಗುವುದಕ್ಕೆ ವಿಶೇಷ ಭಾವ ಅಂಶಗಳು ಕಾರಣ ಆಗುತ್ತಿರಲಿಲ್ಲ. ಆಗಲೇ ಹೇಳಿದ ಹಾಗೆ ಒಬ್ಬ ವಿಜ್ಞಾನಿ, ಒಬ್ಬ ಪೊಲೀಸ್ ಅಧಿಕಾರಿ, ಒಬ್ಬ ಸೈನಿಕ, ಒಬ್ಬ ರಾಜಕಾರಣಿ ತಮ್ಮ ತಮ್ಮ ಮನೆಗಳಲ್ಲಿ ಓದುವ ರಾಶಿ ರಾಶಿ ಪುಸ್ತಕಗಳನ್ನು ಸೇರಿಸಿದ್ದನ್ನು ನಾವು ಕಂಡಿದ್ದೇವೆ. ಇವರ್ಯಾರು ಕನ್ನಡ ಎಂ.ಎ. ಓದಿದವರಲ್ಲ. ಸಾಹಿತಿಗಳಲ್ಲ. ವಿಜ್ಞಾನ ಲೇಖಕರಾದ ನಾಗೇಶ್ ಹೆಗಡೆ ಶಿವರಾಮ ಕಾರಂತ, ಕುವೆಂಪು, ಕಟ್ಟಿಮನಿ, ತರಾಸು ಅವರನ್ನು ಬಾಲ್ಯದಲ್ಲಿ ಓದಿದ್ದನ್ನು ನೆನಪು ಮಾಡಿಕೊಂಡಿದ್ದಾರೆ. ನನಗೆ ಗೊತ್ತಿರುವ ಸ್ನೇಹಿತರೊಬ್ಬರು ಆರನೆಯ ಕ್ಲಾಸಲ್ಲಿರುವಾಗಲೇ ತನ್ನ ಪುಟ್ಟ ಕೈಯಲ್ಲಿ ಎತ್ತಲಾರದ ಕಾನೂನು ಸುಬ್ಬಮ್ಮ ಹೆಗ್ಗಡತಿಯನ್ನು ಓದಿದ್ದ ನೆನಪನ್ನು ಆಗಾಗ ಮಾಡಿಕೊಳ್ಳುತ್ತಾರೆ. ಮಂಗಳೂರಲ್ಲಿರುವ ಆ ಹಿರಿಯರು ಈಗಲೂ ಒಂದೆರಡು ಗಂಟೆ ಸರಕಾರಿ ಗ್ರಂಥಾಲಯದಲ್ಲಿ ಕೂತು ಗಂಭೀರ ಓದಿನ ಸುಖ ಪಡೆಯುತ್ತಾರೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ಬೋಧನೆ ಮಾಡಿದ, ಇತ್ತೀಚೆಗೆ ತೀರಿಕೊಂಡ ನಿವೃತ್ತ ಪ್ರಾಧ್ಯಾಪಕರೊಬ್ಬರ ಮನೆಯಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಅಮೂಲ್ಯ ಪುಸ್ತಕಗಳ ಅತ್ಯದ್ಭುತ ಭಂಡಾರವೇ ಇದೆ. ಅವರ ಇಬ್ಬರು ಮಕ್ಕಳೀಗ ಬೇರೆ ಊರುಗಳಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಪುಸ್ತಕದ ಕಾರಣಕ್ಕಾಗಿಯೇ ಮಂಗಳೂರಿನ ಮನೆ ಬೀಗ ಜಡಿದು ಪರಾಭಾರೆಯಾಗದೆ ಇನ್ನೂ ಉಳಿದಿದೆ. ಆ ಅಮೂಲ್ಯ ಪುಸ್ತಕವನ್ನು ವಿಲೇವಾರಿ ಮಾಡುವುದಕ್ಕೆ ಆ ಮಕ್ಕಳಿಬ್ಬರೂ ಸಿದ್ಧರಾಗಿದ್ದಾರೆ.

