‘ಬ್ರೇಕಿಂಗ್ ನ್ಯೂಸ್ ಭರಾಟೆ’ಯಿಂದ ಸುದ್ದಿಯ ಮೌಲ್ಯ ಕುಸಿಯುತ್ತಿದೆ: ತಂಗಡಗಿ

ಕೊಪ್ಪಳ, ಸೆ.14: ಬ್ರೇಕಿಂಗ್ ಸುದ್ದಿ ನೀಡುವ ಆತುರದಲ್ಲಿ ಸುದ್ದಿಯ ಖಚಿತ ಮಾಡಿಕೊಳ್ಳದೆ ಸುದ್ದಿ ಬಿತ್ತರಿಸುವ ಕೆಲಸವಾಗುತ್ತಿದ್ದು, ಇದರಿಂದ ಸುದ್ದಿಯ ಮೌಲ್ಯ ಕುಸಿಯುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಕಳವಳ ವ್ಯಕ್ತಪಡಿಸಿದ್ದಾರೆ.
ರವಿವಾರ ಜಿಲ್ಲೆಯ ಕಾರಟಗಿ ತಾಲೂಕಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಿಕಾ ಭವನ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೆಗಳ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಪ್ರಶ್ನಾರ್ಥಕ ಚಿಹ್ನೆ ಹಾಕಿ ಸುದ್ದಿ ಬರೆದರೆ, ಅದೇ ಸತ್ಯ ಎಂದು ಓದುಗರು ನಂಬುತ್ತಾರೆ. ಹೀಗಾಗಿ ಸುದ್ದಿಯನ್ನು ಖಚಿತ ಮಾಡಿಕೊಂಡೇ ಬರೆಯಬೇಕಿದೆ ಎಂದು ಸಲಹೆ ನೀಡಿದರು.
ಬ್ರೇಕಿಂಗ್ ನ್ಯೂಸ್ ತನ್ನ ಮೌಲ್ಯವನ್ನೇ ಕಳೆದುಕೊಳ್ಳುತ್ತಿದೆ. ಹತ್ತು ವರ್ಷಗಳ ಹಿಂದೆ ಯಾವುದಾದರೂ ಚಾನೆಲ್‌ನಲ್ಲಿ ಬ್ರೇಕಿಂಗ್ ಬಂದರೆ ನಿಂತು ಅದನ್ನು ನೋಡಿಕೊಂಡು ಹೋಗುತ್ತಿದ್ದೆವು. ಆದರೆ, ಸುದ್ದಿ ನೀಡುವ ಬರದಲ್ಲಿ ಅದರ ಖಚಿತತೆಯನ್ನು ಪಡೆದುಕೊಳ್ಳದೇ ಬ್ರೇಕಿಂಗ್ ಸುದ್ದಿ ನೀಡಲಾಗುತ್ತಿದೆ ಎಂದು ಅವರು ದೂರಿದರು.
ಇಂದು ಸುಳ್ಳು ಸುದ್ದಿ ಕ್ಷಣ ಮಾತ್ರದಲ್ಲಿ ಎಲ್ಲರನ್ನು ತಲುಪುತ್ತಿದೆ. ಆದರೆ ಅದಕ್ಕೆ ನೀವೇ ಒಂದಲ್ಲ, ಹತ್ತು ಬಾರಿ ಸುದ್ದಿಯ ಖಚಿತ ಪಡಿಸಿಕೊಂಡು ನೀಡಬೇಕು. ಸರಕಾರವನ್ನು ಬದಲಾವಣೆ ಮಾಡುವ ಶಕ್ತಿ ಮಾಧ್ಯಮಗಳಿಗಿದೆ. ಸೋಷಿಯಲ್ ಮೀಡಿಯಾದಿಂದ ಜನರ ದಿಕ್ಕು ತಪ್ಪಿಸುವ ಕೆಲಸ ಹೆಚ್ಚಾಗಿದೆ. ಸುಳ್ಳು ಸುದ್ದಿಯ ಮೇಲೆ ನಿಗಾ ಇಡುವ ಕೆಲಸ ಸರಕಾರದಿಂದ ಆಗುತ್ತಿದೆ. ಈ ಸಮಾಜದಲ್ಲಿ ಸರಕಾರದಷ್ಟೇ ಜವಾಬ್ದಾರಿ ಪತ್ರಿಕಾ ರಂಗದ ಮೇಲೆ ಇದೆ ಎಂದು ಅವರು ಹೇಳಿದರು.