ವಿವಿಗಳ ಕುಲಪತಿ-ಕುಲಸಚಿವರ ಜಗಳ ಬಂದಿ

ಕರ್ನಾಟಕದ ವಿಶ್ವವಿದ್ಯಾನಿಲಯಗಳು ಮತ್ತೆ ಮೊದಲಿನ ವೈಭವ ಅನುಭವಿಸಬೇಕೆಂದರೆ ದೂರದೃಷ್ಟಿಯುಳ್ಳ ಕುಲಪತಿ ಮತ್ತು ಪ್ರಾಮಾಣಿಕರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಬೇಕು. ಕುಲಸಚಿವರನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಸಿಂಡಿಕೇಟ್ ಅನುಮೋದನೆಯೊಂದಿಗೆ ಕುಲಪತಿಗೆ ನೀಡಬೇಕು. ಆಗ ಮಾತ್ರ ವಿಶ್ವವಿದ್ಯಾನಿಲಯಗಳಲ್ಲಿನ ಅರಾಜಕತೆಗೆ ಕಡಿವಾಣ ಬೀಳುತ್ತದೆ. ವಿದ್ಯಾರ್ಥಿಗಳ ಕೆಲಸ ಕಾರ್ಯಗಳು ಸುಗಮವಾಗಿ ಆಗುತ್ತವೆ.
ಇತ್ತೀಚೆಗೆ ದೇಶದ ಎಲ್ಲ ವಿಶ್ವವಿದ್ಯಾನಿಲಯಗಳ ಶಿಕ್ಷಣ ಗುಣಮಟ್ಟದ ರ್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಲಾಯಿತು. ಆ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಅಲಿಗಡ ಮುಸ್ಲಿಮ್ ಯೂನಿವರ್ಸಿಟಿ, ಜವಾಹರಲಾಲ್ ನೆಹರೂ ಯೂನಿವರ್ಸಿಟಿ ಸೇರಿದಂತೆ ಪ್ರತಿಷ್ಠಿತ ಐಐಟಿಗಳು ಆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದವು. ಕರ್ನಾಟಕದ ಖಾಸಗಿ ವಿಶ್ವವಿದ್ಯಾನಿಲಯಗಳಿಗೂ ಆ ಪಟ್ಟಿಯಲ್ಲಿ ಸ್ಥಾನ ದೊರಕಿತ್ತು. ಆದರೆ ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿನ ಹಳೆಯ ವಿಶ್ವವಿದ್ಯಾನಿಲಯಗಳು ಕಳಪೆ ಸಾಧನೆಗಳ ಮೂಲಕ ಮೂಲೆಗುಂಪಾಗಿದ್ದವು.
ಒಂದು ಕಾಲದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ, ಮೈಸೂರು ವಿಶ್ವವಿದ್ಯಾನಿಲಯ, ಗುಲ್ಬರ್ಗಾ ವಿಶ್ವವಿದ್ಯಾನಿಲಯ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯ, ಮಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು ವಿಶ್ವವಿದ್ಯಾನಿಲಯ ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಮಾಡಿದ್ದವು. ಇಂಥ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ, ಪ್ರಾಧ್ಯಾಪಕ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಿದ್ದರು. ಕರ್ನಾಟಕದ ಬಹುಪಾಲು ಹಳೆಯ ವಿಶ್ವವಿದ್ಯಾನಿಲಯಗಳು ನೂರಾರು ಎಕರೆಯ ವಿಶಾಲವಾದ ಕ್ಯಾಂಪಸ್ ಹೊಂದಿದ್ದವು. ಭ್ರಷ್ಟಾಚಾರ ರಹಿತವಾಗಿ ಕುಲಪತಿ-ಕುಲಸಚಿವರ ನೇಮಕಾತಿ ನಡೆಯುವ ಜಮಾನದಲ್ಲಿ ಕರ್ನಾಟಕದ ಎಲ್ಲ ಸರಕಾರಿ ವಿಶ್ವವಿದ್ಯಾನಿಲಯಗಳು ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಸರು ಮಾಡಿದ್ದವು. ಆಗ ವಿಶ್ವವಿದ್ಯಾನಿಲಯಗಳ ಆಡಳಿತ ವ್ಯವಸ್ಥೆಯಲ್ಲಿ ಒಂದು ಶಿಸ್ತು, ಕ್ರಮಬದ್ಧತೆ ಇತ್ತು. ವಿಶ್ವವಿದ್ಯಾನಿಲಯಗಳು ನಿಜವಾದ ಅರ್ಥದಲ್ಲಿ ಸ್ವಾಯತ್ತ ಸಂಸ್ಥೆಗಳಾಗಿದ್ದವು. ವಿಶ್ವವಿದ್ಯಾನಿಲಯಗಳ ಅದರಲ್ಲೂ ಕರ್ನಾಟಕ ಸರಕಾರದ ವ್ಯಾಪ್ತಿಯಲ್ಲಿನ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣದ ಗುಣಮಟ್ಟ ಹಾಳಾಗಲು, ಆಡಳಿತ ವ್ಯವಸ್ಥೆಯಲ್ಲಿ ಆರಾಜಕತೆ ಸೃಷ್ಟಿಯಾಗಲು ಕಳೆದ ಇಪ್ಪತ್ತು ವರ್ಷಗಳಲ್ಲಿ ಅಧಿಕಾರದಲ್ಲಿದ್ದ ಎಲ್ಲ ಪಕ್ಷದ ಸರಕಾರಗಳು ಕಾರಣವಾಗಿವೆ.
ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿನ ಐಐಟಿ, ಐಐಎಂ, ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಜವಾಹರಲಾಲ್ ನೆಹರೂ ಅವರ ಕಾಲದಿಂದಲೂ ಸ್ವಾಯತ್ತತೆ ಉಳಿಸಿಕೊಂಡಿವೆ. ದಿ. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಆಡಳಿತಾವಧಿಯಲ್ಲಿ ಸ್ಥಾಪಿಸಲಾದ ನವೋದಯ ಶಾಲೆಗಳು ಈ ಹೊತ್ತಿಗೂ ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಮಾಡುತ್ತಿವೆ. ಅವುಗಳನ್ನು ಸ್ವಾಯತ್ತೆ ಸಂಸ್ಥೆಗಳಾಗಿ ಉಳಿಸಿಕೊಳ್ಳಲಾಗಿದೆ. ಹಾಗಂತ ಒಂದಾನೊಂದು ಕಾಲದಲ್ಲಿ ಕರ್ನಾಟಕದ ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಎಲ್ಲವೂ ಸರಿ ಇತ್ತು, ಸ್ವರ್ಗವೇ ಸೃಷ್ಟಿಯಾಗಿತ್ತು, ಸಮಸ್ಯೆಗಳೇ ಇರಲಿಲ್ಲ ಎಂದಲ್ಲ. ಆಗಲೂ ವಿಶ್ವವಿದ್ಯಾನಿಲಯಗಳಲ್ಲಿ ಜಾತೀಯತೆ, ಸ್ವಜನಪಕ್ಷಪಾತ, ಪರೀಕ್ಷಾ ಅಕ್ರಮಗಳ ಸುದ್ದಿ ಕೇಳಿ ಬರುತ್ತಿದ್ದವು. ವಿದ್ಯಾರ್ಥಿ ಸಂಘಟನೆಗಳು ಪ್ರಭಾವಶಾಲಿಯಾಗಿದ್ದವು, ಸಿಂಡಿಕೇಟ್ ಸದಸ್ಯರಲ್ಲಿ ಪ್ರಾಮಾಣಿಕರ ಸಂಖ್ಯೆ ಹೆಚ್ಚಿತ್ತು. ಪ್ರಾಮಾಣಿಕ, ದಕ್ಷ ಕುಲಪತಿಗಳು ತಮ್ಮ ಇಮೇಜ್ ಉಳಿಸಿಕೊಳ್ಳಲು ಅವ್ಯವಸ್ಥೆ ಸರಿಪಡಿಸಲು ಶಕ್ತಿ ಮೀರಿ ಶ್ರಮಿಸುತ್ತಿದ್ದರು. ಆಗ ಕುಲಪತಿಗಳಿಗೆ ಪರಮಾಧಿಕಾರ ನೀಡಲಾಗಿತ್ತು. ರಾಜಕೀಯ ಹಸ್ತಕ್ಷೇಪ ಕಡಿಮೆ ಇತ್ತು. ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರು ಮಾತ್ರ ಕುಲಪತಿಗಳಿಗೆ ನಿರ್ದೇಶನ ನೀಡುತ್ತಿದ್ದರು. ಕುಲಸಚಿವರು ಸೇರಿದಂತೆ ವಿಶ್ವವಿದ್ಯಾನಿಲಯಗಳ ಕೆಳಹಂತದ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಅಧಿಕಾರ ಕುಲಪತಿಯ ಕೈಯಲ್ಲಿ ಇತ್ತು. ಸಹಜವಾಗಿಯೇ ಆಡಳಿತದಲ್ಲಿ ಬಿಗಿ ಇರುತ್ತಿತ್ತು. ಕುಲಪತಿಯಾದವರು ಭ್ರಷ್ಟರಾಗಿದ್ದಾಗ ಮಾತ್ರ ಸಮಸ್ಯೆಗಳು ಉಲ್ಬಣಗೊಳ್ಳುತ್ತಿದ್ದವು. ಆದರೆ ಒಳ್ಳೆಯ ಕೆಲಸ ಮಾಡಲು ಕುಲಪತಿಯಾದವರಿಗೆ ಮುಕ್ತ ಅವಕಾಶ ನೀಡಲಾಗಿತ್ತು.
ಹಾಗಾಗಿಯೇ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕುವೆಂಪುರಂತಹ ಮೇರು ಸಾಹಿತಿ ಅತ್ಯುತ್ತಮ ಕೆಲಸ ಮಾಡಲು ಸಾಧ್ಯವಾಯಿತು. ವಿ.ಕೃ. ಗೋಕಾಕ, ಎಚ್. ನರಸಿಂಹಯ್ಯ, ಡಿ.ಎಂ. ನಂಜುಂಡಪ್ಪ, ಹಾ.ಮಾ. ನಾಯಕ, ಪಠಾಣ ಮುಂತಾದವರು ತಮ್ಮ ಅಧಿಕಾರಾವಧಿಯಲ್ಲಿ ಅತ್ಯುತ್ತಮ ಕೆಲಸ ಮಾಡಲು ಸಾಧ್ಯವಾಗಿತ್ತು.
ಸದ್ಯ ಕರ್ನಾಟಕದ ಎಲ್ಲ ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ. ಬಹುತೇಕ ವಿಭಾಗಗಳು ಅತಿಥಿ ಉಪನ್ಯಾಸಕರನ್ನು ಅವಲಂಬಿಸಿವೆ. ಬೋಧಕೇತರ ಸಿಬ್ಬಂದಿ ಕೊರತೆ ಇರುವುದರಿಂದ ಅವರ ಕೆಲಸವನ್ನು ಔಟ್‌ಸೋರ್ಸ್ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಆಡಳಿತ ಕುಲಸಚಿವ ಮತ್ತು ಮೌಲ್ಯ ಮಾಪನ ಕುಲಸಚಿವರನ್ನು ರಾಜ್ಯ ಸರಕಾರವೇ ನೇಮಕ ಮಾಡುವುದರಿಂದ ಆಡಳಿತ ವ್ಯವಸ್ಥೆಯಲ್ಲಿ ತಾಳಮೇಳ ಇಲ್ಲದಂತಾಗಿದೆ. ಕುಲಪತಿಯಾದವರು ಕನಸುಗಾರರಾಗಿದ್ದು ಗುಣಮಟ್ಟದ ಶಿಕ್ಷಣ ನೀಡುವ, ಹೊಸ ವ್ಯವಸ್ಥೆ ಕಲ್ಪಿಸುವ ಇರಾದೆ ಹೊಂದಿದ್ದರೆ ಹೆಜ್ಜೆ ಹೆಜ್ಜೆಗೂ ಸಮಸ್ಯೆ ಎದುರಿಸಬೇಕಾಗುತ್ತದೆ. ಕುಲಪತಿ ಮತ್ತು ಇಬ್ಬರೂ ಕುಲಸಚಿವರು ಪ್ರಾಮಾಣಿಕರಾಗಿದ್ದು, ಅತ್ಯುತ್ತಮ ಕೆಲಸ ಮಾಡುವ, ವಿದ್ಯಾರ್ಥಿಗಳ ಏಳ್ಗೆಗೆ ಶ್ರಮಿಸುವ ಮನೋಭಾವ ಹೊಂದಿದ್ದರೆ ಆ ವಿಶ್ವವಿದ್ಯಾನಿಲಯ ಅಭಿವೃದ್ಧಿ ಹೊಂದುತ್ತದೆ. ಅದು ರೇರ್ ಕಾಂಬಿನೇಶನ್. ನೂರಕ್ಕೆ ಒಂದರಲ್ಲಿ ಅಂಥ ಜೋಡಿ ನೋಡಲು ಸಿಗುತ್ತದೆ. ಈ ಹಿಂದೆ ಪ್ರಾಧ್ಯಾಪಕರನ್ನೇ ಆಡಳಿತ ಕುಲಸಚಿವ ಮತ್ತು ಮೌಲ್ಯ ಮಾಪನ ಕುಲಸಚಿವರನ್ನು ನೇಮಕ ಮಾಡುವ ಪದ್ಧತಿ ಜಾರಿಗೆ ಬಂತು. ಎಲ್ಲರೂ ಪ್ರಾಧ್ಯಾಪಕ ವರ್ಗಕ್ಕೆ ಸೇರಿದ್ದರೂ ಆಡಳಿತ ನಡೆಸುವಾಗ ಸಮನ್ವಯತೆಯ ಕೊರತೆ ಎದ್ದು ಕಾಣುತ್ತದೆ. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯದ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಬ್ಬರ ಆಜ್ಞೆ ಇನ್ನೊಬ್ಬರು ಪಾಲಿಸುತ್ತಿರಲಿಲ್ಲ. ಕುಲಪತಿಯನ್ನು ಸರಕಾರವೇ ನೇಮಿಸುತ್ತಿತ್ತು. ಇನ್ನಿಬ್ಬರು ಕುಲಸಚಿವರನ್ನು ಸರಕಾರವೇ ನೇಮಕ ಮಾಡುವುದರಿಂದ ನಾವು ಯಾರಿಗೇನು ಕಮ್ಮಿ ಎಂಬ ಭಾವ ನೆಲೆ ನಿಂತು ಆಡಳಿತದ ಸಂಧರ್ಭದಲ್ಲಿ ಸಂಘರ್ಷಕ್ಕೆ ಹಾದಿ ಮಾಡಿಕೊಡುತ್ತಿತ್ತು. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಕಾಯ್ದೆ ಪ್ರಕಾರ ಅಲ್ಲಿ ಕುಲಸಚಿವರನ್ನು ಕುಲಪತಿಗಳೇ ನೇಮಕ ಮಾಡುವ ಅಧಿಕಾರ ಹೊಂದಿದ್ದರಿಂದ ಸಂಘರ್ಷಗಳು ಕಡಿಮೆ ಇರುತ್ತಿದ್ದವು. ಆಡಳಿತ ಸುಗಮವಾಗಿ ನಡೆಯುತ್ತಿತ್ತು.
ಒಂದು ವಿಶ್ವವಿದ್ಯಾನಿಲಯ ಶೈಕ್ಷಣಿಕ ಅಭಿವೃದ್ಧಿ ಸಾಧಿಸಬೇಕಾದರೆ ಕುಲಪತಿ, ಕುಲಸಚಿವರು ಸಮನ್ವಯತೆಯಿಂದ ಕೆಲಸ ಮಾಡಬೇಕಾಗುತ್ತದೆ. ಮೂವರಲ್ಲಿ ಸಮನ್ವಯತೆ ಇದ್ದರೆ ಕೆಳ ಹಂತದ ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುತ್ತದೆ. ತಾಳಮೇಳ ತಪ್ಪಿದಾಗ ಆರಾಜಕತೆ ಸೃಷ್ಟಿಯಾಗುತ್ತದೆ. ಕುಲಪತಿ, ಕುಲಸಚಿವರು ಪ್ರಾಮಾಣಿಕ ಮತ್ತು ಸೇವಾ ಮನೋಭಾವದವರಾಗಿದ್ದಾಗಲೂ ಇಗೋ ಕಾರಣಕ್ಕೆ ತಾಳಮೇಳ ತಪ್ಪುವ ಸಾಧ್ಯತೆ ಇರುತ್ತದೆ. ಅಂಥ ಮನಸ್ಥಿತಿ ನಿರ್ಮಾಣವಾಗಲು ‘‘ನಾನೂ ಸರಕಾರದಿಂದ ನೇಮಕಗೊಂಡಿದ್ದೇನೆ’’ ಎಂಬ ಅಹಂಭಾವವೇ ಕಾರಣ. ಅವರಲ್ಲಿನ ಪ್ರಾಮಾಣಿಕತೆಯನ್ನು ಈ ಇಗೋ ನುಂಗಿ ಹಾಕುತ್ತದೆ. ಯಾರೊಬ್ಬರ ಮಾತನ್ನು ಯಾರೂ ಪಾಲಿಸುವುದಿಲ್ಲ. ಕೆಲಸ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಅದರಲ್ಲೂ ಮುಖ್ಯ ಕಡತಗಳು ಮುಂದೆ ಸಾಗುವುದಿಲ್ಲ.
ನಾನೇ ಕಂಡಂತೆ, ವಿಶ್ವವಿದ್ಯಾನಿಲಯಗಳಿಗೆ ಸರಕಾರ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಿದಾಗಲೂ ನೇಮಕಾತಿ ನಡೆದಿಲ್ಲ. ಬೇಗ ನೇಮಕಾತಿ ಮಾಡಿ ಮುಗಿಸಬೇಕೆಂಬ ಹಂಬಲ ಕುಲಪತಿ ಹುದ್ದೆಯಲ್ಲಿ ಕೂತವರಿಗೆ ಇದ್ದರೆ, ಕುಲಸಚಿವರಾದವರು ಆ ಹುದ್ದೆಗೆ ತಾನೇ ಬಂದು ಹುದ್ದೆ ಭರ್ತಿ ಮಾಡಿದರಾಯಿತು ಎಂದು ವಿಳಂಬ ಮಾಡಿದ ಹಲವು ನಿದರ್ಶನಗಳಿವೆ. ಕುಲಪತಿ ಮತ್ತು ಇನ್ನಿಬ್ಬರು ಕುಲಸಚಿವರ ನಡುವೆ ವೈಮನಸ್ಸು ಇದೆ ಎಂಬ ಸಣ್ಣ ಸುಳಿವು ಸಿಕ್ಕರೆ ಸಾಕು ಕೆಳಹಂತದ ಎಲ್ಲ ಸಿಬ್ಬಂದಿ ಪರಿಸ್ಥಿತಿಯ ದುರ್ಲಾಭ ಪಡೆಯಲು ತುದಿಗಾಲ ಮೇಲೆ ನಿಂತಿರುತ್ತಾರೆ.
ಕುಲಸಚಿವರನ್ನು ರಾಜ್ಯ ಸರಕಾರ ನೇಮಕ ಮಾಡುವ ವ್ಯವಸ್ಥೆ ಬಂದಾಗಿನಿಂದ ವಿಶ್ವವಿದ್ಯಾನಿಲಯಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ಕೆಲಸ ಕಾರ್ಯಗಳು ಸ್ಥಗಿತವಾಗಿವೆ. ಕುಲಪತಿಯಾದವರು ಒಂದೊಮ್ಮೆ ಕುಲಸಚಿವರನ್ನು ಪಕ್ಕಕ್ಕೆ ತಳ್ಳಿ ಹುದ್ದೆ ಭರ್ತಿಯಂತಹ ಪ್ರಮುಖ ನಿರ್ಧಾರ ಕೈಗೊಂಡರೆ ಅದು ಜಾರಿಯಾಗುವುದೇ ಇಲ್ಲ. ಒಂದೊಮ್ಮೆ ಬಲವಂತದಿಂದ ಜಾರಿಗೊಳಿಸಿದರೆ ಕುಲಸಚಿವರು ನೀಡಿದ ಮಾಹಿತಿ ಮತ್ತು ಸಂಪೂರ್ಣ ಬೆಂಬಲದಿಂದ ಯಾರೋ ನ್ಯಾಯಾಲಯದ ಮೆಟ್ಟಿಲು ಹತ್ತಿರುತ್ತಾರೆ. ದ್ವೇಷ, ಅಪನಂಬಿಕೆ ಭಾವನೆ ಮತ್ತಷ್ಟು ಗಟ್ಟಿಯಾಗಿ ಕುಲಪತಿ, ಕುಲಸಚಿವರ ಹುದ್ದೆಯಲ್ಲಿದ್ದವರು ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಾರೆ. ಕರ್ನಾಟಕ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಡಾ. ಎಚ್.ಬಿ. ವಾಲೀಕಾರ ಸೆರೆ ವಾಸ ಅನುಭವಿಸುವಂತಾಗಿದ್ದು ಈ ದ್ವೇಷ ಸಾಧನೆಯ ಮನಸ್ಥಿತಿಯಿಂದಲೇ. ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಪ್ರೊ. ಕಲಿವಾಳ್ ತಾನು ಮಂಜೂರು ಮಾಡಿಸಿಕೊಂಡು ಬಂದಿದ್ದ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗಲಿಲ್ಲ ಎಂಬ ಕೊರಗಿನಲ್ಲೇ ಅಸು ನೀಗಿದರು.
ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಡಾ. ಇ.ಟಿ. ಪುಟ್ಟಯ್ಯ ಅವರು ಕುಲಸಚಿವರ ಅಸಹಕಾರದ ಕಾರಣಕ್ಕೆ ಸರಕಾರದ ಒಪ್ಪಿಗೆಯಿದ್ದರೂ ಹುದ್ದೆ ಭರ್ತಿ ಮಾಡಿಕೊಳ್ಳಲು ಆಗಲಿಲ್ಲ. ಕುಲಪತಿ ಮತ್ತು ಕುಲಸಚಿವರ ಸಂಘರ್ಷಕ್ಕೆ ಹಲವು ನಿದರ್ಶನ ಕೊಡಬಹುದು. ಹಾಗೆ ನೋಡಿದರೆ ಆಗ ಕುಲಪತಿ, ಕುಲಸಚಿವರು ಪ್ರಾಧ್ಯಾಪಕರೇ ಆಗಿರುತ್ತಿದ್ದರು. ಅಧಿಕಾರದ ಗಡಿ ಗೆರೆಗಳನ್ನು ಸ್ಪಷ್ಟವಾಗಿ ನಿರ್ಧರಿಸದೆ ಹೋದರೆ ಸಂಘರ್ಷ ಅನಿವಾರ್ಯ ಎಂಬುದು ಹಲವು ಬಾರಿ ಸಾಬೀತಾಗಿದೆ. ಕುಲಪತಿ, ಕುಲಸಚಿವರು ಪ್ರಾಧ್ಯಾಪಕರೇ ಇರುವಾಗ ಸಂಘರ್ಷ ಇರಬಾರದಿತ್ತು ಎಂದು ಅಪೇಕ್ಷಿಸುವುದು ಬಹುದೊಡ್ಡ ಆದರ್ಶದ ಮಾತು. ಅಧಿಕಾರ ಎನ್ನುವುದು ಎಲ್ಲ ಬಗೆಯ ಆದರ್ಶಗಳನ್ನು ಬುಡಮೇಲು ಮಾಡುತ್ತದೆ.
ಈ ಹಿಂದಿನ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಡಾ. ಅಶ್ವಥ್ ನಾರಾಯಣ್ ಎಂಬ ವೈದ್ಯ ಉನ್ನತ ಶಿಕ್ಷಣ ಸಚಿವರಾಗಿದ್ದರು. ಅವರು ಕೆಎಎಸ್ ಅಧಿಕಾರಿಗಳನ್ನು ವಿಶ್ವವಿದ್ಯಾನಿಲಯಗಳ ಕುಲಸಚಿವರ (ಆಡಳಿತ)ಹುದ್ದೆಗಳಿಗೆ ನಿಯೋಜಿಸಲು ಶುರು ಮಾಡಿದರು. ಅಂದಿನಿಂದ ವಿಶ್ವವಿದ್ಯಾನಿಲಯಗಳ ಒಟ್ಟು ವ್ಯವಸ್ಥೆ ಮತ್ತಷ್ಟು ಬಿಗಡಾಯಿಸತೊಡಗಿತು. ಕುಲಪತಿ-ಕುಲಸಚಿವರ ಸಂಬಂಧ ಮೊದಲಿಗಿಂತಲೂ ಹೆಚ್ಚು ಕಹಿಯಾಗತೊಡಗಿತು. ಪ್ರಾಧ್ಯಾಪಕರನ್ನು ಕುಲಸಚಿವರನ್ನಾಗಿ ನೇಮಿಸುವ ಸಂದರ್ಭದಲ್ಲಿ ಕುಲಪತಿ ಮತ್ತು ಕುಲಸಚಿವರ ನಡುವೆ ಮಾತ್ರ ಸಂಘರ್ಷ ಏರ್ಪಡುತ್ತಿತ್ತು. ಇಬ್ಬರೂ ಅಧಿಕಾರ ಚಲಾಯಿಸುವ ಭರಾಟೆಯಲ್ಲಿ ಬದ್ಧ ದ್ವೇಷಿಗಳಾಗಿರುತ್ತಿದ್ದರು. ಆದರೆ, ಪ್ರಾಧ್ಯಾಪಕ ಕುಲಸಚಿವ ವಿಶ್ವವಿದ್ಯಾನಿಲಯದಲ್ಲಿದ್ದ ತನಗೆ ಬೇಕಾದ ಪ್ರಾಧ್ಯಾಪಕರನ್ನು ಗೌರವಿಸುತ್ತಿದ್ದ. ಆತನ ಸಂಘರ್ಷ ಕುಲಪತಿಯೊಂದಿಗೆ ಮಾತ್ರ ಇರುತ್ತಿತ್ತು. ಕೆಲವೊಮ್ಮೆ ಪ್ರಾಧ್ಯಾಪಕ ವರ್ಗ ರಾಜಿ ಸಂಧಾನ ಮಾಡಿಸಿದರೆ ಹೊಂದಾಣಿಕೆ ಸಾಧ್ಯವಾಗುತ್ತಿತ್ತು.
ಆದರೆ ಕೆಎಎಸ್ ಅಧಿಕಾರಿಗಳು ಕುಲಸಚಿವರಾಗಿ ನೇಮಕಗೊಳ್ಳುವ ಪದ್ಧತಿ ಜಾರಿಗೆ ಬಂದ ಮೇಲೆ ವಿಶ್ವವಿದ್ಯಾನಿಲಯದ ಸಮಸ್ತ ಪ್ರಾಧ್ಯಾಪಕ ವರ್ಗ ಅಧಿಕಾರಶಾಹಿಯ ದರ್ಪಕ್ಕೆ ಬಲಿಯಾಗಬೇಕಾಯಿತು. ಅಲ್ಲೊಬ್ಬ ಇಲ್ಲೊಬ್ಬ ಅಪರೂಪದ ಕೆಎಎಸ್ ಅಧಿಕಾರಿ ಕುಲಸಚಿವ ಹುದ್ದೆಯಲ್ಲಿದ್ದು ಅತ್ಯುತ್ತಮ ಕೆಲಸ ಮಾಡಿರಬಹುದು. ಕುಲಪತಿಯೊಂದಿಗೆ ಸಮನ್ವಯತೆ ಸಾಧಿಸಿ ವಿಶ್ವವಿದ್ಯಾನಿಲಯದ ಏಳ್ಗೆಗಾಗಿ ದುಡಿದಿರಬಹುದು. ಆದರೆ ಅಂಥ ನಿದರ್ಶನಗಳು ತೀರಾ ವಿರಳ.
ಸಾಮಾನ್ಯವಾಗಿ ಕೆಎಎಸ್ ಅಧಿಕಾರಿಗಳು ಆಯಕಟ್ಟಿನ ಹುದ್ದೆಯಲ್ಲಿ ಇರಲು ಬಯಸುತ್ತಾರೆ. ಕೇವಲ ಹಣ ಮಾಡುವ ಇರಾದೆ ಹೊಂದಿದವರು ಮಾತ್ರ ಆಯಕಟ್ಟಿನ ಹುದ್ದೆ ಬಯಸುತ್ತಾರೆ ಎಂದೇನಿಲ್ಲ. ಪವರ್ ಕಿಕ್ ಕೂಡಾ ಆಯಕಟ್ಟಿನ ಜಾಗವನ್ನು ಹಂಬಲಿಸುತ್ತದೆ. ಹಣ ಮಾಡುವ ಮತ್ತು ಪವರ್ ಕಿಕ್‌ನ ಹಂಬಲದ ಕೆಎಎಸ್ ಅಧಿಕಾರಿಯನ್ನು ಆಯಕಟ್ಟಿನ ಹುದ್ದೆ ತಪ್ಪಿಸಿ ವಿಶ್ವವಿದ್ಯಾನಿಲಯದ ಕುಲಸಚಿವ ಸ್ಥಾನದಲ್ಲಿ ಕೂರಿಸಿದರೆ ಆತ ಅಕ್ಷರಶಃ ಗಾಯಗೊಂಡ ವ್ಯಾಘ್ರನಾಗುತ್ತಾನೆ. ಆ ಮನಸ್ಥಿತಿಯ ಕೆಟ್ಟ ಪರಿಣಾಮ ಕುಲಪತಿ ಮತ್ತು ಇಡೀ ವಿಶ್ವವಿದ್ಯಾನಿಲಯವೇ ಅನುಭವಿಸಬೇಕಾಗುತ್ತದೆ. ಆಯಕಟ್ಟಿನ ಜಾಗಕ್ಕೆ ಹೋಗಲು ಹೆಚ್ಚು ದುಡ್ಡು ಕೊಡಬೇಕಾಗುತ್ತದೆ. ಹೆಚ್ಚು ದುಡ್ಡು ಕೊಟ್ಟು ಆಯಕಟ್ಟಿನ ಜಾಗವನ್ನು ಗಿಟ್ಟಿಸಿಕೊಳ್ಳುವ ಸಾಮರ್ಥ್ಯ ಇಲ್ಲದವರು ಅನಿವಾರ್ಯವಾಗಿ ವಿಶ್ವವಿದ್ಯಾನಿಲಯದ ಕುಲಸಚಿವ ಹುದ್ದೆಗೆ ಬರುತ್ತಾರೆ. ಹತಾಶೆ ಅವರನ್ನು ಆವರಿಸಿಕೊಂಡಿರುತ್ತದೆ. ಆ ಹತಾಶೆಯ ಮನೋಭಾವ ಒಳಗಿನ ಅಧಿಕಾರಶಾಹಿಯನ್ನು ಜಾಗೃತಗೊಳಿಸುತ್ತದೆ. ಪ್ರಾಧ್ಯಾಪಕರು, ಬುದ್ಧಿಜೀವಿಗಳು, ಸಂಶೋಧಕರು ಎನ್ನುವುದನ್ನು ಲೆಕ್ಕಿಸದೆ ಎಲ್ಲರೂ ತನ್ನ ಅಧೀನ ಕೆಲಸಗಾರರು ಎಂದು ಭಾವಿಸಿ ಅಧಿಕಾರ ಚಲಾಯಿಸಿ ವಿಶ್ವವಿದ್ಯಾನಿಲಯದ ಒಟ್ಟಾರೆ ವಾತಾವರಣ ಕೆಡುವಂತೆ ಮಾಡುತ್ತಾರೆ. ಕುಲಪತಿಯ ಪಕ್ಕದಲ್ಲೇ ತನ್ನ ಕುರ್ಚಿ ಇರಬೇಕು, ತಾನು ಯಾರಿಗೂ ಕಮ್ಮಿಯಿಲ್ಲ ಎಂದು ವಾದಿಸಲು ಆರಂಭಿಸುತ್ತಾರೆ. ಅಷ್ಟು ಮಾತ್ರವಲ್ಲ, ಮಾತು ಮಾತಿಗೂ ಪ್ರೊಟೋಕಾಲ್ ನಿಯಮಗಳನ್ನು ಹೇಳಲು ಶುರು ಮಾಡುತ್ತಾರೆ. ನಿಜವಾದ ಆಡಳಿತಗಾರ ವಿಶ್ವವಿದ್ಯಾನಿಲಯದ ಹಿತಕ್ಕಾಗಿ ದುಡಿಯುತ್ತಾನೆ. ಅತ್ಯುತ್ತಮ ಕೆಲಸ ಮಾಡಿ ಸಮಸ್ತ ಪ್ರಾಧ್ಯಾಪಕ ವರ್ಗದ ಪ್ರೀತಿ ವಿಶ್ವಾಸ ಗಳಿಸಲು ಹಂಬಲಿಸುತ್ತಾನೆ. ಆದರೆ ಅಧಿಕಾರಶಾಹಿಯ ದರ್ಪ ಉಳ್ಳವರು ಅಧಿಕಾರಿಯಂತೆಯೇ ಆಡಳಿತ ನಡೆಸುತ್ತಾರೆ. ಹೆಜ್ಜೆ ಹೆಜ್ಜೆಗೂ ಕುಲಪತಿಗೆ ಆಡಳಿತದ ಪಾಠ ಹೇಳಿ ಖುಷಿ ಪಡುತ್ತಾರೆ. ನಿಯಮಗಳನ್ನು ತಂದು ಎಲ್ಲ ವಿದ್ಯಾರ್ಥಿ ಪರ ಕೆಲಸಗಳಿಗೂ ಅಡ್ಡಿ ಮಾಡುತ್ತಾರೆ. ಹಾಗೆ ಮಾಡುವುದೇ ನಿಜವಾದ ಆಡಳಿತ ಎಂಬ ಭ್ರಮೆಯಲ್ಲಿ ಇರುತ್ತಾರೆ. ಒಟ್ಟಾರೆ ಶೈಕ್ಷಣಿಕ ವ್ಯವಸ್ಥೆಯ ಅರಿವಿಲ್ಲದೆ ಹೋದರೆ ಯಾವುದಕ್ಕೂ ಇತ್ಯಾತ್ಮಕವಾಗಿ ಸ್ಪಂದಿಸುವುದಿಲ್ಲ. ಶಿಕ್ಷಣ ಕ್ಷೇತ್ರದ ಪ್ರತೀ ಕೆಲಸ ಶೈಕ್ಷಣಿಕ ಅನುಭವದ ಆಧಾರದ ಮೇಲೆ ರೂಪುಗೊಳ್ಳಬೇಕು. ಆದರೆ ಅಧಿಕಾರಶಾಹಿಗೆ ಒಮ್ಮೆ ‘ನನಗೆ ಎಲ್ಲ ಗೊತ್ತು’ ಎಂಬ ಸರ್ವಜ್ಞತ್ವದ ಭ್ರಮೆ ಆವರಿಸಿದರೆ ಏನನ್ನೂ ಮನವರಿಕೆ ಮಾಡಿಕೊಡಲು ಆಗುವುದಿಲ್ಲ.
ಹಾಗೆ ನೋಡಿದರೆ ಅಧಿಕಾರಶಾಹಿಯ ಸುಪರ್ದಿಗೆ ವಿಶ್ವವಿದ್ಯಾನಿಲಯ ಗಳನ್ನು ಒಪ್ಪಿಸಬೇಕು ಎಂಬ ಮನೋಧರ್ಮವೇ ಅಪಾಯಕಾರಿ. ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರಿಗೆ ಆಡಳಿತದ ಅನುಭವ ಇರುವುದಿಲ್ಲ ಎಂಬ ಪೂರ್ವಾಗ್ರಹಿತ ಮನಸ್ಸು ಇಂಥ ನಿರ್ಧಾರಗಳ ಹಿಂದೆ ಕೆಲಸ ಮಾಡಿರುತ್ತದೆ. ಕೇವಲ ವೈದ್ಯನಾಗಿದ್ದ ಡಾ. ಅಶ್ವಥ್ ನಾರಾಯಣ್ ಉನ್ನತ ಶಿಕ್ಷಣ ಖಾತೆಯಂತಹ ಮಹತ್ವದ ಇಲಾಖೆಯನ್ನು ಮುನ್ನಡೆಸಬಹುದಾದರೆ ಸುದೀರ್ಘ ಕಾಲ ಪಾಠ ಪ್ರವಚನ ಮತ್ತು ಸಂಶೋಧನೆಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡ ಪ್ರಾಧ್ಯಾಪಕರಿಗೆ ವಿಶ್ವವಿದ್ಯಾನಿಲಯದ ಕುಲಪತಿ, ಕುಲಸಚಿವ ಹುದ್ದೆ ನಿಭಾಯಿಸಲು ಸಾಧ್ಯವಾಗುವುದಿಲ್ಲವೇ?
ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆಯನ್ನು ಅಧೋಗತಿಗೆ ತಂದು ನಿಲ್ಲಿಸಿದವರೇ ಡಾ. ಅಶ್ವಥ್ ನಾರಾಯಣ ಅವರು. ವಿಶ್ವವಿದ್ಯಾನಿಲಯಗಳ ಸ್ವಾಯತ್ತೆಗೆ ಧಕ್ಕೆ ತಂದವರೇ ಅವರು.
ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾನಿಲಯ, ಐಐಟಿ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯಂತಹ ಶಿಕ್ಷಣ ಕೇಂದ್ರಗಳಿಗೆ ನೆಹರೂ ಅವರ ಕಾಲದಿಂದಲೂ ಸ್ವಾಯತ್ತೆ ಕಲ್ಪಿಸಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದ ಯುಜಿಸಿ ಅಧ್ಯಕ್ಷ ಹುದ್ದೆ, ಐಐಟಿ ಮತ್ತು ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಕುಲಪತಿ ಹುದ್ದೆಗಳನ್ನು ಆರೆಸ್ಸೆಸ್ ಮನೋಧರ್ಮದ ಪ್ರಾಧ್ಯಾಪಕರಿಗೆ ನೀಡುತ್ತಿದ್ದಾರೆ. ಆದರೆ, ಆಡಳಿತ ವ್ಯವಸ್ಥೆಯ ಒಟ್ಟು ಸ್ವರೂಪವನ್ನು ಬದಲಿಸಿಲ್ಲ. ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಕುಲಾಧಿಪತಿ ರಾಷ್ಟ್ರಪತಿಯೇ ಆಗಿರುತ್ತಾರೆ. ಶೋಧನಾ ಸಮಿತಿಯ ಶಿಫಾರಸು ಮತ್ತು ಪ್ರಧಾನಮಂತ್ರಿಯ ಸಲಹೆ ಮೇರೆಗೆ ರಾಷ್ಟ್ರಪತಿಯವರು ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಕುಲಪತಿಗಳನ್ನು ನೇಮಕ ಮಾಡುತ್ತಾರೆ. ಒಮ್ಮೆ ನೇಮಕವಾದರೆ ಕುಲಪತಿಯ ಆಡಳಿತದಲ್ಲಿ ಕೇಂದ್ರ ಶಿಕ್ಷಣ ಸಚಿವರಾಗಲಿ, ಪ್ರಧಾನಮಂತ್ರಿಯಾಗಲಿ ಹಸ್ತಕ್ಷೇಪ ಮಾಡುವುದಿಲ್ಲ. ಸಮಕುಲಪತಿ, ಕುಲಸಚಿವ (ಆಡಳಿತ), ಕುಲಸಚಿವ (ಮೌಲ್ಯ ಮಾಪನ)ಹುದ್ದೆಗಳು ಸೇರಿದಂತೆ ವಿಶ್ವವಿದ್ಯಾನಿಲಯದ ಎಲ್ಲ ಹುದ್ದೆಗಳನ್ನು ನೇಮಕ ಮಾಡುವ ಮತ್ತು ವಜಾ ಮಾಡುವ ಅಧಿಕಾರ ಸಿಂಡಿಕೇಟ್ ಹಾಗೂ ಕುಲಪತಿಗೆ ನೀಡಿರುತ್ತಾರೆ. ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಆಡಳಿತ ವ್ಯವಸ್ಥೆಯಲ್ಲಿ, ನೀತಿ ನಿರೂಪಣೆಯಲ್ಲಿ ಸಿಂಡಿಕೇಟ್ ಮತ್ತು ಕುಲಪತಿ ನಿರ್ಧಾರ ಅಂತಿಮ. ಹಾಗಾಗಿ ಕುಲಪತಿಯ ಅಧೀನದಲ್ಲಿರುವ ಎಲ್ಲ ಅಧಿಕಾರ ವರ್ಗ ಆಜ್ಞೆಯನ್ನು ಪಾಲಿಸುತ್ತಾರೆ. ಸಂಘರ್ಷದ ಮಾತೇ ಉದ್ಭವವಾಗುವುದಿಲ್ಲ.
ಕರ್ನಾಟದಲ್ಲಿನ ಖಾಸಗಿ ವಿಶ್ವವಿದ್ಯಾನಿಲಯಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುವ ಶಾಲಾ ಕಾಲೇಜುಗಳು ಅತ್ಯುತ್ತಮ ಫಲಿತಾಂಶ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಿದ್ದು ಒಂದು ಬಿಗಿಯಾದ ವ್ಯವಸ್ಥೆ ಇರುವುದರಿಂದ. ಬಿಗಿಯಾದ ವ್ಯವಸ್ಥೆ ಎಂದರೆ ಪ್ರಜಾಪ್ರಭುತ್ವ ವಿರೋಧಿ ಎಂದು ಭಾವಿಸಬೇಕಿಲ್ಲ. ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಹಾದಿ ತಪ್ಪಿದಾಗ ಅವರನ್ನು ಸರಿ ದಾರಿಗೆ ತರಲು ಅತ್ಯಂತ ಬಲಶಾಲಿಯಾದ ಸಿಂಡಿಕೇಟ್ ಇರುತ್ತದೆ.
ಕರ್ನಾಟಕದ ವಿಶ್ವವಿದ್ಯಾನಿಲಯಗಳು ಮತ್ತೆ ಮೊದಲಿನ ವೈಭವ ಅನುಭವಿಸಬೇಕೆಂದರೆ ದೂರದೃಷ್ಟಿಯುಳ್ಳ ಕುಲಪತಿ ಮತ್ತು ಪ್ರಾಮಾಣಿಕರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಬೇಕು. ಕುಲಸಚಿವರನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಸಿಂಡಿಕೇಟ್ ಅನುಮೋದನೆಯೊಂದಿಗೆ ಕುಲಪತಿಗೆ ನೀಡಬೇಕು. ಆಗ ಮಾತ್ರ ವಿಶ್ವವಿದ್ಯಾನಿಲಯಗಳಲ್ಲಿನ ಅರಾಜಕತೆಗೆ ಕಡಿವಾಣ ಬೀಳುತ್ತದೆ. ವಿದ್ಯಾರ್ಥಿಗಳ ಕೆಲಸ ಕಾರ್ಯಗಳು ಸುಗಮವಾಗಿ ಆಗುತ್ತವೆ. ಕುಲಪತಿಯ ಕನಸುಗಳಿಗೆ ಸ್ಪಂದಿಸದ ಕುಲಸಚಿವರಿದ್ದರೆ ಅತ್ಯುತ್ತಮ ಶೈಕ್ಷಣಿಕ ವ್ಯವಸ್ಥೆ ತರಲು ಸಾಧ್ಯವಾಗುವುದಿಲ್ಲ. ಶೈಕ್ಷಣಿಕ ವ್ಯವಸ್ಥೆ ಸರಿ ಮಾಡುವುದು ಒತ್ತಟ್ಟಿಗಿರಲಿ ಕುಲಪತಿ, ಕುಲಸಚಿವರು ಮತ್ತು ಪ್ರಾಧ್ಯಾಪಕರ ಮನಸ್ಥಿತಿಯೇ ಸರಿ ಇರುವುದಿಲ್ಲ. ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಯನ್ನು ಹಿಂದಿನ ಎಲ್ಲ ಸರಕಾರಗಳು ಕಿತ್ತುಕೊಂಡಿವೆ. ಬಸವರಾಜ ರಾಯರೆಡ್ಡಿಯವರು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ವಿಶ್ವವಿದ್ಯಾನಿಲಯಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಕಾರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೀಡುವ ನಿರ್ಧಾರ ಮಾಡಿದ್ದರು. ಈಗ ರಾಜಿ ಸಂಧಾನವಾಗಿ ಅರ್ಧ ಅಧಿಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಇನ್ನರ್ಧ ಅಧಿಕಾರ ವಿಶ್ವವಿದ್ಯಾನಿಲಯಗಳಲ್ಲಿ ಇದೆ. ಇಂತಹ ಸ್ವಾರ್ಥ ಪ್ರೇರಿತ ನಿರ್ಧಾರಗಳೇ ವಿಶ್ವವಿದ್ಯಾನಿಲಯಗಳ ಸ್ವಾಯತ್ತೆಗೆ ಧಕ್ಕೆ ತಂದಿರುವುದು. ಅಂತಹ ಅಪಾಯಕಾರಿ ನಿರ್ಧಾರಗಳಲ್ಲಿ ಕುಲಸಚಿವರನ್ನು ಸರಕಾರವೇ ನೇಮಿಸುವುದು. ಅದರಲ್ಲೂ ಕೆಎಎಸ್ ಅಧಿಕಾರಿಗಳನ್ನು ವಿಶ್ವವಿದ್ಯಾನಿಲಯಗಳ ಕುಲಸಚಿವರನ್ನಾಗಿ ನೇಮಿಸುವ ಸರಕಾರದ ನಿರ್ಧಾರ ಮತ್ತಷ್ಟು ಅಪಾಯಕಾರಿ. ಈಗ ಎಲ್ಲ ವಿಶ್ವವಿದ್ಯಾನಿಲಯಗಳು ಆ ನಿರ್ಧಾರದ ಕಹಿ ಫಲವನ್ನು ಉಣ್ಣುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉನ್ನತ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ವಹಿಸದಿದ್ದರೆ ಐದಾರು ವರ್ಷಗಳಲ್ಲಿ ಸರಕಾರಿ ವಿಶ್ವವಿದ್ಯಾನಿಲಯಗಳು ಮುಚ್ಚುವ ಹಂತ ತಲುಪುತ್ತವೆ. ಉನ್ನತ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿರುವ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು. ಪ್ರಾಧ್ಯಾಪಕ ಸಮುದಾಯದ ನಿರಂತರ ಮೌನ ವಿಶ್ವವಿದ್ಯಾನಿಲಯಗಳನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ಕಾಲ ಕಾಲಕ್ಕೆ ಸರಕಾರಗಳ ತಪ್ಪು ನಿರ್ಧಾರಗಳನ್ನು ವಿರೋಧಿಸಿದ್ದರೆ ಈ ಸ್ಥಿತಿ ಎದುರಾಗುತ್ತಿರಲಿಲ್ಲ.