ಹೀಗೆ ಈ ದೇಶದ ನೂರಾರು ವಿಶ್ವವಿದ್ಯಾನಿಲಯಗಳಲ್ಲಿ ಪಾಠ ಮಾಡಿದ ಹಿರಿಯ ಪ್ರಾಧ್ಯಾಪಕರ ಮನೆಗಳಲ್ಲಿ, ಪ್ರಖಂಡ ಪಂಡಿತ ಪರಂಪರೆಯ ಸಾಹಿತಿ ಲೇಖಕರ ಮನೆಗಳಲ್ಲಿ ಓದು ಕಳೆದುಕೊಂಡ ಲಕ್ಷಾಂತರ ಪುಸ್ತಕಗಳು ಅನಾಥವಾಗಿ ಬಿದ್ದಿರಬಹುದು. ನಿಜವಾದ ಓದುಮನೆಯನ್ನು ಸೇರಿಕೊಳ್ಳಲು ಕಾತರದಿಂದ ಕಾಯುತ್ತಿರಬಹುದು.

ನಮ್ಮ ರಾಜ್ಯ, ದೇಶದ ಸಾಹಿತ್ಯ ಅಕಾಡಮಿ, ಪ್ರಾಧಿಕಾರ, ಪರಿಷತ್ತು, ಸಂಸ್ಕೃತಿ-ಭಾಷೆಪರ ಪೀಠಗಳು ತಮ್ಮ ತಮ್ಮ ಅಧಿಕಾರಾವಧಿಯಲ್ಲಿ ಮತ್ತೆ ಮತ್ತೆ ಹೊಸ ಪುಸ್ತಕಗಳನ್ನು ಪ್ರಕಟಿಸುವುದರ ಮೂಲಕ ಅನುದಾನಗಳನ್ನು ವ್ಯಯಿಸುವ ಜೊತೆಗೆ ಹೀಗೆ ಅಜ್ಞಾತ ನೆಲೆಗಳಲ್ಲಿ ಓದುಗರಿಲ್ಲದೆ ಗೆದ್ದಲು ಹಿಡಿಯುವ ಅನುಪಯುಕ್ತ ಪುಸ್ತಕಗಳನ್ನು ರಕ್ಷಿಸುವ, ಹೊಸ ಓದುಗರ ಜೊತೆಗೆ ಅವುಗಳನ್ನು ಹೊಂದಿಸುವ ಅಪರೂಪದ ಜ್ಞಾನ ನಿಧಿಗಳನ್ನು ಡಿಜಿಟಲ್ ರೂಪಕ್ಕೆ ಅಳವಡಿಸುವ ಕೆಲಸವನ್ನು ಮಾಡಬೇಕು.

ಓದದೆ ಧೂಳು ತಿನ್ನುತ್ತಾ ಬಿದ್ದಿರುವ ಇಂಥ ಪುಸ್ತಕಗಳನ್ನು ಮತ್ತೆ ಓದುಮನೆಗೆ ಸಾಗಿಸುವ, ಜೋಡಿಸುವ ಅಗತ್ಯಗಳ ಬಗ್ಗೆ ಒಂದು ಹೊಸ ಯೋಜನೆಗಳನ್ನು ರೂಪಿಸುವುದಕ್ಕೆ ಇಂಥ ಸಂಸ್ಥೆಗಳಿಗೆ ಅವಕಾಶಗಳಿವೆ. ಇತ್ತೀಚೆಗೆ ನಾನು ಕೆಲವು ಕಡೆ ರಸ್ತೆ ಬದಿಯಲ್ಲಿ ಇರಿಸಿದ್ದ ‘ಪುಸ್ತಕದಗೂಡು’ಗಳನ್ನು ಗಮನಿಸಿದೆ. ಸಾರ್ವಜನಿಕ ಜಾಗದಲ್ಲಿ ಸ್ಥಳೀಯ ಆಡಳಿತಾಂಗ, ರೋಟರಿ -ಲಯನ್ಸ್‌ನಂತಹ ಸೇವಾ ಸಂಸ್ಥೆಗಳು ‘ಅನುಪಯುಕ್ತ ವಸ್ತುಗಳನ್ನು ಇಲ್ಲಿಡಿ, ಅವುಗಳ ಅಗತ್ಯವಿರುವವರಿಗೆ ನಾವು ತಲುಪಿಸುತ್ತೇವೆ’ ಎಂದು ಕೆಲವು ಕಡೆ ಕಪಾಟುಗಳನ್ನು ಇರಿಸಿದ್ದನ್ನು ಗಮನಿಸಿದ್ದೇನೆ. ಅಲ್ಲಿಟ್ಟ ಔಷಧಿಗಳು, ಬಟ್ಟೆ ಬರೆಗಳು ಸೇರಬೇಕಾದ ಜಾಗಗಳಿಗೆ ಬೇಗನೆ ಸೇರುತ್ತವೆ. ಮನೆಯಲ್ಲಿ ಭಾರವಾಗುತ್ತದೆ ಎಂದು ಯಾರೋ ತಂದಿಟ್ಟ ಪುಸ್ತಕಗಳು ಮಾತ್ರ ಕೊಳೆಯುತ್ತಾ ಬಿದ್ದಿವೆ.!

