ಕೋಮುಗಲಭೆ ಜಿಲ್ಲೆಯಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸಿ : ಸಚಿವ ಎನ್.ಚಲುವರಾಯಸ್ವಾಮಿ

ಮಂಡ್ಯ : ಕೋಮು ಗಲಭೆ ಚಿಕ್ಕದಾಗಿರಲಿ, ದೊಡ್ಡದಾಗಿರಲಿ ಅದು ಜಿಲ್ಲೆಗೆ ಕಳಂಕ. ಅಧಿಕಾರಿಗಳು ಜಿಲ್ಲೆಯಲ್ಲಿ ಕೋಮು ಗಲಭೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ
ಮಂಗಳವಾರ ಮದ್ದೂರು ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಳೆ ಮದ್ದೂರಿನಲ್ಲಿ ನಡೆಯಲಿರುವ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಶಾಂತಿಯುತವಾಗಿ ಭಾಗವಹಿಸಬೇಕು ಹಾಗೂ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದರು.
ಪೊಲೀಸ್ ಇಲಾಖೆ ವತಿಯಿಂದ ದೊಡ್ಡ, ದೊಡ್ಡ ಗಲಭೆಗಳನ್ನು ನಿಯಂತ್ರಿಸಲಾಗಿದೆ ಹಾಗೂ ಪಾರದರ್ಶಕವಾಗಿ ತನಿಖೆ ನಡೆಸಲಾಗಿದೆ. ಮದ್ದೂರು ತಾಲ್ಲೂಕಿನಲ್ಲಿ ನಡೆದಿರುವ ಗಲಭೆಗೆ ಕಾರಣವಾಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಶಾಂತಿ ಕದಡುವ ಕಿಡಿಗೇಡಿಗಳು ನಿಮ್ಮ ಸುತ್ತ ಮುತ್ತಲೇ ಇರುತ್ತಾರೆ. ಸಾರ್ವಜನಿಕರು ಹಾಗೂ ಮುಖಂಡರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದು ಕಿವಿಮಾತು ಹೇಳಿದರು.
ಹಿಂದೂ, ಮುಸ್ಲಿಂ ಸಮುದಾಯದವರು ಸಮಾಜದಲ್ಲಿ ಒಟ್ಟಿಗೆ ಬಾಳಬೇಕು, ಕೆಲವು ಕಿಡಿಗೇಡಿಗಳು ನಡೆಸುವ ಕೃತ್ಯಕ್ಕೆ ಜೀವನ ನಡೆಸುವುದು ಕಷ್ಟಕರವಾಗಿರುತ್ತದೆ. ವಿವಿಧ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ನಡೆಯುವ ಮೆರವಣಿಗೆಗಳಲ್ಲಿ ತಾಳ್ಮೆಯಿಂದ ವರ್ತಿಸಿ ಎಂದರು.
ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ಹೆಸರುವಾಸಿಯಾಗಿರುವ ಮದ್ದೂರು ತಾಲ್ಲೂಕಿನಲ್ಲಿ ಕೋಮುಗಲಭೆಗಳು ಬೇಡ. ಸರ್ಕಾರ ಜಿಲ್ಲೆಗೆ ಸಕ್ಕರೆ ಕಾರ್ಖಾನೆ ಅಭಿವೃದ್ಧಿ ಸೇರಿದಂತೆ ನಾಲೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸಾರ್ವಜನಿಕರು ಸರ್ಕಾರದೊಂದಿಗೆ ಕೈ ಜೋಡಿಸಿ ಎಂದರು.
ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಅವರು ಮಾತನಾಡಿ, ರಾಜ್ಯದಲ್ಲಿ 77 ಸಾವಿರ ಗಣೇಶ ಮೂರ್ತಿಗಳು ಹಾಗೂ ಮಂಡ್ಯದಲ್ಲಿ 3,700 ಗಣೇಶ ಪ್ರತಿಷ್ಠಾಪನೆ ಆಗಿದೆ. ಎಲ್ಲೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕಿಡಿಗೇಡಿಗಳು ಎಸಗಿರುವ ಅಹಿತಕರ ಘಟನೆಯನ್ನು ದೊಡ್ಡದಾಗಿ ಬಿಂಬಿಸಿ ಶಾಂತಿ ಕದಡುವುದು ಬೇಡ. ತಪ್ಪಿತಸ್ಥರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದರು
ಶಾಸಕ ಉದಯ್ ಅವರು ತಾಲ್ಲೂಕಿನ ಅಭಿವೃದ್ಧಿಗೆ 1,300 ಕೋಟಿ ರೂ. ಅನುದಾನ ತಂದಿದ್ದಾರೆ. ಬಹಳ ವರ್ಷಗಳಿಂದ ತಾಲ್ಲೂಕಿನಲ್ಲಿ ಅಭಿವೃದ್ಧಿ ಆಗಿರಲಿಲ್ಲ. ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ಉದಯ್ ಅಭಿವೃದ್ಧಿ ಮಾಡುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಬೇಡಿ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ , ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.