Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಭೂಮಿಕೆ
  5. ಗೊಬ್ಬರದ ಅಂಗಡಿಯ ಮುಂದೆ ಕ್ಯೂ ನಿಂತ ರೈತ...

ಗೊಬ್ಬರದ ಅಂಗಡಿಯ ಮುಂದೆ ಕ್ಯೂ ನಿಂತ ರೈತ ಮತ್ತು ಯೂರಿಯಾ ವ್ಯಥೆ!

ನರೇಂದ್ರ ರೈ ದೇರ್ಲನರೇಂದ್ರ ರೈ ದೇರ್ಲ10 Aug 2025 10:21 AM IST
share
ಗೊಬ್ಬರದ ಅಂಗಡಿಯ ಮುಂದೆ ಕ್ಯೂ ನಿಂತ ರೈತ ಮತ್ತು ಯೂರಿಯಾ ವ್ಯಥೆ!

ಭೂಮಿಗೆ ಯಾವುದೇ ರಾಸಾಯನಿಕ ಕೀಟನಾಶಕಗಳ ವಿಷಕಂಟಕಗಳ ಪ್ರಯೋಗಗಳನ್ನು ಮಾಡದೆ ತಾವೇ ಸ್ವಯಂ ಸೃಷ್ಟಿಸಿದ ಅಥವಾ ಪರಂಪರಾಗತ ಸಾವಯವ ಚೋದಕ ಗೊಬ್ಬರ ಮತ್ತು ಜೈವಿಕ ಕ್ರಿಮಿನಾಶಕಗಳನ್ನು ಬಳಸಿಕೊಂಡು ಅದ್ಭುತವಾದುದನ್ನು ಸಾಧಿಸಿದ ರೈತರು ಇದ್ದಾರೆ. ಕಾಂಪೋಸ್ಟ್, ಎರೆ ಗೊಬ್ಬರ, ಹಟ್ಟಿಗೊಬ್ಬರ, ಕಾಡು ಸೊಪ್ಪು, ಬೂದಿ, ಸುಡುಮಣ್ಣು, ಬೇವು, ಹರಳಿಂಡಿ, ಜೀವಾಮೃತ, ಬೇವಿನ ಎಣ್ಣೆ.. ಹೀಗೆ ಭೂಮಿಗೆ ಅಪಾಯಕಾರಿ ಅಲ್ಲದ ಗೊಬ್ಬರಗಳನ್ನು ತಮ್ಮ ಕೃಷಿ ಆವರಣದ ಒಳಗಡೆಯೇ ತಯಾರಿಸಿಕೊಳ್ಳುವ ರೈತರಿಗೆ ನಮ್ಮ ಪ್ರಭುತ್ವ ಎಷ್ಟು ಬೆಂಬಲವಾಗಿ ನಿಂತಿದೆ ಎನ್ನುವುದನ್ನು ಗಮನಿಸಬೇಕು.

ಬಯಲುಸೀಮೆಯ ಯಾವುದೇ ಊರಿರಬಹುದು, ಸಂತೆ ದಿನ ನಗರದಿಂದ ಹಳ್ಳಿಗಳಿಗೆ ತೆರಳುವ ಯಾವುದಾದರೂ ಕೆಂಪು ಬಸ್ಸು ಹತ್ತಿ ನೋಡಿ. ನಿಮಗಲ್ಲಿ ವಿಚಿತ್ರವಾದ ಅನುಭವಗಳಾ ಗುತ್ತವೆ. ಮನುಷ್ಯರು ಕೂರುವ ಸೀಟು ಮೇಲೆ ಒಂದೆರಡಾದರೂ ರಾಸಾಯನಿಕ ಗೊಬ್ಬರಗಳ ಚೀಲಗಳು ಕೂತಿರುತ್ತವೆ. ಸಂತೆಗೆಂದು ನಗರಕ್ಕೆ ಬಂದು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ ರೈತರು ವಾಪಸ್ ಊರಿಗೆ ಹೊರಟಾಗ ಒಂದೆರಡು ಚೀಲ ಗೊಬ್ಬರ ಖರೀದಿಸುವುದಂತೂ ಗ್ಯಾರಂಟಿ. ಮಳೆಗಾಲದಲ್ಲಂತೂ ಈ ದೃಶ್ಯ ನಿಮಗೆ ಸಾಮಾನ್ಯ. ತಲೆಹೊರೆಯಾಗಿ ಗೊಬ್ಬರ ಹೊತ್ತು ಚೀಲ ಸಮೇತ ಬಸ್ಸಿನೊಳಗಡೆ ತೂರಿಕೊಂಡು ನೇರವಾಗಿ ಆ ರಾಸಾಯನಿಕ ಗೊಬ್ಬರವನ್ನು ಸೀಟು ಮೇಲೆಯೇ ಏರಿಸುತ್ತಾರೆ!. ಬಹುತೇಕ ಆ ಚೀಲ ೫೦ ಕೆಜಿಯ ಯೂರಿಯಾವೇ ಆಗಿರುತ್ತದೆ!

