ರೆಡ್ಡಿ ಸಮುದಾಯದಲ್ಲಿ ಯಾವುದೇ ಉಪ ಪಂಗಡಗಳಿಲ್ಲ, ಜಾತಿ ಸಮೀಕ್ಷೆಯಲ್ಲಿ 1105ರಲ್ಲೇ ನಮೂದಿಸಬೇಕು : ಎಂ.ಸಿ.ಪ್ರಭಾಕರ್ ರೆಡ್ಡಿ ಆಗ್ರಹ

ಕೋಲಾರ : ರೆಡ್ಡಿ ಸಮುದಾಯದಲ್ಲಿ ಯಾವುದೇ ಉಪ-ಪಂಗಡಗಳು ಇಲ್ಲ, ಹಾಗಾಗಿ ಎಲ್ಲಾ ವೇಮನ -ಮಲ್ಲಮ್ಮ ರೆಡ್ಡಿಗಳು ಜಾತಿ ಸಮೀಕ್ಷೆಯಲ್ಲಿ 1105ರಲ್ಲೇ ನಮೂದಿಸಬೇಕು ಎಂದು ಕರ್ನಾಟಕ ರೆಡ್ಡಿ ಜನ ಸಂಘದ ರಾಜ್ಯ ಸಂಘಟನಾ ಅಧ್ಯಕ್ಷ ಎಂ.ಸಿ.ಪ್ರಭಾಕರ್ ರೆಡ್ಡಿ ಆಗ್ರಹಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.28ರಂದು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಪ್ರಕಟಣೆಯಲ್ಲಿ ರೆಡ್ಡಿ ಜನರನ್ನು ಕ್ರಿಶ್ಚಿಯನ್, ಲಿಂಗಾಯತ , ಶೈವ, ಬಲಜ, ದಾಸರ, ಗೌಂಡರ್ ಎಂಬ ವಿವಿಧ ಧಾರ್ಮಿಕ ಉಪ ಪಂಗಡಗಳಾಗಿ ವಿಂಗಡಿಸಿ ವಾಸ್ತವವಾಗಿ 30-40 ಲಕ್ಷ ಮೂಲ ರೆಡ್ಡಿ ಸಮುದಾಯದ ಜನ ಸಂಖ್ಯೆಯನ್ನು ಕೇವಲ 7 ಲಕ್ಷಕ್ಕೆ ಇಳಿಸಿ ರೆಡ್ಡಿ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಇಲ್ಲಿಯವರೆಗೂ ರೆಡ್ಡಿ ಸಮುದಾಯವನ್ನು ರಡ್ಡಿ ಮತ್ತು ರೆಡ್ಡಿ ಎಂದಷ್ಟೇ ನಮೂದಿಸಲಾಗುತ್ತಿತ್ತು, ಆದರೆ ಕಾಂತರಾಜು ಆಯೋಗ ಬೇರೆ ಬೇರೆ ಧಾರ್ಮಿಕ ಗುಂಪಿಗೆ ಸೇರಿದ ಹಲವು ಉಪ ಪಂಗಡಗಳನ್ನು ರೆಡ್ಡಿಗಳ ಗುಂಪಿನಲ್ಲಿ ಸೇರಿಸಿ ರೆಡ್ಡಿ ಸಮುದಾಯಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಸಿಗಬೇಕಾದ ಸವಲತ್ತುಗಳಿಂದ ವಂಚಿಸಲಾಗುತ್ತಿದೆ ಎಂದು ದೂರಿದರು.
ರೆಡ್ಡಿ ಸಮಾಜದವರು ಎಲ್ಲರನ್ನೂ ಒಂದೇ ಕುಲದ ಜನ ಎಂದು ಜಾತಿ ಸಮೀಕ್ಷೆಯಲ್ಲಿ 1105 ರಲ್ಲೇ ನಮೂದಿಸಬೇಕು, ಯಾರಾದರೂ ಇತರೆ ಧರ್ಮಗಳಿಗೆ ಮತಾಂತರ ಆಗಿದ್ದರೆ, ಅವರನ್ನು ರೆಡ್ಡಿ ಸಮೀಕ್ಷೆಯಲ್ಲಿ ಸೇರಿಸಬಾರದು. ರೆಡ್ಡಿ ಸಮುದಾಯಕ್ಕೆ ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಮೀಸಲಾತಿ ಸೌಲಭ್ಯ ಪಡೆಯಲು ಎಲ್ಲಾ ವೇಮನ-ಮಲ್ಲಮ್ಮ ರೆಡ್ಡಿ ಜನಾಂಗವನ್ನು ಒಂದೇ ಕುಲವೆಂದು ಪರಿಗಣಿಸಿ ಸಮೀಕ್ಷಾ ಪಟ್ಟಿಯಲ್ಲಿ 1105ರಲ್ಲೇ ನಮೂದಿಸಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರೆಡ್ಡಿ ಜನ ಸಂಘದ ರಾಜ್ಯ ಸಂಘಟನಾ ಸಂಚಾಲಕ ರವೀಂದ್ರ ರೆಡ್ಡಿ, ಶಾಂತರಾಜು ರೆಡ್ಡಿ, ಸುರೇಶ್ ರೆಡ್ಡಿ, ಆನಂದ ರೆಡ್ಡಿ, ರಾಘವೇಂದ್ರ ರೆಡ್ಡಿ, ವೇಮಣ್ಣ, ರಾಮಚಂದ್ರ ರೆಡ್ಡಿ, ವಿಶ್ವನಾಥ್ ರೆಡ್ಡಿ, ಕೃಷ್ಣಾರೆಡ್ಡಿ, ಬಾಬು ರೆಡ್ಡಿ, ಚಿನ್ನಪ್ಪ ರೆಡ್ಡಿ, ಸಂಪಂಗಿ, ಜೀವನ್ ಉಪಸ್ಥಿತರಿದ್ದರು.
ʼರಾಜ್ಯದ ಇತಿಹಾಸದಲ್ಲಿ ಸ್ವಾತಂತ್ರ್ಯ ನಂತರದ ಮೊದಲ ಮೈಸೂರು ರಾಜ್ಯದ ಮುಖ್ಯಮಂತ್ರಿ ಕೆ.ಚಂಗಲರಾಯರೆಡ್ಡಿ ಅವರ ಸೇವೆಯನ್ನು ಗುರುತಿಸಿ ಕೋಲಾರ ಜಿಲ್ಲಾ ಕೇಂದ್ರದ ಯಾವುದಾದರೂ ಒಂದು ವೃತ್ತಕ್ಕೆ ಕೆ.ಸಿ.ರೆಡ್ಡಿ ವೃತ್ತ ಎಂದು ನಾಮಕರಣ ಮಾಡಿ ಅಲ್ಲಿ ಅವರ ಕಂಚಿನ ಪ್ರತಿಮೆ ಅನಾವರಣ ಮಾಡಬೇಕುʼ
ಪ್ರಭಾಕರ್ ರೆಡ್ಡಿ, ರಾಜ್ಯ ಅಧ್ಯಕ್ಷರು ಕರ್ನಾಟಕ ರೆಡ್ಡಿ ಜನ ಸಂಘ .