Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ವಿಶೇಷ ವಿಶ್ವವಿದ್ಯಾನಿಲಯಗಳ ಚಿಂತಾಜನಕ...

ವಿಶೇಷ ವಿಶ್ವವಿದ್ಯಾನಿಲಯಗಳ ಚಿಂತಾಜನಕ ಸ್ಥಿತಿ...

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ2 Aug 2025 11:10 AM IST
share
ವಿಶೇಷ ವಿಶ್ವವಿದ್ಯಾನಿಲಯಗಳ ಚಿಂತಾಜನಕ ಸ್ಥಿತಿ...
ಮೈಸೂರು ಸಂಸ್ಥಾನದ ರಾಜರು ಅದರಲ್ಲೂ ವಿಶೇಷವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಲಲಿತ ಕಲೆ, ಶಿಲ್ಪ ಕಲೆ ಮತ್ತು ಇನ್ನಿತರ ಪ್ರದರ್ಶಕ ಕಲೆಗಳಿಗೆ ಮೊದಲ ಆದ್ಯತೆ ನೀಡಿ ಪೋಷಣೆ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವಡಿ ಅವರ ಅಭಿವೃದ್ಧಿ ಕಾರ್ಯಗಳಿಂದ ಪ್ರಭಾವಿತರಾದವರು. ಹಾಗಂತ ಅವರ ಮಗ ಯತೀಂದ್ರ ನಾಲ್ವಡಿಯವರ ಸಾಧನೆಯೊಂದಿಗೆ ಹೋಲಿಸಿಕೊಂಡಿದ್ದಾರೆ. ನಾಲ್ವಡಿಯವರ ಒಟ್ಟು ಸಾಧನೆ ಬಗ್ಗೆ ಗೌರವ ಹೊಂದಿರುವ ಸಿದ್ದರಾಮಯ್ಯ ಅವರು ಕರ್ನಾಟಕದ ವಿಶೇಷ ವಿಶ್ವವಿದ್ಯಾನಿಲಯಗಳ ಚಿಂತಾಜನಕ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಅಭಿವೃದ್ಧಿಪಡಿಸಬೇಕಿದೆ. ಕನ್ನಡ ವಿಶ್ವವಿದ್ಯಾನಿಲಯವೂ ಸೇರಿದಂತೆ ಕನ್ನಡ ಸಂಸ್ಕೃತಿಯ ಪ್ರತೀಕವಾಗಿ ಸ್ಥಾಪಿತವಾದ ಎಲ್ಲ ವಿಶೇಷ ವಿಶ್ವವಿದ್ಯಾನಿಲಯಗಳನ್ನು ಹೆಚ್ಚು ಅನುದಾನ ನೀಡಿ ಬದುಕಿಸಬೇಕಿದೆ.

ವಿಶೇಷ ವಿಶ್ವವಿದ್ಯಾನಿಲಯಗಳನ್ನು ಭಾರತದ ಅನೇಕ ಭಾಗಗಳಲ್ಲಿ ಸ್ಥಾಪಿಸಿ ಯಶಸ್ಸು ಸಾಧಿಸಲಾಗಿತ್ತು. ಹಾಗೆ ನೋಡಿದರೆ ಕರ್ನಾಟಕದಲ್ಲಿ ಸ್ಥಾಪಿಸಲಾದ ಎಲ್ಲ ವಿಶ್ವವಿದ್ಯಾನಿಲಯಗಳು 90ರ ದಶಕದಿಂದ ಈಚೆಗೆ ಅಸ್ತಿತ್ವಕ್ಕೆ ಬಂದಿವೆ. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯವೊಂದನ್ನು ಹೊರತು ಪಡಿಸಿ ಉಳಿದ ವಿಶೇಷ ವಿಶ್ವವಿದ್ಯಾನಿಲಯಗಳು ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧಿಸಲಿಲ್ಲ.

1926ರ ಹೊತ್ತಿಗೆ ಮಧ್ಯಪ್ರದೇಶದಲ್ಲಿ ಭಾತಖಾಂಡೆ ಸಂಸ್ಕೃತಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗಿತ್ತು. ಸಂಗೀತ, ನೃತ್ಯ ಮತ್ತು ವಿವಿಧ ಸಂಗೀತ ವಾದ್ಯಗಳ ಕಲಿಕೆಗೆ ಇರುವ ಭಾರತದ ಮಹತ್ವದ ವಿಶ್ವವಿದ್ಯಾನಿಲಯವಾಗಿ ಬೆಳೆದು ನಿಂತಿದೆ. 1956ರಲ್ಲಿ ಮಧ್ಯಪ್ರದೇಶದ ಖೈರಾಘಡದಲ್ಲಿ ಇಂದಿರಾ ಕಲಾ ವಿಶ್ವವಿದ್ಯಾನಿಲಯ ಸ್ಥಾಪಿಸಲಾಗಿತ್ತು. ಈಗ ಅದು ಛತ್ತಿಸ್‌ಗಡ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ ನಿಧನರಾದ ತಮ್ಮ ಮಗಳು ಇಂದಿರಾದೇವಿ ಸ್ಮರಣಾರ್ಥ ವಿಶ್ವವಿದ್ಯಾನಿಲಯ ಸ್ಥಾಪಿಸಲು ರಾಜ ಮನೆತನದವರು ಜಮೀನು ನೀಡಿದ್ದರು. ಇದು ಈಗ ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತ್ಯಂತ ಮಹತ್ವದ ಸಂಗೀತ, ನೃತ್ಯ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡಿದೆ. ಮಧ್ಯಪ್ರದೇಶದ ಇನ್ನೊಂದು ವಿಶ್ವವಿದ್ಯಾನಿಲಯವೆಂದರೆ, ರಾಜಾ ಮಾನಸಿಂಗ್ ತೋಮರ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ. ರವೀಂದ್ರನಾಥ್ ಟ್ಯಾಗೋರ್ ಮುಂತಾದವರು ಸಂಗೀತ ಮತ್ತು ಲಲಿತ ಕಲೆಗಳಿಗೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಮಾನ್ಯತೆ ದಕ್ಕಿಸಿಕೊಡಲು ಪ್ರಯತ್ನಿಸಿದ್ದರು.

ದಕ್ಷಿಣ ಭಾರತದಲ್ಲಿ ಭಾಷೆಯ ಅಭಿವೃದ್ಧಿಗಾಗಿ ಹಲವು ವಿಶ್ವವಿದ್ಯಾನಿಲಯಗಳು ಸ್ಥಾಪನೆಯಾಗಿದ್ದವು. ತಮಿಳು ವಿಶ್ವವಿದ್ಯಾನಿಲಯ, ಮಲಯಾಳಂ ವಿಶ್ವವಿದ್ಯಾನಿಲಯ, ಶ್ರೀ ಪೊಟ್ಟಿ ಶ್ರೀರಾಮುಲು ತೆಲುಗು ವಿಶ್ವವಿದ್ಯಾನಿಲಯ (ಈಗ ಇದರ ಹೆಸರು ಬದಲಾಯಿಸಲಾಗಿದೆ) ಕಾರ್ಯ ನಿರ್ವಹಿಸುತ್ತಿದ್ದವು. ತೊಂಭತ್ತರ ದಶಕದ ಆದಿಯಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಕನ್ನಡ ವಿಶ್ವವಿದ್ಯಾನಿಲಯವೊಂದನ್ನು ಸ್ಥಾಪಿಸಲಾಗಿತ್ತು. ಕನ್ನಡ ಸಾಹಿತಿಗಳ ಒತ್ತಾಸೆ ಮತ್ತು ವೀರಪ್ಪ ಮೊಯ್ಲಿಯವರ ಪ್ರಯತ್ನದ ಫಲವಾಗಿ ಹಂಪಿ ಪ್ರದೇಶದಲ್ಲಿ ಕನ್ನಡ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬಂದಿತ್ತು. ಕನ್ನಡದ ಹಿರಿಯ ಕವಿ ಡಾ. ಚಂದ್ರಶೇಖರ ಕಂಬಾರ ಅವರನ್ನು ಕನ್ನಡ ವಿಶ್ವವಿದ್ಯಾನಿಲಯದ ಮೊದಲ ಆಡಳಿತಾಧಿಕಾರಿಯಾಗಿ ನೇಮಿಸಲಾಗಿತ್ತು. ಒಂದೆರಡು ವರ್ಷಗಳ ನಂತರ ಅವರೇ ಕನ್ನಡ ವಿಶ್ವವಿದ್ಯಾನಿಲಯದ ಮೊದಲ ಮತ್ತು ಎರಡನೇ ಕುಲಪತಿಯಾಗಿ ನೇಮಕಗೊಂಡು ವಿಶ್ವವಿದ್ಯಾನಿಲಯವನ್ನು ವಿಶೇಷವಾಗಿಯೇ ಕಟ್ಟಲು ಶ್ರಮಿಸಿದರು. ಆದರೆ ದೂರದೃಷ್ಟಿಯ ಕೊರತೆಯಿಂದ ಕನ್ನಡ ವಿಶ್ವವಿದ್ಯಾನಿಲಯ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಮರ್ಥ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಲೇ ಇಲ್ಲ. ತಮಿಳುನಾಡಿನಲ್ಲಿ ತಮಿಳು ವಿಶ್ವವಿದ್ಯಾನಿಲಯ ಸ್ಥಾಪಿಸಲಾಗಿತ್ತು. ಅದು ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಸಂಗೀತ, ನೃತ್ಯ ಮತ್ತು ಲಲಿತ ಕಲೆಗಳಿಗಾಗಿ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪಿಸುವ ಬೇಡಿಕೆ ಕೇಳಿ ಬಂದಿತ್ತು. 2013ರಲ್ಲಿ ಜಯಲಲಿತಾ ಅವರ ಹೆಸರಿನಲ್ಲಿ ಸಂಗೀತ ಮತ್ತು ಪ್ರದರ್ಶಕ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿ ಅತ್ಯಂತ ಯಶಸ್ವಿ ಸಂಸ್ಥೆಯಾಗಿ ಹೊರ ಹೊಮ್ಮಿದೆ. ಆ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ನೂರಾರು ಸಂಗೀತ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ.

ಆದರೆ ಕರ್ನಾಟಕದಲ್ಲಿ ಸ್ಥಾಪಿಸಲಾದ ಎಲ್ಲ ವಿಶೇಷ ವಿಶ್ವವಿದ್ಯಾನಿಲಯಗಳು ಸರಕಾರದ ದಿವ್ಯ ನಿರ್ಲಕ್ಷದಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿವೆ.

