ಅಲೆಮಾರಿ ಸಮುದಾಯದ ನಾವು ಶಾಸ್ತ್ರ ಹೇಳಿಕೊಂಡು ಬಿಕ್ಷೆ ಬೇಡಿಕೊಂಡೇ ಇರಬೇಕೆ ?: ಶಾಸಕ ಕೊತ್ತೂರು ಮಂಜುನಾಥ್
ನನಗೂ ಮಂತ್ರಿ ಸ್ಥಾನ ಬೇಕೇ ಬೇಕು ಎಂದ ಕೋಲಾರ ಶಾಸಕ

ಕೊತ್ತೂರು ಮಂಜುನಾಥ್
ಕೋಲಾರ: ಇಡೀ ದೇಶದಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಹಾಗಾಗಿ ನನಗೂ ಮಂತ್ರಿ ಸ್ಥಾನ ಬೇಕೇ ಬೇಕು ಎಂದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಆಗ್ರಹ ಮಾಡಿದರು.
ಕೋಮಲ್ ನೂತನ ಅಧ್ಯಕ್ಷ ನಂಜೇಗೌಡ ಅವರನ್ನು ಅಭಿನಂದಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್, ಕಾಂಗ್ರೆಸ್ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕನಾಗಿರುವ ನಾನು ಮಂತ್ರಿ ಸ್ಥಾನದ ಪ್ರಭಲ ಆಕಾಂಕ್ಷಿಯಾಗಿದ್ದೇನೆ. ಅಲ್ಲದೆ ಅಲೆಮಾರಿ ಸಮುದಾಯದ ಏಕೈಕ ಶಾಸಕ ನಾನು ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಇಡೀ ದೇಶದಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಮಂತ್ರಿ ಸ್ಥಾನದ ಆಸೆಯನ್ನು ಶಾಸಕ ಕೊತ್ತೂರು ಮಂಜುನಾಥ್ ಮತ್ತೊಮ್ಮೆ ಪುನರುಚ್ಚರಿಸಿದರು.
ಕೋಲಾರ ಜಿಲ್ಲೆಯಲ್ಲಿರುವ ಕಾಂಗ್ರೆಸ್ನ ನಾಲ್ಕು ಮಂದಿ ಶಾಸಕರ ಪೈಕಿ ಹೆಚ್ಚಾಗಿ ಅನ್ಯಾಯಕ್ಕೆ ಒಳಗಾಗಿರುವವನು ನಾನೇ, ಈಗಾಗಲೇ ರಾಜ್ಯ ಸರ್ಕಾರದಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹಾಗೂ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನು ನೀಡಲಾಗಿದೆ. ಅಲ್ಲದೆ ಕೆವೈ ನಂಜೇಗೌಡ ಅವರಿಗೆ ಕೋಮುಲ್ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಏನೂ ಇಲ್ಲದೆ ಇರುವ ಶಾಸಕ ನಾನೊಬ್ಬನೇ. ಅಲೆಮಾರಿ ಸಮುದಾಯದವರು ಶಾಸ್ತ್ರ ಹೇಳಿಕೊಂಡು ಬಿಕ್ಷೆ ಬೇಡಿಕೊಂಡೇ ಇರಬೇಕೆ ? ನನಗೆ ಈ ಬಾರಿ ಸಚಿವ ಸ್ಥಾನ ಬೇಕು ಬೇಕು ಎಂದು ಮನದಾಳದ ಮಾತು ಆಡಿದ್ದಾರೆ.