ಅಸಹಾಯಕತೆಯಲ್ಲೂ ಧೈರ್ಯ ಹುಡುಕಿದ - ಕೀಮೋ

ತಾಯಿಯ ದೇಹದ ಒಳಗಡೆ ನುಗ್ಗುವ ಕೀಮೋ ಕ್ಯಾನ್ಸರ್ ಹರಡುವ ಜೀವಾಣುಗಳನ್ನು ನುಗ್ಗಿ ನುಗ್ಗಿ ಹೊಡೆದು ಸಾಯಿಸುವಂತೆ ಮತೀಯವಾದ, ಸ್ವ ಸಮುದಾಯದಲ್ಲಿನ ಸ್ತ್ರೀ ಶೋಷಣೆ, ಮೌಢ್ಯ, ಅಜ್ಞಾನದ ಕಣಗಳನ್ನು ಹುಡುಕಿ ಸಾಯಿಸುವ ಪವಾಡಸದೃಶ ಜೀವವಾದಿ ಜೀವಾಣು ಸೃಷ್ಟಿಯಾದೀತೇ ಎಂಬ ನಿರೀಕ್ಷೆ ಈ ಕಥೆಗಾರ್ತಿಯದ್ದು. ತಾಯಿಯೊಟ್ಟಿಗೆ ಉಳಿಯುವ ವೀಕ್ಷಕ ಮನಸ್ಸೊಂದು ಆಸ್ಪತ್ರೆಯಲ್ಲಿ ಗಮನಿಸುವ ವೇದನೆ ಅಸಹಾಯಕತೆಗಳು, ಕೇಡು ಕುಟಿಲತೆಗಳನ್ನು ಸಾಧ್ಯಂತವಾಗಿ ಈ ಕೃತಿ ಅನಾವರಣಗೊಳಿಸುತ್ತದೆ.
‘‘ಕಥೆ ಬರೆಯುವುದು ಹೇಗೆ ಎಂದು ಒಂದು ಗಂಟೆ ಮಾತನಾಡಬೇಕು, ದಯವಿಟ್ಟು ಬನ್ನಿ’’ ಎಂದು ಆ ಕಥೆಗಾರ್ತಿಯನ್ನೊಮ್ಮೆ ವಿನಂತಿಸಿದ್ದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಆ ಹಿಂದೆಯೇ ಆ ಕಥೆಗಾರ್ತಿಯನ್ನು ಪರಿಚಯಿಸಿದ ಕಾರಣಕ್ಕೋ ಏನೋ ಮಕ್ಕಳಿಗೂ ಕುತೂಹಲವಿತ್ತು. ಆಗಲೇ ಆ ಕಥೆಗಾರ್ತಿ ರಾಜ್ಯ, ರಾಷ್ಟ್ರಮಟ್ಟದ ಮೂರು ನಾಲ್ಕು ಕಥಾ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನವನ್ನೇ ಪಡೆದಿದ್ದರು. ಒಂದು ಬಾರಿ ದೊಡ್ಡ ಮೊತ್ತದ ಪ್ರಶಸ್ತಿಯನ್ನು ನಿರಾಕರಿಸಿಯೂ ಇದ್ದರು. ಆಕೆಯ ಕಥೆ ಓದಿದ್ದ, ಸ್ಪರ್ಧೆಗಳಲ್ಲಿ ಮೌಲ್ಯಮಾಪನ ಮಾಡಿದ್ದ ಕನ್ನಡದ ಅನೇಕ ಹಿರಿಯ ಕಥೆಗಾರರು ಆವಾಗಲೇ ಆ ಚಿಕ್ಕ ವಯಸ್ಸಿನ ಕಥೆಗಾರ್ತಿಯ ಬಗ್ಗೆ ಒಂದಷ್ಟು ಬೆರಗು ಕುತೂಹಲ ಗೌರವವನ್ನು ಹೊಂದಿದ್ದರು.
