ಚಿಕ್ಕಬಳ್ಳಾಪುರ: ಮದುವೆಯಾಗಲು ನಿರಾಕರಿಸಿದ ಅತ್ತೆಮಗಳಿಗೆ ಟಾಯ್ಲೆಟ್ ಕ್ಲೀನರ್ ಆ್ಯಸಿಡ್ ಎರಚಿದ ಸೋದರ ಮಾವ

ಸಾಂದರ್ಭಿಕ ಚಿತ್ರ
ಚಿಕ್ಕಬಳ್ಳಾಪುರ: ಮದುವೆಯಾಗಲು ನಿರಾಕರಿಸುತ್ತಿದ್ದಾಳೆ ಎಂಬ ಕಾರಣಕ್ಕೆ ಅತ್ತೆ ಮಗಳ(ಸೊಸೆ) ಮೇಲೆ ಸೋದರ ಮಾವ ಟಾಯ್ಲೆಟ್ ಕ್ಲೀನರ್ ಆ್ಯಸಿಡ್ ಎರಚಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ನಿವಾಸಿ ಆನಂದ್ ಕುಮಾರ್(20) ಆ್ಯಸಿಡ್ ದಾಳಿ ಮಾಡಿರುವ ಆರೋಪಿ. ಈತ ತನ್ನ ಸೊಸೆ ವೈಶಾಲಿ(18) ಮೇಲೆ ಟಾಯ್ಲೆಟ್ ಕ್ಲೀನರ್ ಆ್ಯಸಿಡ್ ದಾಳಿ ಎರಚಿದ್ದಾನೆ. ಬಳಿಕ ತಾನು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಅತ್ತೆ ಮಗಳಾಗಿರುವ ವೈಶಾಲಿಯನ್ನು ಆನಂದ್ ಪ್ರೀತಿಸುತ್ತಿದ್ದ ವಿವಾಹವಾಗಲು ಬಯಸಿದ್ದನು. ಆದರೆ ವೈಶಾಲಿ ಈ ಪ್ರಸ್ತಾಪವನ್ನು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಆನಂದ್, ಮಂಗಳವಾರ ಅತ್ತೆ ಮನೆ ಬಳಿ ಬಂದು ವೈಶಾಲಿ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಬಳಿಕ ಭಯಗೊಂಡು ತಾನೂ ಸಹ ಮೈಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಯ್ಲೆಟ್ ಕ್ಲೀನರ್ ಆ್ಯಸಿಡ್ ಹೆಚ್ಚು ಶಕ್ತಿಶಾಲಿಯಲ್ಲದ ಕಾರಣ ವೈಶಾಲಿಯ ಮುಖದಲ್ಲಿ ಒಂದಿಷ್ಟು ದದ್ದುಗಳು ಕಾಣಿಸಿಕೊಂಡಿದ್ದು, ಮುಖ ಕೆಂಪು ಬಣ್ಣಕ್ಕೆ ತಿರುಗಿದೆ ಎಂದು ತಿಳಿದುಬಂದಿದೆ. ಸದ್ಯ ವೈಶಾಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿರುವ ಆನಂದ್ ಗೆ ಶೇ.70ರಷ್ಟು ಸುಟ್ಟ ಗಾಯಗಳಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ಆತನಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.