ಈಗ ನಿಮಗೆ ನಾನು ಅದೇ ರೈತನ ಹಳ್ಳಿ ಮನೆ ಮುಂದಿನ ದೃಶ್ಯ ತೋರಿಸ್ತೇನೆ, ಬಯಲು ಸೀಮೆಗಳಲ್ಲಿ ಮನೆಗಳಿರುವುದು ಒಂದೇ ಕಡೆ. ಮಲೆನಾಡು, ಕರಾವಳಿಯ ಹಾಗಲ್ಲ. ಹೊಲ ಗದ್ದೆಗಳೆಲ್ಲ ನಾಲ್ಕೈದು ಮೈಲು ದೂರದಲ್ಲಿ ಇದ್ದರೆ ಮನೆಗಳೆಲ್ಲ ಒಂದೇ ಕಡೆ ಇರುತ್ತವೆ. ಇಂಥ ಒಂದೇ ಕಡೆ ಮನೆಗಳಿರುವ ಬೀದಿಯಲ್ಲಿ ಒಂದಷ್ಟು ತಿಪ್ಪೆ ಗುಂಡಿಗಳಿರುತ್ತವೆ. ಮನೆ ಎದುರೇ ಕಟ್ಟಿದ ಹಸುರಾಸುಗಳ ಸೆಗಣಿಯನ್ನು ಮನೆ ಹೆಂಗಸರು ಬೆಳಗಿನ ಹೊತ್ತು ಬಾಚಿ ಹತ್ತು ಮಾರು ದೂರ ಹೋಗಿ ಅಥವಾ ಕೆಲವೊಮ್ಮೆ ಮನೆಯ ಎದುರುಗಡೆಯೇ ರಸ್ತೆ ಅಂಚಿನಲ್ಲಿ ಒಂದೇ ಕಡೆ ರಾಚುತ್ತಾರೆ. ಕೆಲವೊಮ್ಮೆ ಎರಡು ಮೂರು ವರ್ಷದ ಗೊಬ್ಬರ ಒಂದೇ ಕಡೆ ಸೇರಿ ಸೇರಿ ದೊಡ್ಡ ಗುಡ್ಡೆಯೇ ಆಗಿರುತ್ತದೆ. ಬರೀ ಹಸು-ರಾಸುಗಳ ಸೆಗಣಿಯಷ್ಟೇ ಅಲ್ಲ, ಆಡಿನ ಹಿಕ್ಕೆ, ಕೋಳಿ ಹಿಕ್ಕೆ, ಕೆಲವೊಮ್ಮೆ ಮನೆಯೊಳಗಡೆಯ ಒಲೆಯ ಬೂದಿ, ತರಕಾರಿ ಹಚ್ಚಿ ಉಳಿದ ಕಸಮಸ, ತೆಂಗಿನ ಸಿಪ್ಪೆ, ಅಡಿಕೆ ತಿಪ್ಪೆ ಎಲ್ಲವೂ ಆ ತಿಪ್ಪೇ ರಾಶಿಯಲ್ಲಿ ಸಂಗಮಗೊಂಡು ಬೆಟ್ಟದಂತೆ ಬಿದ್ದಿರುತ್ತವೆ.

ಕೆಲವೊಮ್ಮೆ ಮನೆಯೊಡತಿ ಅದೇ ರಾಶಿಗೆ ಬಿಸಾಡಿದ ತರಕಾರಿ ಬೀಜಗಳು ಅಲ್ಲೇ ಹುಟ್ಟಿಕೊಂಡು ಮನೆ ಮುಂದಿನ ಬೇಲಿಗೆ ಹಬ್ಬಿ ಮನೆಮಾಡಿಗೆ ಹತ್ತಿ ನಾಡ ಹಂಚಿನ ಮನೆ ತುಂಬಾ ತರಕಾರಿ ಸುರಿದದ್ದೂ ಇದೆ.

ಮಲೆನಾಡು, ಕರಾವಳಿಯ ಕೃಷಿ ಮನಸ್ಸಿನ ಮಂದಿ ಅಪರೂಪಕ್ಕೊಮ್ಮೆ ಬಯಲು ಸೀಮೆಯ ಇಂತಹ ರಾಜರಸ್ತೆಯ ಮೇಲೆ ಓಡಾಡುವಾಗಲೆಲ್ಲ ಇಂಥ ತಿಪ್ಪೇರಾಶಿಯ ಮೇಲೆ ಕಣ್ಣು ಬೀಳದೆ ಇರುವುದಿಲ್ಲ. ಯಾಕೆಂದರೆ ಈ ಭಾಗದಲ್ಲಿ ಈ ರೀತಿ ಸುಲಭ ಗೋಚರ ಗೊಬ್ಬರ ಸಮೃದ್ಧಿ ಕಾಣಿಸುವುದೇ ಇಲ್ಲ.

ಇಷ್ಟೊಂದು ಪ್ರಮಾಣದಲ್ಲಿ ಸುಲಭ ಸಾರ ಸಾವಯವ ಗೊಬ್ಬರವಿದ್ದರೂ ಎಷ್ಟೋ ಬಾರಿ ಘಟ್ಟದ ಮೇಲಿನ ರೈತರು ಒಂದು ಮೂಟೆ ಗೊಬ್ಬರವನ್ನು ಬಗಲು ಹೆಗಲು ಸೊಂಟ ಇಲ್ಲೆಲ್ಲ ಏರಿಕೊಂಡು ಮುದ್ದಿಸಿಕೊಂಡು ಅದಿಲ್ಲದಿದ್ದರೆ ನಮ್ಮ ಕೃಷಿಯೇ ಇಲ್ಲ ಬೆಳೆಯೇ ಇಲ್ಲ ಎನ್ನುವ ರೀತಿಯಲ್ಲಿ ಹಳ್ಳಿಗೊಯ್ಯುವಾಗ ಪರಮಾಶ್ಚರ್ಯವಾಗುತ್ತದೆ. ಬಸ್ ಒಳಗಡೆ ಇಡಲು ಜಾಗವಿಲ್ಲದೆ ತನ್ನ ಸೀಟಲ್ಲೇ ಗೊಬ್ಬರಕ್ಕೆ ಸೀಟು ಬಿಟ್ಟುಕೊಟ್ಟು ನಿಂತೇ ಪ್ರಯಾಣಿಸುವ ರೈತರನ್ನು ನಾನು ಅಲ್ಲಿ ಕಣ್ಣಾರೆ ಕಂಡಿದ್ದೇನೆ. ಪ್ರಶ್ನಿಸುವ ಕಂಡಕ್ಟರ್‌ಗೆ ದಬಾಯಿಸುವ ರೈತರೂ ಇದ್ದಾರೆ.

ಯೂರಿಯಾ ಎಂಬ ಒಳಸುರಿ ಇಲ್ಲದೆ ಕೃಷಿ ಅಸಾಧ್ಯ ಎನ್ನುವ ಪರಿಕಲ್ಪನೆ ಈ ಭಾಗದ ರೈತರಿಗೆ ಹುಟ್ಟಿರುವ ಈ ಕಾರಣಕ್ಕಾಗಿಯೇ ಮಧ್ಯರಾತ್ರಿ ಎದ್ದು ಬಂದು ಗೊಬ್ಬರದಂಗಡಿಯ ಮುಂದೆ ಸಾಲು ನಿಲ್ಲುವ ಪರಿಸ್ಥಿತಿ ಸೃಷ್ಟಿಯಾಗಿದೆ. ಒಬ್ಬ ರೈತನಂತೂ ‘‘ಯೂರಿಯಾ ಕೊಡಿ, ಇಲ್ಲ ಮಣ್ಣು ತಿನ್ನುತ್ತೇನೆ’’ ಎಂದು ತಿಂದೂ ಆಯಿತು. ಈ ಯೂರಿಯಾ ಅಂಟು ಮನಸ್ಥಿತಿ ತಂದೆಯಿಂದ ಮಗನಿಗೆ, ಅವನಿಂದ ಅವನ ಮಗನಿಗೆ, ವಂಶವಾಹಿನಿಯಾಗಿ ಹರಿದು ಬಂದ ಪರಂಪರಾಗತ ಚೋದಕ ಪೀಡೆಯಾಗಿದೆ.

ಎಣ್ಣೆ( ಕ್ರಿಮಿನಾಶಕ) ಮತ್ತು ಯೂರಿಯಾ ಇವೆರಡನ್ನು ಬೀಜ ಮಣ್ಣಿಗಿಂತಲೂ ಹೆಚ್ಚು ಪ್ರೀತಿಸುವ ಬಯಲೂರ ಮನಸ್ಥಿತಿಯನ್ನು ಸದ್ಯ ಬದಲಾಯಿಸುವ ಸ್ಥಿತಿ ಅವರನ್ನಾಳುವ ಸರಕಾರಕ್ಕೂ ಇಲ್ಲ. ಈ ಕಾರಣಕ್ಕಾಗಿಯೇ ಗೊಬ್ಬರ ಸಂಘರ್ಷ ಪ್ರತೀ ಮುಂಗಾರು ಹಂಗಾಮಿನಲ್ಲಿ ಬಿಡದೆ ಕಾಡುವ ಹೋರಾಟವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಈ ವರ್ಷ ಮಾತ್ರ ಇದು ತಾರಕಕ್ಕೇರಿತು.

ಅವನ ಹೆಸರು ಜಾನ್ ಅಗಸ್ಟಿನ್ ಎಂದಿರಬೇಕು, ಇಂಗ್ಲೆಂಡ್ ಸರಕಾರದ ಸೂಚನೆಯ ಪ್ರಕಾರ ಅವರ ಆಳ್ವಿಕೆಯಲ್ಲಿದ್ದ ಭಾರತದ ಉದ್ದಗಲಕ್ಕೂ ಸಂಚರಿಸಿ ಈ ದೇಶದ ಕೃಷಿ ನಂಬಿಕೆ ಪದ್ಧತಿಗಳ ಬಗ್ಗೆ ಒಂದು ಗಂಭೀರ ಅಧ್ಯಯನ ಮಾಡುತ್ತಾನೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಓಡಾಡಿದ ಜಾನ್ ಇಲ್ಲಿಯ ನೆಲದವರು ಶತ ಶತಮಾನಗಳಿಂದ ಆಚರಿಸಿಕೊಂಡು ಬಂದ ಕೃಷಿ ಸೂಕ್ಷ್ಮಗಳನ್ನು ಬೆರಗಿನಿಂದಲೇ ಗಮನಿಸುತ್ತಾನೆ. ಕೊನೆಗೆ ಆತ ಆಂಗ್ಲ ಸರಕಾರಕ್ಕೆ ಒಪ್ಪಿಸುವ ವರದಿಯಲ್ಲಿ ಬಹಳ ಮಹತ್ವದ ವಾಕ್ಯವೊಂದನ್ನು ದಾಖಲಿಸುತ್ತಾನೆ.

‘‘ಇಂಗ್ಲೆಂಡ್‌ನ ನಿರೀಕ್ಷೆಯಂತೆ ಭಾರತದ ಕೃಷಿಯನ್ನು ಬದಲಾಯಿಸುವ ಯಾವ ಅಗತ್ಯವೂ ಇಲ್ಲ. ಬದಲಾಯಿಸುವುದಾದರೆ ಇಂಗ್ಲೆಂಡ್‌ನ ಕೃಷಿಯನ್ನು ಭಾರತದ ಮಾದರಿಯಲ್ಲಿ ಬದಲಾಯಿಸಬಹುದು.’’ ಎಂದು ಷರಾ ಬರೆದು, ಅದರಡಿಯಲ್ಲಿ ತಾನು ಕಂಡ ಒಂದು ಮಹತ್ವದ ವಿಷಯವನ್ನು ದಾಖಲಿಸುತ್ತಾನೆ. ದಕ್ಷಿಣ ಭಾರತದ ಕೊಪ್ಪಳ್ ಅನ್ನುವ ಪ್ರದೇಶದಲ್ಲಿ (ಈಗಿನ ಕೊಪ್ಪಳ) ರೈತರು ಭೂಮಿಯೊಳಗಡೆ ಸಸ್ಯ ಮತ್ತು ಪ್ರಾಣಿಜನ್ಯ ಗೊಬ್ಬರಗಳನ್ನು ಒಳ ತೂರಿಸಿ ಭೂಮಿಯನ್ನು ಫಲವತ್ತತೆ ಮಾಡುವ ಪದ್ಧತಿಯೊಂದು ಜಾರಿಯಲ್ಲಿದೆ. ಇದು ಒಟ್ಟು ಮಣ್ಣು ಮತ್ತು ಕೃಷಿಯನ್ನು ಸುಸ್ಥಿರವಾಗಿಡುವ ಮತ್ತು ತಾನು ಈವರೆಗೆ ನೋಡದ ಕೃಷಿ ಪದ್ಧತಿ ಎಂದು ಆತ ದಾಖಲಿಸುತ್ತಾನೆ.

ದುರಂತವೆಂದರೆ ಅದೇ ಕೊಪ್ಪಳ ಸೇರಿ ಗಂಗಾವತಿ, ಮಾನ್ವಿ, ರಾಯಚೂರು, ಸಿಂಧನೂರು ಮುಂತಾದ ಪ್ರದೇಶಗಳು ಇವತ್ತು ಇಡೀ ರಾಜ್ಯದಲ್ಲಿ ಅತ್ಯಂತ ಹೆಚ್ಚು ರಾಸಾಯನಿಕಗಳನ್ನು ಬಳಸುತ್ತಿವೆ. ಇಲ್ಲಿರುವಷ್ಟು ಎಣ್ಣೆ ಮತ್ತು ರಾಸಾಯನಿಕ ಗೊಬ್ಬರಗಳನ್ನು ಮಾರುವ ಅಂಗಡಿಗಳು ಬಹುಷಃ ನಮ್ಮ ರಾಜ್ಯದ ಬೇರೆ ಕಡೆ ಇರಲು ಸಾಧ್ಯವಿಲ್ಲವೇನೊ. ಆಂಧ್ರದ ರೈತರು ಈ ಭಾಗದಲ್ಲಿ ಭೂಮಿಯನ್ನು ಖರೀದಿಸಿ, ಕೆಲವೊಂದು ಕಡೆಗೆ ಲೀಸಿಗೆ ಪಡೆದು ಗರಿಷ್ಠ ಪ್ರಮಾಣದಲ್ಲಿ ಸೋನಾ ಮಸೂರಿಯಂಥ ಭತ್ತವನ್ನು ಬೆಳೆಸುತ್ತಿದ್ದಾರೆ. ಇವುಗಳಿಗಾಗಿ ಲೋಡು ಲೋಡು ರಾಸಾಯನಿಕಗಳನ್ನು ಭೂಮಿಗೆ ಚೆಲ್ಲಲಾಗುತ್ತದೆ. ಇದನ್ನೇ ಮಾದರಿ ಎಂದು ತಿಳಿದ ಅನೇಕ ಸ್ಥಳೀಯ ಸಣ್ಣ ರೈತರು ಕೂಡ ರಾಸಾಯನಿಕಗಳಿಲ್ಲದೆ ಭತ್ತವಾಗಲೀ, ಇನ್ನಿತರ ಯಾವುದೇ ಕೃಷಿಯಾಗಲೀ ಅಸಾಧ್ಯ ಎಂಬ ಪೂರ್ವ ಕಲ್ಪಿತ ಯೋಚನೆಯನ್ನು ಮತ್ತಷ್ಟು ಸುಸ್ಥಿರಗೊಳಿಸಿಕೊಂಡಿದ್ದಾರೆ.

ಅಲ್ಪಕಾಲೀನ ಇಲ್ಲಿಯ ಯಾವುದೇ ಕೃಷಿ ಇರಲಿ ರಾಸಾಯನಿಕದ ಮೂಲಕವೇ ಚಿಗುರೊಡೆಯುತ್ತವೆ. ಇವುಗಳ ಮೇಲೆ ನಿರಂತರ ಕೀಟನಾಶಕ ಗೊಬ್ಬರ ಚೆಲ್ಲುವ ರೈತರ ದೇಹಾಂಶದಲ್ಲೂ ಗರಿಷ್ಠ ಪ್ರಮಾಣದಲ್ಲಿ ವಿಷ ಇರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಗರಿಷ್ಠ ಪ್ರಮಾಣದಲ್ಲಿ ಈ ಭಾಗದಲ್ಲಿ ಹಲ್ಲಿನ ಡಾಕ್ಟರ್ ಸೇರಿ ವೈದ್ಯರ ಕ್ಲಿನಿಕ್‌ಗಳು ಹೆಚ್ಚಿವೆ. ನಕಲಿ ಡಾಕ್ಟರ್‌ಗಳಿಗೂ ಕೊರತೆ ಇಲ್ಲ. ಮುಂಜಾನೆಯೇ ಬಾಗಿಲು ತೆರೆದ ಇಂಥ ಕ್ಲಿನಿಕ್‌ಗಳ ಮುಂದೆ ಅಲ್ಲಿ ಕ್ಯೂ ನಿಂತ ರೋಗಿಗಳೇನು ಕಡಿಮೆಯಲ್ಲ.