ತೊಂಭತ್ತರ ದಶಕದ ಮೊದಲ ವರ್ಷಗಳಲ್ಲಿ ಆರಂಭವಾದ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಮೊದಮೊದಲು ಎಲ್ಲ ಸರಕಾರಗಳು ಬೆಂಬಲಿಸಿದ್ದವು. ಪೂರ್ಣ ಪ್ರಮಾಣದ ವಿಶ್ವವಿದ್ಯಾನಿಲಯವಾಗಿ ರೂಪುಗೊಳ್ಳಲು ಎಲ್ಲ ಬಗೆಯ ನೆರವು ನೀಡಿದರು. ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಆರಂಭದ ವರ್ಷಗಳಲ್ಲೇ ಮುಗ್ಗರಿಸಿದ ಕನ್ನಡ ವಿಶ್ವವಿದ್ಯಾನಿಲಯ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷವಾಗಿ ಯೋಜನೆ ಹಮ್ಮಿಕೊಳ್ಳಲಿಲ್ಲ. ಸಂಗೀತ, ಜಾನಪದ, ಲಲಿತ ಕಲೆ ಮತ್ತು ಇನ್ನಿತರ ಪ್ರದರ್ಶಕ ಕಲೆಗಳ ಒಂದೊಂದು ವಿಭಾಗವನ್ನು ಆರಂಭಿಸಲಾಯಿತೇ ಹೊರತು ಆಯಾ ವಿಭಾಗಗಳನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲೇ ಇಲ್ಲ. ಕನ್ನಡ ವಿಶ್ವವಿದ್ಯಾನಿಲಯದ ಸಂಕುಚಿತ ದೃಷ್ಟಿಕೋನದಿಂದಾಗಿ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ, ಸಂಗೀತ ಮತ್ತು ಪ್ರದರ್ಶಕ ವಿಶ್ವವಿದ್ಯಾನಿಲಯ ಮತ್ತು ಲಲಿತ ಕಲಾ ವಿಶ್ವವಿದ್ಯಾನಿಲಯಗಳು ಹುಟ್ಟಿಕೊಂಡಿವು. ಲಲಿತ ಕಲಾ ವಿಶ್ವವಿದ್ಯಾನಿಲಯ ಹುಟ್ಟುತ್ತಲೇ ಅಸು ನೀಗಿತ್ತು. ಮೈಸೂರಿನಲ್ಲಿ ಸ್ಥಾಪಿಸಲಾದ ಡಾ. ಗಂಗೂಬಾಯಿ ಹಾನಗಲ್ ಹೆಸರಿನ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ 2008ರಲ್ಲಿ ಆರಂಭವಾಗಿತ್ತು. 2009ರ ವಿಶ್ವವಿದ್ಯಾನಿಲಯ ಕಾಯ್ದೆ ಮೂಲಕ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂತು. ಆದರೆ ಅಂದಿನಿಂದ ಇಲ್ಲಿಯವರೆಗೆ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ನಿಂತಲ್ಲೇ ನಿಂತಿದೆ. ಅದರ ಬೆಳವಣಿಗೆಗೆ ಸರಕಾರ ನೀರೆರೆದು ಪೋಷಿಸಲೇ ಇಲ್ಲ. ಅದರ ನಂತರ ಹುಟ್ಟಿಕೊಂಡ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಒಂದೆರಡು ಹೆಜ್ಜೆ ಮುಂದೆ ಸಾಗಿವೆ. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಭಾಷೆ, ಸಂಸ್ಕೃತಿ ಮತ್ತು ಇನ್ನಿತರ ಲಲಿತ ಕಲೆಗಳ ವಿಷಯದಲ್ಲಿ ಉದಾರವಾಗಿ ನಡೆದುಕೊಂಡಿದ್ದರೆ, ಉಳಿದ ವಿಶ್ವವಿದ್ಯಾನಿಲಯಗಳನ್ನು ಆರಂಭಿಸುವ ಪ್ರಮೆಯವೇ ಬರುತ್ತಿರಲಿಲ್ಲ. ತೊಂಭತ್ತರ ದಶಕದ ಮೊದಲ ವರ್ಷದಿಂದ ಕಾರ್ಯ ನಿರ್ವಹಿಸಲು ಆರಂಭಿಸಿದ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ದೂರದೃಷ್ಟಿಯೊಂದಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುವ ಎಲ್ಲ ಜ್ಞಾನ ಶಾಖೆಗಳ ಪ್ರತ್ಯೇಕ ವಿಭಾಗ ಶುರು ಮಾಡಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿದ್ದರೆ ಉಳಿದ ವಿಶೇಷ ವಿಶ್ವವಿದ್ಯಾನಿಲಯಗಳ ಅಗತ್ಯವೇ ಬೀಳುತ್ತಿರಲಿಲ್ಲ.

ಕನ್ನಡ ವಿಶ್ವವಿದ್ಯಾನಿಲಯ ಆರಂಭವಾದಾಗ ಹೆಸರಿಗೆ ಮಾತ್ರ ಸಂಗೀತ ಮತ್ತು ನೃತ್ಯ ವಿಭಾಗ, ಲಲಿತ ಕಲೆಗಳ ವಿಭಾಗ, ಜಾನಪದ ವಿಭಾಗಗಳನ್ನು ಆರಂಭಿಸಲಾಗಿತ್ತು. ರಂಗಭೂಮಿ ಮತ್ತು ಇನ್ನಿತರ ಪ್ರದರ್ಶಕ ಕಲೆಗಳನ್ನು ಪ್ರತಿಧಿಸುವ ವಿಭಾಗಗಳನ್ನು ಆರಂಭಿಸಲಿಲ್ಲ. ಸಂಗೀತ ಮತ್ತು ನೃತ್ಯ ವಿಭಾಗವೇನೋ ಆರಂಭವಾಯಿತು. ಆದರೆ ನೃತ್ಯ, ಕರ್ನಾಟಕ ಸಂಗೀತ ಮತ್ತು ವಿವಿಧ ವಾದ್ಯ ಪ್ರಕಾರಗಳ ವಿಭಾಗಗಳು ಆರಂಭವಾಗಲಿಲ್ಲ. ಹಿಂದೂಸ್ತಾನಿ ಸಂಗೀತ ವಿಭಾಗ ಆರಂಭಿಸಿ ಒಬ್ಬರನ್ನು ಸಂಗೀತ ಪ್ರಾಧ್ಯಾಪಕರ ಹುದ್ದೆಗೆ ನೇಮಕ ಮಾಡಿ ಕೈ ತೊಳೆದುಕೊಂಡು ಬಿಟ್ಟಿತು. ಹಿಂದೂಸ್ತಾನಿ ಸಂಗೀತ ವಿಭಾಗವೂ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬರಲಿಲ್ಲ. ಹೆಸರಿಗೆ ಮಾತ್ರ ವಿಭಾಗದ ಹೆಸರಲ್ಲಿ ನೃತ್ಯ ಉಳಿಯಿತು. ನೃತ್ಯದ ತರಗತಿಗಳು ಆರಂಭವಾಗಲಿಲ್ಲ. ನೃತ್ಯದ ವಿವಿಧ ಪ್ರಕಾರಗಳ ಒಂದೊಂದು ವಿಭಾಗ ಆರಂಭವಾಗಬೇಕಿತ್ತು. ಕರ್ನಾಟಕ ಸಂಗೀತಕ್ಕೆ ಹಂಪಿ ಪರಿಸರವೇ ತವರೂರು. ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಕರ್ನಾಟಕ ಸಂಗೀತದ ವಿವಿಧ ವಿಭಾಗಗಳನ್ನು ಆರಂಭಿಸಬೇಕಿತ್ತು. ಮತಂಗ ಮುನಿಯ ಅಧ್ಯಯನ ಪೀಠ ಶುರು ಮಾಡಬೇಕಿತ್ತು. ಸಂಗೀತ ವಿಭಾಗಕ್ಕೆ ಆದ ಗತಿಯೇ ಲಲಿತ ಕಲಾ ವಿಭಾಗಕ್ಕೆ ಆಯಿತು. ಲಲಿತ ಕಲೆಯ ಪೂರ್ಣ ಪ್ರಮಾಣದ ವಿಭಾಗ ಅಸ್ತಿತ್ವಕ್ಕೆ ಬರಲೇ ಇಲ್ಲ. ಲಲಿತ ಕಲೆಯ ಒಬ್ಬ ಪ್ರಾಧ್ಯಾಪಕರನ್ನು ನೇಮಿಸಿ ಏಕೋಪಾಧ್ಯಾಯ ವಿಭಾಗ ಮಾಡಿ ಬೆಳವಣಿಗೆ ತಡೆಯಲಾಯಿತು. ಸ್ವತಃ ನಾಟಕಕಾರರು, ಅಭಿನಯ ಕಲೆ ಗೊತ್ತಿದ್ದವರು, ಚಲನಚಿತ್ರರಂಗದಲ್ಲಿ ಸಾಕಷ್ಟು ಕೆಲಸ ಮಾಡಿ ಅನುಭವವುಳ್ಳ ಡಾ. ಚಂದ್ರಶೇಖರ ಕಂಬಾರರು ರಂಗಭೂಮಿ, ಚಲನಚಿತ್ರ ಮತ್ತು ಇನ್ನಿತರ ಮಹತ್ವದ ಪ್ರದರ್ಶಕ ಕಲೆಗಳ ವಿಭಾಗಗಳನ್ನು ಶುರು ಮಾಡಲಿಲ್ಲ. ಕಂಬಾರರು ಮಾಡಿದ್ದಕ್ಕೆಲ್ಲ ಅಂದಿನ ಸರಕಾರಗಳು ತಲೆದೂಗುತ್ತಿದ್ದವು. ಚಂದ್ರಶೇಖರ ಕಂಬಾರರು ಅತ್ಯುತ್ತಮ ಕಟ್ಟಡ ಕಟ್ಟಿದರು. ಆದರೆ ವಿಶಾಲ ಬಿತ್ತಿಯಲ್ಲಿ ವಿಭಾಗಗಳನ್ನು ಆರಂಭಿಸಲಿಲ್ಲ. ಪ್ರಾಧ್ಯಾಪಕರ ನೇಮಕಾತಿಯಲ್ಲಿ ಪ್ರತಿಭೆಯನ್ನು ಕಡೆಗಣಿಸಲಾಯಿತು. ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಒಟ್ಟಾರೆ ಭವಿಷ್ಯವನ್ನು ಮಂಕುಗೊಳಿಸಿತು. ಯಾವುದೇ ಒಂದು ವಿಶ್ವವಿದ್ಯಾನಿಲಯ ನಿರಂತರ ಕ್ರಿಯಾಶೀಲವಾಗಿರಲು ಬೋಧನೆ ಮತ್ತು ಸಂಶೋಧನೆ ಮೊದಲ ಆದ್ಯತೆಯಾಗಬೇಕು. ದುರಂತವೆಂದರೆ ಕಂಬಾರರು ಬೋಧನೆಗೆ ಅವಕಾಶ ಮಾಡಿಕೊಡಲಿಲ್ಲ. ಕೇವಲ ಸಂಶೋಧನೆಗೆ ಅವಕಾಶ ಮಾಡಿ ಕೊಡಲಾಯಿತು. ಕನ್ನಡ ವಿಶ್ವವಿದ್ಯಾನಿಲಯದ ಕೆಲವು ಪ್ರತಿಭಾವಂತ ಪ್ರಾಧ್ಯಾಪಕರು ಅತ್ಯುತ್ತಮ ಸಂಶೋಧನೆ ಕೈಕೊಂಡು ವ್ಯಕ್ತಿಗತ ಹೆಸರು ಮಾಡಿಕೊಂಡರು. ಆದರೆ ಕನ್ನಡ ವಿಶ್ವವಿದ್ಯಾನಿಲಯ ಒಂದು ಸಂಸ್ಥೆಯಾಗಿ ತನ್ನ ಬೇರು ಬಿಳಲುಗಳನ್ನು ವಿಸ್ತರಿಸಿಕೊಳಲಿಲ್ಲ. ಕನ್ನಡ ವಿಶ್ವವಿದ್ಯಾನಿಲಯವನ್ನು ಕೇವಲ ಗಂಜಿ ಕೇಂದ್ರವೆಂದು ಭಾವಿಸಿ ನೌಕರಿ ಪಡೆದವರು ಯಾವುದೇ ಮಹತ್ವದ ಸಂಶೋಧನೆ ಕೈಗೊಳ್ಳದೆ ನಿವೃತ್ತಿ ಹೊಂದಿದರು. ಸಂಶೋಧನಾ ಪರಂಪರೆ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಶಿಸ್ತಿನ ಭಾಗವಾಗಿ ಬೆಳೆಯಲಿಲ್ಲ.

ಹಾಗೆ ನೋಡಿದರೆ ಕನ್ನಡ ವಿಶ್ವವಿದ್ಯಾನಿಲಯ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮತ್ತು ಸಂಕುಚಿತ ನೆಲೆಯ ಅಧಿಕಾರಶಾಹಿಯ ಒಣ ದರ್ಪದಿಂದ ಹೊರ ಬಂದು ಒಂದು ವೃತ್ತಿಪರ ಸಂಸ್ಥೆಯಾಗಿ ರೂಪುಗೊಂಡಿದ್ದರೆ ಕೇಂದ್ರೀಯ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಬೆಳೆದು ನಿಲ್ಲುತ್ತಿತ್ತು. ರವೀಂದ್ರನಾಥ ಟ್ಯಾಗೋರ್ ಸ್ಥಾಪಿಸಿದ ವಿಶ್ವಭಾರತಿ, ಮದನ ಮೋಹನ ಮಾಳವೀಯ ಸ್ಥಾಪಿಸಿದ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಇಂದು ಕೇಂದ್ರೀಯ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿವೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯ ತನ್ನ ಬೆಳ್ಳಿ ಹಬ್ಬವೇನೋ ಆಚರಿಸಿಕೊಂಡಿತು. ಆದರೆ ದಿನೇ ದಿನೇ ವಿಶ್ವವಿದ್ಯಾನಿಲಯದ ಆರ್ಥಿಕ ಸ್ಥಿತಿಗತಿ ಹದಗೆಡುತ್ತಲಿದೆ. ಅರ್ಧಕ್ಕರ್ಧ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನಿವೃತ್ತಿ ಹೊಂದಿದ್ದಾರೆ. ಸಂಶೋಧನಾ ಚಟುವಟಿಕೆಗಳು ಹೆಚ್ಚು ಕಮ್ಮಿ ಸ್ಥಗಿತಗೊಂಡಿವೆ. ಸಂಶೋಧನೆಗೆಂದು ಪ್ರತ್ಯೇಕ ಅನುದಾನ ನೀಡುತ್ತಿಲ್ಲ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನೀಡಲಾಗುವ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ.

ಅಷ್ಟಕ್ಕೂ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತ ಪದವಿ ಕಾಲೇಜುಗಳು ಇಲ್ಲ. ಕನ್ನಡಕ್ಕಾಗಿ ಹುಟ್ಟಿಕೊಂಡ ಈ ವಿಶೇಷ ಕನ್ನಡ ವಿಶ್ವವಿದ್ಯಾನಿಲಯ ಬೆಳೆಯುವುದು ದೂರದ ಮಾತು. ಅದು ಮತ್ತೆ ಪೂರ್ಣ ಪ್ರಮಾಣದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಲು ಸಾಧ್ಯವಾಗದ ಹಂತ ತಲುಪಿದೆ. ಕಳೆದ ಎರಡು ದಶಕಗಳಲ್ಲಿ ಬಂದು ಹೋದ ಎಲ್ಲ ಪಕ್ಷಗಳ ಸರಕಾರಗಳು ಕನ್ನಡ ವಿಶ್ವವಿದ್ಯಾನಿಲಯವನ್ನು ದುರ್ಬಲಗೊಳಿಸುತ್ತಾ ಬಂದಿವೆ. ಕನ್ನಡ ವಿಶ್ವವಿದ್ಯಾನಿಲಯವನ್ನು ಅಭಿವೃದ್ಧಿಪಡಿಸುವುದು ಬಿಟ್ಟು ಹೊಸದಾಗಿ ಮೂರು ವಿಶೇಷ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿ ತ್ರಿಶಂಕು ಸ್ಥಿತಿ ನಿರ್ಮಾಣ ಮಾಡಲಾಗಿದೆ.

ಹೊಸದಾಗಿ ಸ್ಥಾಪಿಸಲಾದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಈ ಹೊತ್ತಿಗೂ ಪೂರ್ಣ ಪ್ರಮಾಣದಲ್ಲಿ ಬೆಳೆದು ನಿಂತಿಲ್ಲ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ಈ ಹಿಂದಿನ ಬಿಜೆಪಿ ಸರಕಾರ ಹೆಚ್ಚಿನ ಅನುದಾನ ನೀಡಿತ್ತು. ಅದು ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆ ಹೊಂದಲಿಲ್ಲ. ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿ ಹದಿನೈದಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ಆದರೆ ಇಲ್ಲಿಯವರೆಗೆ ಅಲ್ಲಿ ಖಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಮಾಡಿಲ್ಲ. ಒಂದು ಒಳ್ಳೆಯ ಕ್ಯಾಂಪಸ್ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗುತ್ತಿವೆ.

ಆದರೆ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ವಿಶ್ವವಿದ್ಯಾನಿಲಯ ಅನುದಾನ ಮತ್ತು ಸಿಬ್ಬಂದಿ ಕೊರತೆಯಿಂದ ಮುಚ್ಚುವ ಹಂತ ತಲುಪಿದೆ. ಡಾ. ಗಂಗೂಬಾಯಿ ಹಾನಗಲ್ ಅವರು ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಧ್ರುವ ತಾರೆ. ಪದ್ಮವಿಭೂಷಣಕ್ಕೂ ಭಾಜನರಾಗಿದ್ದರು. ಅವರ ಹೆಸರಿನ ವಿಶ್ವವಿದ್ಯಾನಿಲಯಕ್ಕೆ ಕುಲಪತಿ ಹುದ್ದೆಗೆ ಅರ್ಹರಾದವರು ಸಿಗುತ್ತಿಲ್ಲ. ಕರ್ನಾಟಕದಲ್ಲಿ ಮೊದಲೇ ಸಂಗೀತ ವಿದ್ಯಾನಿಲಯಗಳ ಸಂಖ್ಯೆ ಕಡಿಮೆ. ಕಳೆದ ಎರಡು ದಶಕಗಳಿಂದ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಸಂಗೀತ ಬೋಧಕರ ನೇಮಕಾತಿ ನಡೆದಿಲ್ಲ. ಸಂಗೀತ ಬೋಧಕರ ನೇಮಕಾತಿ ಆಗಿಲ್ಲವಾದ್ದರಿಂದ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಗೆ ಅರ್ಜಿ ಕರೆದಾಗ ಅರ್ಹರು ಅಂತ ಅರ್ಜಿ ಹಾಕಿದವರು ಇಬ್ಬರೇ. ಕುಲಪತಿ ಹುದ್ದೆಯ ಶೋಧನಾ ಸಮಿತಿ ಕನಿಷ್ಠ ಮೂರು ಹೆಸರುಗಳನ್ನು ಶಿಫಾರಸು ಮಾಡಬೇಕು. ಈಗಾಗಲೇ ಎರಡು ಬಾರಿ ಅರ್ಜಿ ಆಹ್ವಾನಿಸಿ ಕುಲಪತಿ ಹುದ್ದೆಯ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಈಗ ಸಂಗೀತ ವಿಶ್ವವಿದ್ಯಾನಿಲಯ ಅರ್ಹ ಪ್ರಾಧ್ಯಾಪಕರ ಕೊರತೆ ಎದುರಿಸುತ್ತಿದೆ. ಮುಂದೊಂದು ದಿನ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೂ ಇದೇ ಗತಿ ಎದುರಾಗಬಹುದು.

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆ ಅಲಂಕರಿಸಲು ಸಂಗೀತ ಮತ್ತು ಪ್ರದರ್ಶಕ ಕಲೆಯ ಪ್ರಾಧ್ಯಾಪಕರಾಗಿ ಹತ್ತು ವರ್ಷ ಸೇವೆ ಸಲ್ಲಿಸಿರಬೇಕು. ಕಳೆದ ಇಪ್ಪತ್ತು ವರ್ಷಗಳಲ್ಲಿ ಸಂಗೀತ ಮತ್ತು ಪ್ರದರ್ಶಕ ಕಲೆಗಳ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಸಂಗೀತ ವಿಭಾಗಗಳಲ್ಲಿ ನೇಮಕಾತಿ ನಡೆಯದೇ ಇರುವುದರಿಂದ ಅರ್ಹ ಪ್ರಾಧ್ಯಾಪಕರು ಸಿಗುತ್ತಿಲ್ಲ. ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯಕ್ಕೆ ಅಗತ್ಯ ತಿದ್ದುಪಡಿ ಮಾಡಿದರೆ ಮಾತ್ರ ಕುಲಪತಿ ಹುದ್ದೆಗೆ ನೇಮಕ ಮಾಡಬಹುದಾಗಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯಗಳಿಗೂ ಅರ್ಹ ಪ್ರಾಧ್ಯಾಪಕರ ಕೊರತೆ ಎದುರಾಗಬಹುದು. ಒಂದು ತಜ್ಞರ ಸಮಿತಿ ರಚಿಸಿ ಸಾಧಕ ಬಾಧಕಗಳನ್ನು ಕೂಲಂಕಷವಾಗಿ ಚರ್ಚೆ ನಡೆಸಿ ಈ ವಿಶೇಷ ವಿಶ್ವವಿದ್ಯಾನಿಲಯಗಳಿಗೆ ಕುಲಪತಿಯನ್ನಾಗಿಸಲು ಅರ್ಹತೆ ಮರು ನಿಗದಿಪಡಿಸಬೇಕಾಗಿದೆ. ಅಷ್ಟು ಮಾತ್ರವಲ್ಲ ಈ ವಿಶೇಷ ವಿಶ್ವವಿದ್ಯಾನಿಲಯಗಳನ್ನು ಉಳಿಸಲು ಮತ್ತು ಬೆಳೆಸಲು ರಾಜ್ಯ ಸರಕಾರ ಹೆಚ್ಚು ಅನುದಾನ ನೀಡಲು ಮುಂದಾಗಬೇಕು. ನಡೆಸಲು ಸಾಧ್ಯವಿಲ್ಲ ಎಂದಾದ ಮೇಲೆ ತ್ರಿಶಂಕು ಸ್ಥಿತಿಯಲ್ಲಿ ಇಡದೆ ಮುಚ್ಚಲು ಅಥವಾ ಸರಿಪಡಿಸಲು ದಿಟ್ಟ ನಿರ್ಧಾರ ಕೈಗೊಳ್ಳಬೇಕು.

ಕನ್ನಡ ಸಾಹಿತ್ಯ ಸಂಸ್ಕೃತಿ, ವಿವಿಧ ಲಲಿತ ಕಲೆಗಳ ವಿಶ್ವವಿದ್ಯಾನಿಲಯಗಳ ಕಾಯಕಲ್ಪಕ್ಕೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದರೆ ಆರು ತಿಂಗಳಲ್ಲಿ ಇವುಗಳ ಸ್ಥಿತಿ ಬದಲಾಯಿಸಬಹುದು. ಆದರೆ ಸರಕಾರಕ್ಕೆ ಬಲವಾದ ರಾಜಕೀಯ ಇಚ್ಛಾಶಕ್ತಿ ಇರಬೇಕು. ಕನ್ನಡ ವಿಶ್ವವಿದ್ಯಾನಿಲಯ, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯಗಳಿಗೆ ಪ್ರತೀ ವರ್ಷಕ್ಕೆ ತಲಾ ಐದು ಕೋಟಿ ಹಣ ನೀಡಿದರೆ ಅವು ಸದೃಢವಾಗಿ ನಿಲ್ಲುತ್ತವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂರು ದಿನಗಳ ಉತ್ಸವಕ್ಕೆ ಮೂರುನಾಲ್ಕು ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೆ ವಿಶೇಷ ವಿಶ್ವವಿದ್ಯಾನಿಲಯಗಳಿಗೆ ಅನುದಾನ ನೀಡುತ್ತಿಲ್ಲ. ಕರ್ನಾಟಕ ಸರಕಾರಕ್ಕೆ ಹಣಕಾಸಿನ ಕೊರತೆ ಇಲ್ಲ. ಇಚ್ಛಾಶಕ್ತಿಯ ಕೊರತೆ ಇರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.

ಐದಾರು ವರ್ಷಗಳಲ್ಲಿ ಈ ವಿಶೇಷ ವಿಶ್ವವಿದ್ಯಾನಿಲಯಗಳು ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆ ಇದೆ. ಎಲ್ಲ ವಿಶೇಷ ವಿಶ್ವವಿದ್ಯಾನಿಲಯಗಳನ್ನು ಕನ್ನಡ ವಿಶ್ವವಿದ್ಯಾನಿಲಯದಲ್ಲಿ ವಿಲೀನಗೊಳಿಸುವ ಆಲೋಚನೆ ಸರಕಾರದ ಮುಂದಿತ್ತು. ಭಾರತದ ವಿವಿಧ ಭಾಗಗಳಲ್ಲಿ ವಿಶೇಷ ವಿಶ್ವವಿದ್ಯಾನಿಲಯಗಳು ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಕರ್ನಾಟಕದಲ್ಲಿ ಯಾಕೆ ಈ ಸ್ಥಿತಿ ಎದುರಾಗಿದೆ?

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಸೇರಿದಂತೆ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯಗಳನ್ನು ವಿಶೇಷ ಆಸಕ್ತಿ ವಹಿಸಿ ಸ್ಥಾಪನೆ ಮಾಡಿದ್ದೇ ಬಿಜೆಪಿ ಸರಕಾರ. ಆದರೆ ಅದು ಹೊಸ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲು ತೋರಿದ ಆಸಕ್ತಿಯನ್ನು ಅವುಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ತೋರಿಸಲಿಲ್ಲ.

ಈ ವಿಶೇಷ ವಿಶ್ವವಿದ್ಯಾನಿಲಯಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗುವ ಮುನ್ನ ಕರ್ನಾಟಕ ಸರಕಾರ ಎಲ್ಲ ವಿಶೇಷ ವಿಶ್ವವಿದ್ಯಾನಿಲಯಗಳ ಮೌಲ್ಯ ಮಾಪನ ನಡೆಸುವುದು ಒಳ್ಳೆಯದು. ಕೇವಲ ಹಣ ನೀಡಿದರೆ ಸಾಲದು ಆ ಎಲ್ಲ ವಿಶೇಷ ವಿಶ್ವವಿದ್ಯಾನಿಲಯಗಳನ್ನು ಕಾಲದ ಅಗತ್ಯಕ್ಕೆ ತಕ್ಕಂತೆ ಮರು ಸಂಘಟಿಸಬೇಕಿದೆ. ಆಗ ಮಾತ್ರ ಈ ವಿಶೇಷ ವಿಶ್ವವಿದ್ಯಾನಿಲಯಗಳು ಎದ್ದು ನಿಲ್ಲಲು ಸಾಧ್ಯವಾಗುತ್ತವೆ. ಹಾಗೆಯೇ ಭಾರತದ ವಿವಿಧ ಭಾಗಗಳಲ್ಲಿ ನೆಲೆ ನಿಂತ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿಶೇಷ ವಿಶ್ವವಿದ್ಯಾನಿಲಯಗಳಿಗೆ ತಜ್ಞರ ತಂಡ ಭೇಟಿ ನೀಡಿ ಅಧ್ಯಯನ ಕೈಗೊಂಡು ಸರಕಾರಕ್ಕೆ ಮಾರ್ಗದರ್ಶನ, ಸಲಹೆ ನೀಡಬೇಕು. ಕನ್ನಡ ವಿಶ್ವವಿದ್ಯಾನಿಲಯ ಬೋಧನೆ ಮತ್ತು ಸಂಶೋಧನಾ ಚಟುವಟಿಕೆ ಇಲ್ಲದೆ ಸಂಪೂರ್ಣ ಸೊರಗಿದೆ. ಅಗತ್ಯದ ಸಿಬ್ಬಂದಿ ಒದಗಿಸುವುದರ ಜೊತೆಗೆ ಅತ್ಯುತ್ತಮ ಸಂಶೋಧನಾ ಕಾರ್ಯ ನಡೆಯುವಂತೆ ನಿಗಾ ವಹಿಸಬೇಕಾಗಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯವನ್ನು ವಿಶೇಷವಾಗಿ ಸ್ಥಾಪಿಸಲಾಯಿತು. ಆದರೆ ಕರ್ನಾಟಕದ ಜಾನಪದ ವೈವಿಧ್ಯ ಮತ್ತು ವೈಶಿಷ್ಟ್ಯವನ್ನು ಅಧ್ಯಯನ ಕೈಗೊಳ್ಳಲು ಆ ವಿಶ್ವವಿದ್ಯಾನಿಲಯಕ್ಕೆ ಸಾಧ್ಯವಾಗಿಲ್ಲ. ಆ ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಗೆ ಆಯ್ಕೆ ಮಾಡಲು ನಿರ್ದಿಷ್ಟ ಮಾನದಂಡಗಳಿಲ್ಲ. ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಜಾನಪದವನ್ನು ಬುಡಕಟ್ಟು ಮತ್ತು ಸಾಮಾಜಿಕ ಅಧ್ಯಯನ ವಿಭಾಗಗಳೊಂದಿಗೆ ಜೋಡಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಜಾನಪದ ಅಧ್ಯಯನ ಕನ್ನಡ ಸಾಹಿತ್ಯದೊಂದಿಗೆ ತಳುಕು ಹಾಕಿಕೊಂಡಿದೆ. ಈ ಎಲ್ಲ ಗೊಂದಲಗಳನ್ನು ನಿವಾರಿಸಿಕೊಂಡು ವಿಶೇಷ ವಿಶ್ವವಿದ್ಯಾನಿಲಯಗಳನ್ನು ಸದೃಢಗೊಳಿಸಬೇಕು.

ಕರ್ನಾಟಕದಲ್ಲಿ ಸಂಗೀತ ಮತ್ತು ಪ್ರದರ್ಶಕ ಕಲೆಗಳ ಭವ್ಯ ಪರಂಪರೆಯಿದೆ. ಸಂಗೀತ, ರಂಗಭೂಮಿ, ಲಲಿತ ಕಲೆ, ಶಿಲ್ಪ ಕಲಾ ಕ್ಷೇತ್ರದಲ್ಲಿ ಕನ್ನಡಿಗರ ಸಾಧನೆ ಅಪ್ರತಿಮ. ಡಾ. ಭೀಮಸೇನ ಜೋಶಿ, ಡಾ. ಗಂಗೂಬಾಯಿ ಹಾನಗಲ್, ಡಾ. ಮಲ್ಲಿಕಾರ್ಜುನ ಮನ್ಸೂರ್, ಡಾ. ಬಸವರಾಜ ರಾಜಗುರು, ಕುಮಾರ ಗಂಧರ್ವ ಮುಂತಾದವರನ್ನು ಭಾರತದ ಸಂಗೀತ ಮುಕುಟಗಳು ಎಂದೇ ಭಾವಿಸಲಾಗುತ್ತದೆ. ಆದರೆ ಕರ್ನಾಟಕದಲ್ಲಿ ಸಂಗೀತ ವಿಶ್ವವಿದ್ಯಾನಿಲಯ ಅನಾಥವಾಗಿದೆ. ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರು ಕನ್ನಡಿಗರು. ಕರ್ನಾಟಕ ಸಂಗೀತ ದಕ್ಷಿಣ ರಾಜ್ಯಗಳಲ್ಲಿ ವಿಸ್ತರಿಸಿದೆ.

ಮೈಸೂರು ಸಂಸ್ಥಾನದ ರಾಜರು ಅದರಲ್ಲೂ ವಿಶೇಷವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಲಲಿತ ಕಲೆ, ಶಿಲ್ಪ ಕಲೆ ಮತ್ತು ಇನ್ನಿತರ ಪ್ರದರ್ಶಕ ಕಲೆಗಳಿಗೆ ಮೊದಲ ಆದ್ಯತೆ ನೀಡಿ ಪೋಷಣೆ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವಡಿ ಅವರ ಅಭಿವೃದ್ಧಿ ಕಾರ್ಯಗಳಿಂದ ಪ್ರಭಾವಿತರಾದವರು. ಹಾಗಂತ ಅವರ ಮಗ ಯತೀಂದ್ರ ನಾಲ್ವಡಿಯವರ ಸಾಧನೆಯೊಂದಿಗೆ ಹೋಲಿಸಿಕೊಂಡಿದ್ದಾರೆ. ನಾಲ್ವಡಿಯವರ ಒಟ್ಟು ಸಾಧನೆ ಬಗ್ಗೆ ಗೌರವ ಹೊಂದಿರುವ ಸಿದ್ದರಾಮಯ್ಯ ಅವರು ಕರ್ನಾಟಕದ ಈ ವಿಶೇಷ ವಿಶ್ವವಿದ್ಯಾನಿಲಯಗಳ ಚಿಂತಾಜನಕ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಅಭಿವೃದ್ಧಿಪಡಿಸಬೇಕಿದೆ. ಕನ್ನಡ ವಿಶ್ವವಿದ್ಯಾನಿಲಯವೂ ಸೇರಿದಂತೆ ಕನ್ನಡ ಸಂಸ್ಕೃತಿಯ ಪ್ರತೀಕವಾಗಿ ಸ್ಥಾಪಿತವಾದ ಎಲ್ಲ ವಿಶೇಷ ವಿಶ್ವವಿದ್ಯಾನಿಲಯಗಳನ್ನು ಹೆಚ್ಚು ಅನುದಾನ ನೀಡಿ ಬದುಕಿಸಬೇಕಿದೆ. ಇಲ್ಲದಿದ್ದರೆ ಕೆಲವೇ ವರ್ಷಗಳಲ್ಲಿ ಈ ವಿಶೇಷ ವಿಶ್ವವಿದ್ಯಾನಿಲಯಗಳು ಅನಿವಾರ್ಯವಾಗಿ ಮುಚ್ಚುವ ಹಂತ ತಲುಪುತ್ತವೆ.

share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X