ಅಭಿವೃದ್ಧಿ ಹಾದಿಯಲಿ ಹಸಿರು ನಾಶ : ಪಶ್ಚಿಮ ಘಟ್ಟದ ಶ್ವಾಸಕ್ಕೆ ಆಘಾತ

ಅಸಂಖ್ಯ ಜೀವಮಯ ಪಶ್ಚಿಮ ಘಟ್ಟದ ನಡುವೆ ಸಾಗುವಾಗಲೆಲ್ಲ ಕೂತ ವಾಹನದ ವೇಗ ನಿಧಾನವಾಗಬೇಕು ಎಂದು ಆಶಿಸುವವ ನಾನು. ನಮ್ಮ ‘ಪಶ್ಚಿಮ ಘಟ್ಟದ ಆನೆ’ ಶಿವರಾಮ ಕಾರಂತರು ಕರಾವಳಿಯಿಂದ ಬಯಲು ಸೀಮೆಗೆ ಈ ಘಾಟಿಯ ಸೀಳುರಸ್ತೆಗಳ ನಡುವೆ ಸಾಗುವಾಗಲೆಲ್ಲ ಅಲ್ಲಲ್ಲಿ ಗಾಡಿ ನಿಲ್ಲಿಸಿ ಮರದ ಬುಡಗಳ ಬದಿಯಲ್ಲಿ ನಿಂತು, ಕೆಲವೊಮ್ಮೆ ರಸ್ತೆಗುಂಟಾ ಕೆಳಗಿಳಿದು ಸುಮಾರು ಹೊತ್ತು ಕಾಡಿನ ಸುಖವನ್ನು ಅನುಭವಿಸಿ ಮುಂದುವರಿಯುತ್ತಿದ್ದರಂತೆ. ಯಾವುದೋ ಹಕ್ಕಿ, ಇನ್ಯಾವುದೋ ಕೀಟ ಪತಂಗಗಳ ಪರೀಕ್ಷಣೆ ಎಂದರೆ ಕಾರಂತರಿಗೆ ತುಂಬಾ ಇಷ್ಟ. ಕಾಡಿನ ಅದ್ಯಾವುದೂ ಭೀಮಗಾತ್ರದ ಮರದ ಬೊಡ್ಡೆಯ ಆಕಾರ ಆಕೃತಿಯನ್ನು ಅವರು ಬಹಳ ಹೊತ್ತು ಗಮನಿಸುತ್ತಿದ್ದರು ಎಂದು ಹಿಂದೊಮ್ಮೆ ಅವರ ಕಾರಿನ ಸಾರಥಿ ಸಂದರ್ಶನವೊಂದರಲ್ಲಿ ಹೇಳಿದ್ದರು.
ಇಂಥ ದುರ್ಗಮ ಘಾಟಿ ಕಾಡುರಸ್ತೆ ಸುರಕ್ಷಿತ- ಅಗಲವಾದಷ್ಟು ನಮ್ಮ ವಾಹನಗಳ ಎಕ್ಸಲೇಟರ್ ಹೆಚ್ಚು ಹೆಚ್ಚು ಒತ್ತಲ್ಪಡುತ್ತದೆ. ಗಾಡಿ ವೇಗವಾಗಿ ಓಡಿದಷ್ಟು ನಾವು ಕಾಡು ಗಮನಿಸುವುದು, ಅದು ನಮ್ಮೊಳಗೆ ತುಂಬಿಕೊಳ್ಳುವುದು ಕಡಿಮೆಯಾಗುತ್ತದೆ.