ಕೆಲವು ಸಾಹಿತಿಗಳಿಗೆ, ಬರಹಗಾರರಿಗೆ, ಪ್ರಾಧ್ಯಾಪಕರಿಗೆ ತಮ್ಮ ಮನೆಯಲ್ಲಿರುವ ಓದುಗರಿಲ್ಲದ ಬಳಕೆಗೆ ಬಾರದ ಇಂಥ ಪುಸ್ತಕಗಳನ್ನು ವಿಲೇವಾರಿ ಮಾಡುವುದೇ ಬಹಳ ದೊಡ್ಡ ಸಮಸ್ಯೆಯಾಗಿದೆ. ಶಿಕ್ಷಣ ಸಂಸ್ಥೆಗಳು ಬುದ್ಧಿಕೇಂದ್ರಿತ ನೆಲೆ ಎಂಬ ಸಾರ್ವಜನಿಕ ಹಂಗಿಗೆ ಒಳಗಾದ ಕಾರಣಕ್ಕೋ ಏನೋ ಇಂಥ ಬಡಪಾಯಿ ಪುಸ್ತಕಗಳನ್ನು ಸ್ವೀಕರಿಸುವುದೂ ಉಂಟು. ಇಡಲು ಕಪಾಟುಗಳನ್ನು ನೀವೇ ಒದಗಿಸಿ ಎಂದು ನಿರ್ಬಂಧಿಸುವುದೂ ಇದೆ.

ಅಂದ ಹಾಗೆ ನಾನು ಮೊದಲಿನ ಪಂಪಪ್ರಿಯ ನಿವೃತ್ತ ಪ್ರಾಧ್ಯಾಪಕರ ಕಥೆಯನ್ನು ನಿಮಗಿನ್ನೂ ಪೂರ್ತಿ ಹೇಳಿಲ್ಲ. ಆ ಕತೆಯ ಅಂತ್ಯ ತುಂಬ ರೋಚಕವಾಗಿದೆ. ದುರಂತ ಅಂತ್ಯದಾಗಿದೆ. ಮಗನ ಜೊತೆಗೆ ಬೇರೆ ರಾಜ್ಯ ಸೇರಿಕೊಂಡ ಆ ನಿವೃತ್ತರು ಅಲ್ಲೂ ಸುಮ್ಮನಿರದೆ ಇಳಿವಯಸ್ಸಿನಲ್ಲೂ ಬರೆಯುತ್ತಿರುತ್ತಾರೆ. ಎರಡು ದಶಕಗಳ ಕಾಲ ಪಂಪನನ್ನು ಪಾಠ ಮಾಡಿದ ಆ ನಿವೃತ್ತರಿಗೆ ಅದೊಂದು ಕೃತಿಯನ್ನು ಪರಭಾರೆ ಮಾಡಿದ್ದು ಮನಸ್ಸಿಗಷ್ಟು ಸಮ್ಮತವಾಗಿರಲಿಲ್ಲ. ಅದರಲ್ಲಿ ಪಂಪ ಬರೆದುದಕ್ಕಿಂತ ಹೆಚ್ಚು ಜಾಗ ಇರುವಲ್ಲೆಲ್ಲ ಅವರೇ ಕೈಬರಹದಲ್ಲಿ ಬರೆದ ಟಿಪ್ಪಣಿಗಳಿದ್ದವು, ಅರ್ಥ ವಿಸ್ತಾರಗಳಿದ್ದವು. ಈ ಕಾರಣಕ್ಕಾಗಿಯೇ ಪ್ರಾಂಶುಪಾಲರಿಗೆ ಪತ್ರ ಬರೆದ ಆ ಹಿರಿಯರು ಮುಂದಿನ ಬಾರಿ ನಾನು ಬಂದಾಗ ಅದೊಂದು ಪುಸ್ತಕವನ್ನು ವಾಪಸ್ ಮಾಡಿ ಎಂದು ವಿನಂತಿಸಿಕೊಂಡಿದ್ದರು. ಅದರ ಬದಲು ಅಷ್ಟೇ ಮೌಲ್ಯದ ಇನ್ನೊಂದು ಪುಸ್ತಕವನ್ನು ನೀಡುವೆ ಎಂದು ಭರವಸೆ ನೀಡಿದ್ದರು.

