ಬಿಜೆಪಿ ಎಲ್ಲದರಲ್ಲಿಯೂ ರಾಜಕೀಯ ಮಾಡುತ್ತದೆ : ಸಿಎಂ ಸಿದ್ದರಾಮಯ್ಯ
ʼರಾಜೀನಾಮೆ ಕೇಳುವುದು ಬಿಜೆಪಿಗೆ ಅಭ್ಯಾಸವಾಗಿದೆʼ

ಮುಖ್ಯಮಂತ್ರಿ ಸಿದ್ದರಾಮಯ್ಯ
ಚಿಕ್ಕಬಳ್ಳಾಪುರ (ಗೌರಿಬಿದನೂರು): ಬಿಜೆಪಿಯವರಿಗೆ ಸುಳ್ಳು ಹೇಳಿ ಜನರ ದಾರಿ ತಪ್ಪಿಸುವುದು ಮತ್ತು ರಾಜಕೀಯವಾಗಿ ರಾಜೀನಾಮೆ ಕೇಳುವುದು ಅಭ್ಯಾಸವಾಗಿದೆ. ಬಿಜೆಪಿ ಎಲ್ಲದರಲ್ಲೂ ರಾಜಕೀಯ ಮಾಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಗೌರಿಬಿದನೂರು ತಾಲೂಕಿನ ಅಲಕಪುರ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿ ವತಿಯಿಂದ ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ಕೈಗೊಂಡಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಕುಂಭ ಮೇಳದಲ್ಲಿ 40-50 ಜನ ಕಾಲ್ತುಳಿತದಲ್ಲಿ ಸತ್ತರು. ಆಗ ಅಲ್ಲಿನ ಮುಖ್ಯಮಂತ್ರಿಗಳ ರಾಜೀನಾಮೆ ಕೇಳಿದರೇ? ಸೇತುವೆಯೊಂದು ಉದ್ಘಾಟನೆಯಾದ ದಿನವೇ ಬಿದ್ದು 140 ಜನ ಸತ್ತರು ಆಗ ಪ್ರಧಾನಿಗಳ ರಾಜಿನಾಮೆ ಕೇಳಿದರೇ ? ಗೋಧ್ರಾ ಹತ್ಯಾಕಾಂಡದಲ್ಲಿ ಎಷ್ಟು ಜನ ಸತ್ತರು. ಆಗ ಗುಜರಾತ್ ಮುಖ್ಯಮಂತ್ರಿಗಳು ಯಾರಾಗಿದ್ದರು? ಅವರ ರಾಜಿನಾಮೆ ಕೇಳಿದರೇ? ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಸರಬರಾಜು ಮಾಡದೇ 23 ಜನ ಸತ್ತಾಗ ಬಸವರಾಜ ಬೊಮ್ಮಾಯಿ ರಾಜಿನಾಮೆ ನೀಡಿದರೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಬಿಜೆಪಿಯವರು ರಾಜಕೀಯವಾಗಿ ರಾಜಿನಾಮೆ ಕೊಡಿ ಎಂದು ಕೇಳುತ್ತಿದ್ದಾರೆ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದರು.
ಈಡಿಯವರು ದಾಳಿ ಮಾಡಿದ್ದು, ಯಾವುದೇ ಕಾನೂನಿನ ಉಲ್ಲಂಘನೆಯಾಗಿದ್ದರೆ ಅದಕ್ಕೆ ನಾವು ಬೆಂಬಲಿಸುವುದಿಲ್ಲ. ಕಾನೂನು ಪ್ರಕಾರವಾಗಿ ಕ್ರಮ ಕೈಗೊಳ್ಳಲಿ. ಕಾನೂನಿನ ಅನುಷ್ಠಾನಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಎಂದು ನಾಮಕರಣ ಮಾಡಲು ಗೃಹ ಸಚಿವ ಜಿ.ಪರಮೇಶ್ವರ್ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರ ಸಚಿವ ಸಂಪುಟದ ಮುಂದೆ ಬಂದಾಗ ಪರಿಶೀಲಿಸಲಾಗುವುದು ಎಂದರು.
30 ದಿನಗಳಲ್ಲಿ ವರದಿ :
ಕಾಲ್ತುಳಿತ ಪ್ರಕರಣದಲ್ಲಿ ಅನೇಕ ಆಯೋಗ ರಚನೆಯಾಗಿದ್ದು, ಇವು ತಾರ್ಕಿಕ ಅಂತ್ಯ ಕಾಣುವುದೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ತನಿಖೆ ಕೈಗೊಳ್ಳಲು ಏಕ ವ್ಯಕ್ತಿ ಆಯೋಗ ರಚನೆ ಮಾಡಿದ್ದು, ಅದು 30 ದಿನಗಳಲ್ಲಿ ವರದಿ ಸಲ್ಲಿಸಲಿದೆ. ಈ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ ಎಂದರು.
ಪಕ್ಷದ ವರಿಷ್ಠರ ತೀರ್ಮಾನ :
ಕಾಂತರಾಜ ಆಯೋಗ ವರದಿ ಬಗ್ಗೆ ಪಕ್ಷದ ವರಿಷ್ಠರ ನಿರ್ಧಾರ ಮುಖ್ಯಮಂತ್ರಿಗಳಿಗೆ ನಿರಾಸೆ ತಂದಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ವರಿಷ್ಠರು ನಿರ್ಧಾರ ಮಾಡಿದಂತೆ ನಾವು ಕ್ರಮ ಕೈಗೊಳ್ಳುತ್ತೇವೆ. ಇದು ನಮ್ಮ ತೀರ್ಮಾನವಲ್ಲ ಎಂದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಸರ್ಕಾರ ಒತ್ತು ನೀಡಿದೆ :
ರಾಜ್ಯದ ವಿಶ್ವ ವಿದ್ಯಾನಿಲಯಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಮಾತನಾಡಿದ ಅವರು, ಖಾಲಿ ಇರುವ ಕಡೆಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗಿದೆ. ಇನ್ನೂ ಹೆಚ್ಚಿನ ಉಪನ್ಯಾಸಕರನ್ನು ನೇಮಕ ಮಾಡಲಾಗುವುದು, ಅವರ ವೇತನವನ್ನು ಹೆಚ್ಚಿಸಿ, ಸೌಲಭ್ಯಗಳನ್ನು ನೀಡಲಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ನಮ್ಮ ಸರ್ಕಾರ ಒತ್ತು ನೀಡಿದೆ ಎಂದರು.
