ಡಾ. ಚಿನ್ನಪ್ಪ ಗೌಡ - ಸರಳತೆಯೇ ಎತ್ತರ!

ಸವಾಲು ಜವಾಬ್ದಾರಿಗಳು ಬಂದಾಗ ಅದನ್ನು ಅವಕಾಶವೆಂದು ಸ್ವೀಕರಿಸಬೇಕೇ ಹೊರತು ಯಾವುದೇ ಕಾರಣಕ್ಕೂ ತಿರಸ್ಕರಿಸಬಾರದು. ಭುಜದಿಂದ ತಲೆಯವರೆಗೆ ಎತ್ತರಿಸಿಕೊಳ್ಳಬೇಕು. ಕೆಲವೊಂದು ಬುದ್ಧಿಯಿಂದ, ಕೆಲವೊಂದು ಹೃದಯದಿಂದ ನಿಭಾಯಿಸಬೇಕೆನ್ನುವವರು ಗೌಡರು. ಆಡಳಿತದಲ್ಲಿ ಯಾವತ್ತೂ ಬುದ್ಧಿ ವಿಜೃಂಭಿಸುವಷ್ಟು ಹೃದಯ ಸ್ಪಂದಿಸುವುದಿಲ್ಲ ಎಂಬ ಆರೋಪವಿದೆ. ಅಧಿಕಾರ ಚಲಾಯಿಸುವುದೇ ಒಂದು ಹುದ್ದೆಯ ಕಾರ್ಯ ಎಂದು ಅನೇಕರು ಭಾವಿಸುವುದಿದೆ. ಆದರೆ ಚಿನ್ನಪ್ಪ ಗೌಡರು ಹೃದಯವನ್ನು ಅಧಿಕಾರದೊಂದಿಗೆ ಬೆರೆಸಿ ಬಳಸಿದವರು. ಅಂತಃಕರಣದ ಮನಸ್ಥಿತಿಯಲ್ಲಿ ಮಾತನಾಡಿ ಸಂವಹನ ನಡೆಸಿ ನ್ಯಾಯ ಬಯಸಿ ಬಂದವರಿಗೆ ಕನಿಷ್ಠ ಸಮಾಧಾನ ಸಿಗುವಂತೆ ಮಾಡಿದವರು.
ನಮ್ಮ ದೇಶದ ವಿಶ್ವವಿದ್ಯಾನಿಲಯಗಳಿಗೆ ಅದರದ್ದೇ ಒಂದು ಭಾಷೆ ಇದೆ. ಅಧ್ಯಯನ, ಅಧ್ಯಾಪನ, ಸಂಶೋಧನೆ, ಅಭಿವ್ಯಕ್ತಿ... ಎಲ್ಲಾ ದಾರಿಗಳಲ್ಲಿ ಆ ಭಾಷೆ ಜಾರಿಯಲ್ಲಿರುತ್ತದೆ. ವಿಶ್ವವಿದ್ಯಾನಿಲಯದ ಅಂಗಳದಲ್ಲಿ ಅಡ್ಡಾಡುವ ವಿದ್ಯಾರ್ಥಿಗಳೇ ಆಗಿರಲಿ, ತರಗತಿ ಕೋಣೆಯ ಸಮ್ಮುಖದ ಮಕ್ಕಳೇ ಇರಲಿ ಅಥವಾ ರಾಷ್ಟ್ರೀಯ ಅಂತರ್‌ರಾಷ್ಟ್ರೀಯ ಮಟ್ಟದ ಗಂಭೀರ ವಿಚಾರಗೋಷ್ಠಿಗಳಾಗಲಿ ಅಲ್ಲೆಲ್ಲ ತಮ್ಮ ವಿಚಾರ -ಮಾತುಗಳನ್ನು ಸಂಕೀರ್ಣಗೊಳಿಸಿದಷ್ಟು ಅದು ಮೌಲ್ಯ ಎಂದು ಪರಿಭಾವಿಸುವ ಕ್ರಮವದು. ಸರಳವಾಗಿ ಹೇಳುವುದಾದರೆ ಅರ್ಥವಾಗದ ಭಾಷೆಯಲ್ಲಿ ಮಾತನಾಡುವುದೇ ಘನತೆ, ತೂಕ ಎಂದೆಲ್ಲ ಪರಿಭಾವಿಸುವ ಕ್ರಮದಿಂದಾಗಿಯೇ ಬಹುತೇಕ ಪ್ರೊಫೆಸರ್‌ಗಳು ಸುಲಲಿತ ಸಾಮಾಜಿಕರ ನಡುವೆ ಕಳೆದುಹೋಗುವುದೇ ಹೆಚ್ಚು. ಭಾಗಶಃ ಅವರ ಅಧ್ಯಯನ, ಸಂಶೋಧನೆ, ಬರಹ- ಪುಸ್ತಕಗಳು ಹೀಗೆಯೇ. ಅದೇ ಜಿಗುಟುತನ, ಮರಳನ್ನು ಹಿಂಡಿ ರಸ ತೆಗೆಯುವ ಶತ ಪ್ರಯತ್ನ. ಜೊತೆಗೆ ತತ್ವ ಪಂಥ ಸಿದ್ಧಾಂತಗಳು, ಜಾತಿ ಮತ ಧರ್ಮದ ವಿಭಜನೆಗಳು, ಸರಳವಾಗಿ ಒಳಗೊಳ್ಳದ ಭಿನ್ನತೆ, ಪ್ರತ್ಯೇಕತೆಗಳೇ ಇಂಥವರ ಸಾಧನೆಗಳಾಗಿ ನಿಜವಾದ ಅರ್ಥದಲ್ಲಿ ವಿಶ್ವವಿದ್ಯಾನಿಲಯಗಳು ದ್ವೀಪಗಳಾದುದೇ ಹೆಚ್ಚು.
ಇಂಥವರ ನಡುವೆ ನಿರಂತರ ಸಮ್ಮುಖ ಸಂವಾದವನ್ನು ಅತ್ಯಂತ ಸರಳಗೊಳಿಸುವ, ವಿಷಯವನ್ನು ಪದರ ಪದರವಾಗಿ ತೆರೆದಿಟ್ಟು ಹೃದಯಕ್ಕೆ ಆಪ್ತಗೊಳಿಸುವ ಜೀವನ್ಮುಖಿ ಸರಳತೆ ಡಾ. ಚಿನ್ನಪ್ಪ ಗೌಡ ಅವರದ್ದು. ಬರೀ ವಿದ್ಯಾರ್ಥಿಗಳೇ ಅಲ್ಲ, ಸಾಮಾಜಿಕ, ಧಾರ್ಮಿಕ, ಕೌಟುಂಬಿಕ, ಸಾಹಿತ್ಯಿಕ, ಜನಪದೀಯ, ಶೈಕ್ಷಣಿಕ ಯಾವುದೇ ಕಾರ್ಯಕ್ರಮವಿರಲಿ, ಬೇಡ ಬಿಡಿ ಕೂಡುಮನೆಯ ಜಗಲಿ ಚರ್ಚೆಗಳೇ ಇರಲಿ, ಆಪ್ತ ಬಳಗದ ಹರಟೆ ಪಟ್ಟಾಂಗಗಳಿರಲಿ ಚಿನ್ನಪ್ಪರು ಅಲ್ಲಿದ್ದರೆ ಬಳಗದ ಅರಿವಿನ ಎತ್ತರಗಳನ್ನು ಅರಿತು ಮಾತನಾಡಬಲ್ಲವರು.
ಬುದ್ಧಿಯ ಬಿಗುಮಾನ, ಅಧಿಕಾರದ ಪ್ರತಿಷ್ಠೆ ಇವು ಯಾವುದೂ ಇಲ್ಲ. ಈ ಕಾರಣಕ್ಕಾಗಿಯೇ ಯಾವತ್ತೂ ಅವರ ಮಾತು, ಚಿಂತನೆ ತಲೆಯ ಮೇಲೆ ಹೋದದ್ದೇ ಇಲ್ಲ. ವಿಚಾರ ಪ್ರಖರತೆಯ ಕೊರತೆ ಇರುವ ಪುಟ್ಟ ಮಗುವಿಗೂ ಅದು ಅರ್ಥವಾಗಬೇಕು. ಭಾಗಶಃ ಈ ಕಾರಣಕ್ಕಾಗಿಯೇ ಚಿನ್ನಪ್ಪರನ್ನು ಅವರ ಶಿಷ್ಯವರ್ಗವಾಗಲೀ ಅವರನ್ನು ತಿಳಿದಿರುವ ಅಭಿಮಾನಿಗಳಾಗಲೀ ಸಹೋದ್ಯೋಗಿ ಬಂಧುಗಳಾಗಲೀ ಯಾವತ್ತೂ ವೈಚಾರಿಕತೆಯ ನೆಲೆಯಲ್ಲಿ ವಿಂಗಡಿಸುವುದಿಲ್ಲ. ಬಂಡಾಯ, ಪ್ರಗತಿಶೀಲ, ದಲಿತ, ನವ್ಯ, ಎಡ, ಬಲ ಇಂಥ ಪಂಥ ಪ್ರವೃತ್ತಿಗಳ ಸೈದ್ಧಾಂತಿಕ ವಿಂಗಡನೆಗಳಲ್ಲಿ ಸಿಕ್ಕಿಹಾಕಿಕೊಳ್ಳದೆ ಸದಾ ಜೀವನ್ಮುಖಿ ಉಪನ್ಯಾಸಕ ಮನುಷ್ಯರಾಗಿ ಕಾಣಿಸಿಕೊಳ್ಳುವ ಹೊರಗಡೆಯ ಲೋಕ ವಿಶ್ವವಿದ್ಯಾನಿಲಯದವರೊಂದಿಗೂ ಸಹಜ ಮನುಷ್ಯರಾಗಿ ಬೆರೆಯುವತನ ಇವರದ್ದು.
ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಕನ್ನಡ ಅಧ್ಯಯನ ಮಂಡಳಿಯ ಅಧ್ಯಕ್ಷರಾಗಿ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಯಾಗಿ, ಪ್ರಸಾರಂಗ, ತುಳು ಅಧ್ಯಯನ ಪೀಠ, ಕನಕದಾಸ ಅಧ್ಯಯನ ಪೀಠ, ಯಕ್ಷಗಾನ ಕೇಂದ್ರಗಳ ಸಂಚಾಲಕರಾಗಿ, ಕುಲಸಚಿವರಾಗಿ, ಜಾನಪದ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಅನೇಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದವರು. ಎಲ್ಲೆಡೆಯೂ ಚಿನ್ನಪ್ಪ ಗೌಡರದ್ದೇ ಆದ ಒಂದು ಛಾಪು, ನಡೆ ನುಡಿ ಎಲ್ಲದರಲ್ಲೂ ತನ್ನದೇ ಆದ ಒಂದು ನಿಯತ್ತು, ಅಚ್ಚು ಕಟ್ಟುತನವನ್ನು ಗುರುತಿಸಲು ಸಾಧ್ಯವಿದೆ. ಅವರನ್ನು ಬಲ್ಲ ಎಲ್ಲರಿಗೂ ಇದು ಗೊತ್ತು.
ಈ ಮಾದರಿ ಅಥವಾ ಈ ‘ಚಿನ್ನಪ್ಪತನ’ ಇದ್ದಕ್ಕಿದ್ದಂತೆ ಸಿದ್ಧಿಸಿದ್ದಲ್ಲ.
ಬಾಲ್ಯದ ಬಡತನ, ಮುಂದೆ ತಾನು ಏನಾಗಬೇಕೆಂದು ಸ್ಪಷ್ಟ ಮಾರ್ಗ ತಿಳಿಯದೆ ಕಷ್ಟದ ಬದುಕಿನಲ್ಲಿ ದುಡಿಮೆಗೆ ಒಳಗೊಳ್ಳುತ್ತಿದ್ದ ರೀತಿ, ಆನಂತರದ ಶಾಲಾ-ಕಾಲೇಜಿನ ಶೈಕ್ಷಣಿಕ ನಡೆ, ಅಲ್ಲಿ ಲಭ್ಯವಾದ ಅವಕಾಶಗಳು, ತೊಡಗಿಸಿಕೊಂಡ ಕ್ರಮ, ೯ ವರ್ಷಗಳ ಕಾಲ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಅವರು ಪಡೆದ ಅವಕಾಶ, ಬಾಲ್ಯದಿಂದ ಅವರಿಗೆ ಪಾಠ ಮಾಡಿದ ಶಿಕ್ಷಕರ ಪಾತ್ರ ಈ ಎಲ್ಲವೂ ಸೇರಿ ಅವರೊಳಗಡೆ ಒಂದು ವ್ಯಕ್ತಿತ್ವವನ್ನು ರೂಪಿಸಿದೆ.
ಸವಾಲು ಜವಾಬ್ದಾರಿಗಳು ಬಂದಾಗ ಅದನ್ನು ಅವಕಾಶವೆಂದು ಸ್ವೀಕರಿಸಬೇಕೇ ಹೊರತು ಯಾವುದೇ ಕಾರಣಕ್ಕೂ ತಿರಸ್ಕರಿಸಬಾರದು. ಭುಜದಿಂದ ತಲೆಯವರೆಗೆ ಎತ್ತರಿಸಿಕೊಳ್ಳಬೇಕು. ಕೆಲವೊಂದು ಬುದ್ಧಿಯಿಂದ, ಕೆಲವೊಂದು ಹೃದಯದಿಂದ ನಿಭಾಯಿಸಬೇಕೆನ್ನುವವರು ಗೌಡರು. ಆಡಳಿತದಲ್ಲಿ ಯಾವತ್ತೂ ಬುದ್ಧಿ ವಿಜೃಂಭಿಸುವಷ್ಟು ಹೃದಯ ಸ್ಪಂದಿಸುವುದಿಲ್ಲ ಎಂಬ ಆರೋಪವಿದೆ. ಅಧಿಕಾರ ಚಲಾಯಿಸುವುದೇ ಒಂದು ಹುದ್ದೆಯ ಕಾರ್ಯ ಎಂದು ಅನೇಕರು ಭಾವಿಸುವುದಿದೆ. ಆದರೆ ಚಿನ್ನಪ್ಪ ಗೌಡರು ಹೃದಯವನ್ನು ಅಧಿಕಾರದೊಂದಿಗೆ ಬೆರೆಸಿ ಬಳಸಿದವರು. ಅಂತಃಕರಣದ ಮನಸ್ಥಿತಿಯಲ್ಲಿ ಮಾತನಾಡಿ ಸಂವಹನ ನಡೆಸಿ ನ್ಯಾಯ ಬಯಸಿ ಬಂದವರಿಗೆ ಕನಿಷ್ಠ ಸಮಾಧಾನ ಸಿಗುವಂತೆ ಮಾಡಿದವರು. ರಿಜಿಸ್ಟರ್ ಆಗಿದ್ದಾಗ ಮನುಷ್ಯ ಸಂಬಂಧಗಳು ಕೆಡದ ಹಾಗೆ ವಿಶ್ವವಿದ್ಯಾನಿಲಯಕ್ಕೆ ಘನತೆಯ ಬಾಗಿಲು ತೆರೆದ ಹೆಚ್ಚುಗಾರಿಕೆ ಅವರದು. ಕುಲಸಚಿವ ಅವಧಿ ಮುಗಿದ ನಂತರ ಅದಕ್ಕಿಂತ ಎತ್ತರದ ಹುದ್ದೆ ಪಡೆಯಬೇಕೆಂದೇ ಆಸೆ ಪಡುವ ಅಧಿಕಾರಸ್ಥ ಮನಸ್ಸುಗಳೇ ಇರುವ ಈ ಕಾಲದಲ್ಲಿ ಅವಧಿ ಮುಗಿದ ತಕ್ಷಣ ಮತ್ತೆ ಕನ್ನಡ ವಿಭಾಗಕ್ಕೆ ಬಂದು ಮೊದಲಿನಂತೆ ಪಾಠ ಮಾಡಿದ ಸಹೃದಯತೆ ಗೌಡರದು.