ಎಂದಾದರೂ ಒಂದು ದಿನ ಈ ದುರ್ಗಮ ಕಾಡಿನ ನಡುವೆ ಹಾದು ಹೋಗುವಾಗ ಗಾಡಿ ನಿಲ್ಲಿಸಿ ತಿಳಿಯಾಗಿ ಹರಿಯುವ ತೊರೆಗೆ ಕೈಯೊಡ್ಡಿ ಕಣ್ಣು ಮುಚ್ಚಿ ನೀರು ಕುಡಿದಿದ್ದೀರಾ?. ದೇವರಾಣೆಗೂ ಅದು ವಿಷದ ನೀರಲ್ಲ. ಬಗೆ ಬಗೆಯ ಸಾವಿರಾರು ಮರಗಳ ಬೇರು, ಗಿಡಮೂಲಿಕೆ, ಖನಿಜ, ಲವಣಗಳನ್ನು ಸೋಂಕಿ ಜಿನುಗುವ ಅಮೃತಜಲ. ನೀವು ದುಡ್ಡು ಕೊಟ್ಟು ಬಾಟಲಿಯಲ್ಲಿ ಹೊತ್ತೊದ ನೀರನ್ನು ಅಲ್ಲೇ ಚೆಲ್ಲಿ ತೊರೆ ನೀರನ್ನು ತುಂಬಿಸಿ ಮುಂದುವರಿಯಿರಿ. ಮುಂದಿನ ಪ್ರಯಾಣದುದ್ದಕ್ಕೂ ಆ ಜೀವಜಲವನ್ನೇ ಅನುಭವಿಸಿ. ನೀರಷ್ಟೇ ಅಲ್ಲ, ಮಲೆಯ ನಡುವೆ ನೀವು ಉಸಿರಾಡುವ ಗಾಳಿ, ಕಣ್ಣಿಗೆ ಹಬ್ಬವನ್ನುಂಟು ಮಾಡುವ ಹಸಿರು, ಕೀಟ, ಬಣ್ಣ ಬಣ್ಣದ ಪತಂಗ, ಪಕ್ಷಿಗಳ ರಾಗವಿಲಾಪಗಳು, ಮಂಗ, ಮುಂಗುಸಿ, ನವಿಲು, ಅಳಿಲು ಇನ್ನೂ ಏನೇನೋ...ಎಲ್ಲವೂ ನಿಮಗೆ ಮುದ ಕೊಡುತ್ತವೆ.
ಆದರೆ ನೀವು ಆ ಆಹ್ಲಾದಕರ ಗಾಳಿಗೆನಿದ್ದೆಗೆ ಜಾರಿರುತ್ತೀರಿ ಅಥವಾ ಮೊಬೈಲ್ ಅದುಮುತ್ತೀರಿ. ಅದಕ್ಕಿಂತಲೂ ಹೆಚ್ಚು ಎಷ್ಟೋ ಜನರ ಪಯಣ ಈ ದಾರಿಯಲ್ಲಿ ರಾತ್ರಿಯೇ ಜರುಗಿರುತ್ತದೆ. ಪಶ್ಚಿಮ ಘಟ್ಟದ ಸೀಳು ರಸ್ತೆಯಲ್ಲಿ ರಾತ್ರಿಯಿಡೀ ಸಾಗಿ ಬೆಳಕು ಹರಿಯುವ ಹೊತ್ತಿಗೆ ನೀವು ಮನೆ ಮುಟ್ಟಿರುತ್ತೀರಿ. ನಮ್ಮ ಕೈ ಹತ್ತಿರ ಬಂದ ಒಂದು ಅದ್ಭುತ ಹಸಿರು ಸುಖ ಮಂಪರಿನಲ್ಲೂ, ನಿದ್ದೆಯಲ್ಲೋ, ಸಹಜ ಆಲಸ್ಯದಲ್ಲೂ ಕಳೆದು ಹೋಗುವುದೇ ಹೆಚ್ಚು.
ಈ ವಾರ ನಾನು ಉದ್ದೇಶಪೂರ್ವಕವಾಗಿ ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಹಗಲು ಹೊತ್ತೇ ಚಲಿಸಿದೆ. ಬೆಂಗಳೂರಿನಿಂದ ಸಕಲೇಶಪುರದವರೆಗೆ ಈಗ ಈ ಹೊಸ ರಾಷ್ಟ್ರೀಯ ಹೆದ್ದಾರಿಗೆ ಒಂದು ತೂಕವಾದರೆ ಅಬ್ಬಾ ಮುಂದಿನದು ಇನ್ನೊಂದು ವ್ಯಥೆ. ಸಕಲೇಶಪುರದಿಂದ ಮಂಗಳೂರು ಕಡೆಗೆ ಹತ್ತಾರು ಕಿಲೋಮೀಟರ್ ಸರಿಯಬೇಕು. ರಸ್ತೆಯೋ ಗುಡ್ಡೆಯೋ ಮಣ್ಣು ಕಲ್ಲು ಒಂದಕ್ಕೊಂದು ಮಿಕ್ಸಾಗಿ ಘನ ವಾಹನಗಳಷ್ಟೇ ಎದ್ದು ಬಿದ್ದು ಓಡಾಡಬಹುದೇ ಹೊರತು ಅಲ್ಲಿ ಮಹಾಮಳೆಯಲ್ಲಿ ಲಘು ವಾಹನಗಳ ಕಥೆ ದೇವರಿಗೇ ಇಷ್ಟ.
ಈ ಹಿಂದೆ ನಮ್ಮನ್ನು ಸುರಕ್ಷಿತವಾಗಿ ಊರು ಮುಟ್ಟಿಸುತ್ತಿದ್ದ, ಬ್ರಿಟಿಷರು ಕಟ್ಟಿದ್ದ ಹಳೆಯ ರಸ್ತೆಗಳೂ ಇಲ್ಲ, ಈ ಕಡೆ ನೂತನ ಕಾಮಗಾರಿಯ ದಪ್ಪ ಕಾಂಕ್ರಿಟ್ ರಸ್ತೆಯೂ ಜರಿದ ಕೆಂಪು ಮಣ್ಣಿನಡಿಗೆ ಸಿಲುಕಿ ಭಾಗಶಃ ನಾಪತ್ತೆಯಾಗಿದೆ. ಒಮ್ಮೆ ಹಳೆಯ ರಸ್ತೆಗೆ, ಇನ್ನೊಮ್ಮೆ ಹೊಸ ರಸ್ತೆಗೆ, ಮಗದೊಮ್ಮೆ ಇಲ್ಲದ ರಸ್ತೆಗೆ ಚಕ್ರ ಉರುಳಿ ಸುರಕ್ಷಿತ ರಸ್ತೆಗೆ ತಲುಪಬೇಕಾದರೆ ಚಾಲಕರು ಪಡುವ ಕಷ್ಟ ಕಡಿಮೆಯಲ್ಲ.
ಶತಮಾನಪೂರ್ವದಲ್ಲಿ ಬ್ರಿಟಿಷರು ಯಾವ ವೈಮಾನಿಕ ಸಮೀಕ್ಷೆಗಳಿಲ್ಲದ, ವಿಜ್ಞಾನದ ಸುಲಭ ದಾರಿ ಸೂಚಕ ತಂತ್ರಜ್ಞಾನಗಳಿಲ್ಲದ ಕಾಲದಲ್ಲಿ ಸ್ಥಳೀಯ ಬುಡಕಟ್ಟು ಆದಿವಾಸಿ ರೈತ ಕೂಲಿಕಾರ್ಮಿಕರನ್ನು ಬಳಸಿಕೊಂಡು ಇಂತಹ ರಸ್ತೆಗಳನ್ನು ಕಟ್ಟಿದ ಕಥೆ ನಿಮಗೆ ಗೊತ್ತಿರಬೇಕು. ದೇವಿಮನೆ, ಆಗುಂಬೆ, ಚಾರ್ಮಾಡಿ, ಶಿರಾಡಿ, ಸಂಪಾಜೆ ಮುಂತಾದ ರಸ್ತೆಗುಂಟ ಚಲಿಸುವಾಗ ಶತಮಾನ ಪೂರ್ವದ ಮಾನವ ಶಕ್ತಿಯ ಪ್ರಯತ್ನ, ಪ್ರಯೋಗ ಕೌಶಲ್ಯದ ಪರಿಚಯ ಎಷ್ಟೋ ಕಡೆ ನಮಗೆ ಆಗುತ್ತಿತ್ತು.
ಯಾವ ಕ್ರೇನ್, ಬುಲ್ಡೋಜರ್, ಜೆಸಿಬಿ, ಲಾರಿಗಳಿಲ್ಲದ ಕಾಲದಲ್ಲಿ ಭೀಮ ಗಾತ್ರದ ಕಲ್ಲುಗಳನ್ನು ಎತ್ತಿ ಬದಿಗಿಟ್ಟು ಗೋಡೆ ಕಟ್ಟಿದ, ನೀರಿನ ಚಲನೆಗೆ ಮೋರಿ ಇಟ್ಟು ದಾರಿ ಮಾಡಿದ, ಆದಷ್ಟು ಏರು ಗುಡ್ಡೆಗಳನ್ನು ಅಡ್ಡಡ್ಡಕಡಿಯದೆ, ಮಣ್ಣು ಜಾರಿಸದೆ ಭೂಮಿ ಇರುವ ಸ್ವರೂಪದಲ್ಲೇ ರಸ್ತೆಗಳನ್ನು ಮಾಡಿ ಗುರಿ ಮುಟ್ಟಿಸಿದ ಪರಿ ಅದ್ಭುತವೇ ಸರಿ. ಅದೇ ಕಾಡಿನ ಬೂರುಗಳಿಂದ ಬುಟ್ಟಿ ಮಾಡಿ, ಕೈಗೆಟಕುವ ಭೀಮ ಕಲ್ಲುಗಳನ್ನು ಜಾರಿಸಿ ಏರಿಸಿ ರಸ್ತೆ ಜರಿಯದ ಹಾಗೆ ಗೋಡೆ ಕಟ್ಟಿದ ಹಿರಿಯರ ಕುಶಲತೆ ಮಾನವ ಶಕ್ತಿ ಅಸಾಮಾನ್ಯವಾದದ್ದು.
ಇವತ್ತಿಗೂ ಸಕಲೇಶಪುರ ಕೆಂಪು ಹೊಳೆಯಲ್ಲಿ ಹಳೆಯ ಸೇತುವೆಯೊಂದರಲ್ಲಿ ಅಡ್ದಾದಿಡ್ಡಿ ನೇತಾಡುವ ಮೇಡ್ ಇನ್ ಇಂಗ್ಲೆಂಡಿನ ಕಬ್ಬಿಣದ ಭೀಮುಗಳನ್ನು ಬ್ರಿಟಿಷರು ಯಾವ ಎತ್ತಿನ ಗಾಡಿಯಲ್ಲಿ ಆ ಗುಡ್ಡಕ್ಕೇರಿಸಿದರೋ ದೇವರೇ ಬಲ್ಲ! ಹೌದು, ಬಹುಶಃ ಅವರಿಗೂ ಒಂದು ದುರುದ್ದೇಶ ಇತ್ತು. ಪ್ರಾಕೃತಿಕ ಖಜಾನೆಯಂತಿರುವ ನಮ್ಮ ಪಶ್ಚಿಮ ಘಟ್ಟದ ನಡುವೆ ಏರುಮುಖ ಸೀಳುದಾರಿಯನ್ನು ಸೃಷ್ಟಿಸಿದರೆ ಒಳಗಡೆಯ ಬೀಟೆ, ತೇಗ ಮುಂತಾದ ಗಟ್ಟಿ ಮರಮಟ್ಟುಗಳ ಜೊತೆಗೆ ಕಾಡು ಉತ್ಪನ್ನಗಳನ್ನು ತಮ್ಮೂರಿಗೆ ಮುಟ್ಟಿಸಬಹುದು ಎಂಬುದು.
ಇರಬಹುದು, ಹಾಗಂತ ಅವೆಲ್ಲವನ್ನು ಬಾಚಿಕೊಳ್ಳುವ, ಇಂಗ್ಲೆಂಡಿಗೆ ತಲುಪಿಸುವ ಸದುದ್ದೇಶದಿಂದ ಕ್ಷಣಿಕ ಲಾಭದ ಉದ್ದೇಶಕ್ಕಾಗಿ ರಸ್ತೆಗಳನ್ನವರು ಸೃಷ್ಟಿಸಲೇ ಇಲ್ಲ. ಶತಮಾನ ಸಂದರೂ ಇವತ್ತಿಗೂ ಬಾಳುವ ಪಾಣೆಮಂಗಳೂರು ಸಂಕ ಸೇರಿ ಇನ್ನೂ ಅನೇಕ ಸೇತುವೆಗಳು ಅವರ ದೂರದ ಆಲೋಚನೆಗೆ ಭದ್ರ ಸೃಷ್ಟಿ ಬುನಾದಿಗೆ ಸಾಕ್ಷಿಯಾಗಿವೆ.
ಇವತ್ತು ನಮ್ಮದೇ ಆಯ್ಕೆಯ ಪ್ರಭುತ್ವ ಸರಕಾರ ಕೋಟಿ ಕೋಟಿ, ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಪಶ್ಚಿಮ ಘಟ್ಟವನ್ನು ಸಿಗಿದು ಅಥವಾ ನಿಮ್ಮೂರನ್ನೇ ಎರಡು ಮಾಡಿ ಸಾಗುವ ರಸ್ತೆಗಳ ಕಾಮಗಾರಿಗಳನ್ನು ಒಮ್ಮೆ ಗಮನಿಸಿ.ಅಲ್ಲಿ ದುಡಿಯುವವರು, ದುಡಿಸುವವರು ಯಾವುದೋ ಊರಿನವರು. ಶತಮಾನದಂಚಿನ ನಿಮ್ಮ ಮನೆ ಮುಂದಿನ ರಸ್ತೆಯಲ್ಲಿ ಈ ಹಿಂದೆ ಯಾವತ್ತೂ ಓಡಾಡದವರು. ಇಲ್ಲಿಯ ಮಳೆ, ಗಾಳಿ, ನೀರೊರತೆ ಯಾವುದರ ಅರಿವೂ ಇಲ್ಲದವರು. ಸ್ಥಳೀಯ ನೆಲವಾಸಿಗಳ, ರೈತರ, ಶತಶತಮಾನಗಳಿಂದ ಇಲ್ಲೇ ಬದುಕುತ್ತಿರುವ ರಸ್ತೆಯಂಚಿನ ಒಕ್ಕಲು ಮನೆಗಳ ಸದಸ್ಯರ ಸಲಹೆ, ಆಲೋಚನೆಗಳ ಸಹಾಯವನ್ನು ಅವರು ಪಡೆಯಲಿಲ್ಲ. ಯಾವುದೋ ಊರು, ಎಲ್ಲಿಯದೋ ಪದವಿ, ಇನ್ನೆಲ್ಲಿಯದೋ ಯಂತ್ರ ಮಂತ್ರಗಳನ್ನು ಇಟ್ಟುಕೊಂಡು ಅಳೆದರು, ಸುರಿದರು, ಮೆತ್ತಿದರು.
