ಬೆಂಗಳೂರು ಉತ್ತರ ವಿವಿಯ 5ನೇ ಘಟಿಕೋತ್ಸವ | ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮೂವರು ಸಾಧಕರಿಗೆ ʼಗೌರವ ಡಾಕ್ಟರೇಟ್ʼ

ಪಿಚ್ಚಳ್ಳಿ ಶ್ರೀನಿವಾಸ್/ರಾಧಾಕೃಷ್ಣ ಅಡಿಗ/ಡಾ.ಎಚ್.ಎಸ್.ಶೆಟ್ಟಿ
ಕೋಲಾರ : ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವವು ಆ.1ರಂದು ಬೆಳಿಗ್ಗೆ 11 ಗಂಟೆಗೆ ಕೋಲಾರದ ನಂದಿನಿ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ಅವರು ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಐದನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಕಾರ್ಯದರ್ಶಿಗಳಾದ ಶೇಷಾದ್ರಿಪುರಂ ಶೈಕ್ಷಣಿಕ ನ್ಯಾಸದ ಡಾ.ವೂಡೆ.ಪಿ.ಕೃಷ್ಣರವರು ಘಟಿಕೋತ್ಸವದಲ್ಲಿ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಘಟಿಕೋತ್ಸವದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ:
ಸಮಾಜ ಸೇವಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಡಾ.ಎಚ್.ಎಸ್.ಶೆಟ್ಟಿ ಅವರನ್ನು ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಂಗೀತ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಪಿಚ್ಚಳ್ಳಿ ಶ್ರೀನಿವಾಸ್ ಅವರನ್ನು ಹಾಗೂ ಉದ್ಯಮಶೀಲತೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ರಾಧಾಕೃಷ್ಣ ಅಡಿಗ ಅವರನ್ನು ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
46 ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನ:
ವಿವಿಧ ಪದವಿಗಳಲ್ಲಿ ಮೊದಲ ರ್ಯಾಂಕ್ ಗಳಿಸಿದ 46 ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದು, ಕುಲಾಧಿಪತಿಗಳು ಬಂಗಾರದ ಪದಕ ವಿತರಿಸಲಿದ್ದಾರೆ. ಈ ವರ್ಷ ಒಟ್ಟು 23126 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆಯಲಿದ್ದಾರೆ. ಸ್ನಾತಕ-12550, ಸ್ನಾತಕೋತ್ತರ-4002, ಬಿ.ಇಡಿ & ಬಿ.ಪಿ.ಇಡಿ -2505, ಸ್ವಾಯತ್ತ ಕಾಲೇಜು-4069 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.