ಮಡಿಕೇರಿ | 32 ಹೊಸ ಮೊಬೈಲ್ ಫೋನ್ ಗಳ ಕಳ್ಳತನ : ಅಸ್ಸಾಂ ಮೂಲದ ಆರೋಪಿಯ ಬಂಧನ

ಮಡಿಕೇರಿ ಆ.28 : ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಡಿಯೊಂದರಿಂದ 32 ಹೊಸ ಮೊಬೈಲ್ ಫೋನ್ ಗಳು ಮತ್ತು ರೂ.3 ಸಾವಿರ ನಗದು ಕಳ್ಳತನ ಮಾಡಿದ ಅಸ್ಸಾಂ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಚಿಕ್ಕಮಗಳೂರು ಜಿಲ್ಲೆಯ ತೇಗೂರು ಗ್ರಾಮದ ನಿವಾಸಿ ಜೋಹುರ್ ಆಲಿ (28) ಬಂಧಿತ ಆರೋಪಿಯಾಗಿದ್ದು, ಈತನ ಬಳಿಯಿಂದ 32 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಇದೇ ಆ.24 ರಂದು ಗೋಣಿಕೊಪ್ಪ ಪಟ್ಟಣದ ಅಂಗಡಿಯೊಂದರ ರೋಲಿಂಗ್ ಶೆಟ್ರಸ್ ಮುರಿದು ವಿವಿಧ ಕಂಪನಿಯ 32 ಹೊಸ ಮೊಬೈಲ್ ಫೋನ್ ಗಳು ಮತ್ತು ರೂ.3 ಸಾವಿರ ನಗದು ಕಳ್ಳತನವಾಗಿರುವ ಕುರಿತು ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಕೇವಲ ಮೂರು ದಿನಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿರಾಜಪೇಟೆ ಉಪವಿಭಾಗದ ಡಿವೈಎಸ್‍ಪಿ ಮಹೇಶ್ ಕುಮಾರ್ ಎಸ್. ಗೋಣಿಕೊಪ್ಪ ಸಿಪಿಐ ಶಿವರಾಜ ಆರ್.ಮುಧೋಳ್, ಪಿಎಸ್‍ಐ ಪ್ರದೀಪ್ ಕುಮಾರ್ ಬಿ.ಕೆ. ಹಾಗೂ ಸಿಬ್ಬಂದಿಗಳ ವಿಶೇಷ ತನಿಖಾ ತಂಡ ಕಾರ್ಯಾಚರಣೆ ಕೈಗೊಂಡಿತು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.