ಡಾ. ಚಿನ್ನಪ್ಪ ಗೌಡರ ಹುಟ್ಟೂರು ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೂಡೂರು. ತಂದೆ ಕೂಡೂರು ವೆಂಕಪ್ಪ ಗೌಡ, ತಾಯಿ ಲಕ್ಷ್ಮಿ. (ಜನನ ಸೆಪ್ಟಂಬರ್ ೧, ೧೯೫೫) ಮನೆಯ ಹನ್ನೊಂದು ಮಕ್ಕಳಲ್ಲಿ ಹತ್ತನೆಯವರು. ಕೃಷಿ ಒಕ್ಕಲು, ಅತಿ ಸಣ್ಣ ಹಿಡುವಳಿದಾರರು. ತಾಯಿಯದ್ದು ದಣಿಗಳ ಮನೆಯಲ್ಲಿ ದುಡಿಮೆಯ ಕೆಲಸ. ತುಳು ಕಬಿತೆಗಳ ಹಾಡುಗಾರ್ತಿ, ಜೊತೆಗೆ ಬಾಣಂತಿಯರ ಪೋಷಣೆ, ಕೈಮದ್ದು ಇವರ ನೆಲಮೂಲ ನಾಟಿ ಕೌಶಲ್ಯ. ಇದನ್ನುಳಿದು ಈ ಮನೆಗೆ ಯಾವುದೇ ಸಾಂಸ್ಕೃತಿಕ, ಸಾಹಿತ್ಯಿಕ, ರೋಚಕ ಇತಿಹಾಸವಿಲ್ಲ. ನಿಜವಾದ ಅರ್ಥದಲ್ಲಿ ಅಸಾಹಿತ್ಯಕ ದುಡಿಮೆ. ಕೆಸರು ಶ್ರಮ ಬೆವರಿನ ಆವರಣವದು. ತಮ್ಮ ಹಾಗೆಯೇ ಮಗನೂ ದಣಿಗಳ ಮನೆಯಲ್ಲಿ ಅಥವಾ ಇನ್ಯಾರದೋ ದುಡಿಸುವವರ ಮನೆಯಲ್ಲಿ ಕೂಲಿ ಆಳಾಗಿದ್ದರೆ ಅಥವಾ ಓದುವ ಎಡೆಯ ರಜೆಯಲ್ಲಿ ದುಡಿಯಲು ಹೋದರೆ ಏನಾದರೂ ಮನೆಗೆ ಒಂದು ಹೊತ್ತಿನ ಅನ್ನಕ್ಕೆ ಗತಿಯಾದೀತು ಎಂದು ಭಾವಿಸುವ ಮನೆಯಲ್ಲಿ ಚಿನ್ನಪ್ಪರು ಹುಟ್ಟಿದರು.
ಅಪ್ಪ ಅಮ್ಮ ದುಡಿಯುತ್ತಿದ್ದ ಮನೆಗೆ ದಿನಾ ಪೇಪರ್ ತಂದು ಹಾಕುವ ಈ ಹುಡುಗನಿಗೆ ಆಗ ಅದೇ ಪೇಪರನ್ನು ಓದಬೇಕು, ಭವಿಷ್ಯದ ದಾರಿ ಬೆಳಗಲು ಅದೊಂದು ಬೆಳಕಾದೀತು ಎನ್ನುವುದೂ ಅನಿಸಲಿಲ್ಲ. ತಂದೆ, ತಾಯಿ, ಅಕ್ಕ, ಅಣ್ಣಂದಿರಿಗೆ ಓದುವ ಚಟ ಇರುತ್ತಿದ್ದರೆ ಮನೆಯ ಈ ಕಿರಿಯ ಹುಡುಗನೂ ಮಾಲಕರ ಮನೆಯ ಪತ್ರಿಕೆ ಪುಸ್ತಕಗಳನ್ನು ಓದುತ್ತಿದ್ದನೋ ಏನೋ?
ಮನೆ ಮಂದಿ ದಿನಾ ಧರಿಸುತ್ತಿದ್ದ ಕತ್ತಿ ಮುಟ್ಟಾಳೆ ಇವೇ ಈ ಹುಡುಗನಿಗೆ ಅನ್ನದ ದಾರಿಯ ಸೂಚಕಗಳಾಗಿದ್ದವು ಹೊರತು ಓದು ದಾರಿಯ ಮಾಪನವಾಗಲಿಲ್ಲ. ಈ ಕಾರಣಕ್ಕಾಗಿಯೇ ಬಾಲ್ಯದಲ್ಲೇ ಚಿನ್ನಪ್ಪರಿಗೆ ಕೃಷಿಯ ಕಸುವು ಗೊತ್ತಿತ್ತು. ಅಪ್ಪ ಅಮ್ಮ ಶ್ರಮದ ಬೆವರಿನ ದುಡಿಮೆಗಾರರು. ಹಾಗಂತ ಅವರು ದುಡಿಯುತ್ತಿದ್ದದ್ದು ತನ್ನ ಮನೆಯ ಪುಟ್ಟ ಹಿಡುವಳಿಯಲ್ಲಿಯಲ್ಲ. ತಂದೆ ತಾಯಿ ಅಣ್ಣಂದಿರು ಎಲ್ಲರ ಶ್ರಮದ ಶ್ರೇಯಸ್ಸು ಸಲ್ಲುತ್ತಿದ್ದದ್ದು ಆ ಶ್ರೀಮಂತ ಕುಟುಂಬದ ಪ್ರಬಲ ದಣಿಗಳ ಮನೆಗೆ. ಹಾಗಂತ ಈ ಬಡಮನೆಯಲ್ಲಿ ವಿದ್ಯೆಗೆ ಕೊರತೆ ಇರಲಿಲ್ಲ. ಅದು ಶಾಲೆಯಲ್ಲಿ ಕಲಿತ ಅಕ್ಷರದ ಅರಿವಲ್ಲ. ಬದಲಾಗಿ ನೆಲದ ಅರಿವು. ಈ ದೇಶದ ಆತ್ಮ ಭಾಗವಾಗಿರುವ ಹಳ್ಳಿಯ ನಾಟಿ ಅರಿವು.
