ಮುಖ್ಯಮಂತ್ರಿಗಳು ಕಲಬುರಗಿಯಿಂದಲೇ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಿ: ನಿಖಿಲ್ ಕುಮಾರಸ್ವಾಮಿ

ಕಲಬುರಗಿ: ರಾಜ್ಯದ ಪ್ರಮುಖ ನಗರವಾಗಿರುವ ಕಲಬುರಗಿಯ ಪ್ರಮುಖ ರಸ್ತೆಗಳಲ್ಲೇ ತಗ್ಗು ಗುಂಡಿಗಳು ನಿರ್ಮಾಣವಾಗಿವೆ. ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿಂದಲೇ ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಲಿ ಎಂದು ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ (ಕೆಕೆಆರ್ ಡಿಬಿ) 5 ಸಾವಿರ ಕೋಟಿ ರೂ. ಇಟ್ಟಿದ್ದೇವೆ ಎಂದು ಹೇಳುತ್ತಾರೆ. ಕಲಬುರಗಿಯಂತಹ ನಗರದಲ್ಲಿ ರಸ್ತೆಗಳು ಕೆಟ್ಟು ಹೋಗಿವೆ. ಸಂಚಾರಕ್ಕೆ ಸಾರ್ವಜನಿಕರು ಪರದಾಡುವಂತಾಗಿದೆ. ಕೂಡಲೇ ಸರ್ಕಾರ ಎಚ್ಚೆತ್ತು ಗುಂಡಿಗಳನ್ನು ಮುಚ್ಚುವ ಹಾಗೂ ಕೆಟ್ಟು ಹೋಗಿರುವ ರಸ್ತೆಗಳನ್ನು ದುರಸ್ಥಿ ಮಾಡಲಿ ಎಂದರು.
ರಾಜ್ಯದಲ್ಲಿ ಕೃಷಿ ಸಚಿವರು ಕಾಣೆ:
ರಾಜ್ಯದಲ್ಲಿ ಅತಿವೃಷ್ಟಿಯಾದರೂ ಕೃಷಿ ಸಚಿವರು ಕಾಣೆಯಾಗಿದ್ದಾರೆ, ಅವರು ನಮ್ಮ ರಾಜ್ಯಕ್ಕೆ ಸಚಿವರಾ ಅಥವಾ ಅವರ ಜಿಲ್ಲೆ, ತಾಲ್ಲೂಕಿಗೆ ಸಚಿವರಾ? ಎಂದು ಪ್ರಶ್ನಿಸಿದ ನಿಖಿಲ್ ಕುಮಾರಸ್ವಾಮಿ ಅವರು, ರೈತರಿಗೆ ಇಷ್ಟೊಂದು ಸಮಸ್ಯೆಗಳು ಆದರೂ ಸೌಜನ್ಯದಿಂದ ಭೇಟಿ ನೀಡಿ, ಪರಿಶೀಲಿಸುವ ತಮ್ಮ ಕರ್ತವ್ಯವಾದರೂ ನಿಭಾಯಿಸಬೇಕಿತ್ತು. ಈವರೆಗಾದರೂ ಭೇಟಿ ನೀಡಬೇಕಿತ್ತು. ಆದರೆ ಭೇಟಿ ಕೊಟ್ಟಿಲ್ಲ ಎಂದರು.
ಇದೇ ವೇಳೆಯಲ್ಲೇ ಕಲಬುರಗಿಗೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಬೆಳೆ ನಷ್ಟವಾಗಿರುವ ರೈತರ ಭೂಮಿಗಳಿಗೆ ಭೇಟಿ ನೀಡಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಅವರಾದರೂ ಭೇಟಿ ಕೊಟ್ಟು ರೈತರ ಸಂಕಷ್ಟಗಳಿಗೆ ಸ್ಪಂದಿಸಲಿ ಎಂದು ಹೇಳಿದರು.
ಕಲಬುರಗಿ ಜಿಲ್ಲೆಯಾದ್ಯಂತ ರೈತರೊಂದಿಗೆ ಸಂವಾದ ನಡೆಸಿದ್ದೇನೆ. ಸಣ್ಣ ಸಣ್ಣ ರೈತರಿಂದ ಹಿಡಿದು ದೊಡ್ಡ ರೈತರಿಗೂ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ. ಹಾಗಾಗಿ ಸರ್ಕಾರ ಕೂಡಲೇ ಪ್ರತಿ ಎಕರೆಗೆ 25 ಸಾವಿರ ರೂ. ಘೋಷಣೆ ಮಾಡಲಿ ಎಂದ ಅವರು, ರೈತರಿಗಾಗಿ ಮುಖ್ಯಮಂತ್ರಿಗಳು ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ, ಕೃಷ್ಣ ರೆಡ್ಡಿ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಶಿವಕುಮಾರ್ ನಾಟೀಕಾರ, ಬಸವರಾಜ್ ಬೀರಬಿಟ್ಟೆ, ಸೇರಿದಂತೆ ಮತ್ತಿತರರು ಇದ್ದರು.