ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ

ಚಿಕ್ಕಬಳ್ಳಾಪುರ (ನಂದಿ ಗಿರಿಧಾಮ) : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತೊರೆಬೀರನಹಳ್ಳಿ ಮತ್ತು ಬೆಳಗೆರೆ ಗ್ರಾಮಗಳ ನಡುವೆ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕಾಗಿ 28 ಕೋಟಿ ರೂ.ಮೊತ್ತದ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಂದಿ ಗಿರಿಧಾಮದಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಗುಡಿಹಳ್ಳಿ ಮತ್ತು ತಪ್ಪಗೊಂಡನಹಳ್ಳಿ ಗ್ರಾಮಗಳ ನಡುವೆ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕಾಗಿ 31.40 ಕೋಟಿ ರೂ. , ಗೋಸಿಕೆರೆ ಗ್ರಾಮದ ಸಮೀಪ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕಾಗಿ 34.50 ಕೋಟಿ ರೂ. ಮಂಜೂರು ಮಾಡಲು ನಿರ್ಧರಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದ ಹತ್ತಿರ ಭದ್ರಾ ನದಿಯಿಂದ 0.19 ಟಿಎಂಸಿ ನೀರನ್ನೆತ್ತಿ ಕಂಬದಾಳ್ ಹೊಸೂರು ಮತ್ತು ಸುತ್ತಮುತ್ತಲಿನ ಗ್ರಾಮಗಳ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 54 ಕೋಟಿ ರೂ.ಗಳನ್ನು ಮಂಜೂರಾತಿ ನೀಡಲಾಗಿದೆ.
ಭದ್ರಾ ನದಿಯ ಎಡ ಮತ್ತು ಬಲದಂಡೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳನ್ನು ರಕ್ಷಿಸಲು ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು 50 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಭದ್ರಾವತಿ ಪಟ್ಟಣದ ಭದ್ರಾ ನದಿಗೆ ಅಡ್ಡಲಾಗಿ ರಸ್ತೆ ಸೇತುವೆ ನಿರ್ಮಾಣ ಮತ್ತು ದೊಣಬಘಟ್ಟ, ಕಾಗೆಕೊಡಮಗ್ಗೆ, ಹೊಳೆಹೊನ್ನೂರು ಗ್ರಾಮದ ಭದ್ರಾವತಿ ಮುಖ್ಯ ರಸ್ತೆ ನಡುವೆ ಸಂಪರ್ಕ ರಸ್ತೆ ಸುಧಾರಣೆ ಕಾಮಗಾರಿಯನ್ನು 35 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಯಡಗೊಪ್ಪ ಗ್ರಾಮದ ಹತ್ತಿರ ದಂಡಾವತಿ ನದಿಗೆ ಬ್ಯಾರೇಜ್ ನಿರ್ಮಿಸಿ 15 ಕೆರೆಗಳನ್ನು ತುಂಬಿಸುವ 38.50 ಕೋಟಿ ರೂ.,
ಗುಡವಿ ಗ್ರಾಮದ ಹತ್ತಿರ ವರದಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸಿ, 0.2017 ಟಿಎಂಸಿ ನೀರನ್ನೆತ್ತಿ 32 ಕೆರೆಗಳನ್ನು ತುಂಬಿಸುವ 75.60 ಕೋಟಿ ರೂ.ಗಳ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ದಂಡಾವತಿ ಮತ್ತು ವರದಾ ನದಿಗಳಿಗೆ ಅಡ್ಡಲಾಗಿ ಬ್ಯಾರೇಜ್/ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸುವ 54.70 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ನೀಡಲಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಗ್ರಾಮದ ಹತ್ತಿರ ತುಂಗಭದ್ರಾ ನದಿಯಿಂದ ನೀರನ್ನೆತ್ತಿ ಚನ್ನಗಿರಿ ತಾಲೂಕಿನ ಕೊಡತಕೆರೆ, ಮಾವಿನಹೊಳೆಕೆರೆ ಸೇರಿದಂತೆ ಸುತ್ತಮುತ್ತಲಿನ 41 ಕೆರೆಗಳನ್ನು ತುಂಬಿಸಲು 365 ಕೋಟಿ ರೂ. ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಕೊಪ್ಪಳ ಜಿಲ್ಲೆಯ ಹನುಮ ಸಾಗರ ಗ್ರಾಮ ಪಂಚಾಯತಿ ಅನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ನಿರ್ಧರಿಸಲಾಗಿದೆ.