‘‘ಕಲಿಕೆಯ ಸಂದರ್ಭದಲ್ಲಿ ರಜೆ ಇದ್ದಾಗಲೆಲ್ಲ ನಾನು ಬೇರೆಯವರ ಮನೆಗೆ ದುಡಿಯಲು ಹೋಗುತ್ತಿದ್ದೆ. ಪಿಯುಸಿಯವರೆಗೆ ಹೀಗೆ ರಜೆಯಲ್ಲಿ ದುಡಿದು ಸಂಪಾದಿಸಿದ ಹಣದಿಂದಲೇ ಫೀಸು ಕಟ್ಟುತ್ತಿದ್ದೆ. ನಾವು ಹನ್ನೊಂದು ಮಂದಿ ಮಕ್ಕಳು. ಪುಣ್ಯಕ್ಕೆ ನಮ್ಮ ಮನೆಯಲ್ಲಿ ನೀನು ಓದಬೇಡ ಎನ್ನುವವರು ಯಾರೂ ಇರಲಿಲ್ಲ. ಆರು ಜನ ಹುಡುಗರು, ಐದು ಜನ ಹುಡುಗಿಯರು. ಯಾರನ್ನೂ ಓದಿಸುವ ಶಕ್ತಿ ಅಪ್ಪ-ಅಮ್ಮನಿಗೆ ಇರಲಿಲ್ಲ. ಹಾಗಂತ ಆಸಕ್ತಿ ಇರುವವರನ್ನು ನಿರಾಕರಿಸಿದವರೂ ಅಲ್ಲ. ದುಡಿಯುವವರು ಇದ್ದರೆ ಮನೆಗೆ ಆನೆಬಲ ಎಂಬ ನಂಬಿಕೆ ಅವರದು. ಎರಡು ರೂಪಾಯಿ ಕೈಗೆ ಬಂದರೆ ಮಾನ ಮರ್ಯಾದೆಯಿಂದ ದಿನ ಹೋಗುತ್ತಿತ್ತು. ಅದಕ್ಕಿಂತ ಹೆಚ್ಚು ಯಾವ ಆಸೆ ಆಕಾಂಕ್ಷೆಗಳು ಹಿರಿಯರಿಗೆ ಇರಲಿಲ್ಲ’’ ಎನ್ನುವ ಚಿನ್ನಪ್ಪರು ತನ್ನ ಬದುಕಿನ ಮೇಲೆ ಅತ್ಯಂತ ಕೆಟ್ಟ ಮತ್ತು ಒಳ್ಳೆಯ ಪರಿಣಾಮ ಬೀರಿದ ಸಂದರ್ಭ ಒಂದನ್ನು ಹೀಗೆ ನೆನಪು ಮಾಡಿಕೊಂಡಿದ್ದಾರೆ:
‘‘ಅನಿಲ ಕಟ್ಟೆ ಶಾಲೆಯಲ್ಲಿ ಐದನೆಯ ತರಗತಿಯಲ್ಲಿ ಓದುವಾಗ ಆರು ರೂಪಾಯಿ ಕೊಟ್ಟು ಪ್ರವಾಸ ಹೋಗುವ ಸಂದರ್ಭವೊಂದು ಬಂತು. ಆಗ ನಾನು ದಣಿಗಳ ಮನೆಯಿಂದ ಪ್ರತಿದಿನ ಹೋಟೆಲ್‌ಗೆ ಹಾಲು ಒಯ್ಯುತ್ತಿದ್ದೆ. ತಿರುಗಿ ಬರುವಾಗ ಅಲ್ಲಿಂದ ಪೇಪರ್ ತರುತ್ತಿದ್ದೆ. ಇದಕ್ಕಾಗಿ ನನಗೆ ತಿಂಗಳಿಗೆ ಐದು ರೂಪಾಯಿ ಬಕ್ಷೀಸು ಬರುತ್ತಿತ್ತು. ಆ ಧೈರ್ಯದಿಂದಾಗಿ ಪ್ರವಾಸಕ್ಕೆ ಕೊಡಬೇಕಾದ ಮುಂಗಡವನ್ನು ದಣಿಗಳಲ್ಲಿ ಸಾಲ ಕೇಳಿದೆ. ‘ಲೋಕ ಸುತ್ತುವುದು ಸ್ವಂತ ಸಂಪಾದಿಸಿ, ತನ್ನ ಯೋಗ್ಯತೆಯಿಂದ. ಬೇರೆಯವರನ್ನು ಕಾಡಿಬೇಡಿ ಅಲ್ಲ’ ಎಂಬ ಮಾತು ದಣಿಗಳ ಬಾಯಿಯಿಂದ ಬಂತು. ಅವರ ಆರ್ಥಿಕ ಶಕ್ತಿಗೆ ಆ ಕನಿಷ್ಠ ಮೊತ್ತ ಯಾವ ಲೆಕ್ಕವೂ ಅಲ್ಲ. ನಾನು ಮತ್ತೆ ಬೇಡಲಿಲ್ಲ.’’