ಆ ಮಹಾತ್ಮ ತೀರಾ ಅನಿರೀಕ್ಷಿತವಾಗಿ ಆ ಸಂಸ್ಥೆಗೆ ಬಂದಾಗ ಕಂಡ ದೃಶ್ಯ ಮಾತ್ರ ಅವರಿಗೆ ತುಂಬಾ ಆಘಾತವನ್ನುಂಟು ಮಾಡಿತು. ವರ್ಷದ ಹಿಂದೆ ಅವರೇ ರಟ್ಟಿನ ಪೆಟ್ಟಿಗೆಗಳಿಗೆ ತುಂಬಿಸಿ ಗಾಡಿಯಲ್ಲಿಟ್ಟು ಕಾಲೇಜಿನ ಮಹಡಿಗೇರಿಸಿದ್ದ ಅಷ್ಟೂ ಪುಸ್ತಕಗಳು ಅಡ್ಡಾದಿಡ್ಡಿಯಾಗಿ ಬಾಕ್ಸ್ ಸಮೇತ ಇನ್ನೂ ನೆಲದಲ್ಲಿದ್ದವು. ಅವರೇ ದುಡ್ಡು ಕೊಟ್ಟು ಖರೀದಿಸಿದ 9 ಖಾಲಿ ಕಾಪಾಟುಗಳು ಧೂಳುಮೆತ್ತಿಕೊಂಡು ನಿಂತಿದ್ದವು. ತಾನು ಕೈಯಾರೆ ಕೊಟ್ಟ ಕೃತಿಗಳನ್ನು ಅಂತಹ ಸ್ಥಿತಿಯಲ್ಲಿ ಕಂಡು ಪೆಚ್ಚಾಗುವ ಪರಿಸ್ಥಿತಿ ಈಗ ಮೇಷ್ಟ್ರದ್ದು. ಪಂಪಭಾರತವನ್ನು ಹುಡುಕಿಕೊಡಲು ಬಹು ದೂರದಿಂದ ಬಂದಿದ್ದ ಅವರು ಪ್ರಾಂಶುಪಾಲರನ್ನು ಸಿಟ್ಟು, ಆಕ್ರೋಶ, ನೋವಿನಿಂದಲೇ ನೋಡುತ್ತಿದ್ದರು.

‘‘ಸರ್, ನಾನು ಎರಡು ವಾರದ ಹಿಂದೆ ಬಂದು ಚಾರ್ಜ್ ತೆಗೆದುಕೊಂಡವ. ನನ್ನ ಊರು ಬಾಗಲಕೋಟೆ. ದಯವಿಟ್ಟು ಕ್ಷಮಿಸಿ. ಒಂದೇ ವಾರದಲ್ಲಿ ಇದಕ್ಕೆಲ್ಲ ವ್ಯವಸ್ಥೆ ಮಾಡುತ್ತೇನೆ’’ ಎಂದಾಗ ಅಲ್ಲೇ ಕನ್ನಡ ಪಾಠ ಮಾಡುತ್ತಿದ್ದ ತನ್ನ ಪ್ರೀತಿಯ ಶಿಷ್ಯನನ್ನು ನಿವೃತ್ತರ ಕಣ್ಣು ಹುಡುಕುತ್ತಿತ್ತು. ‘‘ಸರ್ ಅವರು ಒಂದು ವರ್ಷದ ಹಿಂದೆಯೇ ವರ್ಗಾವಣೆಗೊಂಡು ಇನ್ನೊಂದು ಕಾಲೇಜಿಗೆ ಹೋಗಿದ್ದಾರೆ’’ ಅಂದರು ಅಲ್ಲೇ ನಿಂತಿದ್ದ ಹಿಸ್ಟರಿ ಮೇಷ್ಟ್ರು.

ಏನೋ ಮಾಡಬಾರದ ಪಾಪ ಮಾಡಿದೆ ಎಂದು ಪರಿತಪಿಸುತ್ತಲೇ ಕಪಾಟಿನ ಮೇಲೆ ಕರಟಿದ ಗುಲಾಬಿಯ ಸಮೇತ ಇದ್ದ ಆ ಏಕೈಕ ಪುಸ್ತಕ ಪಂಪ ಭಾರತವನ್ನು ತೆಗೆದುಕೊಂಡು ಕಣ್ಣಂಚಿನಲ್ಲಿ ನೀರಹನಿಯನ್ನು ಇಟ್ಟುಕೊಂಡೇ ನಿವೃತ್ತ ಪ್ರಾಧ್ಯಾಪಕರು ಅಲ್ಲಿಂದ ನಿರ್ಗಮಿಸಿದರು.

ಇದು ಕೇವಲ ಹಳೆಯ ಪುಸ್ತಕ ಸಂಗ್ರಹದ ಪರಭಾರೆಯ ಸಮಸ್ಯೆಯಲ್ಲ. ಇದು ಜ್ಞಾನದ ಹಸ್ತಾಂತರಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಸಂಕಷ್ಟ. ಇದಕ್ಕೆ ಈಗಾಗಲೇ ಸರಕಾರ, ವಿಶ್ವವಿದ್ಯಾನಿಲಯಗಳು, ಸಂಸ್ಕೃತಿ ಇಲಾಖೆಗಳು, ಸಾಹಿತ್ಯ ಅಕಾಡಮಿಗಳು ಮತ್ತು ಸಾರ್ವಜನಿಕ ಸಾಹಿತ್ಯ ಸಂಘಟನೆಗಳು ಕೆಲವು ಯತ್ನಗಳನ್ನು ಮಾಡಿದರೂ, ಅವು ವ್ಯಾಪಕವಾಗಿಲ್ಲ. ಒಟ್ಟು ಈ ಸಮಸ್ಯೆಯನ್ನು ಹಾಳಾಗುತ್ತಿರುವ ಜ್ಞಾನ ಸಂಪತ್ತು ಎಂದು ಸರಕಾರ ಮಾತ್ರವಲ್ಲ ಸಾರ್ವಜನಿಕರು ಕೂಡ ಯೋಚಿಸಬೇಕು ಮತ್ತು ಇಷ್ಟೊಂದು ಹಳೆಯ ಪುಸ್ತಕಗಳನ್ನು ಮತ್ತೆ ಓದುವ ವಾತಾವರಣಕ್ಕೆ ತರುವ ಕೆಲವು ನವೀನ ಮಾರ್ಗಗಳನ್ನು ಹುಡುಕಬೇಕು.

ಹಳ್ಳಿ, ತಾಲೂಕು, ಜಿಲ್ಲೆಯ ಮಟ್ಟಗಳಲ್ಲಿ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ, ಬಸ್ ಅಥವಾ ವ್ಯಾನ್ ರೂಪದಲ್ಲಿ ಗ್ರಾಮ-ನಗರಗಳಲ್ಲಿ ಓದುಗರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಮಾಡಬಹುದು. ವಿಶೇಷವಾಗಿ ಹಬ್ಬ-ಸಂತೆ ದಿನಗಳಲ್ಲಿ ಅಂತಹ ಪುಸ್ತಕಯಾನ ಮಕ್ಕಳಿಗೆ ಕಥೆ, ವಯಸ್ಕರಿಗೆ ಸಾಹಿತ್ಯ, ಹಿರಿಯರಿಗೆ ಆತ್ಮಕತೆ ಮುಂತಾದ ಕಾರ್ಯಕ್ರಮಗಳೊಂದಿಗೆ ಓದುವಿಕೆಯನ್ನು ಪ್ರೋತ್ಸಾಹಿಸಬಹುದು.

ಯಾರಾದರೂ ವ್ಯಕ್ತಿ, ಸಂಘಟನೆ, ಶಾಲೆ, ಕಾಲೇಜು ಒಂದು ಪುಸ್ತಕವನ್ನು ದತ್ತು ಪಡೆದು, ಅದನ್ನು ಪುನಃ ಮುದ್ರಿಸಿ, ಅಥವಾ ಡಿಜಿಟಲ್ ಆವೃತ್ತಿ ಮಾಡಿ ಓದುಗರಿಗೆ ಉಚಿತವಾಗಿ ಹಂಚಬಹುದು. ಈ ದತ್ತು ಯೋಜನೆಯಲ್ಲಿ ಹಳೆಯ ಕೃತಿಗಳು ಮತ್ತೆ ಹೊಸ ಬದುಕು ಪಡೆಯುವಂತೆ ಮಾಡಬಹುದು.

