ಮದ್ದೂರು ಘಟನೆ ಪೂರ್ವ ನಿಯೋಜಿತ : ನಿಖಿಲ್ ಕುಮಾರಸ್ವಾಮಿ ಆರೋಪ

ಮಂಡ್ಯ, ಸೆ.8 : ಮದ್ದೂರಿನಲ್ಲಿ ಗಣೇಶಮೂರ್ತಿ ಮೆರವಣಿಗೆ ವೇಳೆ ಮಸೀದಿಯ ಬಳಿ ನಡೆದಿರುವಂತಹ ಘಟನೆ ಪೂರ್ವ ನಿಯೋಜಿತವಾಗಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮದ್ದೂರಿನಲ್ಲಿ ಸೋಮವಾರ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಎರಡು ಧರ್ಮದ ಬಗ್ಗೆ ಪರಸ್ಪರ ಸಂಘರ್ಷ ಉಂಟು ಮಾಡಿದೆ. ಇದಕ್ಕೆ ನೇರ ಕಾರಣ ಕಾಂಗ್ರೆಸ್ ಸರಕಾರ. ಸರಕಾರದ ವೈಫಲ್ಯತೆ, ಗುಪ್ತಚರ ವೈಫಲ್ಯತೆಯಿಂದ ಈ ಘಟನೆ ನಡೆದಿದೆ ಎಂದರು.
ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಇದು ಮೊದಲನೇ ಘಟನೆಯಲ್ಲ. ಈ ಹಿಂದೆಯೂ ನಾಗಮಂಗಲದಲ್ಲಿ ಇದೇ ರೀತಿ ಘಟನೆ ನಡೆದಿತ್ತು. ಕೆರಗೋಡು ಧ್ವಜ ವಿವಾದ ನಡೆದಿತ್ತು. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಕಾಂಗ್ರೆಸ್ ಸರಕಾರ ಧಕ್ಕೆ ಉಂಟುಮಾಡುತ್ತಿದೆ ಎಂದು ಅವರು ಟೀಕಿಸಿದರು.
ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ರಾಜಕೀಯ ಬೆಳೆಸುವಂತಹ ಪ್ರಶ್ನೆ ಇಲ್ಲ. ನಮ್ಮ ಧಾರ್ಮಿಕ ಸಂಸ್ಕೃತಿಗೆ ಅಪಮಾನವಾದಾಗ ನಾವು ರಾಜಕೀಯ ಪಕ್ಷ ಬದಿಗಿಟ್ಟು ನಾವು ಹಿಂದೂ ಅಂತ ಆಲೋಚನೆ ಮಾಡಬೇಕಾಗುತ್ತದೆ ಎಂದರು.
ಈ ಘಟನೆಯಲ್ಲಿ ಮಹಿಳೆಯರ ಮೇಲೆ ಕೂಡ ಪೊಲೀಸರು ಲಾಠಿಚಾರ್ಜ್ ಮಾಡಿರುವುದು ನಿಜಕ್ಕೂ ಖಂಡನೀಯ. ಅಸಮರ್ಥ ಗೃಹ ಮತ್ತು ಉಸ್ತುವಾರಿ ಸಚಿವರು ಈ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.