ನನಗೆ ಗೊತ್ತಿರುವ ಹಾಗೆ ಚಿನ್ನಪ್ಪರು ಈ ಘಟನೆಯನ್ನು ಯಾವತ್ತೂ ಎಲ್ಲೂ ಹಂಚಿಕೊಂಡವರಲ್ಲ. ನಾನವರ ಕಣ್ಣುಗಳನ್ನೇ ನೋಡುತ್ತಿದ್ದೆ. ಮುಖವನ್ನು ಓದುತ್ತಿದ್ದೆ. ಡಾ. ಚಿನ್ನಪ್ಪರು ಈ ಹೊತ್ತಿಗೆ ಸ್ವಲ್ಪವೂ ಕರಗಲಿಲ್ಲ. ನಿರ್ಲಿಪ್ತತೆ ಅವರಲ್ಲಿರುವ ಮೆಚ್ಚುಗುಣ. ಆ ನೋವು, ಸಂಕಟ ಅವರೊಳಗಡೆ ಬಾಲ್ಯದಿಂದ ಇವತ್ತಿನವರೆಗೆ ಕೂತಿರಬೇಕು. ಬಾಲಕ ಚಿನ್ನಪ್ಪ ಮುಂದೆ ಡಾ. ಚಿನ್ನಪ್ಪ ಗೌಡರಾಗಿ ಒಂದು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ, ಜಾನಪದ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ, ವಿದೇಶಿ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರಾಗಿ, ಜರ್ಮನ್, ಜಪಾನ್, ಫಿನ್‌ಲ್ಯಾಂಡ್ ಮುಂತಾದ ದೇಶಗಳಲ್ಲಿ ತುಳು-ಕನ್ನಡದ ಅಸ್ಮಿತೆಯನ್ನು ಎತ್ತರಿಸಿದವರು. ಕರಾವಳಿಯ ದೈವಾರಾಧನೆಯ ಬಗ್ಗೆ ಈವರೆಗೂ ಮಾದರಿಯಾಗುವಂಥ ಗಂಭೀರ ಸಂಶೋಧನಾ ಗ್ರಂಥ ಒಂದನ್ನು ಪ್ರಕಟಿಸಿದವರು. ಈ ಎಲ್ಲ ಎತ್ತರಗಳ ತುದಿಯಲ್ಲಿ ನಿಂತು ತಿರುಗಿ ನೋಡುವಾಗ ಆ ಬಾಲ್ಯದ ಆ ಕಹಿ ಘಟನೆಯೇ ಅವರನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿರಬಹುದು ಅನಿಸುತ್ತದೆ.