ಪುತ್ತೂರಲ್ಲೇ ಓದಿದ್ದ ಅವರನ್ನು ಸಂಪರ್ಕಿಸುವುದು ವಿನಂತಿಸುವುದು ಕಷ್ಟವಾಗಿರಲಿಲ್ಲ. ನಮ್ಮ ಮಕ್ಕಳಿಗೆ ಪರಿಚಯಿಸುವುದು, ಅವರ ಕಥೆ ಬರೆಯುವ ಕೌಶಲ್ಯವನ್ನು ಬಗೆಯುವುದು ನಮಗೊಂದು ಹೆಮ್ಮೆಯೂ ಆಗಿತ್ತು.
‘‘ಸರ್ ನನಗೆ ಕಥೆ ಬರೆಯಲಿಕ್ಕೆ ಗೊತ್ತಿದೆ. ಅದನ್ನು ವಿವರಿಸುವುದಕ್ಕೆ ಗೊತ್ತಿಲ್ಲ. ಇಂಥ ಸ್ಥಿತಿಯಲ್ಲಿ ನಾನು ಬಂದು ಮಾತನಾಡಲಾರೆ. ದಯವಿಟ್ಟು ಅನ್ಯತಾ ಭಾವಿಸಬೇಡಿ. ಇನ್ನೊಂದು ಸಲ ಬಂದು ಮಕ್ಕಳೊಂದಿಗೆ ನಾನೇ ಕೂತು ಮಾತನಾಡುವೆ, ಈ ಬಾರಿ ಬಿಟ್ಟುಬಿಡಿ.’’ ಆ ಮಾತಿನಲ್ಲಿ ವಿನಮ್ರತೆ ಇತ್ತು, ಪ್ರೀತಿ ಇತ್ತು. ಎಲ್ಲದಕ್ಕಿಂತ ಹೆಚ್ಚು ಸತ್ಯ ಇತ್ತು. ನಾನು ಅಷ್ಟಕ್ಕೆ ಬಿಡಲಿಲ್ಲ. ನಮ್ಮ ಕಾಲೇಜಿನ ಯುವ ಕಥೆಗಾರ್ತಿ ಸುಶ್ಮಿತಾಳನ್ನು ಅವರ ಮನೆಗೆ ಕಳಿಸಿಯೂ ಆಯಿತು. ಇಬ್ಬರು ಕೂತು ಸಾಹಿತ್ಯದ ಬಗ್ಗೆ ಮಾತನಾಡಿದರು. ಕಥೆ ಹುಟ್ಟುವ ಸಂದರ್ಭ, ಸನ್ನಿವೇಶ, ಅವರ ಓದು -ಪ್ರಭಾವ, ಪ್ರಚೋದನೆಗಳ ಬಗ್ಗೆ ನಮ್ಮ ಕಾಲೇಜಿನ ‘ಶಾಶ್ವತಿ’ಗೆ ಒಂದು ವಿಶೇಷ ಸಂದರ್ಶನವೂ ಆಯಿತು.
ಇಷ್ಟಾದರೂ ನಾನು ಮಾತ್ರ ಫಾತಿಮಾ ರಲಿಯಾ ಅವರನ್ನು ನೋಡೇ ಇರಲಿಲ್ಲ. ನನ್ನ ಅರ್ಧ ವಯಸ್ಸಿನ, ಬಹುಮೆಚ್ಚಿನ ಕಥೆಗಾರ್ತಿಯನ್ನು ನೋಡಲೇಬೇಕೆಂದು ಕಳೆದ ರವಿವಾರ ಮಂಗಳೂರಿಗೆ ಬಸ್ಸು ಹತ್ತಿದ್ದೆ. ಸಂತ ಅಲೋಸಿಯಸ್ ಕಾಲೇಜಿನಲ್ಲಿ ಆಕೆಯ ಹೊಸ ಪುಸ್ತಕ ‘ಕೀಮೋ- ಅನುಭವ ಕಥನ’ ಬಿಡುಗಡೆ. ರೋಗಕ್ಕೂ ಮನಸ್ಸಿಗೂ ಮದ್ದು ಕೊಡುವ ವೈದ್ಯ ಡಾ. ಶ್ರೀನಿವಾಸ ಕಕ್ಕಿಲಾಯರು ಹೊತ್ತಗೆಯ ಹೆರಿಗೆ ಮಾಡಿಸಿದರು.
ಬರೀ ಚಿಕ್ಕ ವಯಸ್ಸಲ್ಲ, ತೂಕದಲ್ಲೂ 35ರಿಂದ 40 ಕೆಜಿ ತೂಗುವ ಈ ಹುಡುಗಿ ವರ್ತಮಾನದ ಅತ್ಯುತ್ತಮ ಮುಸ್ಲಿಮ್ ಸಂವೇದನೆಯ ಬರಹಗಾರ್ತಿ ಅನ್ನುವುದು ನೂರಕ್ಕೆ ನೂರರಷ್ಟು ಸತ್ಯ. ನಾನು ಕನ್ನಡದ ವ್ಯಾಪ್ತಿಯಲ್ಲಿಟ್ಟು ಇವತ್ತಿನ ಬಹುಮುಖ್ಯ ಲೇಖಕಿ ಎಂದು ಹೇಳುವುದು ಖಂಡಿತ ಕಷ್ಟ. ಯಾಕೆಂದರೆ ಅಷ್ಟೊಂದು ಕನ್ನಡದ ಕೃತಿಗಳನ್ನು ನಾನು ಓದಿಯೂ ಇಲ್ಲ. ಈಗಾಗಲೇ ‘ಕಡಲು ನೋಡಲು ಹೋದವಳು’, ‘ಒಡೆಯಲಾರದ ಒಡಪು’, ‘ಅವಳ ಕಾಲು ಸೋಲದಿರಲಿ’ ಎಂಬ ಲಲಿತ ಪ್ರಬಂಧ, ಕಥೆ, ಕವನ ಸಂಕಲನಗಳನ್ನು ಪ್ರಕಟಿಸಿದ ಫಾತಿಮಾ ಇದೀಗ ಅನುಭವ ಕಥನ ‘ಕೀಮೋ’ವನ್ನು ಪ್ರಕಟಿಸಿದ್ದಾರೆ.
ಸುಮಾರು 17 ವರ್ಷಗಳ ಹಿಂದೆ ಕ್ಯಾನ್ಸರಿಗೆ ಒಳಗಾದ ತನ್ನ ತಾಯಿಯೊಂದಿಗೆ ಆಸರೆಯಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಂತ ಪಿಯುಸಿ ಓದುತ್ತಿದ್ದ ಎಳೆವಯಸ್ಸಿನ ಈ ಹುಡುಗಿ ಅವತ್ತಿನ ಅನುಭವಗಳನ್ನು ಮರು ನೆನಪಿಸಿಕೊಂಡು ಈಗ ಕಥನವನ್ನು ಹೆಣೆದಿದ್ದಾರೆ. ಕನ್ನಡದಲ್ಲಿ ಚಿಕಿತ್ಸೆಗೆ ಒಳಗಾದ ರೋಗಿಗಳು ಗುಣಮುಖ ಹೊಂದಿ ಪುನರ್ಜನ್ಮ ಪಡೆದ ಹತ್ತಾರು ಕಥೆಗಳು ಕನ್ನಡದಲ್ಲಿ ಈಗಾಗಲೇ ಪ್ರಕಟವಾಗಿವೆ. ನನಗೆ ಸಂಪಾದಕರಾಗಿದ್ದ ಸಂತೋಷ್ ಕುಮಾರ್ ಗುಲ್ವಾಡಿ ಅವರು ‘ನಾನು ಹೃದಯ ಚಿಕಿತ್ಸೆ ಮಾಡಿಸಿಕೊಂಡೆ’ ಎಂಬ ಒಂದು ಪುಸ್ತಕವನ್ನು ಆ ಕಾಲದಲ್ಲೇ ಬರೆದಿದ್ದರು. ಹದಿನೈದು ಸಾವಿರಕ್ಕಿಂತ ವಿಷದ ಹಾವು ಹಿಡಿದ ಆಪದ್ಬಾಂಧವ ಉಡುಪಿಯ ಗುರುರಾಜ ಸನಿಲ್ ಬರೆದ ‘ವಿಷಯಾಂತರ’ ಆತ್ಮಕಥೆ ಸಾವಿನ ಆಚೆ ಹೋಗಿ ಬಂದ ಬಹಳ ಅಪರೂಪದ ಸಂಗತಿಯನ್ನು ವಿವರಿಸುತ್ತದೆ. ಕನ್ನಡದಲ್ಲಿ ‘ಹೃದಯದಿಂದ ಹೃದಯಕ್ಕೆ’, ಭಾರತಿ ಅವರ ‘ಸಾವಿನ ಮನೆಯಿಂದ ಸಾಸಿವೆ ತಂದವಳು’, ಕೃಷ್ಣ ವಟ್ಟಂ ಅವರ ‘ನಾನು ಕ್ಯಾನ್ಸರ್ ಗೆದ್ದೆ’ ಮುಂತಾದ ಪುಸ್ತಕಗಳು ತುಂಬಾ ಜನಪ್ರಿಯವಾದವುಗಳು. ಆದರೆ ಈ ಮಾದರಿಯ ಎಲ್ಲಾ ಕೃತಿಗಳು ರೋಗಾನುಭವ ಅಥವಾ ಸಾವನ್ನು ಗೆದ್ದ ವಿಷಯವನ್ನೇ ಕೇಂದ್ರೀಕರಿಸುತ್ತವೇ ಹೊರತು ಅನಾರೋಗ್ಯದ ಕಾರಣಕ್ಕಾಗಿ ನಮ್ಮ ಸುತ್ತಲಿನ ರೋಗಕೇಂದ್ರಿತ ಮನೋಭಾವನೆಯನ್ನು ಕೇಂದ್ರೀಕರಿಸುವುದಿಲ್ಲ.
ಈ ಕಾರಣಕ್ಕಾಗಿ ರೋಗಿ ಯಲ್ಲದ ರೋಗಿಯೊಟ್ಟಿಗೆ ಇದ್ದ ಕನ್ನಡದ ಕಥೆಗಾರ್ತಿಯೊಬ್ಬಳ ಜೀವನಾನುಭವ ಅನೇಕ ಕಾರಣಗಳಿಗಾಗಿ ಮುಖ್ಯವಾಗುತ್ತದೆ. ಇಲ್ಲಿ ಕರಾವಳಿಯ ಮನುಷ್ಯರಿಗೆ ಅಂಟಿದ, ಅವರಿಗೆ ಚಿಕಿತ್ಸೆ ಕೊಡುವ ವೈದ್ಯರಿಗೆ ಅಂಟಿದ ಬೇರೆ ಬೇರೆ ಮನೋರೋಗಗಳ ಬಗ್ಗೆ ವಿಶ್ಲೇಷಣೆ ಇದೆ. ಖಂಡಿತ ಇದು ಅಮ್ಮನ ಬಗ್ಗೆ ಕೇವಲ ಆ ಹೊತ್ತಿನ ಲೇಖಕಿಯ ಭಾವನೆಗಳಲ್ಲ. ಆ ಕ್ಷಣಕ್ಕೆ ಮರೆತು ಬಿಡಬಹುದಾಗಿದ್ದ ಹಿಂದಿನ ಘಟನೆಗಳು ಮತ್ತೆ ಕಥೆಗಾರ್ತಿಯೊಳಗಡೆ ಈಗ ಹೆಪ್ಪುಗಟ್ಟಿದ್ದಕ್ಕೆ ಕಾರಣಗಳೇನು ಅನ್ನುವುದನ್ನು ಇಲ್ಲಿಯ ವರ್ತಮಾನದ ಕೋಮುವಾದ, ಅಸಾಮರಸ್ಯದ ಹಿನ್ನೆಲೆಯಲ್ಲೇ ವಿಶ್ಲೇಷಿಸಬೇಕು.
ನೆನಪಿನ ತುಣುಕುಗಳನ್ನು ಒಂದೂವರೆ ದಶಕದ ನಂತರ ಕಥನವಾಗಿಸುವಾಗ ಈಗಿನ ಕರಾವಳಿ ಕಥೆಗಾರ್ತಿಗೆ ಕಾಡಿ ಕಾಡಿ ನೆರವಾಗಿದೆ. ಇದೊಂದು ರೀತಿ ಸಾವನ್ನು ನೋಡಿದ ಬುದ್ಧನೊಳಗಡೆ ಸೃಷ್ಟಿಯಾಗುವ ತಲ್ಲಣದ ಹಾಗೆಯೇ. ಆಗ ಕಥೆಗಾರ್ತಿಯಾಗಿಲ್ಲದ ಬಾಲಕಿಯೂಬ್ಬಳಲ್ಲಿ ಅಂದಿನ ನೋವು, ವಿಷಾದದ ಎಳೆಗಳು, ಉತ್ತರ ಸಿಗದ ಪ್ರಶ್ನೆಗಳು, ಸರಿಪಡಿಸಲಾಗದ ನ್ಯಾಯಗಳು ಕೆನೆಕಟ್ಟಿ ಕಥನವಾಗಿದೆ, ಕಥೆಯೂ ಆಗಿದೆ, ಕಾದಂಬರಿಯೂ ಆಗಿದೆ.!
ತಾಯಿಯ ದೇಹದ ಒಳಗಡೆ ನುಗ್ಗುವ ಕೀಮೋ ಕ್ಯಾನ್ಸರ್ ಹರಡುವ ಜೀವಾಣುಗಳನ್ನು ನುಗ್ಗಿ ನುಗ್ಗಿ ಹೊಡೆದು ಸಾಯಿಸುವಂತೆ ಮತೀಯವಾದ, ಸ್ವ ಸಮುದಾಯದಲ್ಲಿನ ಸ್ತ್ರೀ ಶೋಷಣೆ, ಮೌಢ್ಯ, ಅಜ್ಞಾನದ ಕಣಗಳನ್ನು ಹುಡುಕಿ ಸಾಯಿಸುವ ಪವಾಡಸದೃಶ ಜೀವವಾದಿ ಜೀವಾಣು ಸೃಷ್ಟಿಯಾದೀತೇ ಎಂಬ ನಿರೀಕ್ಷೆ ಈ ಕಥೆಗಾರ್ತಿಯದ್ದು. ತಾಯಿಯೊಟ್ಟಿಗೆ ಉಳಿಯುವ ವೀಕ್ಷಕ ಮನಸ್ಸೊಂದು ಆಸ್ಪತ್ರೆಯಲ್ಲಿ ಗಮನಿಸುವ ವೇದನೆ ಅಸಹಾಯಕತೆಗಳು, ಕೇಡು ಕುಟಿಲತೆಗಳನ್ನು ಸಾಧ್ಯಂತವಾಗಿ ಈ ಕೃತಿ ಅನಾವರಣಗೊಳಿಸುತ್ತದೆ.
ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಮತ್ತು ಆನಂತರ ಆರು ಸಲ ಅಮ್ಮನಿಗೆ ಆಗುವ ಕೀಮೋ ಥೆರಪಿ ಸಮಯದಲ್ಲಿ ಆಸ್ಪತ್ರೆಯೊಳಗಿನ ಸಂಬಂಧ, ರೋಗಿ ವೈದ್ಯರ ಸಂಬಂಧ, ರೋಗಿ ರೋಗಿಗಳ ಸಂಬಂಧ, ಆಸರೆಯಾಗಿ ಬಂದವರ ನಡುವಿನ ಸಂಬಂಧ, ಮಾನವೀಯತೆ, ವ್ಯತ್ಯಾಸ, ಅಸಹನೆ-ಸಹಾನುಭೂತಿ ಎಲ್ಲವನ್ನೂ ಈ ಕೃತಿ ಗಮನಿಸುತ್ತದೆ. ಇದು ಒಂದು ರೋಗದ ಅನುಭಾವಿ ಕೇಂದ್ರಿತ ಬರಹವಾಗಿರದೆ ಸಾಂತ್ವನ ಕೇಂದ್ರಿತ ಬರಹವೂ ಆಗಿದೆ. ಸಾಮಾನ್ಯವಾಗಿ ವೈದ್ಯಕೀಯ ಬರಹಗಳಲ್ಲಿ ವೈದ್ಯ ಅಥವಾ ಪೀಡಿತ ವ್ಯಕ್ತಿ ಕಥೆ ಹೇಳುತ್ತಾರೆ. ಆದರೆ ಒಡನಾಡಿ, ಸಾಕ್ಷಿಯಾಗಿರುವ ಮಗಳ ಭಾವನೆಯ ಕಣ್ಣುಗಳಿಂದ ನೋಡುವುದು ಕನ್ನಡಕ್ಕೊಂದು ಹೊಸ ಹಾದಿ.
