ಕಲಬುರಗಿ | ಅತಿವೃಷ್ಟಿಯಿಂದ ಆಳಂದ–ಅಫಜಲಪುರ ತತ್ತರ: ಪರಿಹಾರಕ್ಕೆ ಶಾಸಕರ ಒತ್ತಾಯ

ಕಲಬುರಗಿ: ಆಳಂದ ಮತ್ತು ಅಫಜಲಪುರ ತಾಲ್ಲೂಕುಗಳಲ್ಲಿ ಈ ವರ್ಷ ವಾಡಿಕೆಗಿಂತ ಶೇ.50 ಕ್ಕೂ ಹೆಚ್ಚು ಮಳೆಯಾಗಿ ಅಪಾರ ಪ್ರಮಾಣದ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಸಂಭವಿಸಿದೆ. ರಾಜ್ಯ ಸರಕಾರ ತಕ್ಷಣ ಹೆಚ್ಚಿನ ಪರಿಹಾರ ಘೋಷಿಸಬೇಕು ಎಂದು ನೀತಿ ಆಯೋಗದ ಉಪಾಧ್ಯಕ್ಷ ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲ್ ಹಾಗೂ ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿ.ಆರ್.ಪಾಟೀಲ್ ಅವರು, ಆಳಂದ ತಾಲ್ಲೂಕಿನಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ಸೇರಿದಂತೆ ಹಲವು ಇಲಾಖೆಗಳಡಿಯಲ್ಲಿ ಒಟ್ಟು 70 ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಇಷ್ಟು ದೊಡ್ಡ ಪ್ರಮಾಣದ ಪರಿಹಾರವನ್ನು ರಾಜ್ಯ ಸರಕಾರ ಮಾತ್ರ ನೀಡಲು ಸಾಧ್ಯವಿಲ್ಲ, ಕೇಂದ್ರದ ಸಹಕಾರ ಅಗತ್ಯವಿದೆ ಎಂದರು.
ರಾಜ್ಯದಲ್ಲಿ ಅರ್ಧಕ್ಕೂ ಹೆಚ್ಚು ಬಿಜೆಪಿ ಸಂಸದರು ಇದ್ದರೂ, ಕೇಂದ್ರಕ್ಕೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಮಾತನಾಡಿ, ಭೀಮಾ, ಅಮರ್ಜಾ, ಬೋರಿ ನದಿಗಳ ಉಕ್ಕಿನಿಂದ 36ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡಿವೆ. ಸುಮಾರು 27 ಹಳ್ಳಿಗಳನ್ನು ಸ್ಥಳಾಂತರಗೊಳಿಸುವ ಅಗತ್ಯವಿದೆ ಎಂದು ಹೇಳಿದರು.
ಈ ಬಾರಿ ಶೇ.66 ರಷ್ಟು ಹೆಚ್ಚು ಮಳೆಯಿಂದಾಗಿ ಅಪಾರ ನಷ್ಟವಾಗಿದೆ. ರಸ್ತೆಗಳು, ಶಾಲಾ ಕೊಠಡಿಗಳು, ಸೇತುವೆಗಳು ಹಾನಿಗೊಂಡಿವೆ. ಮಣೂರ ಹತ್ತಿರದ ರಸ್ತೆ, ಜೇವರ್ಗಿ-ಬಿ ಗ್ರಾಮದ ಸೇತುವೆ ಕಿತ್ತುಹೋಗಿ ಸಂಪರ್ಕ ಕಡಿತಗೊಂಡಿದೆ. 548-ಬಿ ರಾಷ್ಟ್ರೀಯ ಹೆದ್ದಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ತೊಂದರೆ ಹೆಚ್ಚಾಗಿದೆ. ಶಹಬಾದ್–ಚಿನ್ನಮಳ್ಳಿ–ತಿಳಗೂಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಚಿನ್ನಮಳ್ಳಿಯ ಸೇತುವೆಯ ಕೀವಾಲ್ ಕಿತ್ತುಹೋಗಿ ರೈತರ ಬೆಳೆ ಹಾನಿಯಾಗಿದೆ ಎಂದು ವಿವರಿಸಿದರು.
ರಾಜ್ಯ ಸರಕಾರ ತಕ್ಷಣ ಸಮರ್ಪಕ ಪರಿಹಾರ ಘೋಷಿಸಿ, ಕೇಂದ್ರದಿಂದ ಸಹಾಯ ಪಡೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದರು.