ಕುಶಾಲನಗರ | 7 ಸಾವಿರ ಕೆ.ಜಿ. ಕಾಫಿ ಕಳವು : ಬಿಹಾರದ ಇಬ್ಬರು ಸೇರಿ ಐವರು ಆರೋಪಿಗಳ ಬಂಧನ

ಬಂಧಿತ ಆರೋಪಿಗಳು
ಮಡಿಕೇರಿ, ಸೆ.2 : ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಫಿ ವರ್ಕ್ಸ್ ಒಂದರಲ್ಲಿ ಸುಮಾರು 7 ಸಾವಿರ ಕೆ.ಜಿ. ಕಾಫಿ ಕಳವು ಮಾಡಿದ ಪ್ರಕರಣವನ್ನು ಭೇದಿಸಿರುವ ಕುಶಾಲನಗರ ಗ್ರಾಮಾಂತರ ಪೊಲೀಸರು, ಸೊತ್ತು ಸಹಿತ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೈಲುಕುಪ್ಪೆ ಗ್ರಾಮದ ಸುನಿಲ್ ಆರ್.(34), ರಾಜು ಆರ್.(24), ಶರತ್ ಆರ್. (24), ಬಿಹಾರ ರಾಜ್ಯದ ಪಶ್ಚಿಮ ಚಂಪಾರಣ್ ಜಿಲ್ಲೆಯ ದಿನೇಶ್ ರಾವತ್(44) ಹಾಗೂ ಪೂರ್ವ ಚಂಪಾರಣ್ ಜಿಲ್ಲೆಯ ಜಿತೇಂದ್ರ ಕುಮಾರ್ ರಾಮ್(38) ಬಂಧಿತ ಆರೋಪಿಗಳು.
ಬಂಧಿತರಿಂದ 6,495 ಕೆ.ಜಿ. ಕಾಫಿ, 1 ಕಾರು, 2 ದ್ವಿಚಕ್ರ ವಾಹನ, ಹಾಗೂ ಒಂದು ಆಟೊ ರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಶಾಲನಗರ ಕೂಡ್ಲೂರು ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀ ಉಮಾ ಕಾಫಿ ವರ್ಕ್ಸ್ನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 7 ಸಾವಿರ ಕೆ.ಜಿ. ಕಾಫಿ ಕಳ್ಳತನವಾಗಿರುವ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಚಂದ್ರಶೇಖರ್, ಕುಶಾಲನಗರ ವೃತ್ತದ ಸಿಪಿಐ ದಿನೇಶ್ ಕುಮಾರ್, ಗ್ರಾಮಾಂತರ ಪಿಎಸ್ಸೈ ರಾಮಚಂದ್ರ, ವೃತ್ತ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ವಿಶೇಷ ತಂಡ ತನಿಖೆ ಕೈಗೊಂಡು ಸೊತ್ತು ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯದಕ್ಷತೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಬಿ.ಪಿ. ಶಾಘಿಸಿದ್ದಾರೆ.
ಜಿಲ್ಲೆಯಲ್ಲಿನ ಯಾವುದೇ ಕಾಫಿ ಟ್ರೇಡರ್ಸ್ ಅವರು ಕಾಫಿ ಖರೀದಿಸಿದ ಸಂದರ್ಭ ರಶೀದಿ ಅಥವಾ ಬಿಲ್ನ್ನು ನೀಡದೆ ಹಾಗೂ ಮಾರಾಟ ಮಾಡುವವರ ಸಂಪೂರ್ಣ ವಿವರವನ್ನು ಇಟ್ಟು ಕೊಳ್ಳದೆ ವ್ಯವಹಾರ ನಡೆಸಿದಲ್ಲಿ ಮತ್ತು ಕಳ್ಳತನ ಮಾಡಿರುವ ಕಾಫಿಯನ್ನು ಖರೀದಿ ಮಾಡಿರುವುದು ಕಂಡು ಬಂದಲ್ಲಿ ಕಾಫಿ ಟ್ರೇಡರ್ಸ್ ಮಾಲಕರನ್ನು ನೇರ ಹೊಣೆಗಾರನ್ನಾಗಿ ಮಾಡಲಾಗುವುದೆಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.