ಪುನೀತ್ ಕೆರೆಹಳ್ಳಿಯನ್ನು ಕುಶಾಲನಗರದಿಂದ ಹೊರ ಕಳುಹಿಸಿದ ಪೊಲೀಸರು
ಮಡಿಕೇರಿ: ಕೊಡಗು ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧವಿದ್ದರೂ ಕುಶಾಲನಗರಕ್ಕೆ ಆಗಮಿಸಿದ ಸಂಘ ಪರಿವಾರದ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದು ಜಿಲ್ಲೆಯಿಂದ ಹೊರ ಕಳುಹಿಸಿದ ಘಟನೆ ಗುರುವಾರ ನಡೆದಿದೆ.
ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿರಾಧಾರ ಆರೋಪ ಮಾಡುತ್ತಿರುವವರನ್ನು ಬಂಧಿಸುವಂತೆ ಒತ್ತಾಯಿಸಿ ಕುಶಾಲನಗರದಲ್ಲಿ ಜನಜಾಗೃತಿ ವೇದಿಕೆ ಮತ್ತು ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ನಡೆಸಿದ ಧರಣಿಯಲ್ಲಿ ಪಾಲ್ಗೊಂಡ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಹೊರ ಕಳುಹಿಸಿರುವುದಾಗಿ ವರದಿಯಾಗಿದೆ.
ಪುನೀತ್ ಕೆರೆಹಳ್ಳಿ ಕುಶಾಲನಗರಕ್ಕೆ ಆಗಮಿಸುವ ಮುನ್ಸೂಚನೆ ದೊರೆತ ಪೊಲೀಸರು ಬಾರದಂತೆ ತಡೆಯಲು ಕಣ್ಗಾವಲು ಇರಿಸಿದ್ದರು. ಆದರೆ, ಕೊಡಗಿನ ಗಡಿ ಮೈಸೂರು ಜಿಲ್ಲೆಯ ಬೈಲುಕುಪ್ಪೆಯವರೆಗೆ ಕಾರಿನಲ್ಲಿ ಬಂದ ಪುನೀತ್ ಕೆರೆಹಳ್ಳಿ, ಬಳಿಕ ಪೊಲೀಸರ ಕಣ್ತಪ್ಪಿಸಿ ಆಟೊ ರಿಕ್ಷಾದಲ್ಲಿ ಕುಶಾಲನಗರ ಪ್ರವೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರತಿಭಟನಾ ಸ್ಥಳದ ವೇದಿಕೆ ಏರುತ್ತಿದ್ದಂತೆ ಎಎಸ್ಪಿ ದಿನೇಶ್ ಕುಮಾರ್ ಹಾಗೂ ಕುಶಾಲನಗರ ಡಿವೈಎಸ್ಪಿ ಚಂದ್ರಶೇಖರ್ ಮತ್ತಿತರ ಅಧಿಕಾರಿಗಳು ಜಿಲ್ಲಾಧಿಕಾರಿಯ ನಿರ್ಬಂಧ ಆದೇಶವನ್ನು ನೀಡಿ ತಕ್ಷಣ ವೇದಿಕೆಯಿಂದ ಹೊರ ಹೋಗುವಂತೆ ಸೂಚನೆ ನೀಡಿದರು. ಈ ಸಂದರ್ಭ ಪೊಲೀಸರು ಹಾಗೂ ಧರಣಿನಿರತರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತ ಉಂಟಾಯಿತು.
ನಂತರ ಪುನೀತ್ ಕೆರೆಹಳ್ಳಿಯ ಮನವೊಲಿಸಿದ ಪೊಲೀಸರು ಖಾಸಗಿ ವಾಹನದಲ್ಲಿ ಕುಶಾಲನಗರದಿಂದ ಪಿರಿಯಾಪಟ್ಟಣ ಕಡೆಗೆ ಕಳುಹಿಸಿದರು ಎಂದು ತಿಳಿದು ಬಂದಿದೆ.