ʼಅಗತ್ಯ ಬಿದ್ದರೆ ನಾವು ತೊಡೆನೂ ತಟ್ಟುತ್ತೇವೆ, ತಲೆನೂ ತೆಗೆಯುತ್ತೇವೆʼ : ಮದ್ದೂರಿನಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ ಸಿ.ಟಿ.ರವಿ

ಮಂಡ್ಯ, ಸೆ.10: ಗಣಪತಿಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಉದ್ವಿಗ್ನಗೊಂಡಿದ್ದ ಮದ್ದೂರು ಪಟ್ಟಣ ಸಹಜ ಸ್ಥಿತಿಯತ್ತ ಮರುಳುತ್ತಿರುವ ಬೆನ್ನಲ್ಲೇ, ಸಿ.ಟಿ.ರವಿ ಸೇರಿದಂತೆ ಕೆಲವು ಬಿಜೆಪಿ ನಾಯಕರ ಪ್ರಚೋದನಾಕಾರಿ ಭಾಷಣ ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಕಳೆದ ರವಿವಾರ ರಾತ್ರಿ ಮದ್ದೂರಿನ ರಾಮ್ ರಹೀಂ ನಗರದ ಮಸೀದಿ ಬಳಿ ಗಣಪತಿಮೂರ್ತಿ ಮೇಲೆ ಕಲ್ಲು ತೂರಾಟ ನಡೆದು ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಮರುದಿನ ಸೋಮವಾರ ಬಿಜೆಪಿ, ಜೆಡಿಎಸ್, ಹಿಂದುತ್ವ ಸಂಘಟನೆಗಳ ನೂರಾರು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಲಘು ಲಾಠಿ ಪ್ರಹಾರವೂ ಆಗಿತ್ತು.
ಎಚ್ಚೆತ್ತ ಸರಕಾರ ಪಟ್ಟಣದಲ್ಲಿ ಸರ್ಪಗಾವಲು ಹಾಕಿದೆ. ಮಂಗಳವಾರ ಪಟ್ಟಣದಲ್ಲಿ ಬಂದ್ ಕರೆಕೊಡಲಾಗಿತ್ತು. ಪರಿಸ್ಥಿತಿ ಸಹಜ ಸ್ಥಿತಿಯತ್ತ ಬರುತ್ತಿದೆ. ಆದರೆ, ಬುಧವಾರ ಸಾಮೂಹಿಕ ಗಣಪತಿಮೂರ್ತಿ ವಿಸರ್ಜನೆ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ನಾಯಕರು ಮುಸ್ಲಿಮರು, ಕಾಂಗ್ರೆಸ್ ನಾಯಕರ ವಿರುದ್ಧ ದ್ವೇಷವನ್ನು ಕಾರಿದರು.
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ತನ್ನ ಭಾಷಣದುದ್ದಕ್ಕೂ ಇಸ್ಲಾಂ ಧರ್ಮ, ಮುಸ್ಲಿಮರು, ಕಾಂಗ್ರೆಸ್ ನಾಯಕರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಸಿ.ಟಿ.ರವಿಗೆ ತಾವೇನೂ ಕಡಿಮೆ ಎಂಬಂತೆ ಅಬ್ಬರಿಸಿದರು.
‘ಟಿಪ್ಪು ಮತ್ತು ಅವರ ಅಪ್ಪನನ್ನೇ ಬಿಟ್ಟಿಲ್ಲ ನಾವು. ಇನ್ನು ನಿಮ್ಮನ್ನು ಬಿಡುತ್ತೀವಾ? ನಮಗೆ ತೊಡೆ ತಟ್ಟುವ ಕೆಲಸ ಮಾಡಬೇಡಿ. ಅಗತ್ಯ ಬಿದ್ದರೆ ನಾವೂ ತೊಡೆನೂ ತಟ್ಟುತ್ತೇವೆ, ತಲೆನೂ ತೆಗೆಯುತ್ತೇವೆ. ಅಣ್ಣ ಅಂದವರನ್ನು ನಾವು ಅಣ್ಣ ಅಂತೀವಿ. ನೀವು ಏನ್ಲ ಅಂದ್ರೆ ನಿಮ್ ತಲೆ ತೆಗಯುತ್ತೇವೆ. ನಮ್ಮಲ್ಲಿ ಉರೀಗೌಡ, ನಂಜೇಗೌಡರು ಇದ್ದಾರೆ’ ಎಂದು ಸಿ.ಟಿ.ರವಿ ಸವಾಲು ಹಾಕಿದರು.
‘ಭದ್ರಾವತಿ ಶಾಸಕ ಸಂಗಮೇಶ್ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತಾನಂತೆ. ನಿನ್ನ ಯಾವನಯ್ಯಾ ತಡೆಯುತ್ತಾನೆ. ಈ ಜನ್ಮದಲ್ಲೇ ಹೋಗು. ಮುಂದಿನ ಜನ್ಮದಲ್ಲಿ ನೀನು ದನ ತಿನ್ನುವವನಾಗಿಯೇ ಹುಟ್ಟುತ್ತೀಯಾ. ಕಾಂಗ್ರೆಸ್‌ನ ಇಡೀ ಸಚಿವ ಸಂಪುಟವೇ ಇಸ್ಲಾಂಗೆ ಕನ್ವರ್ಟ್ ಆಗಿಬಿಡಲಿ, ನೇರವಾಗಿ ಎದರಿಸುವ ಶಕ್ತಿ ನಮಗಿದೆ’ ಎಂದು ಅವರು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕರ ಓಲೈಕೆ ಹೇಳಿಕೆಯಿಂದಲೇ ಕೊಬ್ಬಿರುವುದು ಇವರು(ಮುಸ್ಲಿಮರು). ಇಸ್ಲಾಂನಲ್ಲಿ ಸಹಬಾಳ್ವೆಗೆ ಜಾಗವೇ ಇಲ್ಲ. ಈ ಜಗತ್ತನ್ನು ಎರಡಾಗಿ ನೋಡ್ತಾರೆ. ಒಂದು ಮಾಮಿನ್, ಮತ್ತೊಂದು ಕಾಫಿರ್. ಸಿದ್ದರಾಮಯ್ಯ ಏನ್ ಟೋಪಿ ಹಾಕಿದ್ದರು, ಡಿ.ಕೆ.ಶಿವಕುಮಾರ್ ಏನ್ ಬ್ರದರ್ ಎಂದರೂ ಅವರ(ಮುಸ್ಲಿಂರ) ದೃಷ್ಟಿಯಲ್ಲಿ ಅವರು ಕಾಫಿರೇ. ಇದೇ ಇಸ್ಲಾಂ ಹೆಸರಲ್ಲೇ ಜಗತ್ತಿನಲ್ಲಿ ಭಯೋತ್ಪಾದನೆ ನಡೆಯುತ್ತಿರುವುದು, ಎಲ್ಲಿವರೆಗೂ ಇಸ್ಲಾಂ ಬದಲಾಗಲ್ಲ, ಅಲ್ಲಿವರೆಗೂ ಜಗತ್ತಿನಲ್ಲಿ ಶಾಂತಿ ನೆಲಸಲು ಆಗಲ್ಲ’ ಎಂದು ಅವರು ಗುಡುಗಿದರು.
‘ನಾವು ಮದ್ದೂರಿಗೆ ರಾಜಕಾರಣ ಮಾಡಲು ಬಂದಿಲ್ಲ, ಹಿಂದೂ ಸಮಾಜದ ಕೇಸರಿ ಶಾಲು ಹಾಕಿಕೊಂಡು ಬಂದಿದ್ದೇವೆ. ಹಿಂದೂ ವಿಷಯದಲ್ಲಿ ರಾಜಕಾರಣವಿಲ್ಲ. ನೀವೇನು ಮಾಡುತ್ತೀರಿ ಎನ್ನುವುದು ನಮಗೆ ಗೊತ್ತಿದೆ. ಪಾಕಿಸ್ತಾನ ಝಿಂದಾಬಾದ್ ಎನ್ನುವವರನ್ನು ನಮ್ಮವರು ಎನ್ನುತ್ತೀರಿ. ಪಾಕಿಸ್ತಾನ ಮೇಲೆ ನಿಮಗೆ ಪ್ರೀತಿ ಇದ್ದರೆ ಅಲ್ಲಿಗೆ ಗಂಟು ಮೂಟೆ ಕಟ್ಟಿ ನಡೆಯಿರಿ’ ಎಂದು ಹೇಳಿದ್ದಾರೆ.