ಮದ್ದೂರು ಗಲಭೆ ಪ್ರಕರಣ | ಅವಹೇಳನಾಕಾರಿ ಹೇಳಿಕೆ; ಮಹಿಳೆ ವಿರುದ್ಧ ಎಫ್ಐಆರ್ ದಾಖಲು

ಜ್ಯೋತಿಗೌಡ
ಮಂಡ್ಯ, ಸೆ.11 : ಜಿಲ್ಲೆಯ ಮದ್ದೂರಿನಲ್ಲಿ ಗಣೇಶಮೂರ್ತಿ ಮೆರವಣಿಗೆಯಲ್ಲಿ ಕಲ್ಲು ತೂರಾಟ ಪ್ರಕರಣ ಸಂಬಂಧ ನಡೆದ ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಮತ್ತು ಮುಸ್ಲಿಮರ ವಿರುದ್ಧ ಘೋಷಣೆ ಕೂಗಿದ್ದ ಮಹಿಳೆ ವಿರುದ್ಧ ಮದ್ದೂರು ಪೊಲೀಸರು ಸ್ವಯಂಪ್ರೇರಿತ ಎಫ್ಐಆರ್ ದಾಖಲಿಸಿದ್ದಾರೆ.
ಮದ್ದೂರಿನ ಶಿವಪುರ ಬಡಾವಣೆಯ ಜ್ಯೋ ತಿ ಅಲಿಯಾಸ್ ಜ್ಯೋತಿಗೌಡ ವಿರುದ್ಧ ಮದ್ದೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್ ನೀಡಿದ ದೂರಿನ ಅನ್ವಯ ಬಿನ್ಎಸ್ 196(1) ಎ ಹಾಗು 299 ರ ಕಾಯ್ದೆ ಅಡಿ ಎಫ್ ಐ ಆರ್ ದಾಖಲಿಸಿ ಮದ್ದೂರು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.
ಕಳೆದ ರವಿವಾರ ಸೆ.7ರಂದು ಮದ್ದೂರಿನ ರಾಮ್ -ರಹೀಂ ನಗರದ ಮಸೀದಿ ಮುಂದೆ ಗಣೇಶಮೂರ್ತಿ ಮೆರವಣಿಗೆ ಬರುತ್ತಿದ್ದಾಗ ಕಲ್ಲು ತೂರಾಟ ನಡೆದಿತ್ತು. ಇದನ್ನು ಖಂಡಿಸಿ ಮಾರನೆ ದಿನ ಹಿಂದುತ್ವ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಈ ಪ್ರತಿಭಟನೆಯಲ್ಲಿ ಜ್ಯೋತಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಲಾಠಿಚಾರ್ಜ್ ನಡೆದಾಗ ಜ್ಯೋತಿ ಅವರಿಗೂ ಏಟು ಬಿದ್ದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಆಕೆಯ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದಿವೆ.
ಮೆರವಣಿಗೆ ವೇಳೆ ಈಕೆ ಮುಸ್ಲಿಂ ಸಮುದಾಯದ ವಿರುದ್ಧ ಘೋಷಣೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮಾಧ್ಯಮಗಳ ಮುಂದೆ ಅವಹೇಳನಾಕಾರಿ ಹೇಳಿಕೆ ನೀಡಿದ್ದರು.