ಸಂಶೋಧನೆ, ನವೋದ್ಯಮವೇ ದೇಶದ ಸುಸ್ಥಿರ ಅಭಿವೃದ್ಧಿಗೆ ದಾರಿ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಕೋಲಾರ : ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ವಿಶ್ವ ದರ್ಜೆಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.
ಕೋಲಾರದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ 5ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಶೋಧನೆಯ ಮೂಲಕ ಮಾತ್ರ ಹೊಸ ಪ್ರಕ್ರಿಯೆಗಳು, ಉತ್ಪನ್ನಗಳು ಮತ್ತು ವಿನ್ಯಾಸಗಳನ್ನು ಅಭಿವೃದ್ಧಿಪಡಿಸಬಹುದು, ಇದು ಉದಯೋನ್ಮುಖ ಸಮಸ್ಯೆಗಳಿಗೆ ನವೀನ ಮತ್ತು ಸುಸ್ಥಿರ ಪರಿಹಾರಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಇಂದಿನ ಜಗತ್ತಿನಲ್ಲಿ ತಂತ್ರಜ್ಞಾನ ಮತ್ತು ನವೀನತೆ ಪ್ರಮುಖ ಪಾತ್ರ ವಹಿಸುತ್ತವೆ. ಇಂದಿನ ಆಧುನಿಕ ಯುಗದಲ್ಲಿ, ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ವಿಶ್ವ ದರ್ಜೆಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯ ಎಂದರು.
ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಮಾತನಾಡಿದರು. ಮುಖ್ಯ ಅತಿಥಿ ಡಾ.ವೊಡೆ ಪಿ.ಕೃಷ್ಣ ಘಟಿಕೋತ್ಸವ ಭಾಷಣ ಮಾಡುತ್ತಾ, ಸ್ವಾತಂತ್ರ್ಯಾನಂತರ ದೇಶವು ತಂತ್ರಜ್ಞಾನ ಮತ್ತು ಆರ್ಥಿಕವಾಗಿ ಅಪಾರ ಪ್ರಗತಿ ಸಾಧಿಸಿದೆ. ದೊಡ್ಡ ಕೈಗಾರಿಕೆಗಳು, ಅಣೆಕಟ್ಟುಗಳು, ಮತ್ತು ಆಧುನಿಕ ತಂತ್ರಜ್ಞಾನಗಳು ನಮ್ಮ ಅಭಿವೃದ್ಧಿಯ ಭೌತಿಕ ಸಂಕೇತಗಳಾಗಿವೆ. ಆದರೆ, ಈ ಬೆಳವಣಿಗೆಯ ಭರಾಟೆಯಲ್ಲಿ ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದೇವೆ ಎಂಬ ಕಳವಳ ವ್ಯಕ್ತಪಡಿಸಿದರು.
ಘಟಿಕೋತ್ಸವ ಸಮಾರಂಭದಲ್ಲಿ ಕುಲಪತಿ ಪ್ರೊ.ನಿರಂಜನ್ ಹಾಗೂ ಗಣ್ಯರು ಉಪಸ್ಥಿತರಿದ್ದರು.