ಮೇಕೆದಾಟ ಯೋಜನೆ ವಿಚಾರದಲ್ಲಿ ರಾಜಕೀಯ ಸಲ್ಲದು : ಸಿಎಂ ಸಿದ್ದರಾಮಯ್ಯ

ಮಂಡ್ಯ, ಸೆ.13 : ಮೇಕೆದಾಟು ಯೋಜನೆಗೆ ತಮಿಳುನಾಡು ಹಾಗೂ ಕೇಂದ್ರ ಸರಕಾರ ಅನಗತ್ಯವಾಗಿ ತಕರಾರು ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಮಳವಳ್ಳಿ ತಾಲೂಕಿನ ಪ್ರವಾಸಿತಾಣ ಗಗನಚುಕ್ಕಿಯಲ್ಲಿ ಶನಿವಾರ ಎರಡು ದಿನ ಆಯೋಸಿರುವ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮವನ್ನು ಶನಿವಾರ ಸಂಜೆ ಉದ್ಘಾಟಿಸಿ ಮಾತನಾಡಿದ ಅವರು, ಮೇಕೆದಾಟು ವಿಚಾರವಾಗಿ ತಮಿಳುನಾಡು ಹಾಗೂ ಕೇಂದ್ರ ಸರಕಾರ ರಾಜಕೀಯ ಮಾಡಬಾರದು ಎಂದರು.
ಮೇಕೆದಾಟು ಯೋಜನೆ ನಿರ್ಮಾಣವಾದರೆ ತಮಿಳುನಾಡು ಹಾಗೂ ಕರ್ನಾಟಕ ಎರಡು ರಾಜ್ಯಗಳಿಗೂ ಅನುಕೂಲವಾಗಲಿದೆ. ಮೇಕೆದಾಟು ಯೋಜನೆ ಜಾರಿಯಾದರೆ, 66 ಟಿಎಂಸಿ ನೀರನ್ನು ನಾವು ಶೇಖರಣೆ ಮಾಡಿಕೊಳ್ಳಬಹುದು. ಅಗತ್ಯ ಬಿದ್ದಾಗ ಈ ನೀರನ್ನು ನಾವು ಬಳಸಿಕೊಳ್ಳಬಹುದು ಎಂದು ಅವರು ವಿವರಿಸಿದರು.
ಮಂಡ್ಯದಲ್ಲಿ ಸರಕಾರಿ ಸ್ವಾಮ್ಯದಲ್ಲಿ ನಡೆಯುತ್ತಿರುವ ಮೈಷುಗರ್ ಕಾರ್ಖಾನೆ ಲಾಭದಾಯಕವಾಗಿ ನಡೆಯಬೇಕು ಎಂಬ ದೃಷ್ಟಿಯಿಂದ ಕಾರ್ಖಾನೆಗೆ ಬಾಯ್ಲರ್ ಹೌಸ್ ನೀಡಲಾಗುವುದು. ಕಾರ್ಖಾನೆಯ ಅಭಿವೃದ್ಧಿಗಾಗಿ 112 ಕೋಟಿ ರೂ. ಅನುದಾನ ನೀಡಲಾಗಿದೆ. ಸಚಿವರು ಹಾಗೂ ಶಾಸಕರು ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಲಾಭದಾಯಕವಾಗಿ ನಡೆಯುವ ರೀತಿ ಯೋಜಿಸಬೇಕು ಎಂದು ಅವರು ಸಲಹೆ ನೀಡಿದರು.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗಿ 5-6 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ತಕ್ಷಣವೇ ಮುಖ್ಯಮಂತ್ರಿಗಳು ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಶೀಘ್ರವೇ ಪರಿಹಾರ ನೀಡುವಂತೆ ಮನವಿ ಮಾಡಿದರು. ಗುಲ್ಬರ್ಗ ಜಿಲ್ಲೆಗೆ ಸುಮಾರು 600 ಕೋಟಿ ಮಿಮಾ ಹಣವನ್ನು ರೈತರಿಗೆ ಕೊಡಿಸಲಾಗಿದೆ ಎಂದು ಹೇಳಿದರು.
ಸ್ಥಳೀಯ ಶಾಸಕ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಮುಖ್ಯಮಂತ್ರಿಗಳ ಸಹಕಾರದಿಂದ ಮುಂದಿನ ದಿನಗಳಲ್ಲಿ ಸುಮಾರು 600 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಹನಿ ನೀರಾವರಿ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ಮಧು ಜಿ ಮಾದೇಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಒ ಕೆ.ಆರ್.ನಂದಿನಿ, ಇತರ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
“ಕಾವೇರಿ ನೀರು ಹಂಚಿಕೆ ನ್ಯಾಯಮಂಡಳಿ ಒಪ್ಪಂದದ ಪ್ರಕಾರ ತಮಿಳುನಾಡಿಗೆ ವಾರ್ಷಿಕ 177.25 ಟಿಎಂಸಿ ನೀರು ಕೊಡಬೇಕು. ಪ್ರಸಕ್ತ ಸಾಲಿನಲ್ಲಿ ಈವರೆಗೆ 98 ಟಿಎಂಸಿ ನೀರು ಹರಿಸಬೇಕಿತ್ತು. ಉತ್ತಮ ಮಳೆಯಾಗಿರುವುದರಿಂದ 221 ಟಿಎಂಸಿ ನೀರನ್ನು ಹರಿಸಿದ್ದೇವೆ. ಹೆಚ್ಚುವರಿಯಾಗಿ 122 ಟಿಎಂಸಿ ನೀರು ಹರಿಸಿದ್ದೇವೆ. ಹಾಗಾಗಿ ನೀರಿನ ಸಮಸ್ಯೆ ಇಲ್ಲ.”
-ಸಿದ್ದರಾಮಯ್ಯ, ಮುಖ್ಯಮಂತ್ರಿ.
“ವಿಪಕ್ಷಗಳು ಸತತವಾಗಿ ಮಂಡ್ಯದಲ್ಲಿ ಕೋಮು ಗಲಭೆಯನ್ನು ಉಂಟುಮಾಡುವ ಯತ್ನ ನಡೆಸುತ್ತಿದ್ದು, ಅದಕ್ಕೆ ಅವಕಾಶ ನೀಡುವುದಿಲ್ಲ. ನಮ್ಮ ಸರಕಾರ ಯಾರ ಓಲೈಕೆಗೂ ಮಣೆ ಹಾಕದೆ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತದೆ.”
-ಎನ್.ಚಲುವರಾಯಸ್ವಾಮಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ.