ಕೊಪ್ಪಳ | ದಲಿತ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ : ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಪ್ರಕರಣ ದಾಖಲು

ಬಸನಗೌಡ ಪಾಟೀಲ್ ಯತ್ನಾಳ್
ಕೊಪ್ಪಳ, ಸೆ.17: ದಲಿತ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಮೇರೆಗೆ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ಮಲ್ಲಿಕಾರ್ಜುನ ಪೂಜಾರ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಶಾಸಕ ಬಸನಗೌಡ ಯತ್ನಾಳ್ ಅವರು ದಸರಾ ಹಬ್ಬ ಉದ್ಘಾಟನೆಯ ಬಗ್ಗೆ ಮಾತನಾಡುವ ವೇಳೆ, “ಮೈಸೂರು ದಸರಾದಲ್ಲಿ ಸನಾತನ ಧರ್ಮದವರೇ ಚಾಮುಂಡೇಶ್ವರಿ ದೇವಿಗೆ ಹೂ ಮುಡಿಸಬೇಕು, ಹೊರತು ಒಬ್ಬ ಸಾಮಾನ್ಯ ದಲಿತ ಮಹಿಳೆಗೆ ಕೂಡಾ ಅವಕಾಶ ಇಲ್ಲ” ಎಂಬ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ವಿಡಿಯೋ ಆಧಾರದ ಮೇಲೆ ಮಲ್ಲಿಕಾರ್ಜುನ ಪೂಜಾರ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ? :
ಶಾಸಕ ಬಸನಗೌಡ ಯತ್ನಾಳ್ ಅವರು, ದಸರಾ ಹಬ್ಬ ಉದ್ಘಾಟನೆಯ ಬಗ್ಗೆ ಮಾತನಾಡುವಾಗ ಮೈಸೂರಿನ ಚಾಮುಂಡೇಶ್ವರಿ ಬೆಟ್ಟದಲ್ಲಿ ಹಿಂದುಗಳ ನಾಡ ಹಬ್ಬ ಮೈಸೂರು ದಸರಾದಲ್ಲಿ ಸನಾತನ ಧರ್ಮದವರು ಮಾತ್ರ ದಸರಾ ಹಬ್ಬದಲ್ಲಿ ನಾಡಿನ ಚಾಮುಂಡಿ ದೇವಿಗೆ ಹೂ ಮುಡಿಸಬೇಕು, ಹೊರತು ಒಬ್ಬ ಸಾಮಾನ್ಯ ದಲಿತ ಮಹಿಳೆಗೆ ಕೂಡಾ ಅವಕಾಶ ಇಲ್ಲ ಎಂದು ಬಹಿರಂಗವಾಗಿ ದಲಿತ ಹೆಣ್ಣು ಮಕ್ಕಳಿಗೆ ಹಾಗೂ ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದು, ಅಲ್ಲದೇ, ತನ್ನ ವಿಕೃತ ಮನಸ್ಥಿತಿಯನ್ನು ಮೆರೆದಿದ್ದಾರೆ. ಹಿಂದುಗಳ ಧರ್ಮದಲ್ಲೇ ಬರುವ ದಲಿತ ಹೆಣ್ಣು ಮಕ್ಕಳನ್ನು ಅತ್ಯಂತ ಕೀಳುಮಟ್ಟದಲ್ಲಿ ಸಾರ್ವಜನಿವಾಗಿ ನಿಂದಿಸುವುದು, ಅವಮಾನ ಮಾಡಿದ್ದಾರೆ.
ಇಂತಹ ಕೊಳಕು ಮನಸ್ಥಿತಿಯ ಮತ್ತು ಯಾವಾಗಲೂ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಕೋಮು ಸಂಘರ್ಷದ ಹೇಳಿಕೆ, ಪ್ರಚೋದನಕಾರಿ ಹೇಳಿ ನೀಡಿಕೆ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ದಲಿತರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡುವುದು ಇವರ ದಿನ ನಿತ್ಯದ ಅಭ್ಯಾಸವಾಗಿದ್ದು, ಕೂಡಲೇ ಈ ಹೇಳಿಕೆ ನೀಡಿದ ವಿಡಿಯೋ ಆಧಾರದ ಮೇಲೆ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಇವರನ್ನು ಜೈಲಿಗೆ ಕಳುಹಿಸುವ ಕೆಲಸವನ್ನು ಮಾಡಬೇಕು ಎಂದು ಮಲ್ಲಿಕಾರ್ಜುನ ಪೂಜಾರ್ ಅವರು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.