ಕಲಬುರಗಿ | ಶಹಾಬಾದ್‌ನ ಅಜನಿ ಹಳ್ಳದ ಸೇತುವೆ ಮುಳುಗಡೆ: ಸಂಚಾರಕ್ಕೆ ಅಡ್ಡಿ

ಕಲಬುರಗಿ: ಶಹಾಬಾದ್ ತಾಲೂಕಿನಲ್ಲಿ ಧಾರಾಕಾರ ಸುರಿದ ಮಳೆಯಿಂದಾಗಿ ಶಹಾಬಾದ್ ನಗರದ ಮಧ್ಯಭಾಗದಲ್ಲಿರುವ ಅಜನಿ ಹಳ್ಳದ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಧಾರಾಕಾರ ಸುರಿದ ಮಳೆಯ ಪರಿಣಾಮ ನಗರದ ಅಜನಿ ಹಳ್ಳದಲ್ಲಿ ಪ್ರವಾಹ ಉಂಟಾಗಿ ಹಳೆ ಸೇತುವೆ ಹಾಗೂ ಇತ್ತೀಚೆಗೆ ನಿರ್ಮಾಣವಾದ ಹೊಸ ಸೇತುವೆಯೂ ಮುಳುಗಿ ಹೋಗಿದೆ. ಅಲ್ಲದೇ ನಗರದ ಐತಿಹಾಸಿಕ ಬಸವಣ್ಣ ದೇವರ ಗುಡಿ, ಅಡವಿತಾತನ ಮಂದಿರದಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿದೆ.
ಮಡ್ಡಿ ಪ್ರದೇಶದ ಮುಖ್ಯ ರಸ್ತೆಯ ಅರ್ಧ ಕಿಮೀವರೆಗೆ ನೀರು ಆವರಿಸಿದ್ದರಿಂದ ನಗರದೊಳಗೆ ಹೋಗಲು ಹಾಗೂ ಹೊರವಲಯಕ್ಕೆ ಹೋಗುವ ದಾರಿಗಳು ಕಡಿತಗೊಂಡಿವೆ.
ಪ್ರತಿ ವರ್ಷ ಮಳೆಗಾಲ ಬಂದಾಗಲೊಮ್ಮೆ ಅಜನಿ ಸೇತುವೆ ತುಂಬಿಕೊಂಡು ಸಂಚಾರಕ್ಕೆ ತೊಡಕಾಗುತ್ತಿತ್ತು. ಸೇತುವೆ ಚಿಕ್ಕದಾಗಿರುವ ಕಾರಣ ಸೇತುವೆ ಮುಳುಗಡೆಯಾಗುವುದು ಸರ್ವೇ ಸಾಮಾನ್ಯವಾಗಿತ್ತು. ನಗರೋತ್ಥಾನದ ಕೋಟಿಗಟ್ಟಲೇ ಅನುದಾನದಲ್ಲಿ ಈ ಹಿಂದೆ ಅವೈಜ್ಞಾನಿಕ ಸೇತುವೆ ನಿರ್ಮಾಣ ಮಾಡಲಾಗಿದೆ. ಆಗ ಸಾಕಷ್ಟು ಬಾರಿ ಈ ಬಗ್ಗೆ ನಗರಸಭೆಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಶರಣು ಪಗಲಾಪೂರ ತಿಳಿಸಿದ್ದರು. ಆದರೆ ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಮತ್ತೆ ಅದೇ ಸಮಸ್ಯೆ ಮುಂದುವರೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.