ಮದ್ದೂರು ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ: ಪೊಲೀಸರಿಂದ ಕಟ್ಟೆಚ್ಚರ

ಮಂಡ್ಯ: ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ರವಿವಾರ ಎರಡು ಗುಂಪುಗಳ ಮಧ್ಯೆ ನಡೆದ ಕಲ್ಲು ತೂರಾಟ ಹಾಗೂ ಬಳಿಕ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರ ಲಾಠಿ ಪ್ರಹಾರ ಖಂಡಿಸಿ ಮಂಗಳವಾರ ಕರೆ ನೀಡಿದ್ದ ಮದ್ದೂರು ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹಿಂದುತ್ವ ಸಂಘಟನೆಗಳು ಮದ್ದೂರು ಬಂದ್ ಗೆ ಕರೆ ನೀಡಿದ್ದು, ಪಟ್ಟಣದಾದ್ಯಂತ ಸ್ವಯಂ ಪ್ರೇರಿತವಾಗಿ ಕೆಲವು ಅಂಗಡಿ, ಮುಂಗಟ್ಟುಗಳು ಮುಚ್ಚಲ್ಪಟ್ಟಿವೆ. ಹಲವು ಕಡೆ ವ್ಯಾಪಾರಿಗಳು ಅಂಗಡಿಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಜನ ಸಂಚಾರ ವಿರಳವಾಗಿದ್ದು, ಬಸ್, ಆಟೋ ಇತರ ವಾಹನಗಳ ಸಂಚಾರ ಮಾಮೂಲಿಯಾಗಿದೆ. ಸದ್ಯಕ್ಕೆ ಯಾವುದೇ ಪ್ರತಿಭಟನೆ ನಡೆಯುತ್ತಿಲ್ಲ. ಪರಿಸ್ಥಿತಿ ಹತೋಟಿಯಲ್ಲಿದ್ದರೂ ಬೂದಿ ಮುಚ್ಚಿದ ವಾತಾವರಣ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಮುಂದುವರಿಸಲಾಗಿದೆ.
ಪಟ್ಟಣದಾದ್ಯಂತ 1,500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತ್ವತ್ವದಲ್ಲಿ ರೌಂಡ್ಸ್ ನಡೆಸಲಾಗುತ್ತಿದೆ. ನಾಲ್ವರು ಹೆಚ್ಚುವರಿ ಎಸ್ಪಿಗಳು, 15 ಡಿವೈಎಸ್ಪಿ, 35 ಇನ್ ಸ್ಪೆಕ್ಟರ್, 80 ಪಿಎಸ್ಸೈಗಳು, 10 ಡಿಎಆರ್ ತುಕಡಿ, 15 ಕೆಎಸ್ ಆರ್ ಪಿ ಸೇರಿ 800ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ಜಿಲ್ಲಾಧಿಕಾರಿ ಡಾ.ಕುಮಾರ ಇಂದು ಮದ್ದೂರು ತಾಲೂಕಿನಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಇಂದು (ಸೆ.9) ಅಪರಾಹ್ನ 3 ಗಂಟೆಗೆ ಮದ್ದೂರಿನ ಶಿವಪುರ ಸತ್ಯಾಗ್ರಹ ಸೌಧದ ಹತ್ತಿರ ಇರುವ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಶಾಂತಿ ಸಭೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.