ಬಾಲಕನಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಬಂಧಿತ ಬೇಕಲ ಉಪ ಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ಅಮಾನತು

ಕಾಸರಗೋಡು: 16ರ ಹರೆಯದ ಬಾಲಕನನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಬೇಕಲ ಉಪ ಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಬೇಕಲ ಉಪ ಜಿಲ್ಲಾ ಎಇಒ ಆಗಿದ್ದ ವಿ.ಕೆ.ಝೈನುದ್ದೀನ್ ಅಮಾನತುಗೊಂಡವರು. ಈತನನ್ನು ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಆದೇಶದಂತೆ ಅಮಾನತು ಮಾಡಲಾಗಿದೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಾಲಾ ವಿದ್ಯಾರ್ಥಿಯಾಗಿರುವ ಬಾಲಕನನ್ನು ಡೇಟಿಂಗ್ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡ ವಿವಿಧ ಸರಕಾರಿ ಇಲಾಖೆ, ರಾಜಕೀಯ ವ್ಯಕ್ತಿಗಳು ಸೇರಿದಂತೆ 16 ಮಂದಿ ಆತನ ಮೇಲೆ ಸಲಿಂಗರತಿಯ ದೌರ್ಜನ್ಯ ಎಸಗಿದ್ದು, ಆರೋಪಿಗಳ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಪೈಕಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಸಹಾಯಕ ಶಿಕ್ಷಣಾಧಿಕಾರಿ, ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಅಧಿಕಾರಿಯೂ ಸೇರಿದ್ದಾರೆ.
16ರ ಹರೆಯದ ಬಾಲಕ ವಿದ್ಯಾರ್ಥಿಯನ್ನು ಹುಡುಕಿಕೊಂಡು ಮನೆಗೆ ಬಂದಿದ್ದ ಅಪರಿಚಿತ ವ್ಯಕ್ತಿಯೋರ್ವ ನೀಡಿದ ಮಾಹಿತಿಯ ಆಧಾರದಲ್ಲಿ ಬಾಲಕನ ತಾಯಿ ನೀಲೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಅದರಂತೆ ಬಾಲಕನನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಳೆದೆರಡು ವರ್ಷಗಳಿಂದ ಹುಡುಗ ಸಲಿಂಗ ರತಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಒಟ್ಟು 14 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 8 ಪ್ರಕರಣಗಳೂ ಕಾಸರಗೋಡು ಜಿಲ್ಲೆಯನ್ನು ಕೇಂದ್ರೀಕರಿಸಿವೆ. ಪ್ರಕರಣದ ಆರೋಪಿಗಳಲ್ಲಿ ಕಾಸರಗೋಡು, ಕಣ್ಣೂರು, ಕೋಝಿಕ್ಕೋಡು ಜಿಲ್ಲೆಯವರೂ ಇದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ತನಿಖೆಗಾಗಿ ನಾಲ್ವರು ಪೊಲೀಸ್ ಇನ್ ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಿದೆ.