ಬೆಂಬಲ ಬೆಲೆ ಯೋಜನೆಯಡಿ ಹೆಸರು, ಉದ್ದು, ಶೇಂಗಾ ಖರೀದಿಗೆ ಸಚಿವ ಚಲುವರಾಯಸ್ವಾಮಿ ಮನವಿ

ಸಚಿವ ಚಲುವರಾಯಸ್ವಾಮಿ
ಹೊಸದಿಲ್ಲಿ : ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ಕಲಬುರಗಿ ಸೇರಿದಂತೆ ವಿವಿಧೆಡೆಗಳಲ್ಲಿ ಬೆಳೆಯುವ ಹೆಸರು, ಉದ್ದು, ಶೇಂಗಾ, ಸೋಯಾಬಿನ್, ಸೂರ್ಯಕಾಂತಿ ಸೇರಿದಂತೆ ಇನ್ನಿತರ ಕೃಷಿ ಉತ್ಪನ್ನಗಳ ಖರೀದಿಗೆ ತಕ್ಷಣ ಅನುಮೊದನೆ ನೀಡಬೇಕು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಮಂಗಳವಾರ ಹೊಸದಿಲ್ಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಆಯೋಜಿಸಿದ್ದ ರಾಷ್ಟ್ರೀಯ ರಬಿ ಅಭಿಯಾನ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಲೆ ಬೆಂಬಲ ಯೋಜನೆ ಪ್ರಸ್ತುತ ಹೆಸರುಕಾಳು, ಉದ್ದು, ಸೂರ್ಯಕಾಂತಿ, ಸೋಯಾಬೀನ್ ಮತ್ತು ಶೇಂಗಾ ಬೆಲೆಗಳು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಇದೆ. ಇದರಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ತಕ್ಷಣವೇ ಈ ಬೆಳೆಗಳನ್ನು ಬೆಲೆ ಬೆಂಬಲ ಯೋಜನೆ ಅಡಿಯಲ್ಲಿ ಖರೀದಿಸಬೇಕು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೋರಿದರು.
ಕೆಲವು ವರ್ಷಗಳಿಂದ ರಾಜ್ಯಕ್ಕೆ ನಿರಂತರವಾಗಿ ಬೆಂಬಲ ಮತ್ತು ಸಹಕಾರ ನೀಡುತ್ತಿರುವ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಿಗೆ ಧನ್ಯವಾದ ಅರ್ಪಿಸುತ್ತೇವೆ. ರೈತರ ಪರವಾಗಿ SMAM, RKVY, ATMA, PMSKY, WDC ಮತ್ತು PDPSನಂತಹ ಯೋಜನೆಗಳನ್ನು ಮಂಜೂರು ಮಾಡಿದ್ದಕ್ಕಾಗಿ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಮಾವು ಬೆಳೆಗಾರರಿಗೆ ಸಹಾಯ ಮಾಡಿದ್ದಕ್ಕಾಗಿ ನಾವು ಆಭಾರಿಯಾಗಿದ್ದೇವೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ರೈತರು ಯಾಂತ್ರೀಕೃತ ಕೃಷಿ ಪದ್ಧತಿಗಳನ್ನು ಹೆಚ್ಚು ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ SMAM ಯೋಜನೆಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ 2025-26ನೇ ಸಾಲಿಗೆ ರಾಜ್ಯಕ್ಕೆ ಹೆಚ್ಚುವರಿಯಾಗಿ 200 ಕೋಟಿ ರೂ. ಗಳ ಅನುದಾನವನ್ನು ಒದಗಿಸಬೇಕೆಂದು ಚಲುವರಾಯಸ್ವಾಮಿ ಮನವಿ ಮಾಡಿದರು
ಕೃಷಿ ವಿವಿಗೆ ಮಾನ್ಯತೆ :
ಮಂಡ್ಯದಲ್ಲಿ ಹೊಸದಾಗಿ ಪ್ರಾರಂಭವಾದ ಕೃಷಿ ವಿಜ್ಞಾನಗಳ ವಿವಿಗೆ ಔಪಚಾರಿಕ ಮಾನ್ಯತೆ ಮತ್ತು ಅಗತ್ಯ ಅನುದಾನ ನೀಡಬೇಕು. ಜೊತೆಗೆ, ಬೆಂಗಳೂರಿನ ಕೃಷಿ ವಿವಿಯ ಎಲ್ಲ ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ ಕೇಂದ್ರಗಳನ್ನು ಮಂಡ್ಯ ವಿವಿಗೆ ವರ್ಗಾಯಿಸಬೇಕೆಂದು ಅವರು ಕೋರಿದರು.