ಈ ನಡುವೆ ಸಂತೋಷದ ಸಂಗತಿ ಏನೆಂದರೆ ಯೂರಿಯಾ, ಸುಫಲ, ರಾಕ್ ಬಿಟ್ಟು ಯಾವುದೇ ಕೀಟನಾಶಕ- ರಾಸಾಯನಿಕ ಗಳಿಲ್ಲದೆ ಕೃಷಿ ಮಾಡಬಲ್ಲೆವು ಎಂಬುದನ್ನು ತೋರಿಸುವ ಅನೇಕ ಮಾದರಿಗಳು ಇದೇ ಕೊಪ್ಪಳದಲ್ಲಿ ಇರುವುದು.! ಕೊಪ್ಪಳದ ಕಾಮನೂರು ಮಲ್ಲಪ್ಪ, ಲಿಂಗದಹಳ್ಳಿಯ ಅತಿಥಿ ಶಿಕ್ಷಕ ದೇವರಾಜ, ಮೇಟಿ ಸೌಮ್ಯ ಪಾಟೀಲ್- ರಾಜೇಶ್ ಪಾಟೀಲ್ ದಂಪತಿ ಮೊದಲಾದವರೆಲ್ಲ ತಮಗೆ ಸರಕಾರದಿಂದ ಉಚಿತ ಯೂರಿಯಾ ರಾಸಾಯನಿಕ ಗೊಬ್ಬರ ಸಿಕ್ಕರೂ, ನಿರಾಕರಿಸಿ ಪೂರ್ಣ ಸಾವಯವದಿಂದ ಕೃಷಿ ಮಾಡಿ ಸ್ವಾವಲಂಬಿ ಆಗಬಲ್ಲೆವು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ರಾತ್ರಿ ಗೊಬ್ಬರ ಮಾರುವ ಸೊಸೈಟಿ ಅಂಗಡಿಗಳ ಮುಂದೆ ಮಲಗುವ ಯೂರಿಯಾ ಕೊಡಿ ಇಲ್ಲದಿದ್ದರೆ ಮಣ್ಣು ತಿನ್ನುತ್ತೇವೆ ಎಂದು ಪ್ರತಿಭಟಿಸುವ ಇದೇ ಊರಿನ ರಾಸಾಯನಿಕಪ್ರಿಯ ಕೃಷಿಕರಿಗೆ ಮಾದರಿಯಾಗುವ ಇಂತಹ ಅನೇಕ ಸಾವಯವ ಕೃಷಿಕರು ಕೊಪ್ಪಳದಲ್ಲಷ್ಟೇ ಅಲ್ಲ, ಈ ದೇಶದ ಅನೇಕ ರಾಜ್ಯಗಳಲ್ಲಿದ್ದಾರೆ. ಭೂಮಿಗೆ ಯಾವುದೇ ರಾಸಾಯನಿಕ ಕೀಟನಾಶಕಗಳ ವಿಷಕಂಟಕಗಳ ಪ್ರಯೋಗಗಳನ್ನು ಮಾಡದೆ ತಾವೇ ಸ್ವಯಂ ಸೃಷ್ಟಿಸಿದ ಅಥವಾ ಪರಂಪರಾಗತ ಸಾವಯವ ಚೋದಕ ಗೊಬ್ಬರ ಮತ್ತು ಜೈವಿಕ ಕ್ರಿಮಿನಾಶಕಗಳನ್ನು ಬಳಸಿಕೊಂಡು ಅದ್ಭುತವಾದುದನ್ನು ಸಾಧಿಸಿದ ರೈತರು ಇದ್ದಾರೆ. ಕಾಂಪೋಸ್ಟ್, ಎರೆ ಗೊಬ್ಬರ, ಹಟ್ಟಿಗೊಬ್ಬರ, ಕಾಡು ಸೊಪ್ಪು, ಬೂದಿ, ಸುಡುಮಣ್ಣು, ಬೇವು, ಹರಳಿಂಡಿ, ಜೀವಾಮೃತ, ಬೇವಿನ ಎಣ್ಣೆ.. ಹೀಗೆ ಭೂಮಿಗೆ ಅಪಾಯಕಾರಿ ಅಲ್ಲದ ಗೊಬ್ಬರಗಳನ್ನು ತಮ್ಮ ಕೃಷಿ ಆವರಣದ ಒಳಗಡೆಯೇ ತಯಾರಿಸಿಕೊಳ್ಳುವ ರೈತರಿಗೆ ನಮ್ಮ ಪ್ರಭುತ್ವ ಎಷ್ಟು ಬೆಂಬಲವಾಗಿ ನಿಂತಿದೆ ಎನ್ನುವುದನ್ನು ಗಮನಿಸಬೇಕು.

