ಕಾಸರಗೋಡು: ಕ್ರೇನ್ ತುಂಡಾಗಿ ಬಿದ್ದು ಇಬ್ಬರು ಕಾರ್ಮಿಕರು ಮೃತ್ಯು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಕ್ರೇನ್ ತುಂಡಾಗಿ ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.
ಕೋಝಿಕ್ಕೋಡ್ ವಡಗರ ನಿವಾಸಿಗಳಾದ ಅಕ್ಷಯ್ (30) ಹಾಗೂ ಅಶ್ವಿನ್ ( 30) ಮೃತಪಟ್ಟವರು. ಅಕ್ಷಯ್ ಕುಂಬಳೆಯ ಆಸ್ಪತ್ರೆಯಲ್ಲಿ ಹಾಗೂ ಅಶ್ವಿನ್ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರೇನ್ ಬಳಸಿ ಬೀದಿ ದೀಪ ಅಳವಡಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಕ್ರೇನ್ ನ ಬಾಕ್ಸ್ ನಲ್ಲಿ ನಿಂತು ಕೆಲಸ ಮಾಡುತ್ತಿದ್ದಾಗ ಏಕಾಏಕಿ ಬಾಕ್ಸ್ ಕ್ರೇನ್ ನಿಂದ ಕಳಚಿ ಕೆಳಗೆ ಬಿದ್ದಿದೆ. ಈ ವೇಳೆ ಇಬ್ಬರು ಕಾರ್ಮಿಕರು ಸರ್ವೀಸ್ ರಸ್ತೆಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ.
ಮಂಗಳವಾಡ ಚೆರ್ಕಳ ಮೇಲ್ಸೇತುವೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದರು. ಅಸ್ಸಾಂ ಮೂಲದ ರಾಖಿ ಬುಲ್ ಹಕ್ (27) ಎಂಬ ಕಾರ್ಮಿಕ ಮೃತಪಟ್ಟಿದ್ದರು.