ಮಂಡ್ಯ | ಪ್ರಚೋದನಕಾರಿ ಭಾಷಣ: ಸಿ.ಟಿ.ರವಿ ವಿರುದ್ಧ ಮದ್ದೂರು ಠಾಣೆಯಲ್ಲಿ ಎಫ್ಐಆರ್ ದಾಖಲು

ಸಿ.ಟಿ. ರವಿ
ಮಂಡ್ಯ: ಜಿಲ್ಲೆಯ ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ.
ಪಿಎಸ್ಸೈ ಮಂಜನಾಥ್ ಕೆ. ನೀಡಿರುವ ದೂರಿನನ್ವಯ ಸಿ.ಟಿ.ರವಿ ವಿರುದ್ಧ ಕಲಂ 196 (1) ಬಿಎನ್ಎಸ್ ಅಡಿ ಪ್ರಕರಣ ದಾಖಲಾಗಿದ್ದು, ಮದ್ದೂರಿನ ಎರಡನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಪ್ರಥಮ ವರದಿ ಸಲ್ಲಿಕೆಯಾಗಿದೆ ಎಂದು ತಿಳಿದುಬಂದಿದೆ.
ದೂರಿನ ಸಾರಾಂಶ:
ಬುಧವಾರ ಮದ್ದೂರು ಪಟ್ಟಣದಲ್ಲಿ ಸಾಮೂಹಿಕ ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪೇಟೆ ಬೀದಿಯ, ರಾಮಮಂದಿರ ಸರ್ಕಲ್ ಮುಂಭಾಗದಲ್ಲಿ ಮೆರವಣಿಗೆಯಲಿ ಭಾಗವಹಿಸಿದ ಜನರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಮುಸ್ಲಿಮರ ಮೇಲೆ ದ್ವೇಷ ಉಂಟಾಗುವಂತೆ ಮಾತನಾಡಿದ್ದಾರೆ. "5% ಇದ್ದಾಗ್ಲೇ ಬಾಲ ಬಿಚ್ಚುತ್ತಿದ್ದಾರೆ, ಇನ್ನೂ 50% ಆದರೆ, ನಮ್ಮ ಮಕ್ಕಳು, ಮೊಮ್ಮಕ್ಕಳು ಬದುಕುವುದಕ್ಕೆ ಆಗುತ್ತಾ, ಸಮಾಜ ಒಡೆಯುತ್ತಾರೆ, ಕೆಲವು ಕುತಂತ್ರಿಗಳು ಓಟಿನ ಆಸೆಗಾಗಿ ಹಿಂದೂ ಸಮಾಜವನ್ನು ಒಡೆಯುತ್ತಾರೆ, ಮುಸ್ಲಿಮರು ಪಾಕಿಸ್ತಾನ ಝಿಂದಾಬಾದ್ ಅಂದರೂ, ಬಾಂಬ್ ಹಾಕಿದರೂ ಎಸ್ ಎಸ್. ಅಂತಾರೆ, ಮುಸಲ್ಮಾನರು ರಾಮಮಂದಿರದಲ್ಲಿ ಪೆಟ್ರೋಲ್ ಬಾಂಬ್ ಹಾಕಿದ್ದಾಗಲೇ ಇವರಿಗೆ ಬುದ್ಧಿ ಕಲಿಸಬೇಕಾಗಿತ್ತು. ಈಗ ಈ ರೀತಿ ಆಗುತ್ತಿರಲಿಲ್ಲ. ನೀವು ಹೊರಗಡೆಯಿಂದ ಬಂದವರು, ನಾವು ಇಲ್ಲೆ ಇರುವರು. ತೊಡೆ ತಟ್ಟಿ ಕೆಲಸ ಮಾಡಬೇಡಿ. ತೊಡೆ ಮುರಿತೀವಿ, ತಲೆನೂ ತೆಗೆತೀವಿ, ನಮಗೆ ತೊಡೆ ಮುರಿಯೋದು ಗೊತ್ತು, ಕಲ್ಲು ಹೊಡೆವರನ್ನು ಕಲ್ಲಿನ ಒಳಗಡೆ ಸಮಾಧಿ ಮಾಡೋ ತಾಕತ್ತು ಹಿಂದೂ ಸಮಾಜಕ್ಕೆ ಇದೇ" ಇತ್ಯಾದಿಯಾಗಿ ಸಮುದಾಯಗಳ ಮಧ್ಯೆ ದ್ವೇಷ ಉಂಟುಮಾಡುವ ಮತ್ತು ಸೌಹಾರ್ದ ಭಾವನೆಗಳಿಗೆ ಭಾದಕವಾಗುವಂತೆ ವೈರತ್ವ, ದ್ವೇಷ ಉಂಟಾಗುವಂತೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಪಿಎಸ್ಸೈ ಮಂಜನಾಥ್ ಕೆ. ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ರವಿವಾರ (ಸೆ.7) ರಾತ್ರಿ ಮದ್ದೂರಿನ ರಾಮರಹಿಮ್ ನಗರದ ಮಸೀದಿ ಮುಂದೆ ಗಣೇಶಮೂರ್ತಿ ಮೆರವಣಿಗೆ ಬರುತ್ತಿದ್ದ ವೇಳೆ ಕಲ್ಲು ತೂರಾಟವಾಗಿತ್ತು. ಈ ಹಿನ್ನೆಲೆಯಲ್ಲಿ ಸೆ.8ರಂದು ಬಿಜೆಪಿ, ಜೆಡಿಎಸ್, ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಆ ವೇಳೆ ಉದ್ರಿಕ್ತ ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.
ಈ ಘಟನೆಯ ಹಿನ್ನೆಲೆಯಲ್ಲಿ ಬುಧವಾರ ಪಟ್ಟಣದಲ್ಲಿ ನಿಷೇಧಾಜ್ಞೆ ಇದ್ದರೂ ಹಿಂದುತ್ವ ಸಂಘಟನೆಗಳು ಪಟ್ಟಣದಲ್ಲಿ ಸಾಮೂಹಿಕ ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆ ಆಯೋಜಿಸಿದ್ದರು. ಈ ಮೆರವಣಿಗೆಯಲ್ಲಿ ಬಿಜೆಪಿ ನಾಯಕ ಸಿ.ಟಿ. ರವಿ ದ್ವೇಷ, ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.