ಕಾಸರಗೋಡು|ಪುತ್ರಿ ಹಾಗು ಸಹೋದರನ ಪುತ್ರಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ತಂದೆ

ಕಾಸರಗೋಡು: ಮಗಳ ಹಾಗೂ ಸಹೋದರನ ಪುತ್ರಿಯ ಮೇಲೆ ತಂದೆಯೋರ್ವ ಆ್ಯಸಿಡ್ ದಾಳಿ ನಡೆಸಿದ ಘಟನೆ ಪನತ್ತಡಿ ಪಾರಕಡವು ಕರಿಕೆ ಎಂಬಲ್ಲಿ ನಡೆದಿದೆ.
ಆ್ಯಸಿಡ್ ದಾಳಿ ನಡೆಸಿದ ತಂದೆ ಕರ್ನಾಟಕ ಮೂಲದ ಕೆ.ಸಿ ಮನೋಜ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ 17 ವರ್ಷದ ಪುತ್ರಿ ಹಾಗೂ ಸಹೋದರನ ಹತ್ತು ವರ್ಷದ ಪುತ್ರಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಸುಟ್ಟ ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ಕೆಲ ವರ್ಷಗಳಿಂದ ಪತ್ನಿ ಜೊತೆ ವಿರಸಗೊಂಡು ಒಬ್ಬಂಟಿಯಾಗಿ ವಾಸವಾಗಿದ್ದಾನೆ. ಸಹೋದರನ ಮನೆಯಲ್ಲಿ ಪತ್ನಿ ವಾಸವಾದ್ದು, ಅಲ್ಲಿಗೆ ಬಂದಿದ್ದ ಈತ ತನ್ನ ಪುತ್ರಿ ಹಾಗೂ ಸಹೋದರನ ಪುತ್ರಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೃತ್ಯದ ಬಳಿಕ ತಲೆಮರೆಸಿ ಕೊಂಡಿರುವ ಮನೋಜ್ ಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. ಈತನ ವಿರುದ್ಧ ಆ್ಯಸಿಡ್ ದಾಳಿ ಅಲ್ಲದೆ ಕೊಲೆ ಯತ್ನ, ಮನೆಗೆ ಅಕ್ರಮ ಪ್ರವೇಶ ಮಾಡಲಾದ ಮೊಕದ್ದಮೆಗಳನ್ನು ಹೂಡಲಾಗಿದೆ ಎಂದು ರಾಜಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.