ಮಡಿಕೇರಿ: ವಿದ್ಯುತ್ ಇಲಾಖೆಯ ನೌಕರರಿಗೆ ಸನ್ಮಾನ ಕಾರ್ಯಕ್ರಮ

ಮಡಿಕೇರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ಮಾಜಿ ಮುಖ್ಯಮಂತ್ರಿ, ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ್ ಅರಸು ಅವರ 110ನೇ ಜನ್ಮದಿನಾಚರಣೆಯ ಪ್ರಯುಕ್ತ ವಿದ್ಯುತ್ ಇಲಾಖೆಯ ನೌಕರರನ್ನು ಸನ್ಮಾನಿಸಲಾಯಿತು.
ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮಮದಲ್ಲಿ ಗಣ್ಯರು ಡಿ.ದೇವರಾಜ್ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್‍ನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್, ವಿದ್ಯುತ್ ಇಲ್ಲದೆ ದಿನ ಕಳೆಯಲು ಸಾಧ್ಯವಿಲ್ಲ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ವಿದ್ಯುತ್ ಇಲಾಖೆಯ ನೌಕರರು ಹಗಲು ರಾತ್ರಿ ಎನ್ನದೇ, ಗಾಳಿ, ಮಳೆ, ಚಳಿಯನ್ನು ಲೆಕ್ಕಿಸದೇ ದಿನದ ಇಪ್ಪತ್ತನಾಲ್ಕು ಗಂಟೆಯೂ ನಾಗರಿಕರ ಸೇವೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಸಾರ್ವಜನಿಕರು ವಿದ್ಯುತ್ ನೌಕರರ ಸಮಸ್ಯೆಯನ್ನು ಅರಿತು ಅವರಿಗೆ ಉತ್ತಮ ಸಹಕಾರ ನೀಡಬೇಕು ಎಂದರು.
ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜು ಅರಸು ಅವರ ಹೆಸರಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಭಿನ್ನವಾದ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಮತ್ತಷ್ಟು ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುವಂತಾಗಲಿ ಎಂದು ಹಾರೈಸಿದರು.
ಅಹಿಂದಾ ಒಕ್ಕೂಟದ ಸ್ಥಾಪಕಾಧ್ಯಕ್ಷರು ಹಾಗೂ ಸಹಮತ ವೇದಿಕೆಯ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕರ್ನಾಟಕ ಕಂಡ ಹತ್ತು ಹಲವು ಮುಖ್ಯಮಂತ್ರಿಗಳಲ್ಲಿ ಡಿ.ದೇವರಾಜು ಅರಸು ಅವರು ಕ್ರಾಂತಿಕಾರಿ ರಾಜಕೀಯ ತಂದವರು. ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಜಾರಿಗೆ ತಂದಿದ್ದ ಉಳುವವನೇ ಭೂಮಿಯ ಒಡೆಯ ಎಂಬ ಕ್ರಾಂತಿಕಾರಿ ಭೂ ಸುಧಾರಣಾ ಕಾಯ್ದೆ ದೇಶದಲ್ಲಿಯೇ ಮಾದರಿಯಾಗಿತ್ತು. ಕರ್ನಾಟಕದಲ್ಲಿ ಜಮೀನ್ದಾರಿ ಪದ್ಧತಿ, ಜೀತ ಪದ್ಧತಿ ಮತ್ತು ತಲೆಮೇಲೆ ಮಲ ಹೊರುವ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿದ ಶ್ರೇಯಸ್ಸು ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಅರಸು ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಬಹುವಾಗಿ ಶ್ರಮಿಸಿದ್ದರು. ಆಯನೂರು ಆಯೋಗವನ್ನು ರಚಿಸಿ ಹಿಂದುಳಿದ ವರ್ಗಗಳಿಗೆ ಮಿಸಲಾತಿಯನ್ನು ತಂದರು.
ಹಿಂದುಳಿದ ಮಕ್ಕಳು ಯೋಗ್ಯ ಶಿಕ್ಷಣ ಪಡೆದು ಸಮಾಜದಲ್ಲಿ ಸಮಾನವಾಗಿ ಬಾಳಬೇಕು ಎಂಬ ನಿಟ್ಟಿನಲ್ಲಿ ಹಾಸ್ಟೇಲ್ ವ್ಯವಸ್ಥೆ ಜಾರಿ ತಂದರು. ದೇವರಾಜು ಅರಸು ಅವರನ್ನು ಮರೆಯಲು ಸಾಧ್ಯವಿಲ್ಲ. ದುರ್ಬಲ ವರ್ಗದ ಕಲ್ಯಾಣಕ್ಕಾಗಿ ಅವರು ಮಾಡಿದ ಕಾರ್ಯಕ್ರಮ ಇಡೀ ದೇಶಕ್ಕೆ ಮಾದರಿ. ಕರ್ನಾಟಕ ರಾಜ್ಯದ ಜನರಿಗೆ ಜಾತ್ಯಾತೀತವಾಗಿ ಅನೇಕ ಕಲ್ಯಾಣಕಾರಿ ಕಾರ್ಯಕ್ರಮಗಳನ್ನು ತಂದು ಕ್ರಾಂತಿಕಾರಿ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.
ಡಿ.ದೇವರಾಜ ಅರಸು ಅವರು ಸದಾ ಸಮಾನತೆಯ ಹಾದಿಯನ್ನು ತೋರಿದ ಮಹಾನ್ ನಾಯಕ. ಸಮಾಜದಲ್ಲಿ ಮೇಲು-ಕೀಳು ಎಂಬ ಆಸಮಾನತೆಗಳನ್ನು ಹೋಗಲಾಡಿಸಲು ಅವರು ದೃಢ ಪ್ರಯತ್ನ ನಡೆಸಿದರು. ಇಂತಹ ಮಹಾನ್ ವ್ಯಕ್ತಿಗಳನ್ನು ಸ್ಮರಿಸುವ ಮೂಲಕ ಅವರ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು, ವಿದ್ಯುತ್ ಇಲಾಖೆಯ ನೌಕರರನ್ನು ಸನ್ಮಾನಿಸುವಂತಹ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅರ್ಥಪೂರ್ಣವಾದ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಕರ್ನಾಟಕ ದಲಿತಾ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ದೀನ ದಲಿತರು, ನಿರ್ಗತಿಕರು ಲೈನ್‍ಮನೆಗಳಲ್ಲಿ ವಾಸಿಸುವಂತ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮನೆಗಳಿಲ್ಲದ ನಿರ್ಗತಿಕರಿಗೆ ಹೋರಾಟದ ಮೂಲಕ ಮನೆಗಳನ್ನು ಕಲ್ಪಿಸಿದೆ. ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂಬ ಉದ್ದೇಶದಿಂದ ಪ್ರತಿವರ್ಷ ಎಸ್‍ಎಸ್‍ಎಲ್‍ಸಿ, ಪಿಯುಸಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಶಾಲೆಗೆ ಶೇ.100 ರಷ್ಟು ಅಂಕ ಗಳಿಸಿದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುವ ಕೆಲಸ ಮಾಡುತ್ತಿದೆ. ಆ ಮೂಲಕ ಕಳೆದ 15 ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಸಂಘಟನೆ ವತಿಯಿಂದ ಸನ್ಮಾನಿಸಿ ಪ್ರೋತ್ಸಾಹಿಸಲಾದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಾಕೃತಿಕ ವಿಕೋಪ ಹಾಗೂ ಕೋವಿಡ್ ಸಂದರ್ಭದಲ್ಲೂ ಕಷ್ಟದಲ್ಲಿರುವವರ ನೆರವಿಗೆ ಸಂಘಟನೆ ಸ್ಪಂದಿಸಿದ್ದು, ಇದೀಗ ಸಾರ್ವಜನಿಕರ ಸೇವೆಯಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ತೋಡಗಿಕೊಂಡಿರುವ ವಿದ್ಯುತ್ ಇಲಾಖೆಯ ನೌಕರರನ್ನು ಸನ್ಮಾನಿಸಿ ಗೌರವಿಸಲಾಗಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ಹೆಚ್.ಎ.ಮೋಹನ್ ಕುಮಾರ್ ಮಾತನಾಡಿ, ಡಿ.ದೇವರಾಜ್ ಅರಸು ಅವರು ಕರ್ನಾಟಕದ ರಾಜಕೀಯದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಜನಪರ ಆಡಳಿತದ ನಿಜವಾದ ಪ್ರತಿರೂಪವಾಗಿದ್ದರು. ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಅವರು ಕೈಗೊಂಡ ಕಲ್ಯಾಣಕಾರಿ ಕ್ರಮಗಳು ಇಂದಿಗೂ ಮಾದರಿಯಾಗಿದೆ. ಸಾಮಾನ್ಯ ಜನರ ಕಲ್ಯಾಣಕ್ಕಾಗಿ ಅವರು ಬದ್ಧರಾಗಿ ದುಡಿಯುವುದರ ಮೂಲಕವೇ ನಿಜವಾದ ನಾಯಕತ್ವ ಎಂದರೇನು ಎಂಬುದನ್ನು ತೋರಿಸಿಕೊಟ್ಟವರು. ನಮ್ಮ ಶ್ರಮ ಮತ್ತು ಬದ್ಧತೆ ಎಂದಿಗೂ ಕೈಬಿಡುವುದಿಲ್ಲ. ಆ ನಿಟ್ಟಿನಲ್ಲಿ ಎಲ್ಲರೂ ಉತ್ತಮ ಕೆಲಸ ಮಾಡೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲ್ಲೂಕು ಸಂಚಾಲಕ ದೀಪಕ್ ಪೊನ್ನಪ್ಪ, ಸಮಾಜದ ಹಾಗೂ ದೀನ ದಲಿತ ಏಳಿಗಾಗಿ ದುಡಿದವರನ್ನು ಪ್ರತಿದಿನ ನೆನಪಿಸಿಕೊಂಡರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿ ಉತ್ತಮ ನಾಯಕರ ಹೆಸರಿನಲ್ಲಿ ಕಾರ್ಯಕ್ರಮನ್ನು ಆಯೋಜನೆ ಮಾಡಿದ್ದು, ಶ್ರಮಿಕರನ್ನು ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಸನ್ಮಾನಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡ ಜೆ.ಮೋಹನ್ ಮೌರ್ಯ ಮಾತನಾಡಿ, ರಾಜ್ಯದಲ್ಲಿ 70-80ರ ದಶಕದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಪರಿವರ್ತನೆಗೆ ಗಟ್ಟಿಯಾದ ಅಡಿಗಲ್ಲು ಹಾಕಿದ್ದ ದೇವರಾಜ ಅರಸು ಅವರು ಡಾ.ಬಿ ಆರ್ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಆಶಯಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿದ್ದರು ಎಂದರು.
ಡಿಎಸ್‍ಎಸ್ ಪೊನ್ನಂಪೇಟೆ ತಾಲ್ಲೂಕು ಸದಸ್ಯ ಹೆಚ್.ಆರ್.ಜಗದೀಶ್ ಮಾತನಾಡಿ, ಡಿ.ದೇವರಾಜು ಅವರಸು ಅವರ ಅಂದಿನ ಕಾಲಘಟ್ಟದಲ್ಲಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ಅವಿರತ ಶ್ರಮ ವಾಹಿಸಿದ್ದಾರೆ. ಆದರೆ ಇಂದು ಬಡವರ ಪರ ಎಂದು ಹೇಳಿಕೊಳ್ಳುವ ಸರ್ಕಾರ ಬಡವರಿಗಾಗಿ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ. ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆದರೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇನ್ನಾದರೂ ಸರ್ಕಾರ ಬಡವರಿಗೆ ನಿವೇಶನ ಕಲ್ಪಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಸದಸ್ಯ ರಮೇಶ್ ನಿರೂಪಿಸಿದರು, ರಾಜ್ಯ ಸಮಿತಿ ಸದಸ್ಯ ವೀರಭದ್ರಯ್ಯ ಸ್ವಾಗತಿಸಿ, ಟಿ.ಪಿ.ರಮೇಶ್ ಅವರ ಪರಿಚಯ ಮಾಡಿದರು. ಹೆಚ್.ಆರ್.ಜಗದೀಶ್ ವಂದಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 30 ವಿದ್ಯುತ್ ಇಲಾಖೆಯ ನೌಕರರು, ಕನ್ನಡ ಸಾಹಿತ್ಯ ಪರಿಷತ್‍ನ ಕೊಡಗು ಜಿಲ್ಲಾಧ್ಯಕ್ಷ ಕೇಶವ ಕಾಮತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ಹೆಚ್.ಎ.ಮೋಹನ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಹಿಂದಾ ಒಕ್ಕೂಟದ ಸ್ಥಾಪಕರು ಹಾಗೂ ಸಹಮತ ವೇದಿಕೆಯ ಅಧ್ಯಕ್ಷ ಟಿ.ಪಿ.ರಮೇಶ್ ಅವರಿಗೆ ಅಹಿಂದ ಭೂಷಣ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.