ರಾಸಾಯನಿಕ ಗೊಬ್ಬರಗಳನ್ನು ಉತ್ಪಾದಿಸುವ ರಾಷ್ಟ್ರೀಯ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಕೋಟಿ ಕೋಟಿ ರೂ. ಅನುದಾನಗಳನ್ನು ಕೊಡುವ ಸರಕಾರ ತಮ್ಮ ಮನೆಯಲ್ಲೇ ಪುಟ್ಟ ಪುಟ್ಟ ಸ್ಥಾವರ ಮಾಡಿ ಸಾವಯವ ಗೊಬ್ಬರಗಳನ್ನು ನಿರ್ಮಿಸಿ, ಬಳಸಿ ಭೂಮಿಯನ್ನು ಮುಂದಿನ ತಲೆಮಾರಿಗೆ ಹಾಳಾಗದಂತೆ ಹಸ್ತಾಂತರಿಸುವ ನಿಜದ ನೆಲದವರಿಗೆ ಕೊಡುವ ಅನುದಾನ ಸೊನ್ನೆಯೇ ಸರಿ. ಹಿಂದೆ ಸಾವಯವ ಮಿಷನ್ ನಮ್ಮ ರಾಜ್ಯದಲ್ಲಿ ಜೀವಂತವಿತ್ತು. ಸ್ಥಳೀಯ ಕೃಷಿಕರ ಮಟ್ಟದಲ್ಲಿ ನಡೆಯುವ ಸಾವಯವ ಕೃಷಿ ಚಟುವಟಿಕೆಗೆ ಬೆಂಬಲವಾಗಿ ಅನೇಕ ಪ್ರೋತ್ಸಾಹದಾಯಕ ಯೋಜನೆಗಳನ್ನು ರೂಪಿಸಿತ್ತು. ಆರ್ಥಿಕ ಸಹಾಯ ಸ್ವಲ್ಪ ಕಡಿಮೆ ಇದ್ದರೂ ಜನಜಾಗೃತಿಯನ್ನು ಮೂಡಿಸುವಲ್ಲಿ ಸಾವಯವ ಮಿಷನ್‌ನ ಪಾತ್ರ ತುಂಬಾ ಇತ್ತು. ಆದರೆ ಈಗ ಅದು ಕೂಡ ನಿಷ್ಕ್ರಿಯವಾಗಿದೆ.

‘‘ಗೋವು ಸಾಕಣೆ ಮಾಡುವ ನಮ್ಮ ಕಡೆಯ ಬಹಳಷ್ಟು ರೈತರು ಹೆಚ್ಚಿನ ಹಣದ ಆಸೆಗೆ ತಮ್ಮದೇ ಹಟ್ಟಿಯ ಪ್ರಾಣಿಜನ್ಯ ಸಾವಯವ ಗೊಬ್ಬರವನ್ನು ಮಾರಿ ಮಂತ್ರದಪುಡಿ ಎಂದು ಯೂರಿಯಾ ಖರೀದಿಸುವುದನ್ನು ನಾನು ಗಮನಿಸಿದ್ದೇನೆ. ಹಟ್ಟಿಗೊಬ್ಬರ ದಿಢೀರ್ ಫಲಿತಾಂಶ ನೀಡದೆ ರಾಸಾಯನಿಕಗಳು ಮಾತ್ರ ಕ್ಷಣಕ್ಕೆ ಸುಲಭ ಗೋಚರ ಫಲಿತಾಂಶ ನೀಡುತ್ತದೆ ಎನ್ನುವ ಭ್ರಮೆಯ ಕಾರಣಕ್ಕೆ ರಾಸಾಯನಿಕಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಾರೆ. ಯೂರಿಯಾವನ್ನು ಅತ್ಯಂತ ರಿಯಾಯಿತಿ ದರದಲ್ಲಿ ಸರಕಾರ ವಿತರಿಸುವುದೇ ತಪ್ಪು. ಒಂದು ವೇಳೆ ನೀಡಿದರೂ ಕೂಡ ಅದರ ಬಳಕೆಯ ನಂತರ ಭೂಮಿ ಮತ್ತು ಮನುಷ್ಯರ ಆರೋಗ್ಯದಲ್ಲಿ ಆಗಬಹುದಾದ ಅಪಾಯಗಳ ಕುರಿತು ಸರಕಾರವೇ ರೈತರಿಗೆ ಮನವರಿಕೆ ಮಾಡಬೇಕು’’ ಎನ್ನುತ್ತಾರೆ ಸಾವಯವ ಕೃಷಿಕ ವಸಂತ ಮಾಲವಿ ಅವರು.

