ʼಒಳಮೀಸಲಾತಿʼ ನ್ಯಾ.ನಾಗಮೋಹನ್ ದಾಸ್ ವರದಿ ಜಾರಿಗೊಳಿಸಿ : ಕೋಟಿಗಾನಹಳ್ಳಿ ರಾಮಯ್ಯ

ಕೋಲಾರ : ಒಳಮೀಸಲಾತಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಗಳ ನೈಜ ದತ್ತಾಂಶಕ್ಕಾಗಿ ನಡೆಸಿದ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ಏಕಸದಸ್ಯ ಆಯೋಗದ ಸಮೀಕ್ಷಾ ವರದಿಯನ್ನು ರಾಜ್ಯ ಸರಕಾರ ಇದೇ ಅಧಿವೇಶನದಲ್ಲಿ ಅಂಗೀಕರಿಸಿ ಕೂಡಲೇ ಜಾರಿಗೆ ತರಬೇಕು ಎಂದು ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಒತ್ತಾಯಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಳೆದ 50 ವರ್ಷಗಳ ಕಾಲ ದಲಿತ ಸಮುದಾಯದ ನೋವಿಗೆ ದನಿಯಾಗಿ ನಿಂತ ಒಬ್ಬ ಬರಹಗಾರನಾಗಿ ಇಂದು ಒಳಮೀಸಲಾತಿ ಬೇಗುದಿಯ ಕುರಿತು ಅನಿವಾರ್ಯವಾಗಿ ಮಾತನಾಡಬೇಕಾಗಿದೆ ಎಂದರು.
ಆಗಸ್ಟ್ 16 ರಂದು ನಡೆಯಲಿರುವ ಒಳಮೀಸಲಾತಿ ಸಂಬಂಧಿಸಿದಂತೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳುವ ಮೂಲಕ 35 ವರ್ಷಗಳ ದಲಿತ ಸಮುದಾಯದ ಹೋರಾಟಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಕೇವಲ 15 ಗಂಟೆಯಲ್ಲಿ ಸಂಸತ್ತಿನಲ್ಲಿ ಸಾಮಾಜಿಕ ನ್ಯಾಯಕ್ಕೆ ವ್ಯತಿರಿಕ್ತವಾದಂತಹ ಮಾನದಂಡಗಳ ಮೂಲಕ ಇ.ಡಬ್ಲ್ಯೂ.ಎಸ್.ಗೆ ಸಂಬಂಧಿಸಿ ಆರ್ಥಿಕ ಮಾನದಂಡಗಳನ್ನು ಮಾದರಿಯಾಗಿ ಇಟ್ಟುಕೊಂಡು ಶೇ.3ರಷ್ಟು ಇರುವ ಜಾತಿಗಳಿಗೆ ಶೇ.10 ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಆದರೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ 35 ವರ್ಷಗಳಿಂದ ಹೋರಾಟ ನಡಿಯುತ್ತಲೇ ಇರುವ ಚಾರಿತ್ರಿಕ ಚಿತ್ರಣ ನಮ್ಮ ಮುಂದಿರುವುದು ಚೋದ್ಯವೋ ಅಥವಾ ವ್ಯಂಗ್ಯವೋ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿಯಲ್ಲಿ ಈ ವರ್ಗಗಳ ನಡುವೆ ಇರುವ ಅನೇಕ ತಾರತಮ್ಯಗಳ ಬಗ್ಗೆ ನಿಷ್ಪಕ್ಷಪಾತವಾಗಿ ತಾತ್ವಿಕತೆಯ ದೃಷ್ಟಿಯಿಂದ, ನ್ಯಾಯದ ದೃಷ್ಟಿಯಿಂದ, ಸಂವಿಧಾನ ಬದ್ಧವಾದ ರೀತಿಗಳ ದೃಷ್ಟಿಯಿಂದ ಶೇ.99 ಭಾಗದಷ್ಟು ನ್ಯಾಯವನ್ನೇ ಈ ವರದಿಯಲ್ಲಿ ಪ್ರಸ್ತುತ ಪಡಿಸಿರುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗ ಕಾಣಿಸಿಕೊಳ್ಳುತ್ತಿರುವ ವಿರೋಧ ಕೇವಲ ಒಂದು ಜಾತಿಯ ಬಲಗೈ ಪಂಗಡದಿಂದ ಬರುತ್ತಿದೆ. "ಯಾರು ಇಲ್ಲಿಯವರೆಗೆ ಚೆನ್ನಾಗಿ ಊಟ ಮಾಡಿದ್ದಾರೋ ಅವರ ತಟ್ಟೆಯಿಂದ ಇನ್ನೂ ಹಿಂದಿರುವ ಮತ್ತೊಬ್ಬರಿಗೆ ಒಂದು ತುತ್ತು ಅನ್ನದ ಪಾಲು ಕೊಡಿ" ಎಂಬುದು ಅಂಬೇಡ್ಕರ್ ಅವರ ಆಶಯದಂತೆ ಚಾರಿತ್ರಿಕವಾಗಿ ವಂಚಿತರಾದವರಿಗೆ ಅವರ ಪಾಲು ಅವರಿಗೆ ತಲುಪಬೇಕು ಎಂಬುದು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿ ಸರಿಯಾಗಿದೆ. ಮೀಸಲಾತಿ ಕಲ್ಪಿಸಲು ಬಹುಸಂಖ್ಯಾತ ಎಂಬುವುದೊಂದೇ ಮಾನದಂಡವಾಗಬಾರದು. ಅದಕ್ಕೂ ಮೇಲ್ಪಟ್ಟು ಬೇರೆ ಮಾನದಂಡಗಳನ್ನು ಆಧರಿಸಬೇಕೆಂದು ಅಂಬೇಡ್ಕರ್ ಹೇಳಿದ್ದನ್ನು ಅಂಬೇಡ್ಕರ್ ಅನುಯಾಯಿಗಳು ಸ್ವಲ್ಪ ಯೋಚನೆ ಮಾಡಬೇಕು ಎಂದು ಹೇಳಿದರು.
ಒಳ ಮೀಸಲಾತಿ ಕುರಿತು ಈಗ ಎದ್ದಿರುವ ಪ್ರತಿರೋಧಕ್ಕೆ ಯಾವುದೇ ತಾತ್ವಿಕ ಆಧಾರವೂ ಇಲ್ಲ, ವರದಿಯಲ್ಲಿ ಇರುವ ಪ್ರವರ್ಗಗಳಲ್ಲಿರುವ ದೋಷಗಳನ್ನು ಸರಿಪಡಿಸಲು ಸಾಂವಿಧಾನಿಕವಾದ ಮಾದರಿಗಳಿವೆ , ಜಾರಿಗೊಳಿಸುವಾಗ ಪ್ರವರ್ಗಗಳಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು.
ಈಗ ಕಾಣಿಸಿಕೊಳ್ಳುತ್ತಿರುವ ಪ್ರತಿರೋಧದ ಹಿಂದೆ ಒಂದು ಪಂಗಡಕ್ಕೆ ಸೇರಿದ ಉನ್ನತ ಅಧಿಕಾರಿಗಳ ವರ್ಗ ಮತ್ತು ಚೆನ್ನಾಗಿ ಬಲಿತ ವರ್ಗದವರು ಇದ್ದಾರೆ, ಇದು ತನಗೆ ತಾನೇ ದ್ರೋಹ ಮಾಡಿಕೊಳ್ಳುತ್ತಿದೆ. ಈ ಅಪಾಯಕಾರಿ ಉನ್ನತ ಅಧಿಕಾರಿಗಳ ವರ್ಗ ಅರ್ಥ ಮಾಡಿಕೊಳ್ಳಬೇಕು ಎಂದರು.
ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಜಾರಿಗೆ ವಿಳಂಬ ನೀತಿ ಅನುಸರಿಸಿದರೆ, ಅದು ವಂಚನೆಯಾಗುತ್ತದೆ. ಆಗ ಮತ್ತೆ ಹೊಸ ಮಾದರಿಯ ಹೋರಾಟಕ್ಕೆ ಈ ಸಮುದಾಯಗಳು ಅಣಿಯಾಗುತ್ತವೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ, ದಲಿತ ಮುಖಂಡ ರಾಜೇಂದ್ರ, ಬಹುಜನ ವಿಚಾರ ವೇದಿಕೆ ಚಿನ್ನಾ ಇದ್ದರು.