ಗಂಗಾವತಿ | ಅಪ್ರಾಪ್ತ ಯುವಕನ ವಿವಾಹ : ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ, ಪ್ರಕರಣ ದಾಖಲು

ಕೊಪ್ಪಳ : ಗಂಗಾವತಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಅಪ್ರಾಪ್ತ ಯುವಕನ ವಿವಾಹವನ್ನು ನೋಂದಾಯಿಸಿ ವಿವಾಹ ಪ್ರಮಾಣಪತ್ರ ಪಡೆಯಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಗಂಗಾವತಿ ನಗರ ಠಾಣೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ-2006 (ಕರ್ನಾಟಕ ತಿದ್ದುಪಡಿ 2016) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ :
2024ರ ಸೆ.17ರಂದು ಗಂಗಾವತಿ ನಗರ ವ್ಯಾಪ್ತಿಯಲ್ಲಿ ಅಪ್ರಾಪ್ತ ಯುವಕನಿಗೆ ಮದುವೆ ಮಾಡಲಾಗಿದೆ. ಬಳಿಕ ಅದನ್ನು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಅಧಿಕೃತವಾಗಿ ನೋಂದಾಯಿಸಿ ವಿವಾಹ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಪರಿಶೀಲನೆಯ ಸಂದರ್ಭದಲ್ಲಿ ಯುವಕನ ವಯಸ್ಸು 20 ವರ್ಷ 6 ತಿಂಗಳು 7 ದಿನಗಳು ಮಾತ್ರವಾಗಿದ್ದು, ಕಾನೂನಿನ ಪ್ರಕಾರ 21 ವರ್ಷ ಪೂರೈಸದ ಕಾರಣ ಅಪ್ರಾಪ್ತನಾಗಿರುತ್ತಾರೆ.
ಈ ವಿಷಯ ತಿಳಿದು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ.ರಾಮತ್ನಾಳ ಅವರು ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾಧಿಕಾರಿಗಳಿಗೆ ವಿಚಾರಣೆ ನಡೆಸುವಂತೆ ನಿರ್ದೇಶಿಸಿದ್ದರು. ನಿರ್ದೇಶನದಂತೆ ಶಾಲಾ ದಾಖಲೆ ಹಾಗೂ ಅರ್ಜಿ ದಾಖಲೆಗಳನ್ನು ಪರಿಶೀಲಿಸಿದಾಗ ಯುವಕ ಅಪ್ರಾಪ್ತನಾಗಿರುವುದು ದೃಢಪಟ್ಟಿದೆ.
ಬಾಲ್ಯವಿವಾಹಕ್ಕೆ ಸಹಕರಿಸಿದವರು, ನೆರವೇರಿಸಿದವರು ಹಾಗೂ ಪ್ರೋತ್ಸಾಹ ನೀಡಿದವರ ವಿರುದ್ಧ ಗಂಗಾವತಿ ನಗರ ಠಾಣೆಯಲ್ಲಿ ಮಕ್ಕಳ ಸಹಾಯವಾಣಿಯ ಸಂಯೋಜಕರ ದೂರು ಆಧಾರವಾಗಿ ಪ್ರಕರಣ ದಾಖಲಾಗಿದೆ.
ಬಾಲ್ಯವಿವಾಹದಲ್ಲಿ ಭಾಗಿಯಾದವರಿಗೆ 1 ರಿಂದ 2 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಮಕ್ಕಳ ಹಕ್ಕು ರಕ್ಷಣಾಧಿಕಾರಿಗಳು ಪ್ರಕಟಣೆ ಮೂಲಕ ಬಾಲ್ಯವಿವಾಹ ಮಾಡುವುದು ಕಾನೂನು ಅಪರಾಧ, ತಪ್ಪಿತಸ್ಥರು ಶಿಕ್ಷೆಗೆ ಗುರಿಯಾಗುವುದರಿಂದ ಇಂತಹ ಕೃತ್ಯಗಳನ್ನು ತಪ್ಪಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.