ನಿಮಗೆ ಗೊತ್ತೇ ಇದೆ. ನಮ್ಮ ಪಶ್ಚಿಮ ಘಟ್ಟ ಪ್ರಕೃತಿ ಸಂಪತ್ತಿನ ನಡುಗಟ್ಟಿನಲ್ಲಿ ತಾಜಾ ಹಸಿರು ಬಣ್ಣದಿಂದ ನಿಂತಿರುವ ಪ್ರಪಂಚದ ಪ್ರಮುಖ ಜೀವ ವೈವಿಧ್ಯದ ಕೇಂದ್ರ. ಈ ಘಟ್ಟದ ನಡುವಿನ ಘಾಟಿ ರಸ್ತೆಗಳು ಯಾವತ್ತೂ ಕೇವಲ ಮಣ್ಣು ಮೀರಿ ಸಾಗುವ ಹಾದಿಗಳಲ್ಲ; ಅವು ಪ್ರದೇಶದ ಜೀವ ವೈವಿಧ್ಯ, ನದಿಗಳ ಮೂಲ, ಸಮುದಾಯದ ಬದುಕು ಎಲ್ಲದರ ಹತ್ತಿರದ ಸಂಬಂಧಗಳ ಸಂಕೇತ. ಇಂಥ ಅಪೂರ್ವ ಪಶ್ಚಿಮ ಘಾಟಿಯನ್ನು ಅಗೆಯುವ, ಬಗೆಯುವ ಇವತ್ತಿನ ಯಂತ್ರ ಮಾನವರಲ್ಲಿ ಭೂಮಿ ಎಳ್ಳಷ್ಟು ಭಾರ ಇದ್ದ ಹಾಗೆ ಕಾಣಿಸುವುದಿಲ್ಲ. ಪ್ರತಿಕ್ಷಣ ನಾವಿಲ್ಲಿ ಹೆದ್ದಾರಿ ಕಾಮಗಾರಿಗಳ ಪ್ರಭಾವವನ್ನು ನೋಡಿ ಬೆಚ್ಚಿ ಬೀಳುವಂತೆ ಆಗುತ್ತಿದೆ.
ಬ್ರಿಟಿಷರು ಶಿರಾಡಿ, ಚಾರ್ಮಾಡಿ, ಆಗುಂಬೆ, ಮಡಿಕೇರಿ, ದೇವಿಮನೆ ಮುಂತಾದ ಘಾಟಿ ರಸ್ತೆಗಳನ್ನು ನಿರ್ಮಿಸಿದ ಉದ್ದೇಶಗಳು ವಾಣಿಜ್ಯ ಮತ್ತು ಆಡಳಿತ ಕುರಿತವಾಗಿದ್ದವು ಎಂಬುದನ್ನು ಮತ್ತಷ್ಟು ವಿಸ್ತರಿಸುವೆ. ಕರಾವಳಿ ಬಂದರುಗಳಿಂದ ಕಾಫಿ, ಮೆಣಸು, ಟೀ, ಲೋಹದ ಸಾಗಣೆಗಾಗಿ, ಮತ್ತೊಂದು ಕಡೆ ಸೇನೆಗಳಿಗೆ ತ್ವರಿತ ಸ್ಥಳಾಂತರಕ್ಕೆ ಅವರಿಗೆ ಈ ರಸ್ತೆಗಳಿಂದ ಕರಾವಳಿ ಮತ್ತು ಒಳನಾಡಿನ ಸಂಪರ್ಕ ಸುಗಮವಾಗಿತ್ತು. ಹಾಗಂತ ಇದೆಲ್ಲ ತನ್ನ ಕಾಲಕ್ಕೆ ಮಾತ್ರ ಎಂಬ ಸ್ವಾರ್ಥ ವಿರಲಿಲ್ಲ. ಅವರ ಕಾಮಗಾರಿಗಳಲ್ಲಿ ಒಂದು ವಿಶಿಷ್ಟ ಗುಣ ಕಾಣುತ್ತಿತ್ತು. ಪರಿಸರವನ್ನು ಮಿತವಾಗಿ ಮಾತ್ರ ಮುಟ್ಟಲು ಕೈಗೊಂಡ ಜಾಗೃತಿ ಕ್ರಮಗಳವು. ಬೃಹತ್ ಬೆಟ್ಟವನ್ನು ಸಿಡಿಸುವ ಬದಲು, ಪ್ರಕೃತಿಯ ತಿರುವು ತಿರುಗುಗಳಿಗೆ ಹೊಂದಿಕೊಂಡಂತೆ ರಸ್ತೆ ತಿರುವುಗಳನ್ನು ರೂಪಿಸಿದರು. ಇದರಿಂದ ಭೂಮಿ ಗರ್ಭಕ್ಕೆ ಯಾವತ್ತೂ ಭಾರೀ ಪ್ರಮಾಣದಲ್ಲಿ ಅಡಚಣೆ ಆಗಲಿಲ್ಲ. ಬಹಳಷ್ಟು ಕಡೆ ನೈಜ ಕಲ್ಲುಗಳ ಸಹಾಯದಿಂದ ಮಣ್ಣು ತಡೆಗೋಡೆಗಳನ್ನು ನಿರ್ಮಿಸಿ ಮಳೆ ನೀರಿನ ಹೊಡೆತದಿಂದ ಮಣ್ಣು ಸರಿದು ಹೋಗುವುದನ್ನು ತಡೆಯಲು ಕಾರ್ಯ ನಿರ್ವಹಿಸಿದರು. ದಾರಿಗಡ್ಡ ಅನಿವಾರ್ಯವಾಗಿರುವ ಮರಗಳನ್ನು ಮಾತ್ರ ಕಡಿದರು. ನದಿಗಳ ಮೂಲ ಹಾಳುಮಾಡದಂತೆ, ಮಳೆ ನೀರಿನ ಹರಿವಿಗೆ ತಡೆ ನೀಡದಂತೆ ಚಿಕ್ಕ ಸೇತುವೆಗಳು ಮತ್ತು ಕೈನಾಲೆಗಳನ್ನು ಕಟ್ಟಿ ಜಲಚಕ್ರದ ಸ್ತುತ್ಯರ್ಥತೆ ಉಳಿಸಿದರು. ಇವೆಲ್ಲದಕ್ಕೂ ಅದೇ ಕಾಡಬುಡದಲ್ಲಿ ಬದುಕುವ ಸ್ಥಳೀಯರ ಜ್ಞಾನದ ಲಾಭ ನಿರ್ದೇಶನ ಪಡೆದರು.
ಆ ಭಾಗದ ಮಳೆ ನೀರಿನ ಹರಿವು, ಭೂಕುಸಿತ ಪ್ರದೇಶಗಳ ಬಗ್ಗೆ ಸ್ಥಳೀಯರ ಸಲಹೆ ಪಡೆದು ಮಾರ್ಗ ರೂಪಿಸುವ ಕಾರ್ಯ ನಡೆಸಿದರು. ಇದಕ್ಕೆಲ್ಲ ವ್ಯತಿರಿಕ್ತವಾಗಿ ಇಂದು ಪಶ್ಚಿಮ ಘಟ್ಟದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಈ ಮೇಲಿನ ಜಾಗೃತಿಯ ಬಾಹ್ಯತೆ ತೀರಾ ಕಳೆದುಕೊಂಡಂತೆ ಕಾಣುತ್ತಿದೆ. ಶಿರಾಡಿ ಘಾಟ್ ಅಥವಾ ಚಾರ್ಮಾಡಿ ಘಾಟ್‌ನಲ್ಲಿ ಮರಕಡಿತ, ಬೃಹತ್ ಸ್ಫೋಟ ಕಾರ್ಯಗಳಿಂದ ಪರಿಸರದ ಬುಡ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಕಳೆದ ಎರಡು ಮೂರು ಮಳೆಗಾಲದಲ್ಲಿ ಸಕಲೇಶಪುರ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಭೂ ಕುಸಿತಗಳು ಸಂಭವಿಸಿದ್ದು, ಹೊಸ ಕಾಮಗಾರಿಗಳ ನಿಯೋಜನೆಯ ವಿನ್ಯಾಸ ವೈಜ್ಞಾನಿಕತೆ ಬಗ್ಗೆ ಪ್ರಶ್ನೆ ಎತ್ತುವಂತಾಗಿದೆ. ಮಣ್ಣು ತಡೆಗೋಡೆಗಳು ಸರಿಯಾಗಿ ನಿರ್ಮಾಣವಾಗದೆ, ನದಿಗಳ ಮೂಲಗಳಲ್ಲಿ ಅಗಾಧ ಪ್ರಮಾಣದಲ್ಲಿ ಮಣ್ಣು ಮತ್ತು ಕೊಳಚೆಗಸಿ ಜಮೆಯಾಗಿವೆ. ಇದರಿಂದ ಪಶ್ಚಿಮ ಘಟ್ಟದ ನದಿ ವ್ಯವಸ್ಥೆಗೆ ತೀವ್ರ ಹಾನಿ ಸಂಭವಿಸುತ್ತಿದೆ. ಕಾಮಗಾರಿಗೆಂದು ಪ್ರತೀ ದಿವಸ ಸಿಗಿದು ಬಿಸಾಡುವ ಸಾವಿರಾರು ಸಿಮೆಂಟ್ ಚೀಲಗಳು, ಪ್ಲಾಸ್ಟಿಕ್ ವಗೈರೆಗಳು, ಕಬ್ಬಿಣದ ಅಂಶಗಳು ಜಲಮೂಲಕ್ಕೆ ಜಮೆಯಾಗಿವೆ.
