ಮಡಿಕೇರಿ: 1 ಕೆ.ಜಿಗೂ ಅಧಿಕ ಗಾಂಜಾ ಸಹಿತ ಪಶ್ಚಿಮ ಬಂಗಾಳ ಮೂಲದ ಇಬ್ಬರ ಬಂಧನ

ಬಂಧಿತ ಆರೋಪಿಗಳು
ಮಡಿಕೇರಿ: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಪಶ್ಚಿಮ ಬಂಗಾಳ ರಾಜ್ಯದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಿದ್ದಾಪುರದ ಕಾಫಿ ಎಸ್ಟೇಟ್ ಲೈನ್ಮನೆಯ ನಿವಾಸಿಗಳಾದ ಪಶ್ಚಿಮ ಬಂಗಾಳ ರಾಜ್ಯ ನಾದಿಯ ಜಿಲ್ಲೆ ಮೂಲದ ಅರ್ಚನಾ ಸರ್ದಾರ್(30) ಹಾಗೂ ತಪಾನ್ ಸರ್ದಾರ್(38) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರ ಬಳಿಯಿಂದ 1 ಕೆ.ಜಿ 166 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಬಾಡಗ ಬಾಣಂಗಾಲ ಗ್ರಾಮದ ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿರಾಜಪೇಟೆ ಡಿವೈಎಸ್ಪಿ ಸೂರಜ್.ಪಿ.ಎ, ಮಡಿಕೇರಿ ನಗರ ವೃತ್ತ ನಿರೀಕ್ಷಕ ರಾಜು.ಪಿ.ಕೆ, ಸಿದ್ದಾಪುರ ಪೊಲೀಸ್ ಠಾಣೆ ಪಿಎಸ್ಐ ಮಂಜುನಾಥ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.
Next Story