ಇಡೀ ಕೃತಿಯ ನಾಯಕಿ ರಲಿಯಾರ ಅಮ್ಮ. ಆ ಕಾಲಕ್ಕೆ ಕ್ರಾಂತಿಕಾರಿಯೇ. ಎರಡು ಮಕ್ಕಳ ತಾಯಿಯಾಗಿ ಅದರಲ್ಲೂ ಹೆಣ್ಣು ಮಗಳೊಬ್ಬಳನ್ನು ಓದಿಸಲೇಬೇಕೇನ್ನುವ ಹಠವಾದಿ. ಅದಕ್ಕಾಗಿ ಸಕುಟುಂಬಿಕರಿಂದ, ಸಮಾಜದಿಂದ ಎದುರಿಸುವ ಸವಾಲು, ಸಂದೇಹ, ಅನುಮಾನಗಳು ಇವೆಲ್ಲವನ್ನೂ ಧಿಕ್ಕರಿಸುವ ಕ್ರಮ ಮಾದರಿಯಾದದ್ದು. ಈ ಅನುಭವ ಕಥನದ ಕೇಂದ್ರದಲ್ಲಿ ನಿಲ್ಲುವ ಈ ಅಮ್ಮ ಆ ಇಡೀ ಸಮುದಾಯಕ್ಕೆ ಮಾದರಿ ಎಂಬುವುದನ್ನು ಸ್ವೀಕರಿಸಿದಾಗ ಮಾತ್ರ ಈ ಅನುಭವ ಕಥನ ಮುಖ್ಯವಾಗುತ್ತದೆ.
‘‘ನಮ್ಮ ಸಂಬಂಧಿಕರೊಬ್ಬರು ಅಮ್ಮನಿಗೆ ಕ್ಯಾನ್ಸರ್ ಬಂದಿರುವುದು ಗೊತ್ತಾದಾಗ ‘ಮಗಳು ರಲಿಯಾಗೆ ಇನ್ನು ಕಾಲೇಜಿಗೆ ಹೋಗುವುದಕ್ಕೆ ಆಗಲ್ಲ ಅಲ್ವಾ?’ ಎಂದು ಮೊದಲ ಪ್ರತಿಕ್ರಿಯೆ ನೀಡಿದ್ದರು. ಆ ಕ್ಷಣಕ್ಕೆ ಎಲ್ಲವನ್ನು ಮೀರಿ ನಾನು ಕಾಲೇಜು ಹೋಗದೆ ಇರುವುದೇ ತುಂಬಾ ಮುಖ್ಯ ಹೇಗಾಯಿತು ಅನ್ನೋದು ನನಗೆ ಅರ್ಥವಾಗಿರಲಿಲ್ಲ. ನಮ್ಮಲ್ಲಿ ಎಂತೆಂಥ ವಿಘ್ನ ಸಂತೋಷಿಗಳಿದ್ದಾರೆ ಎಂದರೆ ಈ ಕಾರಣದಿಂದಾದರೂ ನನ್ನ ಓದು ನಿಲ್ಲಲಿ ಎಂದು ಬಯಸಿದ್ದರು ಎಂಬುದನ್ನು ನೆನೆಸಿಕೊಳ್ಳುವಾಗಲೇ ಅಸಹ್ಯವಾಗುತ್ತಿತ್ತು.’’
‘‘ಇಡೀ ಕುಟುಂಬದಲ್ಲಿ ಎಸೆಸೆಲ್ಸಿ ಪಾಸಾದ ಮೊದಲ ಹೆಣ್ಣು ಈ ಕಥೆಗಾರ್ತಿಯೇ. ಮಗಳು ಎಂಬಿಎ ಓದುವವರೆಗೆ ಅಮ್ಮ ಎದುರಿಸಿದ ಅವಮಾನ ಅವಹೇಳನದ ಮಾತುಗಳಿಗೆ ಲೆಕ್ಕವೇ ಇಲ್ಲ. ಪಿಯುಸಿ ಹಂತದಲ್ಲಿ ಅಮ್ಮನೊಟ್ಟಿಗೆ ಆಸ್ಪತ್ರೆಯಲ್ಲಿ ಇರಬೇಕಾದ ಕಾರಣಕ್ಕೆ ನೀಟ್ ಪರೀಕ್ಷೆ ಬರೆಯಲಾಗದ ಈ ಹುಡುಗಿ ಡಾಕ್ಟರ್ ಆಗದೆ ಕಥೆಗಾರ್ತಿಯಾಗಿ ಒದಗಿದ್ದು ಕನ್ನಡದ ಪುಣ್ಯವೇ ಆದರೂ, ಈ ಅನುಭವ ಕಥನದ ಅಂಗಾಂಗ ಸೂಕ್ಷ್ಮತೆಗಳನ್ನು ಗಮನಿಸಿದರೆ ಈಕೆ ಮೆಡಿಕಲ್ ಸೈನ್ಸ್ ಓದಿದ್ದರೆ ಒಳ್ಳೆಯ ವೈದ್ಯರಾಗುತ್ತಿದ್ದದ್ದು ಮಾತ್ರ ಸತ್ಯ.!
ಅಮ್ಮ ಇನ್ನೂ ಸರ್ಜರಿಗಾಗಿ ಮಲಗಿರುವಾಗಲೇ ಅಪ್ಪನಲ್ಲಿ ‘‘ನಿಮಗಿನ್ನೊಂದು ಮದುವೆಯಾಗ ಬಹುದಲ್ಲ, ಇನ್ನೂ ವಯಸ್ಸಿದೆ, ಒಳ್ಳೆಯ ಹುಡುಗಿಯನ್ನು ನಾನು ನೋಡುತ್ತೇನೆ’’ ಎಂದು ಗೊತ್ತಿದ್ದವರೇ ಆಸರೆಯಾಗಿ ನಿಂತವಳ ಸಮ್ಮುಖದಲ್ಲಿ ಅಂದಾಗ ಈ ಮಗುವಿನ ಆತ್ಮವಿಶ್ವಾಸವೇ ಸಾಯುವ ಪರಿ, ಮಾರಕ ಕಾಯಿಲೆಯೊಂದು ಕುಟುಂಬ ವೊಂದರಲ್ಲಿ ಮನುಷ್ಯನ ಸಂಬಂಧವನ್ನು ಮರು ವ್ಯಾಖ್ಯಾನಗೊಳಿಸುವ, ಬದುಕಿನ ಅನಿಶ್ಚಿತತೆಯನ್ನು ಎದುರಿಸಲು ಕಲಿಸುವ ಸನ್ನಿವೇಶ ಸಂದರ್ಭವಾಗುವ ಅಂತಃಕರಣದ ಭಾವಪೂರ್ಣ ವಿಶ್ಲೇಷಣೆ ಇಲ್ಲಿಯದು. ‘‘ಕ್ಯಾನ್ಸರ್ ರೋಗಿಗಳಿಗೆ ಮತ್ತವರ ಮನೆಯವರಿಗೆ ಖಂಡಿತವಾಗಿಯೂ ಇಂತಹ ಸಂದರ್ಭದಲ್ಲಿ ಕರುಣೆ, ಕುತೂಹಲ ಮತ್ತು ಅತಿ ಕಾಳಜಿಗಿಂತ ಆ ಅಸಹಾಯಕತೆಯ ಸ್ಥಿತಿಯಲ್ಲಿ ಬೇಕಾಗಿರುವುದು ಒಂದು ಹಿತವಾದ ಮೌನವನ್ನು ಅವರ ಖಾಸಗಿ ಕ್ಷಣಗಳಿಗೆ ಧಕ್ಕೆಯಾಗದಂತೆ ಒಂದು ಸಣ್ಣ ಸ್ಪೇಸ್ ಅನ್ನು ನೀಡುವುದು, ಇಷ್ಟು ಮಾಡಿಕೊಟ್ಟರೆ ಅವರ ಬದುಕನ್ನು ಅವರೇ ಚಂದ ಕಟ್ಟಿಕೊಳ್ಳುತ್ತಾರೆ’’ ಎನ್ನುತ್ತಾರೆ ಲೇಖಕಿ.
ಬದುಕಿನಲ್ಲಿ ನಡೆಯುವಂತಹ ಅನಿರೀಕ್ಷಿತ ಘಟನೆಗಳು ತಿರುವುಗಳೇ ರಲಿಯಾ ಅವರ ಕಥಾ ವಸ್ತುಗಳು ಕೂಡ. ಕಥೆಗಳಲ್ಲಿ ವಾಸ್ತವತೆ ಇದ್ದಾಗ ಅದು ಜನರನ್ನು ಬಹಳ ಬೇಗ ತಲುಪುತ್ತದೆ. ಬೇರೆಯವರ ಜೀವನದಲ್ಲಿ ನಡೆದ ಸತ್ಯ ಸಂಗತಿಗಳನ್ನು ಕೇಳಿದ, ನೋಡಿದ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ರಲಿಯಾ ಕಥೆ ಹೇಳುತ್ತಾರೆ. ಈ ಕಾರಣಕ್ಕಾಗಿಯೇ ಓದುಗ ‘ಕೀಮೋ’ವನ್ನು ಒಂದು ನೀಳ್ಗತೆ, ಕಾದಂಬರಿ ಎಂದು ಭಾವಿಸುವ ಸಾಧ್ಯತೆಯೂ ಇದೆ.ತಾಯಿಯ ನೋವು-ಸಹನೆಯ ಸಾಕ್ಷಿಯಾಗಿದ್ದ ಮಗಳ ಕಣ್ಣುಗಳ ಮೂಲಕ ಬರೆದ ಈ ಕಥನ, ವೈದ್ಯಕೀಯ ವರದಿಗಿಂತ ಆಳವಾದ ಮಾನವೀಯತೆಯ ದಾಖಲೆ. ಕುಟುಂಬಕ್ಕೆ ಧೈರ್ಯ, ಹೆಣ್ಣುಮಗಳ ಶಿಕ್ಷಣದ ಹೋರಾಟ, ಸಮುದಾಯದ ಮೌಢ್ಯಗಳ ವಿರುದ್ಧದ ಪ್ರತಿರೋಧ ಎಲ್ಲವು ಸೇರಿ ಈ ಕೃತಿಯನ್ನು ಕನ್ನಡದಲ್ಲಿ ವಿಭಿನ್ನ ಅನುಭವ ಬರಹವನ್ನಾಗಿಸಿದೆ.
ನೋವನ್ನು ಶಕ್ತಿಯನ್ನಾಗಿ, ಬದುಕಿನ ಅನಿಶ್ಚಿತತೆಯನ್ನು ಅರಿವನ್ನಾಗಿ ಪರಿವರ್ತಿಸಿರುವ ಈ ಕಥನ, ಓದುಗರನ್ನು ಹಗುರಗೊಳಿಸುವಷ್ಟು ಪ್ರಾಮಾಣಿಕವಾಗಿದೆ.
ಪುಸ್ತಕದ ಮುಖಪುಟದಲ್ಲಿ ಅಥವಾ ಕೊನೆಯ ಪುಟದಲ್ಲಿ ಕೃತಿಗಾರ್ತಿಯ ಕ್ರಾಂತಿಕಾರಿ ತಾಯಿಯ ಸಹಜ ಭಾವಚಿತ್ರ ಒಂದಿದ್ದರೆ ಪುಸ್ತಕ ಇನ್ನೂ ಅರ್ಥಪೂರ್ಣವಾಗುತ್ತಿತ್ತು. (ಜೀರುಂಡೆ ಪ್ರಕಾಶನ 9742225779)