ಪ್ರತೀ ವಾರ, ತಿಂಗಳಿಗೆ ಒಂದು ಹಳೆಯ ಕೃತಿಯನ್ನು ಆಯ್ದು, ಅದನ್ನು ಓದಿ, ಚರ್ಚಿಸುವ ಓದುಕೂಟ ಅಥವಾ ಓದು ಕುಟುಂಬವನ್ನು ಯುವಕರಲ್ಲಿ ಪ್ರಾರಂಭಿಸುವುದು. ಅದಕ್ಕಾಗಿ ಅವರನ್ನು ಪ್ರೋತ್ಸಾಹಿಸುವುದು. ಹಳೆಯ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಪಿಡಿಎಫ್ ರೂಪದಲ್ಲಿ ಉಚಿತವಾಗಿ ಅಥವಾ ಕಡಿಮೆ ಶುಲ್ಕದಲ್ಲಿ ಲಭ್ಯ ಸಾರ್ವಜನಿಕರಿಗೆ ಮುಕ್ತಗೊಳಿಸುವುದು ಅಥವಾ ಡಿಜಿಟಲ್ ಲೈಬ್ರರಿಯನ್ನು ಸ್ಥಾಪಿಸುವುದು. ಇಂಥ ಕೃತಿಗಳನ್ನು ಗ್ರಾಮೀಣ ಇಂಟರ್ನೆಟ್ ಕೇಂದ್ರಗಳು, ಶಾಲಾ ಕಂಪ್ಯೂಟರ್ ಕೊಠಡಿಗಳು, ಮೊಬೈಲ್ ಆ್ಯಪ್‌ಗಳ ಮೂಲಕ ಹಂಚುವುದು. ನಿವೃತ್ತ ಪ್ರಾಧ್ಯಾಪಕರು, ಬರಹಗಾರರು, ಹಿರಿಯ ಓದುಗರು ತಮ್ಮ ಸಂಗ್ರಹವನ್ನು ಒಂದು ನಿಗದಿತ ದಿನ ದಾನ ಮಾಡುವ ಹಬ್ಬವನ್ನು ಗ್ರಾಮ ಪಂಚಾಯತ್ ಏರ್ಪಡಿಸುವುದು. ಪುಸ್ತಕದಾನ ಹಬ್ಬ ಅಥವಾ ಹಳ್ಳಿಗಳಲ್ಲಿ ಸಂತೆಯ ಸ್ವರೂಪದಲ್ಲಿ ಪುಸ್ತಕ ಸಂತೆಯನ್ನು ಏರ್ಪಡಿಸುವುದು. ದಾನವಾಗಿ ಬಂದ ಪುಸ್ತಕಗಳನ್ನು ಅಲ್ಲಲ್ಲೇ ಪ್ರಾದೇಶಿಕ ಶಾಲಾಕಾಲೇಜು ಗ್ರಂಥಾಲಯಗಳಿಗೆ ಹಂಚುವ ವ್ಯವಸ್ಥೆ ಮಾಡುವುದು.

ಗ್ರಾಮೀಣ ಯುವಕರು ಆಟಿಡೊಂಜಿ ದಿನ, ಕೆಸರುಗದ್ದೆ ಸಂಭ್ರಮವನ್ನು ಆಚರಿಸುವಂತೆ ಒಂದು ದಿವಸ ಪುಸ್ತಕ ಓದು ಸ್ಪರ್ಧೆಯನ್ನು ನಡೆಸಿ ಮಕ್ಕಳಿಗೆ, ಯುವಕರಿಗೆ ಸ್ಥಳದಲ್ಲೇ ಬಹುಮಾನವನ್ನು ಕೊಡುವುದು. ತತ್ ಸ್ಥಳದಲ್ಲೇ ಪುಸ್ತಕ ಓದಿ ಸರಳವಾದ ಪ್ರಶ್ನೆಗಳಿಗೆ ಉತ್ತರಿಸುವುದರ ಮೂಲಕ ಓದು ಪರೀಕ್ಷೆಗಳನ್ನು ನೆರವೇರಿಸುವುದು. ಹೀಗೆ ಅನೇಕ ದಾರಿಗಳ ಮೂಲಕ ಮಣ್ಣಾಗಿ ಹೋಗುವ ಪುಸ್ತಕಗಳ ಜ್ಞಾನಗಳನ್ನು ಹೊಸ ತಲೆಮಾರಿಗೆ ಹಸ್ತಾಂತರಿಸುವ ಸಾಧ್ಯತೆಗಳನ್ನು ಯೋಜಿಸಬಹುದು.

share
ನರೇಂದ್ರ ರೈ ದೇರ್ಲ
ನರೇಂದ್ರ ರೈ ದೇರ್ಲ
Next Story
X