ಇದೇ ಸಂದರ್ಭದಲ್ಲಿ ಚಿನ್ನಪ್ಪ ಗೌಡರಲ್ಲಿರುವ ಮತ್ತೊಂದು ಮೃದು ಭಾವಾಂಶವನ್ನು ಹೇಳಲೇಬೇಕು. ಅಂದು ಆರು ರೂಪಾಯಿಯನ್ನು ಕೊಡಲು ನಿರಾಕರಿಸಿದ ಯಜಮಾನರನ್ನು ಇವತ್ತಿಗೂ ಅವರು ನೆನಪಿಟ್ಟುಕೊಂಡಿದ್ದಾರೆ. ಕೇಡು ದ್ವೇಷದ ಭಾವನೆಯಿಂದಲ್ಲ. ಅಂಥ ಶೋಷಣೆಯ ಮನಸ್ಥಿತಿಯನ್ನು ಅವಮಾನವನ್ನು ಮಾನವಾಗಿ ಅವರು ನಿರಂತರ ಗೌರವಿಸಿದ್ದಾರೆ. ಸಡ್ಡು, ಸ್ಫೋಟಗೊಳ್ಳುವ ವ್ಯವಸ್ಥೆಯ ಒಳಗಡೆಯೇ ಯಾವುದನ್ನೂ ತೋರಿಸಿಕೊಳ್ಳದೆ ಎತ್ತರಕ್ಕೆ ಬೆಳೆದಿದ್ದಾರೆ. ‘ನೀನು ನಿನ್ನ ಯೋಗ್ಯತೆಯಿಂದಲೇ ಸಾಧಿಸು’ ಎನ್ನುವ ದಣಿಧ್ವನಿ ಚಿನ್ನಪ್ಪರ ಒಳಗಡೆ ಯಾವತ್ತೂ ಮರೆಯದ ಘಟನೆಯಾಗಿ ಉಳಿದಿದೆ. ‘‘ಹಾಗಂತ ನನಗೆ ಆ ದಣಿಗಳಲ್ಲಿ ಯಾವತ್ತೂ ಸಿಟ್ಟಿಲ್ಲ, ಹಾಗೆಯೇ ಎಂದಿಗೂ ಬಡತನವನ್ನು ತಾನು ಅವಮಾನ ಎಂದು ತಿಳಿದವನಲ್ಲ, ಅದು ಬಡಿಯುತ್ತದೆ, ಬಗ್ಗಿಸುತ್ತದೆ ನಮ್ಮನ್ನು ಪರಿಪಕ್ವಗೊಳಿಸಿ ಪ್ರಜ್ವಲಿಸುವ ಹಾಗೆ ಬೆಳಗುತ್ತದೆ’’ ಎನ್ನುತ್ತಾರೆ ಚಿನ್ನಪ್ಪ ಸರ್.
ಅವರಿಗೆ ಬಾಲ್ಯದಲ್ಲೇ ಪ್ರತಿಭೆಯನ್ನು ಬೆಳಗುವ, ಮುಂದಿನ ದಾರಿಯನ್ನು ನಿರ್ದೇಶಿಸುವ ಒಳ್ಳೆಯ ಶಿಕ್ಷಕ ವರ್ಗ ದೊರೆಯಿತು. ಅನಂತಕೃಷ್ಣ ಹೆಬ್ಬಾರ್, ವಿವೇಕ ರೈ, ಅಮೃತ ಸೋಮೇಶ್ವರ, ತಾಳ್ತಜೆ ವಸಂತಕುಮಾರ್, ಕೋಡಿ ಕುಶಾಲಪ್ಪ ಗೌಡ ಮೊದಲಾದವರೆಲ್ಲ ಚಿನ್ನಪ್ಪರಿಗೆ ಪಾಠ ಮಾಡಿದವರಷ್ಟೇ ಅಲ್ಲ ಬದುಕು ರೂಪಿಸಲು ನೆರವಾದವರು, ಅವರನ್ನು ಪೊರೆದವರು. ಪ್ರಾಧ್ಯಾಪಕರಾಗಿ, ಅನುವಾದಕರಾಗಿ, ಸೃಜನಶೀಲ ಬರಹಗಾರರಾಗಿ, ಕವಿಯಾಗಿ, ಜಾನಪದ ಸಂಸ್ಕೃತಿ ಸಂಶೋಧಕರಾಗಿ ಎಲ್ಲದಕ್ಕಿಂತ ಹೆಚ್ಚು ಒಳ್ಳೆಯ ಮನುಷ್ಯರಾಗಿ ಚಿನ್ನಪ್ಪರು ಏರಿದ ಎತ್ತರ ಕಡಿಮೆಯಲ್ಲ. ನಾಳೆ ಅವರಿಗೆ ಎಪ್ಪತ್ತು ತುಂಬುತ್ತದೆ. ಭವಿಷ್ಯದ ಬದುಕು ಸುಂದರವಾಗಲಿ, ಶುಭಾಶಯಗಳು ಸರ್.