ಭಾಗ್ಯನಗರ | ನಕಲಿ ದಾಖಲೆ ಸೃಷ್ಟಿ ಆರೋಪ : ಬಿಜೆಪಿ ಮುಖಂಡನ ವಿರುದ್ಧ ಎಫ್ಐಆರ್

ಸಿ.ಮುನಿರಾಜು
ಭಾಗ್ಯನಗರ : ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರನ್ನು ತೇಜೋವಧೆ ಮಾಡಿ ಜನಪ್ರಿಯತೆಯನ್ನು ಕುಗ್ಗಿಸುವ ನಿಟ್ಟಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದಲ್ಲಿ ಬಿಜೆಪಿ ಮುಖಂಡ ಸಿ.ಮುನಿರಾಜು ವಿರುದ್ಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪೊಲೀಸರಿಗೆ ಸಲ್ಲಿಸಿರುವ ಲಿಖಿತ ದೂರಿನಲ್ಲಿ, ಜೂ.25ರಂದು ‘‘ನನ್ನ ಸ್ನೇಹಿತರೊಬ್ಬರು ಕೆಲವು ದಾಖಲಾತಿಗಳನ್ನು ನನ್ನ ದೂರವಾಣಿ ಸಂಖ್ಯೆಯ ವಾಟ್ಸ್ಆ್ಯಪ್ ಮುಖಾಂತರ ನನಗೆ ಕಳುಹಿಸಿದ್ದು ಅವುಗಳನ್ನು ಪರಿಶೀಲಿಸಿದಾಗ ನನ್ನ ಮತ್ತು ನನ್ನ ಪತ್ನಿಯ ಹೆಸರನ್ನು ಉಲ್ಲೇಖ ಮಾಡಿರುವುದು ಕಂಡುಬಂದಿರುತ್ತದೆ. ರಾಮಸ್ವಾಮಿ ವೀರನ್ ಎಂಬಾತ ಹಾಂಗ್ಕಾಂಗ್, ಮಲೇಶ್ಯ ಮತ್ತು ಇತರ ದೇಶಗಳಲ್ಲಿರುವ ದಾಖಲೆ ಸೃಷ್ಟಿಸಿ ಆ ದಾಖಲೆಗಳಲ್ಲಿ ಅರ್ಥವಾಗದ ಭಾಷೆಯಲ್ಲಿ ನನ್ನ ಹೆಸರನ್ನು ಬಳಕೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ ಎಂದು ಹೇಳಿದ್ದಾರೆ.
ವಿದೇಶಗಳಲ್ಲಿ ಆಸ್ತಿ, ಬ್ಯಾಂಕ್ ವ್ಯವಹಾರ ಮಾಡಿದಂತೆ ನಕಲಿ ದಾಖಲೆಗಳ ಸೃಷ್ಟಿ :
‘‘ನನಗೆ ಅರ್ಥವಾಗದ ಭಾಷೆಯಲ್ಲಿ ಇರುವ ಕೆಲ ದಾಖಲೆಗಳನ್ನು ಪರಿಶೀಲಿಸಿದಾಗ ಜರ್ಮನಿಯಲ್ಲಿ ನನ್ನ ಹೆಸರಿನಲ್ಲಿ ಬಿಎಂಡಬ್ಲ್ಯುವಾಹನವನ್ನು ಖರೀದಿಸಿ ರಿಜಿಸ್ಟರ್ ಮಾಡಿರುವಂತೆ ನಕಲಿ ದಾಖಲೆಗಳನ್ನು ಸೃಸ್ಟಿಸಿರುವುದು ಕಂಡು ಬಂದಿರುತ್ತದೆ. ಜೊತೆಗೆ ಸಿಂಗಾಪುರದ ಒಸಿಬಿಸಿ ಬ್ಯಾಂಕ್ನಲ್ಲಿ ಖಾತೆ ಹೊಂದಿ ಹಣ ವರ್ಗಾವಣೆ ಮಾಡಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಕಂಡು ಬಂದಿರುತ್ತದೆ. ರಾಮಸ್ವಾಮಿ ವೀರನ್ ಮೇ ಬ್ಯಾಂಕ್ ಖಾತೆಯಿಂದ ನನ್ನ ಪತ್ನಿ ಖಾತೆಗೆ ಹಣ ವರ್ಗಾವಣೆ ಮಾಡಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿದ್ದು ಸದರಿ ದಾಖಲೆಗಳಿಗೂ ನನ್ನ ಪತ್ನಿಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಎದುರು ಸ್ಪರ್ಧಿಸಿ ಪರಾಜಿತರಾಗಿರುವ ಸಿ.ಮುನಿರಾಜು ಎಂಬವರು ಉಚ್ಚ ನ್ಯಾಯಾಲಯದಲ್ಲಿ ಚುನಾವಣಾ ತಕರಾರು ದಾವೆಯನ್ನು ಹೂಡಿದ್ದು ನನ್ನ ಅಫಿಡವಿಟ್ನಲ್ಲಿ ಕೆಲವು ದೋಷಗಳಿರುವುದಾಗಿ ಮತ್ತು ಆಸ್ತಿಯನ್ನು ಮರೆಮಾಚಿರುವುದಾಗಿ ಸುಳ್ಳು ಆಪಾದನೆ ಮಾಡಿದ್ದಾರೆ. ಇದನ್ನು ಸತ್ಯ ಮಾಡುವ ದುರುದ್ದೇಶದಿಂದ ಎಲ್ಲಾ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರ ಮೊಬೈಲ್ನಿಂದಲೇ ನನ್ನ ಸ್ನೇಹಿತನ ಮೊಬೈಲ್ಗೆ ಕಳುಹಿಸಿದ್ದಾರೆ. ನಕಲಿ ದಾಖಲೆಗಳ ಸೃಷ್ಟಿಸಿ, ಪೋರ್ಜರಿ ಮಾಡಿದ್ದು ಕಾನೂನು ಕ್ರಮ ಜರುಗಿಸುವಂತೆ ಪೊಲೀಸರನ್ನು ಸುಬ್ಬಾರೆಡ್ಡಿ ದೂರಿನಲ್ಲಿ ಕೋರಿದ್ದಾರೆ.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೀಡಿರುವ ಲಿಖಿತ ದೂರಿನ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಪೊಲೀಸರು ಬಿಜೆಪಿ ಮುಖಂಡ ಸಿ.ಮುನಿರಾಜು ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.