ಜಾತಿ–ಧರ್ಮದ ಚರ್ಚೆಯ ಬದಲು ಅಭಿವೃದ್ಧಿ ಕುರಿತ ಸಂವಾದ ಅಗತ್ಯ: ಸಚಿವ ಶಿವರಾಜ್ ತಂಗಡಗಿ

ಕೊಪ್ಪಳ, ಸೆ.15: ದೇಶದಲ್ಲಿ ಜಾತಿ–ಧರ್ಮಗಳ ಕುರಿತು ಚರ್ಚೆ ನಡೆಯದೇ, ಅಭಿವೃದ್ಧಿ ಕುರಿತ ಸಂವಾದಗಳು ನಡೆಯಬೇಕು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ಎಸ್.ತಂಗಡಗಿ ಅವರು ಹೇಳಿದರು.
ಸೋಮವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಟೀಕೆ–ಟಿಪ್ಪಣಿಗಳಿಗೆ ಅವಕಾಶವಿದೆ. ಆದರೆ ಇಂದಿನ ದಿನಗಳಲ್ಲಿ ವೈಯಕ್ತಿಕ ಟೀಕೆಗಳು ಹೆಚ್ಚಾಗುತ್ತಿದ್ದು, ಅರ್ಥಪೂರ್ಣ ಹಾಗೂ ಸಾಮರಸ್ಯ ಸಾಧಿಸುವಂತಹ ಟೀಕೆ–ಟಿಪ್ಪಣಿಗಳು ಅಗತ್ಯವಿದೆ ಎಂದರು.
ಮತದಾನ ಪ್ರಜಾಪ್ರಭುತ್ವದ ಮೂಲ ಆಧಾರ. ಶೇ.100ರಷ್ಟು ಜನರು ಮತದಾನದಲ್ಲಿ ಪಾಲ್ಗೊಂಡರೆ, ಅದು ಸಂವಿಧಾನಕ್ಕೆ ನೀಡುವ ನಿಜವಾದ ಗೌರವವಾಗುತ್ತದೆ ಎಂದರು.
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರತಿ ವರ್ಷ ವಿಭಿನ್ನ ಶೀರ್ಷಿಕೆಯೊಂದಿಗೆ ಆಚರಿಸಲಾಗುತ್ತದೆ. “ನನ್ನ ಮತ – ನನ್ನ ಹಕ್ಕು” ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ಹಿಂದೆ 25 ವರ್ಷ ತುಂಬಿದವರಿಗೆ ಮಾತ್ರ ಮತದಾನದ ಹಕ್ಕು ಇತ್ತು. ಆದರೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಅದನ್ನು 18 ವರ್ಷಕ್ಕೆ ಇಳಿಸಿ, ಯುವಕರಿಗೆ ಪ್ರಜಾಪ್ರಭುತ್ವದಲ್ಲಿ ಹೆಚ್ಚಿನ ಅವಕಾಶ ಒದಗಿಸಿದರು ಎಂದರು.
ರಾಜ್ಯ ಸರ್ಕಾರವು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪ್ರಜಾಪ್ರಭುತ್ವದ ಅರಿವು ಮೂಡಿಸಲು ಪ್ರತಿವರ್ಷ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ನಗರಸಭೆ ಅಧ್ಯಕ್ಷ ಅಮ್ಜದ್, ಜಿಲ್ಲಾಧಿಕಾರಿ ಡಾ.ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ ಹಾಗೂ ಅನೇಕ ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಾಗೃತಿ ಜಾಥಾ :
ಬೆಳಿಗ್ಗೆ ಜಿಲ್ಲಾಡಳಿತ ಕಚೇರಿ ಭವನದವರೆಗೆ ಸೈಕಲ್ ಜಾಥಾ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮತ್ತು ಶಾಲಾ–ಕಾಲೇಜು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದರು.