ಜೀವಂತ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ : ಕೋಲಾರ ನಗರಸಭೆ ಅಧಿಕಾರಿಗಳ ಎಡವಟ್ಟಿಗೆ ಅಕ್ರೋಶ

ಸಾಂದರ್ಭಿಕ ಚಿತ್ರ | PC : freepik
ಕೋಲಾರ : ಕೋಲಾರ ನಗರಸಭೆ ಜನನ ಮತ್ತು ಮರಣ ವಿಭಾಗದ ಅಧಿಕಾರಿಗಳು ವ್ಯಕ್ತಿ ಜೀವಂತವಿರುವಾಗಲೇ ಆತನ ಹೆಸರಲ್ಲಿ ಮರಣ ಪ್ರಮಾಣಪತ್ರ ಸಿದ್ಧಪಡಿಸಿರುವ ಪ್ರಕರಣ ವರದಿಯಾಗಿದೆ.
ನಗರದ ಕಠಾರಿಪಾಳ್ಯದ ರವಿಕುಮಾರ್ ಎಂಬವರ ಹೆಸರಿನಲ್ಲಿ ನೋಂದಣಿ ಆಗಿದೆ. ಆ ಡಿಜಿಟಲ್ ಪ್ರಮಾಣಪತ್ರದಲ್ಲಿ 2025ರ ಜನವರಿ 26ರಂದು ನಿಧನರಾಗಿದ್ದಾರೆ ಎಂದು ನಮೂದಿಸಲಾಗಿದೆ. ಮಾರ್ಚ್ 4ರಂದು ನೋಂದಣಿ ಮಾಡಿಕೊಡಲಾಗಿದೆ.
ರವಿಕುಮಾರ್ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ಪಡೆಯಲು ಅವರ ಸಹೋದರ ಪ್ರಕಾಶ್ ಎಂಬವರು ನಾಡಕಚೇರಿಗೆ ಸಲ್ಲಿಸಿದ ಅರ್ಜಿ ಪರಿಶೀಲನೆ ವೇಳೆ ಆಧಾರ ಸಂಖ್ಯೆ ತಾಳೆಯಿಂದ ಈ ವಿಚಾರ ಗೊತ್ತಾಗಿದೆ. ತಂತ್ರಾಂಶದಲ್ಲಿ 'Error occurred: The person whose details are requested in not alive' (ಸಂಬಂಧಿಸಿದ ವ್ಯಕ್ತಿ ಬದುಕಿಲ್ಲ) ಎಂಬ ಸಂದೇಶ ಬಂದಿದೆ. ಇದರಿಂದ ಆಘಾತಗೊಂಡ ಅವರು ಈ ಸಂಬಂಧ ಪರಿಶೀಲಿಸುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಗೆ ಮನವಿ ಪತ್ರ ನೀಡಿದ್ದಾರೆ.
ನಂತರ ಕಚೇರಿಯಲ್ಲಿ ಆಧಾರ ಸಂಖ್ಯೆಯನ್ನು ಇ-ಜನ್ಮ ತಂತ್ರಾಂಶದಲ್ಲಿ ಪರಿಶೀಲಿಸಿದಾಗ ರವಿಕುಮಾರ್ 26-01-2025ರಂದು ಕೋಲಾರ ನಗರಸಭಾ ವ್ಯಾಪ್ತಿಯಲ್ಲಿ ಮೃತಪಟ್ಟಿದ್ದಾರೆ ಎಂಬ ಅಂಶ ನಮೂದಾಗಿರುವುದು ಕಂಡುಬಂದಿದೆ. ಈ ಸಂಬಂಧ ಪೂರಕ ಮಾಹಿತಿ ಒದಗಿಸುವಂತೆ ಜುಲೈ 16ರಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಯು ನಗರಸಭೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಯಾವ ಉದ್ದೇಶದಿಂದ ಬದುಕಿರುವ ವ್ಯಕ್ತಿಯ ಮರಣ ಪ್ರಮಾಣಪತ್ರ ನೋಂದಣಿ ಮಾಡಿದ್ದಾರೆ ಎಂಬದರ ಬಗ್ಗೆ ತನಿಖೆ ನಡೆಸಿ ಕ್ರಮ ವಹಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ನವೀನ್ ಚಂದ್ರ ತಿಳಿಸಿದರು.
'ಇದೊಂದು ಗಂಭೀರ ಲೋಪ ಪ್ರಕರಣ. ಇಂಥ ಪ್ರಮಾಣಪತ್ರ ನೋಂದಾಯಿಸುವಾಗ ಪರಿಶೀಲಿಸಬೇಕು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂಥ ದೊಡ್ಡ ಎಡವಟ್ಟು ನಡೆದಿದೆ' ಎಂದು ನಗರಸಭೆ ಕೆಲ ಸದಸ್ಯರು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