ಹೊದ್ದೂರು | ನಿವೇಶನರಹಿತರ ಅಹೋರಾತ್ರಿ ಧರಣಿ 304ನೇ ದಿನಕ್ಕೆ; ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಮಡಿಕೇರಿ, ಸೆ.1: ಹೊದ್ದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸ.ನಂ. 49/3 ರಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ನಡೆಸುತ್ತಿರುವ ಹೊದ್ದೂರು ಗ್ರಾಮ ನಿವೇಶನ ರಹಿತರ ಅಹೋರಾತ್ರಿ ಧರಣಿ 304ನೇ ದಿನಕ್ಕೆ ಕಾಲಿರಿಸಿದೆ.
ಸ್ವಂತ ಸೂರಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಹೊದ್ದೂರು ಗ್ರಾಮ ಪಂಚಾಯತ್‌ನಲ್ಲಿ 300 ಕುಟುಂಬಗಳು, ಮೂರ್ನಾಡು ಪಂಚಾಯತ್‌ನಲ್ಲಿ 300 ಆದಿವಾಸಿ ಹಾಗೂ ದಲಿತ ಕುಟುಂಬಗಳು ಗಾಳಿ, ಮಳೆ, ಚಳಿಯನ್ನು ಲೆಕ್ಕಿಸದೇ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಶಾಶ್ವತ ನಿವೇಶನ ವ್ಯವಸ್ಥೆ ಕಲ್ಪಿಸುವವರೆಗೂ ಪ್ರತಿಭಟನೆ ನಡೆಸುವುದಾಗಿ ಧರಣಿನಿರತರು ಪಟ್ಟು ಹಿಡಿದಿದ್ದಾರೆ. ಮಡಿಕೇರಿ ತಾಲೂಕು ತಹಶೀಲ್ದಾರ್ ಅವರು ನವಂಬರ್ ತಿಂಗಳಿನಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದು ಬಿಟ್ಟರೆ ಇದುವರೆಗೂ ಯಾವುದೇ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಧರಣಿ ನಿರತರ ಬೇಡಿಕೆಗಳನ್ನು ಆಲಿಸಲಿಲ್ಲವೆಂದು ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಸಂದರ್ಭ ಬಹುಜನ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಹಾಗೂ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷ ಮೊಣ್ಣಪ್ಪ ಮಾತನಾಡಿ, 49/3 ಸರ್ವೇ ನಂಬರಿನ ಜಾಗ ಸರಕಾರಿ ಜಾಗವಾಗಿದ್ದು ತಹಶೀಲ್ದಾರ್ ನೇತೃತ್ವದಲ್ಲಿ ಸರ್ವೇ ಕಾರ್ಯ ಮುಗಿಸಿ ಎರಡು ಎಕರೆ ಜಾಗದ ನೀಲಿ ನಕ್ಷೆ ತಯಾರಿಸಿ ಬಡವರಿಗೆ ಕೊಡುವುದಾಗಿ ತೀರ್ಮಾನಿಸಲಾಗಿತ್ತು. ಸದರಿ ಹೋರಾಟ ಮುನ್ನೂರ ನಾಲ್ಕು ದಿನ ಪೂರೈಸಿದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಒಂದು ತಿಂಗಳಲ್ಲಿ ನಿವೇಶನ ನಿರ್ಮಾಣ ಹಾಗೂ ಉಳಿದ ಬಡವರಿಗೆ ಭೂಮಿ ನೀಡದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಬಹುಜನ ಕಾರ್ಮಿಕ ಸಂಘದ ಉಪಾಧ್ಯಕ್ಷ ಹಾಗೂ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಉಪಾಧ್ಯಕ್ಷ ಕಿರಣ್ ಜಗದೀಶ್ ಮಾತನಾಡಿ, ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ ಒಂದು ತಿಂಗಳೊಳಗೆ ನಮ್ಮ ಸಮಸ್ಯೆಗೆ ಪರಿಹಾರ ದೊರೆಯದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ, ಮಡಿಕೇರಿ ನಗರಸಭೆ ಸದಸ್ಯ ಹಾಗೂ ಎಸ್‌ಡಿಪಿಐ ಪಕ್ಷದ ಜಿಲ್ಲಾಧ್ಯಕ್ಷ ಅಮೀನ್ ಮೊಹ್ಸಿನ್ ಮಾತನಾಡಿ, ಸರಕಾರ ನಿವೇಶನ ರಹಿತರ ಬೇಡಿಕೆ ಈಡೇರಿಸುವವರೆಗೂ ಎಸ್‌ಡಿಪಿಐ ಪಕ್ಷ ಈ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಲಿದೆ ಎಂದರು.
ಬಹುಜನ ಕಾರ್ಮಿಕ ಸಂಘದ ಪದಾಧಿಕಾರಿ ಹಾಗೂ ಪೆಗ್ಗೊಲ್ಲಿ ನಿವೇಶನ ಹೋರಾಟ ಸಮಿತಿಯ ಮೇಲ್ಸಮಿತಿ ಸದಸ್ಯ ಮಹೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಎಲ್ಲ ಸಂಘಟನೆಗಳ ಬೆಂಬಲ ಪಡೆದುಕೊಂಡು ದಿಡ್ಡಳ್ಳಿ ಹೋರಾಟದಂತೆ ಈ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಹೊದ್ದೂರು ಗ್ರಾಪಂ ಸದಸ್ಯೆ ಕುಸುಮಾವತಿ ಮಾತನಾಡಿ, ಕಳೆದ 10 ತಿಂಗಳುಗಳಿಂದ ಹೋರಾಟ ನಡೆಸುತ್ತಿರುವ ನಿವೇಶನರಹಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಈ ಸಂದರ್ಭ ಹೋರಾಟ ಸಮಿತಿಯ ಅಧ್ಯಕ್ಷ ಸಂಜೀವ, ಉಪಾಧ್ಯಕ್ಷೆ ಸುಜಾತ, ಪ್ರಧಾನ ಕಾರ್ಯದರ್ಶಿ ಚೋಂದಮ್ಮ, ಉಪ ಕಾರ್ಯದರ್ಶಿ ಮಂಜುಳ, ಪೊನ್ನತ್ ಮೊಟ್ಟೆ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಅಮ್ಮತ್ತಿ ಹೋರಾಟ ಸಮಿತಿಯ ಕಾರ್ಯದರ್ಶಿ ಯಶೋದಾ, ಕಬಡಗೇರಿ ಹೋರಾಟ ಸಮಿತಿಯ ಉಪಾಧ್ಯಕ್ಷೆ ಸುಮಾ, ಕಾರ್ಯದರ್ಶಿ ಅಪ್ಪಣ್ಣ, ನಾಪೊಕ್ಲು ಹೋರಾಟ ಸಮಿತಿಯ ಮಣಿಕಂಠ, ಕೊಂಡಗೇರಿ ಹೋರಾಟ ಸಮಿತಿಯ ಅಣ್ಣು, ಕುಂಬಳದಾಳು ಹೋರಾಟ ಸಮಿತಿಯ ಸತ್ಯ ಹಾಗೂ ಹೋರಾಟ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಇದ್ದರು.