ಕಾನೂನುಬದ್ಧ ಮತಾಂತರಕ್ಕೆ ಅಡ್ಡಿ ಮಾಡುವಂತಿಲ್ಲ: ಸಚಿವ ಶಿವರಾಜ್ ತಂಗಡಗಿ

ಶಿವರಾಜ್ ಎಸ್.ತಂಗಡಗಿ
ಕೊಪ್ಪಳ, ಸೆ. 15: ಕಾನೂನುಬದ್ಧವಾಗಿ ಮತಾಂತರವಾಗುವುದಕ್ಕೆ ಯಾರೂ ಅಡ್ಡಿ ಮಾಡುವಂತಿಲ್ಲ. ಇದು ಪ್ರಜಾಪ್ರಭುತ್ವದ ದೇಶ. ಬಿಜೆಪಿಯವರು ನಡೆಸಿದಂತೆ ಆಡಳಿತ ನಡೆಸಲು ಸಾಧ್ಯವಿಲ್ಲ. ಜನರ ಆಹಾರ–ಜೀವನಶೈಲಿಗೂ ನಿಯಂತ್ರಣ ಹೇರಲು ಸಾಧ್ಯವಿಲ್ಲ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್.ತಂಗಡಗಿ ಹೇಳಿದರು.
ಸೋಮವಾರ ಜಿಲ್ಲಾಡಳಿತ ಭವನದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತಾಂತರ ಆದರೆ ತಪ್ಪೇನು? ಅದು ಪ್ರತಿಯೊಬ್ಬರ ಹಕ್ಕು. ಕಾನೂನಿನಲ್ಲಿ ಅವಕಾಶವಿರುವಾಗ ಯಾಕೆ ಆಗಬಾರದು? ಆದರೆ, ಒತ್ತಾಯಪೂರ್ವಕ ಮತಾಂತರ ಅಥವಾ ಆಮಿಷ ನೀಡುವುದು ತಪ್ಪು. ಅದಕ್ಕೆ ನಮ್ಮ ವಿರೋಧವಿದೆ. ಆದರೆ ತಾವು ಬಯಸಿಕೊಂಡು ಮತಾಂತರವಾದರೇ ತಪ್ಪೇನು ಎಂದು ಪ್ರಶ್ನೆ ಮಾಡಿದರು.
ಇದು ಕಾಂಗ್ರೆಸ್ ಸರಕಾರ – ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ನೇತೃತ್ವದ ಸರಕಾರ. ಜನರಿಗೆ ತಮ್ಮ ಧರ್ಮ–ಜಾತಿ ಬರೆಸಿಕೊಳ್ಳುವ ಸ್ವಾತಂತ್ರ್ಯ ಇದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ಬರೆದರೂ ದಾಖಲಾಗುತ್ತದೆ. ಇಂತಹ ವಿಷಯಕ್ಕೆ ಸೋನಿಯಾ ಗಾಂಧಿ ಅವರ ಹೆಸರನ್ನು ಎಳೆದು ತರಬೇಡಿ. ಅವರು ಅಂಥಹ ಸಣ್ಣತನ ಮಾಡುವವರೇ ಅಲ್ಲ ಎಂದರು.
ಕೆಲವರು ಎಸ್ಸಿ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ಎಂದು ಬರೆಸಿರುವ ಉದಾಹರಣೆ ನೀಡಿದ ಅವರು, ಇದಕ್ಕಾಗಿ ಪ್ರತ್ಯೇಕ ಗುಂಪು ರಚಿಸಲಾಗುವುದು. ನಂತರ ಆಯೋಗ ತೀರ್ಮಾನ ಮಾಡುತ್ತದೆ ಎಂದರು.
ಮತಾಂತರಗೊಂಡವರಿಗೆ ಮೂಲ ಜಾತಿಯ ಸೌಲಭ್ಯ ದೊರೆಯುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಈ ಕುರಿತು ಚರ್ಚೆ ನಡೆದಿಲ್ಲ. ಈ ಕುರಿತು ಸಿ.ಎಂ. ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಯಾರು ಕ್ರಿಶ್ಚಿಯನ್ ಎಂದು ಬರೆದರೆ, ಅವರನ್ನು ಕ್ರಿಶ್ಚಿಯನ್ ಎಂದೇ ಪರಿಗಣಿಸುತ್ತೇವೆ. ಆದರೆ ಸೌಲಭ್ಯ ನೀಡಬೇಕೋ ಬೇಡವೋ ಎಂಬುದನ್ನು ಸಮೀಕ್ಷಾ ವರದಿ ಬಂದ ನಂತರ ತೀರ್ಮಾನಿಸಲಾಗುತ್ತದೆ ಎಂದರು.
