ಪೊನ್ನಂಪೇಟೆ ತಾ.ಪಂ ಅಧಿಕಾರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಸಾಂದರ್ಭಿಕ ಚಿತ್ರ
ಮಡಿಕೇರಿ, ಸೆ.7 : ಪೊನ್ನಂಪೇಟೆ ತಾಲೂಕು ಪಂಚಾಯತ್ ಪ್ರಭಾರ ಯೋಜನೆ ಅಧಿಕಾರಿ ತಮ್ಮ ಕಾರಿನಲ್ಲೇ ಮೃತಪಟ್ಟಿರುವ ಸ್ಥಿತಿಯಲ್ಲಿ ಕಂಡು ಬಂದಿರುವ ಘಟನೆ ವರದಿಯಾಗಿದೆ.
ಮೃತರನ್ನು ಬೆಂಗಳೂರು ಮೂಲದ, ಪ್ರಸಕ್ತ ತಿತಿಮತಿಯಲ್ಲಿ ವಾಸಿಸುತ್ತಿದ್ದ ಮನಮೋಹನ್ (46) ಎಂದು ಗುರುತಿಸಲಾಗಿದೆ.
ಮನಮೋಹನ್ ಅವರು ಶನಿವಾರ ಸಂಜೆ 4ರ ವೇಳೆ ತಿತಿಮತಿಯಿಂದ ಪಿರಿಯಾಪಟ್ಟಣಕ್ಕೆ ತನ್ನ ಆಲ್ಟೋ ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರು. ಈ ವೇಳೆ ಬೂದಿತಿಟ್ಟು ಗ್ರಾಮದ ರಸ್ತೆ ಬದಿ ಕಾರು ನಿಲ್ಲಿಸಿದ್ದು, ಕುಳಿತ ಸ್ಥಿತಿಯಲ್ಲೇ ಅವರು ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಅನ್ನಿಸುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನಮೋಹನ್ ಅವರು ಪೊನ್ನಪ್ಪಸಂತೆ, ನಿಟ್ಟೂರು, ಬಾಳಲೆ, ಸೋಮವಾರಪೇಟೆ ಹಾಗೂ ಸಿದ್ದಾಪುರದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಒಂದೂವರೆ ತಿಂಗಳಿನಿಂದ ಪೊನ್ನಂಪೇಟೆ ತಾಪಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.