ಅಫಜಲಪುರ | ಮಳೆ ಹಾನಿಗೊಳಗಾದ ಜಮೀನಿಗೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಭೇಟಿ : ಪರಿಹಾರಕ್ಕೆ ಆಗ್ರಹ

ಕಲಬುರಗಿ: ಅಫಜಲಪುರ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ರೈತರ ಬೆಳೆಗಳಿಗೆ ಗಂಭೀರ ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರು ಮಂಗಳವಾರ ದಿಕ್ಸಂಗ (ಕೆ), ಜೇವರ್ಗಿ (ಬಿ) ಹಾಗೂ ಸುತ್ತಮುತ್ತಲಿನ ಹಾನಿಗೊಳಗಾದ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.
ಭೇಟಿಯ ವೇಳೆ ರೈತರೊಂದಿಗೆ ಮಾತನಾಡಿದ ಅವರು, ಬೆಳೆ ಹಾನಿಯಿಂದ ಸಾಲ ತೀರಿಸಲು ಸಾಧ್ಯವಾಗದೆ ರೈತರು ಸಂಕಷ್ಟದಲ್ಲಿದ್ದಾರೆ ಎಂಬ ಆತಂಕವನ್ನು ಆಲಿಸಿದರು. ರೈತರು, “ಬೇಸಿಗೆಯಲ್ಲಿ ಬಿತ್ತನೆಗೆ ಸಾಲ ಮಾಡಿದ್ದೇವೆ. ಈಗ ಬೆಳೆ ನಾಶವಾದ ಪರಿಣಾಮ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ” ಎಂದು ದೂರು ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರು ಅಧಿಕಾರಿಗಳಿಗೆ ತಕ್ಷಣ ಹಾನಿ ಅಂದಾಜು ನಡೆಸಿ ಪರಿಹಾರ ಧನ ವಿತರಣೆ ಮಾಡಲು ಶಿಫಾರಸು ಮಾಡುವಂತೆ ಸೂಚಿಸಿದರು. “ರೈತರ ಬೆನ್ನಿಗೆ ನಿಂತು ನೆರವು ಒದಗಿಸುವುದು ಸರ್ಕಾರದ ಹೊಣೆಗಾರಿಕೆ. ಯಾವುದೇ ರೀತಿಯ ವಿಳಂಬವಾಗಬಾರದು, ಪ್ರತಿ ಕುಟುಂಬಕ್ಕೂ ನ್ಯಾಯ ದೊರೆಯಬೇಕು” ಎಂದು ಹೇಳಿದರು.
ಸ್ಥಳೀಯ ನಾಯಕರಾದ ಬಾಬುಗೌಡ ಪಾಟೀಲ, ಹಣಮಂತ ಕಟ್ಟಿಮನಿ, ಪ್ರಶಾಂತ ಮ್ಯಾಕೇರಿ, ಅಶೋಕ್ ಕುದುರೆ, ಗಂಗಾಧರ್ ಪಾಟೀಲ್, ವಸಂತರಾಯ ಚಿತ್ಪುರ, ಕುಪೇಂದ್ರ ಸಿಂಗೆ, ಚಂದ್ರಕಾಂತ್ ಬನಸೋಡೆ, ಚನ್ನು ಪಾಟೀಲ್, ಗೌತಮ ದೊಡ್ಡಮನಿ ಸೇರಿದಂತೆ ಗ್ರಾಮಸ್ಥರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.