ನಾವಿಂದು ಪ್ರತಿಯೊಂದಕ್ಕೂ ಪೂರ್ವಾಗ್ರಹದಲ್ಲೇ ಮಾತನಾಡುವ ಬ್ರಿಟಿಷರ ಕಾಲದ ರಸ್ತೆಗಳು ಅವರ ಆರ್ಥಿಕ ಉದ್ದೇಶಗಳಿಗಾಗಿ ನಿರ್ಮಾಣವಾಗಿದ್ದರೂ, ಪರಿಸರದ ಪರಿಗಣನೆಗೆ ಅವರು ತಾಳಿದ ಮಾರ್ಗದರ್ಶಿ ಸೂತ್ರ ಸಿದ್ಧಾಂತ ದೀರ್ಘಕಾಲ ಈ ಪರಿಸರವನ್ನು, ಅದರ ಮೇಲಿನ ಜೀವಲೋಕವನ್ನು ಬಾಳಿಸುವಂತಹದ್ದು. ಅವರು ತಾವು ಮಾಡಿದ ಕಾಮಗಾರಿಯ ಪರಿಣಾಮಗಳ ಮೇಲೆ ನಿರಂತರ ಎಚ್ಚರಿಕೆಯಿಂದಿದ್ದು, ಪ್ರಕೃತಿಯ ಸ್ವಾಭಾವಿಕ ನಿಯಮಗಳಿಗೆ ಯಾವತ್ತೂ ತೊಂದರೆಯಾಗದಂತೆ ನಡೆದುಕೊಂಡರು.
ಸಹಜವಾಗಿಯೇ ಬ್ರಿಟಿಷರ ರಸ್ತೆಗಳು ನಮಗೆ ಒಂದು ಪಾಠ ಕಲಿಸುತ್ತವೆ. ಅಲ್ಲಿ ತಂತ್ರಜ್ಞಾನ ಮತ್ತು ಪ್ರಕೃತಿ ನಡುವೆ ಸಮನ್ವಯ ಸಾಧ್ಯವಾಗಿದೆ. ಇವತ್ತಿನ ದರ ಪರಿಣಾಮ ಮತ್ತು ಆ ಹೊಸ ರಸ್ತೆಯಲ್ಲಿ ಚಲಿಸುವ ನಾವು ಪಶ್ಚಿಮ ಘಟ್ಟದ ನಾಳೆಗೆ ಜವಾಬ್ದಾರಿಯಾಗಿ ನಡೆಯಬೇಕಾಗಿದೆ. ಹೆದ್ದಾರಿ ಕಾಮಗಾರಿ ಎಂಬ ಅಭಿವೃದ್ಧಿ, ಸಹಜ ಜೀವ ವ್ಯವಸ್ಥೆಯ ದಿಕ್ಕನ್ನು ವಿಕೃತಗೊಳಿಸದಂತೆ ಇರಬೇಕು ಎಂಬುದು ಇಂದಿನ ಅಗತ್ಯ.