ಮೋದಿಯಿಂದ ದೇಶದ ಬಡತನ ಕಡಿಮೆಯಾಗಿಲ್ಲ :
ಮೋದಿ ಆಡಳಿತದಲ್ಲಿ ದೇಶದಲ್ಲಿ ಬಡತನ ಕಡಿಮೆಯಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬಡತನ ಅವರಿಂದ ಕಡಿಮೆಯಾಗಿಲ್ಲ. ಬಡತನ ಹೋಗಲಾಡಿಸಲು ಅವರೇನು ಮಾಡಿದ್ದಾರೆ? ಗರೀಬಿ ಹಟಾವೋ ಸೇರಿದಂತೆ ಹಲವಾರು ಕಾರ್ಯಕ್ರಮಗಳಿಂದ ಬಡತನ ಕಡಿಮೆಯಾಗಿದೆ ಎಂದರು.
ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ :
ಜಲ ಜೀವನ್ ಯೋಜನೆಯಡಿ ರಾಜ್ಯ ಸರ್ಕಾರ ಶೇ.50ರಷ್ಟು ಅನುದಾನ ನೀಡಿತ್ತದೆ. ಶೇ.30ರಷ್ಟು ಮಾತ್ರ ಕೇಂದ್ರ ಸರ್ಕಾರ ನೀಡುತ್ತದೆ. ಶೇ.20ರಷ್ಟು ಫಲಾನುಭವಿಗಳು ನೀಡುತ್ತಾರೆ. ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ರಾಜ್ಯ ಸರ್ಕಾರದ ಪಾಲು ಹೆಚ್ಚಿದ್ದರೂ, ಆಯುಷ್ಮಾನ್ ಭಾರತ್ ಯೋಜನೆ ಎನ್ನುತ್ತಾರೆ. ಅನೇಕ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಪ್ರಧಾನ ಮಂತ್ರಿಗಳ ಹೆಸರಿರುತ್ತದೆ. ಕುಸುಮ್ ಬಿ ಯೋಜನೆಯಡಿ ಶೇ.30ರಷ್ಟು ಕೇಂದ್ರದಿಂದ ಬರುತ್ತದೆ. ಒಪ್ಪದೇ ಹೋದರೆ ಅದೂ ಬರುವುದಿಲ್ಲ. ರೈತರಿಗೆ ಒಳ್ಳೆಯದಾಗಬೇಕು, ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ ಇದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.
ಎರಡು ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣವಾಗಲಿದೆ :
ಎತ್ತಿನಹೊಳೆ ಯೋಜನೆ ಎರಡು ವರ್ಷಗಳಲ್ಲಿ ಮುಕ್ತಾಯವಾಗಬಹುದು ಎಂದು ತಿಳಿಸಿದ ಮುಖ್ಯಮಂತ್ರಿಗಳು, ಈ ಭಾಗದ ಸಚಿವರು, ಶಾಸಕರು, ಹಾಗೂ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ ಎಂದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ :
ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಅನುದಾನ ಒದಗಿಸಲಾಗಿದೆ ಎಂದು ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಳೆದ ವರ್ಷ 52,000 ಕೋಟಿ ರೂ.ಗಳ ಬಂಡವಾಳ ವೆಚ್ಚ ಇತ್ತು. ಈ ವರ್ಷ 83 ಸಾವಿರ ಕೋಟಿ ರೂ. ಆಗಿದೆ ಎಂದರು. 31,000 ಕೋಟಿ ರೂ. ಬಂಡವಾಳ ವೆಚ್ಚ ಒಂದು ವರ್ಷದಲ್ಲಿ ಹೆಚ್ಚಾಗಿದೆ. ಹೀಗಿರುವಾಗ ಸರ್ಕಾರ ದಿವಾಳಿ ಹೇಗೆ ಆಗುತ್ತದೆ. ಗ್ಯಾರಂಟಿ ಯೋಜನೆಗಳಿಗೆ ಐವತ್ತು ಸಾವಿರಕ್ಕೂ ಹೆಚ್ಚು ಅನುದಾನ ಒದಗಿಸಲಾಗಿದೆ ಎಂದರು.
ಎರಡು ವರ್ಷಗಳಲ್ಲಿ 242 ಭರವಸೆಗಳನ್ನು ಈಡೇರಿಸಿದೆ
ನಮ್ಮ ಸರ್ಕಾರ ಎರಡು ವರ್ಷಗಳಲ್ಲಿ 593 ಭರವಸೆಗಳಲ್ಲಿ 242 ಭರವಸೆಗಳನ್ನು ಈಡೇರಿಸಿದ್ದು, ಕೇಂದ್ರ ಸರ್ಕಾರ 600 ಭರವಸೆಗಳನ್ನು ನೀಡಿ ಶೇ10ರಷ್ಟನ್ನೂ ಅನುಷ್ಠಾನ ಮಾಡಿಲ್ಲ ಎಂದರು.