ಧರ್ಮದ ಚರ್ಚೆಯಿಂದ ದೇಶ ಕುಸಿತ :
ದುಬೈಯಲ್ಲಿ ಶೇ.70ರಷ್ಟು ಮುಸ್ಲಿಮರು ಇದ್ದರೂ, ಧರ್ಮದ ಬಗ್ಗೆ ಚರ್ಚೆಯಾಗುವುದಿಲ್ಲ. ಮರುಭೂಮಿಯನ್ನು ಸಮೃದ್ಧ ಮಾಡಿದ್ದಾರೆ. ಆದರೆ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಧರ್ಮದ ಬಗ್ಗೆ ಚರ್ಚೆಯಿಂದ ದೇಶ ಹಿಂದುಳಿದಿದೆ. ನಮ್ಮ ದೇಶದಲ್ಲಿಯೂ ಅಭಿವೃದ್ಧಿಯ ಬಗ್ಗೆ ಮಾತನಾಡಬೇಕು, ಧರ್ಮದ ಬಗ್ಗೆ ಅಲ್ಲ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಸಮೀಕ್ಷೆ ಕುರಿತು ಮಾತನಾಡಿದ ಅವರು, ತುಳಿತಕ್ಕೊಳಗಾದವರನ್ನು ಗುರುತಿಸಿ, ಅವರಿಗೆ ಸರ್ಕಾರದಿಂದ ವಿಶೇಷ ಸೌಲಭ್ಯ ನೀಡಿ ಮೇಲೆತ್ತುವ ಕಾರ್ಯ ನಡೆಯಲಿದೆ ಎಂದರು.
ಬಿಜೆಪಿಯ ಗೋವಿಂದ ಕಾರಜೋಳ, ನಾರಾಯಣಸ್ವಾಮಿ ಅವರಿಗೆ ಒಳಮೀಸಲಾತಿ ಕುರಿತು ಮಾತನಾಡುವ ನೈತಿಕತೆ ಇಲ್ಲ. ತಮ್ಮ ಆಡಳಿತದಲ್ಲಿ ಅವರು ಏನು ಮಾಡಿದ್ದರು? ಇಂದು ಜನರನ್ನು ತಪ್ಪು ದಾರಿಯಲ್ಲಿ ದೂಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಂಗಭದ್ರಾ ಅಣೆಕಟ್ಟು ಗೇಟ್ ಬದಲಾವಣೆ :
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಬದಲಾವಣೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನವೆಂಬರ್ನಲ್ಲಿ ಕಾರ್ಯ ಆರಂಭವಾಗಲಿದೆ. ಸುಮಾರು ಆರು ತಿಂಗಳು ಕಾಲ ಬೇಕಾಗುವುದರಿಂದ ಈ ವರ್ಷ ಎರಡನೇ ಬೆಳೆಗಳಿಗೆ ನೀರು ಬಿಡುವುದಿಲ್ಲ. ಈ ವರ್ಷ ಗೇಟ್ ದುರಸ್ಥಿ ಮಾಡುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಉಪಸ್ಥಿತರಿದ್ದರು.
ಬಿಜೆಪಿ ನಾಯಕರ ಮಕ್ಕಳು ಫಾರಿನ್ ನಲ್ಲಿ ಓದುತ್ತಿದ್ದಾರೆ. ಆದರೆ ಬಡವರ ಮಕ್ಕಳು ಬೀದಿಗಳಲ್ಲಿ ಸಾಯುತ್ತಿದ್ದಾರೆ. ಇವರು ಮಕ್ಕಳನ್ನು ಇಲ್ಲಿ ಯಾಕೆ ಓದಿಸೋದಿಲ್ಲ? ಇಂಡಿಯಾ–ಪಾಕಿಸ್ತಾನ ಪಂದ್ಯವನ್ನು ಕೇಂದ್ರ ಸರ್ಕಾರ ತಡೆದುಹಾಕಬಹುದಿತ್ತು, ಆದರೆ ಲಾಭಕ್ಕಾಗಿ ಬಿಡಲಿಲ್ಲ. ಬಿಸಿಸಿಐ ಅಧ್ಯಕ್ಷರು ಯಾರು? ಅಮಿತ್ ಷಾ ಅವರ ಮಗನೇ ಅಲ್ಲವೇ.
-ಶಿವರಾಜ್ ತಂಗಡಗಿ, ಸಚಿವ