ಈ ವರ್ಷ ಈ ಸಮಸ್ಯೆ ಪ್ರತ್ಯೇಕವಾಗಿ ಗಂಭೀರವಾಗಿ ಉದ್ಭವ ವಾಗಲು ಅನೇಕ ಕಾರಣಗಳಿವೆ. ಸಂಗ್ರಹಗಾರದಲ್ಲಿ ಲಭ್ಯವಿದ್ದರೂ ರೈತರಿಗೆ ಸಿಗದ ಸ್ಥಿತಿ, ಕೆಲವೊಮ್ಮೆ ಪುನರ್ವಿತರಣೆಯಲ್ಲಿಯೇ ದೋಷ, ಕಪ್ಪು ಮಾರುಕಟ್ಟೆ, ಮಧ್ಯವರ್ತಿಗಳೇ ಇಟ್ಟುಕೊಳ್ಳುವುದು, ಕಳ್ಳ ದಾರಿಯಲ್ಲಿ ಹೆಚ್ಚಿನ ದರಕ್ಕೆ ಮಾರುತ್ತಿರುವುದು, ಕೆಲವೊಮ್ಮೆ ಬೇರೆ ರಾಜ್ಯಗಳಿಗೆ ನೇರವಾಗಿ ಕಳಿಸಿಕೊಡುವುದು, ಆನ್‌ಲೈನ್ ಟೋಕನ್ ವ್ಯವಸ್ಥೆಯ ದೋಷ, ಕೃಷಿ ಇಲಾಖೆ ಆಧುನಿಕ ತಂತ್ರಜ್ಞಾನವನ್ನು ಬಳಸುವಲ್ಲಿ ವಿಫಲವಾಗಿರುವುದು, ರೈತರಿಗಿರುವ ತಂತ್ರಜ್ಞಾನ ಅರಿವಿನ ಕೊರತೆ, ಫಾರ್ಮ್ ಫಿಲ್ಲಿಂಗ್ ಸಮಸ್ಯೆ ಇವು ಯೂರಿಯಾ ದೊರೆಯದಂತೆ ಮಾಡಿವೆ.

ಮುಂಗಾರಿನ ಬೇಗ ಆಗಮನ, ಅಧಿಕ ಮಳೆ, ಇದರಿಂದ ಕೆಲವೆಡೆ ಗೊಬ್ಬರದ ಬೇಡಿಕೆ ಏರಿದೆ. ಅಕಾಲಿಕ ಬಿತ್ತನೆ ಕಾರ್ಯ ಸಹ ಒತ್ತಡವನ್ನು ಹೆಚ್ಚಿಸಿವೆ. ರಾಜಕೀಯ ನಿರ್ಲಕ್ಷ್ಯವೂ ಒಂದು ಕಾರಣ ಇರಬಹುದು, ಸರಕಾರದ ಮಟ್ಟದಲ್ಲಿ ಪ್ರಾದೇಶಿಕ ಬೇಡಿಕೆ-ಪೂರೈಕೆ ಸಂಯೋಜನೆ ದಾರಿ ತಪ್ಪಿದ್ದು ಮತ್ತು ಅದನ್ನು ಹೊಂದಿಸುವಲ್ಲಿ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯ ಸಹ ಸಮಸ್ಯೆಗೆ ಕಾರಣವಾಗಿವೆ.


share
ನರೇಂದ್ರ ರೈ ದೇರ್ಲ
ನರೇಂದ್ರ ರೈ ದೇರ್ಲ
Next Story
X